ಸನ್ಮಾರ್ಗ ವಾರ್ತೆ
ದೆಹಲಿ: ಸೈಬರ್ ವಂಚನೆ ಮತ್ತು ಡಿಜಿಟಲ್ ಕಣ್ಗಾವಲು ಆಧಾರಿತ ಪತ್ರಿಕೋದ್ಯಮದ ಕೊಡುಗೆಗಳಿಗಾಗಿ ಇಬ್ಬರು ಭಾರತೀಯರು ಪುಲಿಟ್ಝರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಪತ್ರಕರ್ತರಾದ ಆನಂದ್ ಆರ್.ಕೆ. ಮತ್ತು ಸುಪರ್ಣಾ ಶರ್ಮಾ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ‘ಇಲಸ್ಟ್ರೇಟೆಡ್ ರಿಪೋರ್ಟಿಂಗ್ ಮತ್ತು ಕಾಮೆಂಟರಿ’ ವಿಭಾಗಗಳಲ್ಲಿ ನೀಡಲಾಗಿದೆ. ಬ್ಲೂಮ್ಬರ್ಗ್ ಮ್ಯಾಗಜೀನ್ನಲ್ಲಿ ಪ್ರಕಟವಾದ ‘trAPPed’ ಲೇಖನಕ್ಕಾಗಿ ಈ ಪ್ರಶಸ್ತಿ ಸಂದಿದೆ. ಅವರಿಬ್ಬರೂ ಈ ಪ್ರಶಸ್ತಿಯನ್ನು ಮ್ಯಾಗಜೀನ್ನ ಪತ್ರಕರ್ತೆ ನಟಾಲಿ ಒಬಿಕೊ ಅವರೊಂದಿಗೆ ಹಂಚಿಕೊಂಡಿದ್ದಾರೆ.
ಈ ಲೇಖನವು ಡಿಜಿಟಲ್ ಬಂಧನದ ಮೂಲಕ ಸೈಬರ್ ಅಪರಾಧಿಗಳು ಸಂತ್ರಸ್ತರನ್ನು ಮಾನಸಿಕವಾಗಿ ಹೇಗೆ ಶೋಷಿಸುತ್ತಾರೆ ಎಂಬುದರ ಕುರಿತಾಗಿದೆ. ಇದು ದಕ್ಷಿಣ ಏಷ್ಯಾದಾದ್ಯಂತ ಆನ್ಲೈನ್ ವಂಚನೆ ಸೇರಿದಂತೆ ಹೆಚ್ಚುತ್ತಿರುವ ಸೈಬರ್ ಅಪರಾಧಗಳನ್ನು ಚಿತ್ರಾತ್ಮಕವಾಗಿ ಚಿತ್ರಿಸುವ ತನಿಖಾ ವರದಿಯಾಗಿದೆ.
ಸೈಬರ್ ಅಪರಾಧದ ಆಳವನ್ನು ಚಿತ್ರಿಸಲು ಪತ್ರಕರ್ತರ ನವೀನ ವಿಧಾನವನ್ನು ಪುಲಿಟ್ಝರ್ ಮಂಡಳಿಯು ಶ್ಲಾಘಿಸಿದೆ. ಆನಂದ್ ಆರ್.ಕೆ. ಅವರು ‘ಬ್ಲೂ ಇನ್ ಗ್ರೀನ್’ ಮತ್ತು ‘ಗ್ರಾಫಿಟಿ ವಾಲ್’ ನಂತಹ ಗ್ರಾಫಿಕ್ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದಾರೆ. ಸುಪರ್ಣಾ ಶರ್ಮಾ ದೆಹಲಿ ಮೂಲದ ಫ್ರೀಲ್ಯಾನ್ಸ್ ಪತ್ರಕರ್ತೆ. ನಟಾಲಿ ಒಬಿಕೊ ಏಷ್ಯಾದ ಬ್ಲೂಮ್ಬರ್ಗ್ನ ಹಿರಿಯ ತನಿಖಾ ವರದಿಗಾರ್ತಿ.
ಇಲಸ್ಟ್ರೇಟರ್ ರಿಪೋರ್ಟಿಂಗ್ ಪ್ರಶಸ್ತಿಯ ಜೊತೆಗೆ, ಮತ್ತೊಬ್ಬ ಭಾರತೀಯ ಪತ್ರಕರ್ತ ಅನಿರುದ್ಧ ಘೋಷಾಲ್ ಕೂಡ ಅಮೆರಿಕ ಸರ್ಕಾರ ಮತ್ತು ಇತರ ಸರ್ಕಾರಿ ಏಜೆನ್ಸಿಗಳು ಸಾಮೂಹಿಕ ಕಣ್ಗಾವಲು ತಂತ್ರಜ್ಞಾನವನ್ನು ರಹಸ್ಯವಾಗಿ ಬಳಸುತ್ತಿರುವ ಬಗ್ಗೆ ವರದಿ ಮಾಡಿದ್ದಕ್ಕಾಗಿ ಪುಲಿಟ್ಝರ್ ಗೆದ್ದಿದ್ದಾರೆ. ಪುಲಿಟ್ಝರ್ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೀಡಲಾಗುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಪತ್ರಿಕಾ ಸ್ವಾತಂತ್ರ್ಯ ಮತ್ತು ತನಿಖಾ ಸ್ವಾತಂತ್ರ್ಯದ ಬಗ್ಗೆ ಜಾಗತಿಕ ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಈ ವರ್ಷದ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.












