ಸನ್ಮಾರ್ಗ ಸಂಪಾದಕೀಯ
2023 ಮಾರ್ಚ್ 2ರಂದು ಸುಪ್ರೀಮ್ ಕೋರ್ಟಿನ ಐವರು ನ್ಯಾಯಾಧೀಶರ ಪೀಠವು ಐತಿಹಾಸಿಕ ತೀರ್ಪು ನೀಡಿತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರ ಆಯ್ಕೆಯನ್ನು ಹೇಗೆ ಮಾಡಬೇಕು ಎಂಬುದೇ ಈ ತೀರ್ಪಿನ ಕೇಂದ್ರ ಬಿಂದುವಾಗಿತ್ತು. ಪ್ರಧಾನ ಮಂತ್ರಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು ಈ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ತೀರ್ಪಿನಲ್ಲಿ ಹೇಳಲಾಯಿತು. ನ್ಯಾಯಮೂರ್ತಿ ಕೆ.ಎಂ. ಜೋಸೆಫ್ರ ನೇತೃತ್ವದ ಈ ಪೀಠದಲ್ಲಿ ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿ.ಟಿ. ರವಿಕುಮಾರ್ ಅವರು ಇತರ ಸದಸ್ಯರಾಗಿದ್ದರು. ಚುನಾವಣಾ ಆಯೋಗವು ಆಳುವ ವರ್ಗದ ಅಣತಿಯಂತೆ ಕೆಲಸ ಮಾಡುತ್ತದೆ ಎಂಬ ಆರೋಪಕ್ಕೆ ತಡೆ ಹೇರುವ ನಿಟ್ಟಿನಲ್ಲಿ ಈ ತೀರ್ಪು ಅತ್ಯಂತ ಸ್ವಾಗತಾರ್ಹವಾಗಿತ್ತು. ಅಲ್ಲದೇ, ಈ ತೀರ್ಪಿನ ವಿಷಯದಲ್ಲಿ ಐವರೂ ನ್ಯಾಯಾಧೀಶರು ಸಹಮತವನ್ನು ಹೊಂದಿದ್ದರು. ಆದರೆ,
ಕೇಂದ್ರ ಸರಕಾರ 2023 ಡಿ. 12ರಂದು ರಾಜ್ಯಸಭೆಯಲ್ಲಿ ಒಂದು ಮಸೂದೆಯನ್ನು ಮಂಡಿಸಿತು. ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಲ್ಲಿ ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಾಧೀಶರು ಇರಬೇಕು ಎಂಬ ಸುಪ್ರೀಮ್ ತೀರ್ಪಿಗೆ ತಿದ್ದುಪಡಿಯನ್ನು ತರುವುದು ಈ ಮಸೂದೆಯ ಉದ್ದೇಶವಾಗಿತ್ತು. ಈ ಆಯ್ಕೆ ಸಮಿತಿಯಿಂದ ಮುಖ್ಯ ನ್ಯಾಯಾಧೀಶರನ್ನು ಹೊರಹಾಕಿ ಕೇಂದ್ರದ ಸಚಿವರನ್ನು ಸೇರಿಸುವ ಪ್ರಸ್ತಾಪ ಮಸೂದೆಯಲ್ಲಿತ್ತು. ಹೀಗೆ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಸಮಿತಿಯಯಲ್ಲಿ ಪ್ರಧಾನಿ, ಕೇಂದ್ರದ ಓರ್ವ ಸಚಿವರು ಮತ್ತು ವಿರೋಧ ಪಕ್ಷದ ನಾಯಕ- ಈ ಮೂವರು ಇರುತ್ತಾರೆಂದು ಮಸೂದೆಯಲ್ಲಿ ಹೇಳಲಾಯಿತು. ಅಂದರೆ, ಈಗಿನ ಪರಿಸ್ಥಿತಿಯಂತೆ ಹೇಳುವುದಾದರೆ ಮೋದಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ. ಈ ಮೂವರಿರುವ ಸಮಿತಿಯ ಆಯ್ಕೆ ಪ್ರಕ್ರಿಯೆ ಹೇಗಿರಬಹುದು ಎಂಬುದನ್ನು ಬೇರೆ ಹೇಳಬೇಕಿಲ್ಲ. ರಾಹುಲ್ ಗಾಂಧಿ ಏನೇ ಹೇಳಿದರೂ ಅದಕ್ಕೆ ಚಿಕ್ಕಾಸಿನ ಬೆಲೆಯೂ ಸಿಗುವುದಿಲ್ಲ ಎಂಬುದು ಸ್ಪಷ್ಟ. ಮೋದಿ ಮತ್ತು ಅಮಿತ್ ಶಾ ಅವರು ಏನು ನಿರ್ಧರಿಸುತ್ತಾರೋ ಅದುವೇ ಅಂತಿಮ ನಿರ್ಧಾರವಾಗುತ್ತದೆ. ರಾಹುಲ್ ಗಾಂಧಿ ಅಲ್ಲಿ ಒಂಟಿಯಾಗುತ್ತಾರೆ.
ಈ ಮಸೂದೆಯಲ್ಲಿ ಇನ್ನೂ ಒಂದು ಗಂಭೀರವಾದ ಅಂಶವಿತ್ತು. ಅದೇನೆಂದರೆ,
ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಯಾವುದೇ ಕೆಲಸ, ನಿರ್ಧಾರ ಮತ್ತು ಹೇಳಿಕೆಗಳಿಗೆ ಅವರ ವಿರುದ್ಧ ಸಿವಿಲ್ ಅಥವಾ ಕ್ರಿಮಿನಲ್ ಕೇಸು ಹಾಕುವಂತಿಲ್ಲ. ಯಾವುದೇ ನ್ಯಾಯಾಲಯ ಅವರನ್ನು ವಿಚಾರಣೆಗೆ ಒಳಪಡಿಸುವಂತಿಲ್ಲ. ಹಾಗಂತ, ಈ ತಡೆಯು ಅವರ ಕಾರ್ಯಾವಧಿವರೆಗೆ ಮಾತ್ರವಲ್ಲ, ಜೀವಿತಾವಧಿವರೆಗೂ ಅನ್ವಯವಾಗುತ್ತದೆ. ಹೀಗೆ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಆಯುಕ್ತರಿಗೆ ತಮ್ಮ ಅಧಿಕಾರಾವಧಿಯಲ್ಲಿ ಏನನ್ನೂ ಮಾಡುವ ಸ್ವಾತಂತ್ರ್ಯವನ್ನು ನೀಡಲಾಯಿತು. ಇದಕ್ಕಾಗಿ 1991ರ ಕಾಯಿದೆಯನ್ನೇ ರದ್ದುಪಡಿಸಲಾಯಿತು ಮತ್ತು ಹೊಸದಾಗಿ ಸೆಕ್ಷನ್ 16ನ್ನು ರಚಿಸಿ ಈ ಚುನಾವಣಾ ಆಯುಕ್ತರಿಗೆ ಈ ಅಭೂತಪೂರ್ವ ಸ್ವಾತಂತ್ರ್ಯವನ್ನು ನೀಡಲಾಯಿತು. ಅಂದಹಾಗೆ,
ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದುವು. ಕೊನೆಗೆ ಸಭಾತ್ಯಾಗ ಮಾಡಿದುವು. ಆದರೆ ಸರಕಾರ ಹಿಂಜರಿಯಲಿಲ್ಲ. ಧ್ವನಿಮತದ ಮೂಲಕ ಈ ಕಾಯಿದೆಯನ್ನು ಡಿ. 12ರಂದೇ ರಾಜ್ಯಸಭೆಯಲ್ಲಿ ಅಂಗೀಕರಿಸಿಕೊಂಡಿತು. ಡಿ. 21ರಂದು ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು. ಅದಾಗಲೇ ವಿರೋಧ ಪಕ್ಷದ 95 ಸದಸ್ಯರನ್ನು ಶಿಸ್ತಿನ ಹೆಸರಲ್ಲಿ ಸಸ್ಪೆಂಡ್ ಮಾಡಲಾಗಿತ್ತು. ಹೀಗೆ ಧ್ವನಿಮತದ ಮೂಲಕ ಬಹಳ ಸುಲಭವಾಗಿ ಈ ಮಸೂದೆಯನ್ನು ಸರಕಾರ ಲೋಕಸಭೆಯಲ್ಲೂ ಪಾಸ್ ಮಾಡಿಕೊಂಡಿತು. ವಿಶೇಷ ಏನೆಂದರೆ, ಡಿ. 28ರಂದು ಅಂದರೆ, ಲೋಕಸಭೆಯಲ್ಲಿ ಅಂಗೀಕಾರಗೊಂಡು ಕೇವಲ 7 ದಿನಗಳೊಳಗೆ ರಾಷ್ಟçಪತಿ ಇದಕ್ಕೆ ಸಹಿ ಹಾಕಿಸಿದರು. ಆದರೆ, 2024 ಜನವರಿ 2ರಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕಿ ಡಾ| ಜಯಾ ಠಾಕುರ್ ಅವರು ಈ ಬಗ್ಗೆ ಸುಪ್ರೀಮ್ ಕೋರ್ಟ್ನಲ್ಲಿ ಮೊದಲ ಪಿಟಿಷನ್ ದಾಖಲಿಸಿದರು. ಇದರ ಜೊತೆಗೇ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ಸಂಸ್ಥೆಯೂ ಪ್ರತ್ಯೇಕ ಪಿಟಿಷನ್ಗಳನ್ನು ಹಾಕಿತು. ಆದರೆ, ಎರಡು ವರ್ಷಗಳಾದರೂ ಈ ಕುರಿತಾದ ವಿಚಾರಣೆ ಸರಿಯಾಗಿ ನಡೆದೇ ಇಲ್ಲ. ಪ್ರಕರಣವನ್ನು ಮುಂದೂಡುತ್ತಾ ಬರಲಾಗಿದೆಯಲ್ಲದೇ, ಇದೀಗ ಮೇ 6ರಂದು ವಿಚಾರಣೆಗೆ ಸುಪ್ರೀಮ್ ಕೋರ್ಟ್ ಮನಸು ಮಾಡಿದೆ. ಅಂದಹಾಗೆ,
ಚುನಾವಣಾ ಪ್ರಕ್ರಿಯೆಯ ಬಗ್ಗೆ ವ್ಯಕ್ತವಾಗುವ ಯಾವುದೇ ಆಕ್ಷೇಪಕ್ಕೂ ತೃಣಮಾತ್ರದ ಬೆಲೆಯನ್ನೂ ಚುನಾವಣಾ ಆಯೋಗ ನೀಡದೇ ಇರುವುದಕ್ಕೆ ಕಾರಣಗಳೇನು ಎಂಬುದಕ್ಕೆ ಈ ಇಡೀ ಬೆಳವಣಿಗೆಯಲ್ಲಿ ಉತ್ತರ ಇದೆ. 2023 ಡಿ. 28ರ ಬಳಿಕ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಇಬ್ಬರು ಆಯುಕ್ತರು ಸರ್ವಾಧಿಕಾರಿಗಳಾಗಿ ಮಾರ್ಪಟ್ಟಿದ್ದಾರೆ. ಅವರು ಕೈಗೊಳ್ಳುವ ಯಾವುದೇ ಕ್ರಮಕ್ಕೂ ಅವರು ಉತ್ತರದಾಯಿಗಳಲ್ಲ. ಅವರ ವಿರುದ್ಧ ನ್ಯಾಯಾಲಯದಲ್ಲಿ ಪ್ರಶ್ನಿಸುವ ಹಾಗಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸುವ ಹಾಗಿಲ್ಲ. ಆಘಾತಕಾರಿ ಸಂಗತಿ ಏನೆಂದರೆ,
ಇಂಥದ್ದೊಂದು ರಿಯಾಯಿತಿ ಚುನಾವಣಾ ಆಯುಕ್ತರುಗಳನ್ನು ಬಿಟ್ಟರೆ ಈ ದೇಶದ ಇನ್ನಾರಿಗೂ ಇಲ್ಲ. ರಾಷ್ಟçಪತಿಗೂ ಸುಪ್ರೀಮ್ ಕೋರ್ಟಿನ ಮುಖ್ಯ ನ್ಯಾಯಾಧೀಶರಿಗೂ ಪ್ರಧಾನಿಗೂ ಮತ್ತು ರಾಜ್ಯಪಾಲರಿಗೂ ಇಲ್ಲದ ಕಾನೂನು ರಿಯಾಯಿತಿಯು ಚುನಾವಣಾ ಆಯುಕ್ತರಿಗಿದೆ. ಈ ರಿಯಾಯಿತಿ ದೊರಕಿದ ಬಳಿಕವೇ ಚುನಾವಣಾ ಆಯುಕ್ತರು ಎಸ್ಐಆರ್ಗೆ ಕೈ ಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 90 ಲಕ್ಷ ಮಂದಿಯನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿದ್ದಾರೆ. ಬಿಹಾರದಲ್ಲೂ ಕೇರಳದಲ್ಲೂ ತಮಿಳುನಾಡಿನಲ್ಲೂ ಲಕ್ಷಾಂತರ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಹಾಗಿದ್ದರೂ ಇದಕ್ಕಾಗಿ ಚುನಾವಣಾ ಆಯುಕ್ತರನ್ನು ಹೊಣೆ ಮಾಡುವಂತಿಲ್ಲ. ಅವರ ವಿರುದ್ಧ ಪ್ರಕರಣ ದಾಖಲಿಸುವಂತಿಲ್ಲ. ಎಲ್ಲಿಯ ವರೆಗೆಂದರೆ, ಅವರ ಜೀವಿತಾವಧಿವರೆಗೂ ಈ ಕಾನೂನು ರಿಯಾಯಿತಿ ಇರುತ್ತದೆ. ಆದ್ದರಿಂದಲೇ,
ಈಗಿನ ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅನುಮಾನಿಸಬೇಕಾಗುತ್ತದೆ. ಇವಿಎಂನಿAದ ಹಿಡಿದು ಎಸ್ಐಆರ್ನ ವರೆಗಿನ ಪ್ರತಿಯೊಂದು ಪ್ರಕ್ರಿಯೆಯ ಬಗ್ಗೆಯೂ ಶಂಕೆಗೆ ಅವಕಾಶ ಇದೆ. ಇಡೀ ಚುನಾವಣೆಯಲ್ಲಿ ಆಳುವ ವರ್ಗಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಇಂಥದ್ದೊಂದು ಕಾನೂನು ರೂಪಿಸಲಾಗಿದೆಯಾ ಎಂಬ ಪ್ರಶ್ನೆಗೆ 2023ರ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ. ಇಲ್ಲದಿದ್ದರೆ, ಇಂಥದ್ದೊಂದು ಕಾಯ್ದೆಯ ಅಗತ್ಯ ಏನಿತ್ತು? ಈ ಕಾಯ್ದೆಯ ಬಲ ಇಲ್ಲದೆಯೇ ಟಿ.ಎನ್. ಶೇಷನ್ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಅಭೂತಪೂರ್ವ ಬದಲಾವಣೆಯನ್ನು ತಂದಿದ್ದರು. ಆ ಬಳಿಕವೂ ಚುನಾವಣಾ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣೆ ನಡೆದಿದ್ದವು. ಆಗೆಲ್ಲ ಇಲ್ಲದ ಕಾನೂನು ರಿಯಾಯಿತಿಯ ಅಗತ್ಯ 2023ರ ಕೊನೆಯಲ್ಲಿ ದಿಢೀರ್ ಆಗಿ ಕಾಣಿಸಿಕೊಳ್ಳಲು ಕಾರಣವೇನು? ಕಾನೂನಿಗಿಂತಲೂ ಮಿಗಿಲಾದ ವ್ಯಕ್ತಿ ಈ ದೇಶಕ್ಕೆ ಯಾಕೆ ಬೇಕು?
ಚುನಾವಣಾ ಆಯುಕ್ತ ತಪ್ಪೇ ಮಾಡಲಾರರು ಎಂದು ಕೇಂದ್ರ ಸರಕಾರ ಮುಂಚಿತವಾಗಿಯೇ ಯಾಕೆ ತೀರ್ಮಾನಕ್ಕೆ ಬಂದಿದೆ? ಚುನಾವಣಾ ಆಯುಕ್ತರು ಕೆಲಸ ಮಾಡುವುದಕ್ಕಿಂತ ಮೊದಲೇ ಅವರು ನೂರು ಶೇಕಡಾ ಸರಿಯಾದುದನ್ನೇ ಮಾಡುತ್ತಾರೆ ಎಂದು ಒಂದು ಸರಕಾರ ಷರಾ ಬರೆಯುವುದಕ್ಕೆ ಏನರ್ಥವಿದೆ? ಇಂಥದ್ದೊಂದು ಅಭೂತಪೂರ್ವ ರಿಯಾಯಿತಿಯನ್ನು ಚುನಾವಣಾ ಆಯುಕ್ತರಿಗೆ ಯಾಕಾಗಿ ನೀಡಲಾಯಿತು? ಚುನಾವಣಾ ಆಯುಕ್ತರನ್ನು ಸರಕಾರಕ್ಕೆ ಬೇಕಾದಂತೆ ದುಡಿಸಿಕೊಳ್ಳುವ ಸಂಚಿನ ಭಾಗವಾಗಿಯೇ ಇಂಥದ್ದೊಂದು ಕಾಯ್ದೆ ರೂಪಿಸಲಾಯಿತೇ? ಎಸ್ಐಆರ್ ಎಂಬುದು ಇಂಥದ್ದೊಂದು ಸಂಚಿನ ಭಾಗವೇ?
ಪಶ್ಚಿಮ ಬಂಗಾಳದ ಚುನಾವಣೆಯನ್ನು ಪರಿಶೀಲಿಸುವಾಗ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ವರ್ತನೆಯನ್ನು ನೋಡುವಾಗ ಭಾರತದ ಪ್ರಜಾತಂತ್ರವೇ ಅಪಾಯದಲ್ಲಿರುವುದನ್ನು ಸೂಚಿಸುತ್ತದೆ.












