ಕೋಲಾರ: ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ನಾಳೆ ಸುಪ್ರೀಂ ಕೋರ್ಟು ತೀರ್ಪು ನೀಡುವ ಹಿನ್ನೆಲೆಯಲ್ಲಿ ರಾಜಕೀಯ ಪಡಸಾಲೆಯಲ್ಲಿ ತೀವ್ರ ರೀತಿಯ ಚರ್ಚೆ ನಡೆಯುತ್ತಿದ್ದು, ಈ ನಡುವೆ ಸ್ಪೀಕರ್ ರಮೇಶ್ ಕುಮಾರ್ ಅವರು ನಾನು ದೊಡ್ಡವನಲ್ಲ, ಸುಪ್ರೀಂ ಕೋರ್ಟ್ ದೊಡ್ಡದು ಎಂದು ಹೇಳಿದ್ದಾರೆ. ಸ್ಪೀಕರ್ ವಿಷಯದಲ್ಲೇ ಸುಪ್ರೀಂ ಮಧ್ಯಪ್ರವೇಶ ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆ ಸು. ಕೋರ್ಟಿನಲ್ಲೂ ಪ್ರತಿಧ್ವನಿಸಿರುವ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆಗೆ ಮಹತ್ವ ಲಭಿಸಿದೆ. ನಾನು ಯಾರಿಗೂ ಸವಾಲ್ ಹಾಕಿಲ್ಲ, ಸುಪ್ರೀಂ ಕೋರ್ಟಿಗಿಂತ ದೊಡ್ಡವನು ನಾನಲ್ಲ ಎಂದವರು ಹೇಳಿರುವುದು ವಿವಿಧ ರೀತಿಯ ವ್ಯಾಖ್ಯಾನಗಳಿಗೆ ಕಾರಣವಾಗಿದೆ.
ನಾಳೆಯ ಕೋರ್ಟ್ ತೀರ್ಪು ನೋಡಿದ ಬಳಿಕ ಸುಪ್ರೀಂ ತೀರ್ಮಾನದ ಬಗ್ಗೆ ಪ್ರತಿಕ್ರಿಯೆ ನೀಡುವೆ. ಸುಪ್ರೀಂ ಕೋರ್ಟ್ ಗಿಂತ ದೊಡ್ಡವನು ನಾನಲ್ಲ. ಇವತ್ತು ವಾದ ವಿವಾದ ನಡೆದಿದೆ. ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೂ ಮಾತನಾಡಲ್ಲ. ನನಗೆ ಕೊಟ್ಟಿರುವ ಜವಾಬ್ದಾರಿ ನಾನು ನಿರ್ವಹಣೆ ಮಾಡುತ್ತಿದ್ದೇನೆ. ಯಾರಿಗೂ ನಾನು ಸವಾಲ್ ಹಾಕಿಲ್ಲ ಎಂದರು.
ನನ್ನ ಧ್ವನಿಯೇ ಸ್ಪಲ್ಪ ಜೋರಾಗಿದೆ. ನಮ್ಮಪ್ಪನಿಗೂ ಸ್ವಲ್ಪ ಗಂಟಲು ದೊಡ್ಡದಾಗಿತ್ತು. ಹಾಗಾಗಿ ನಾನು ಹಾಗೆ ಮಾತನಾಡುತ್ತೇನೆ. ಇದು ಸುಪ್ರೀಂ ಕೋರ್ಟ್ ಹಾಗೂ ನನ್ನ ನಡುವಿನ ಸಂಘರ್ಷ ಅಲ್ಲ. ನಿಮ್ಮ ಭಾಷೆಯಲ್ಲಿ ನೀವು ಏನಾದರೂ ಮಾತನಾಡಿಕೊಳ್ಳಿ. ನಿಮಗೆ ಪತ್ರಿಕಾ ಸ್ವಾತಂತ್ರ್ಯವಿದೆ ಎಂದು ಮಾಧ್ಯಮಗಳಿಗೆ ಹೇಳಿದರು ಎಂದು ವರದಿಗಳು ತಿಳಿಸಿವೆ.












