ಸೌದಿ ಅರೇಬಿಯದ ದೊರೆಯ ಮಗಳಿಗೆ 6 ತಿಂಗಳು ಜೈಲು ಶಿಕ್ಷೆಗೆ ಶಿಫಾರಸು

0
982

ಪ್ಯಾರಿಸ್, ಜು. 10: ಕೆಲಸಗಾರನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸೌದಿ ಅರೇಬಿಯದ ದೊರೆ ಸಲ್ಮಾನ್‍ ರ ಮಗಳಿಗೆ ಜೈಲು ಶಿಕ್ಷೆಗೆ ಶಿಫಾರಸು ಮಾಡಲು ಫ್ರೆಂಚ್ ಸರಕಾರ ನಿರ್ಧರಿಸಿದ್ದು, ಈ ಕುರಿತು ಪ್ರಾಸಿಕ್ಯೂಟರ್ ಗಳು ಕೋರ್ಟಿನಲ್ಲಿ ಆಗ್ರಹ ಸಲ್ಲಿಸಲಿದ್ದಾರೆ.

ದೊರೆ ಸಲ್ಮಾನ್‍ರ ಮಗಳು ಹಸ್ಸಾ ಬಿಂತಿ ಸಲ್ಮಾನ್ ವಾಸವಿರುವ ಪ್ಯಾರಿಸ್‍ನ ಪ್ಲಾಟ್‍ನಲ್ಲಿ ಈ ಘಟನೆ ನಡೆದಿತ್ತು. ಫ್ಲಾಟ್‍ನಲ್ಲಿ ಕೆಲಸಗಾರರೊಬ್ಬರ ಮೇಲೆ ಹಸ್ಸಾ ಹಲ್ಲೆ ನಡೆಸಿದ್ದರು. ಫ್ಲಾಟ್‍ನ ನವೀಕರಣ ಕೆಲಸ ಮಾಡುತ್ತಿದ್ದ ಈಜಿಪ್ಟ್ ನ ವ್ಯಕ್ತಿಗೆ ಹಸ್ಸಾ ಆಯುಧ ಬಳಸಿ ಹಲ್ಲೆ ಮಾಡಿದ್ದರು. ನಂತರ ಅಪಹರಣ ಮಾಡಿದ್ದಾರೆ ಎಂಬ ಆರೋಪವನ್ನು ಕೂಡ ಹೊರಿಸಲಾಗಿತ್ತು. ರಾಜಕುಮಾರಿಯ ಅಂಗರಕ್ಷಕ ತನ್ನ ಕೈಗಳನ್ನು ಕಟ್ಟಿಹಾಕಿ ಮುಷ್ಠಿ ಪ್ರಹಾರ ಮಾಡಿದ್ದಾನೆ. ತುಳಿದು ಕೆಡವಿ ಹಾಕಿದ್ದು, ರಾಜಕುಮಾರಿಯ ಕಾಲನ್ನು ಚುಂಬಿಸುವಂತೆ ಒತ್ತಾಯಿಸಿದ್ದಾನೆ ಎಂದು ಈಜಿಪ್ಟ್ ವ್ಯಕ್ತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ. ಈಜಿಪ್ಟ್ ನ ಈ ಕೆಲಸಗಾರ ಮೊಬೈಲ್‍ನಲ್ಲಿ ನನ್ನ ಫೋಟೊ ತೆಗೆದಿದ್ದಾನೆ ಎಂದು ರಾಜಕುಮಾರಿ ಹಸ್ಸಾ ಆರೋಪಿಸಿದ್ದರು. ಆದರೆ ಕೋರ್ಟು ಈ ಆರೋಪವನ್ನು ತಿರಸ್ಕರಿಸಿದೆ.