ಸನ್ಮಾರ್ಗ ವಾರ್ತೆ
ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕದ ವತಿಯಿಂದ ತರೀಕೆರೆಯಲ್ಲಿ ದ್ವಿತೀಯ ವರ್ಷದ ರಾಜ್ಯಮಟ್ಟದ ಯುವ ನಾಯಕತ್ವ ಸಭೆ ಯಶಸ್ವಿಯಾಗಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಯುವ ನಾಯಕರು ಸಭೆಯಲ್ಲಿ ಭಾಗವಹಿಸಿ ಸಂಘಟನೆಯ ಭವಿಷ್ಯದ ಕಾರ್ಯಯೋಜನೆಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಾಮಾಜಿಕ ಜವಾಬ್ದಾರಿಗಳ ಕುರಿತು ಚರ್ಚಿಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ದೆಹಲಿಯಿಂದ ಆಗಮಿಸಿದ್ದ ಮಸೀಹುಝ್ಝಮಾ ಅನ್ಸಾರಿ ಯುವ ನಾಯಕರನ್ನು ಉದ್ದೇಶಿಸಿ ಮಾತನಾಡಿ, “ಸರ್ಕಾರಗಳು ದೇಶದ ಸಮಸ್ಯೆಗಳನ್ನು ಪರಿಹರಿಸುವ ಬದಲು ಹಲವು ಬಾರಿ ಅವನ್ನು ಹೆಚ್ಚಿಸುವ ಪರಿಸ್ಥಿತಿ ನಿರ್ಮಾಣ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಯುವ ನಾಯಕರು ತಮ್ಮ ಜವಾಬ್ದಾರಿಯನ್ನು ಅರಿತು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಜನಸೇವೆ ಮಾಡಲು ಮುಂದಾಗಬೇಕು. ನ್ಯಾಯ, ಸಮಾನತೆ ಹಾಗೂ ಜನರ ನೋವಿಗೆ ಸ್ಪಂದಿಸುವ ವ್ಯಕ್ತಿಗಳು ಆಡಳಿತದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದಾಗ ಮಾತ್ರ ಸಮಾಜದಲ್ಲಿ ನಿಜವಾದ ನ್ಯಾಯ ಮತ್ತು ಸಮಾನತೆ ಸ್ಥಾಪನೆ ಮಾಡಲು ಸಾಧ್ಯ” ಎಂದು ಹೇಳಿದರು.
ಜೊತೆಗೆ, ಯುವ ನಾಯಕರು ಸಮಾಜವನ್ನು ಸಂವಿಧಾನಾತ್ಮಕ ಭಾಷೆ ಮತ್ತು ಮೌಲ್ಯಗಳ ಆಧಾರದ ಮೇಲೆ ಅಭಿಸಂಭೋಧಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಲಬೀದ್ ಶಾಫಿ ಮಾತನಾಡಿ, “ತಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸದೆ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿಲ್ಲ. ಪವಿತ್ರ ಕುರ್ಆನ್ ಹಾಗೂ ಪ್ರವಾದಿ ಮುಹಮ್ಮದ್ (ಸ) ಅವರ ಜೀವನವೇ ನಮಗೆ ಮಾರ್ಗದರ್ಶನವಾಗಿದೆ. ಬಹುತ್ವದ ಸಮಾಜದಲ್ಲಿ ಪ್ರವಾದಿಯವರು ಜನರ ಮನಸ್ಸು ಗೆದ್ದಂತೆ, ನಾವೂ ಸಹ ಉತ್ತಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳ ಮೂಲಕ ದೇಶದ ಜನರ ವಿಶ್ವಾಸವನ್ನು ಗೆಲ್ಲಬೇಕಾಗಿದೆ” ಎಂದು ಹೇಳಿದರು.
ನಂತರ ನಡೆದ ಸಂವಾದ ಹಾಗೂ ಚರ್ಚಾಕೂಟದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಯುವ ನಾಯಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಅಭಿಪ್ರಾಯಗಳು, ಸ್ಥಳೀಯ ಸಮಸ್ಯೆಗಳು ಹಾಗೂ ಸಂಘಟನಾ ಚಟುವಟಿಕೆಗಳ ಕುರಿತು ವಿಚಾರ ಮಂಡಿಸಿದರು.
ಸಮಾರೋಪ ಭಾಷಣ ಮಾಡಿದ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷರಾದ ಡಾ. ಸಾದ್ ಬೆಳಗಾಮಿ, “ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಯುವಜನರ ಸಮಸ್ಯೆಗಳ ಪರಿಹಾರ, ಉದ್ಯೋಗ ಸೃಷ್ಟಿ ಹಾಗೂ ನವೋದ್ಯಮಗಳತ್ತ ಯುವಕರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಪ್ರಶಂಸನೀಯ. ಮುಂದಿನ ದಿನಗಳಲ್ಲಿ ಇದು ಮಹತ್ವದ ಸಾಮಾಜಿಕ ಆಂದೋಲನವಾಗಿ ಬೆಳೆಯಲಿದೆ” ಎಂದು ಅಭಿಪ್ರಾಯಪಟ್ಟರು.
ಸೋಲಿಡಾರಿಟಿ ರಾಜ್ಯಾಧ್ಯಕ್ಷರಾದ ಡಾ. ನಸೀಮ್ ಅಹ್ಮದ್ ಮಾತನಾಡಿ, ಯುವಕರು ಧೈರ್ಯಶಾಲಿ, ಜವಾಬ್ದಾರಿಯುತ ಹಾಗೂ ಬಲಿಷ್ಠ ನಾಯಕರಾಗಿ ಸಮಾಜದ ಪರ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಸ್ಮಾಯಿಲ್, ರಾಜ್ಯ ಕಾರ್ಯದರ್ಶಿಗಳಾದ ಮುಹಮ್ಮದ್ ರಫೀಕ್, ಮುದಸ್ಸಿರ್ ಖಾನ್, ಮುಹಮ್ಮದ್ ರೆಹಾನ್ ಹಾಗೂ ಅಸದುಲ್ಲಾ ಖಾನ್ ಉಪಸ್ಥಿತರಿದ್ದರು.













