ಅಬೂ ಹಿಶಾಮ್, ಮಲ್ಪೆ
ಪ್ರಶ್ನೆ: ಏಡಿ, ಆಮೆ ಮುಂತಾದ ಜೀವಿಗಳನ್ನು ತಿನ್ನುವುದು ಹರಾಮ್ ಆಗಿದೆ ಎಂದು ಓರ್ವ ವಿದ್ವಾಂಸರು ಭಾಷಣ ಮಾಡುವುದನ್ನು ಕೇಳಿದ್ದೇನೆ. ಆದರೆ ನಮ್ಮಲ್ಲಿ ಮುಸ್ಲಿಮರು ಏಡಿಯನ್ನು ತಿನ್ನುತ್ತಾರೆ. ಇದರ ವಿಧಿಯೇನು?
ಉತ್ತರ: ಏಡಿ ಹಾಗೂ ಆಮೆಯನ್ನು ತಿನ್ನುವುದನ್ನು ಪವಿತ್ರ ಕುರ್ಆನ್ ಅಥವಾ ಹದೀಸ್ ನಿಷೇಧಿಸಿಲ್ಲ. ಕುರ್ಆನ್ ಅಥವಾ ಹದೀಸ್ ನೇರವಾಗಿ ವಿರೋಧಿಸಿಲ್ಲದ ವಸ್ತುಗಳ ಪೈಕಿ ಮನುಷ್ಯನಿಗೆ ಶಾರೀರಿಕವಾಗಿಯೂ ಮಾನಸಿಕವಾಗಿಯೂ ಆರೋಗ್ಯಕರವೂ ಉತ್ತಮವೂ ಆದ ವಸ್ತುಗಳನ್ನು ಸೇವಿಸ ಬಹುದಾಗಿದೆ. ಶರೀರ ಹಾಗೂ ಮನಸ್ಸನ್ನು ಕೆಡಿಸುವ ಎಲ್ಲಾ ವಸ್ತುಗಳು ನಿಷಿದ್ಧವಾಗಿವೆ. ಏಡಿಯನ್ನು ತಿನ್ನುವುದರಿಂದ ಮನುಷ್ಯನ ಸ್ವಭಾವ ಅಥವಾ ಶರೀರದಲ್ಲಿ ಯಾವುದೇ ದೋಷವುಂಟಾಗುವುದಿಲ್ಲ ಎಂಬುದು ಅದನ್ನು ತಿನ್ನುವವರ ಅನುಭವದಿಂದ ಸ್ಪಷ್ಟವಾಗುತ್ತಿದೆಯಷ್ಟೇ. ಆಮೆಯ ವಿಷಯದಲ್ಲಿ ಅದನ್ನು ಜನರು ಇನ್ನೂ ವ್ಯಾಪಕವಾಗಿ ತಿನ್ನದಿರುವುದರಿಂದ ಮಾತ್ರವಲ್ಲ, ಅದರ ಬಗ್ಗೆ ಅಧ್ಯಯನಗಳು ನಡೆಯುತ್ತಿರುವುದರಿಂದ ಅವುಗಳನ್ನು ಕೊಲ್ಲುವುದು ಸರಕಾರದ ದೃಷ್ಟಿಯಲ್ಲಿ ಅಪರಾಧವಾಗಿದೆ.
ಆದರೆ ಕಪ್ಪೆ, ಏಡಿ, ಆಮೆ ಮುಂತಾದ ಜೀವಿಗಳನ್ನು ತಿನ್ನುವುದು ನಿಷಿದ್ಧವೆಂದು ಶಾಫಿ ಮದ್ಹಬ್ ವಾದಿಸಿದೆ. ಪವಿತ್ರ ಕುರ್ಆನಿನ (ಅಂತಿಮ ಪ್ರವಾದಿಗೆ) “ಉತ್ತಮವಾದುದನ್ನು ಅವರಿಗೆ ಅನುಮತಿಸಿ ಕೆಟ್ಟದನ್ನು ನಿಷಿದ್ಧ ಗೊಳಿಸಲಾಗಿದೆ” ಎಂಬ ವಚನವು ಅವರು ಪುರಾವೆಯಾಗಿ ಉದ್ದರಿಸುತ್ತಾರೆ. `ಖಬಾಯಿಸ್’ (ಕೆಟ್ಟದ್ದು) ಎಂದರೆ ಮನಸ್ಸಿಗೆ ಅಸಹ್ಯವೆನಿಸುವ ಎಲ್ಲವೂ ಸೇರುತ್ತದೆಂದೂ ಆಮೆ, ಕಪ್ಪೆ, ಏಡಿ ಮೊದಲಾದವುಗಳು ಆ ಸಾಲಿಗೆ ಸೇರುತ್ತವೆ ಎಂದೂ ಅವರ ವಾದವಾಗಿದೆ. ಇದು ಸರಿಯೆಂದು ಕಾಣುತ್ತಿಲ್ಲ. ಖಬಾಯಿಸ್ ಎಂದು ಹೇಳಿರುವುದು ದೃಷ್ಟಿಯಲ್ಲಿ ಅಸಹ್ಯವನ್ನುಂಟು ಮಾಡುವ ವಸ್ತುಗಳು ಎಂಬ ಅರ್ಥದಲ್ಲಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಕೆಟ್ಟ ಹಾಗೂ ನೀಚ ಚಿಂತನೆಗಳು, ಸ್ವಭಾವಗಳು ಮಾತುಗಳು, ಕೆಲಸ ಕಾರ್ಯಗಳು, ಆಹಾರ ವಸ್ತುಗಳು, ಆಹಾರೇತರ ವಸ್ತುಗಳು ಎಲ್ಲವೂ ಖಬಾಯಿಸ್ ಎಂಬ ಪದದ ತಾತ್ಪರ್ಯಕ್ಕೆ ಸೇರುತ್ತವೆ ಎಂಬುದು ಪ್ರಸ್ತುತ ಸೂಕ್ತದ ಸಂದರ್ಭದಲ್ಲಿ ಅಧ್ಯಯನ ನಡೆಸುವಾಗ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ.
ನೋಡುವಾಗ ಉಂಟಾಗುವ ಅಸಹ್ಯವು ಒಂದು ವಸ್ತುವಿನ ನಿಷಿದ್ಧತೆ ಅಥವಾ ಕೇಡಿನ ಸರಿಯಾದ ಮಾನ ದಂಡವಲ್ಲ ಎಂಬುದನ್ನು ಮರೆಯಬಾರದು. ಅದಕ್ಕೆ ವಿರುದ್ಧವಾಗಿಯೂ ಧಾರಾಳ ಅನುಭವಗಳನ್ನು ಕಾಣಬಹುದಾಗಿದೆ.
ಇನ್ನು ಅಸಹ್ಯ ಉಂಟುಮಾಡುವ ಜೀವಿಗಳು ನಿಷಿದ್ಧವಾಗಿವೆ ಎಂದಿಟ್ಟರೂ ಏಡಿಯು ಅಷ್ಟು ಅಸಹ್ಯವನ್ನುಂಟು ಮಾಡುವ ಜೀವಿಯೇ ಎಂಬುದರ ಬಗ್ಗೆ ಗಮನಹರಿಸಬೇಕಾಗಿದೆ. ಅಂತಹ ಜೀವಿಗಳನ್ನು ಸಾಮಾನ್ಯವಾಗಿ ಕಾಣದಿರುವವರಲ್ಲಿ ಅಸಹ್ಯ ಮೂಡಬಹುದು. ಆದರೆ ಸಾಮಾನ್ಯವಾಗಿ ಕಾಣುವವರಿಗೆ ಸಂಬಂಧಿಸಿದಂತೆ ಅದು ಸಿಗಡಿ, ಚಿಪ್ಪು ಮೀನಿನಂತಹ ಒಂದು ಜೀವಿಯಾಗಿದೆ.
ನಾಲ್ಕು ಮದ್ಹಬ್ಗಳ ಪೈಕಿ ಶಾಫಿ ಮದ್ಹಬ್ ಮಾತ್ರ ಏಡಿ ಮುಂತಾದ ಜೀವಿಗಳನ್ನು ನಿಷಿದ್ಧಗೊಳಿಸಿದೆ. ಅವುಗಳೆಲ್ಲವೂ ಅನುವದನೀಯವಾಗಿದೆ ಎಂಬುದು ಇತರರ ಅಭಿ ಪ್ರಾಯವಾಗಿದೆ. ಕೆಲವರು ಕರಾಹತ್ (ಅಪ್ರಿಯ) ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.












