ಸನ್ಮಾರ್ಗ ವಾರ್ತೆ
ಜೈ ಶ್ರೀರಾಮ್ ಎಂದು ಕೂಗಲಿಲ್ಲ ಎಂಬ ಕಾರಣಕ್ಕೆ ಉತ್ತರಪ್ರದೇಶದ ಸುಲ್ತಾನಪುರದಲ್ಲಿ ಇಬ್ಬರು ಮುಸ್ಲಿಂ ಯುವಕರನ್ನು ಕ್ರೂರವಾಗಿ ಥಳಿಸಲಾದ ಘಟನೆ ನಡೆದಿದೆ. ಅಫ್ತಾಬ್ ಆಲಮ್ ಮತ್ತು ಜೀಷನ್ ಎಂಬವರ ಮೇಲೆ ಆರು ಸದಸ್ಯರ ಗ್ಯಾಂಗ್ ಹಲ್ಲೆ ನಡೆಸಿದೆ. ಈ ಯುವಕರು ಜೈ ಶ್ರೀರಾಮ್ ಎಂದು ಕೂಗಲು ನಿರಾಕರಿಸಿದ ಕಾರಣಕ್ಕೆ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದೆ.
ಹಲ್ಲೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನೀವು ಹಿಂದೂ ರಾಷ್ಟ್ರದಲ್ಲಿ ವಾಸಿಸ್ತಾ ಇದ್ದೀರಿ, ಜೈ ಶ್ರೀರಾಮ್ ಎಂದು ಹೇಳಲು ಯಾಕೆ ಸಾಧ್ಯ ಇಲ್ಲ ಎಂದು ದಾಳಿಕೋರರಲ್ಲಿ ಓರ್ವ ಹೇಳುವುದು ವಿಡಿಯೋದಲ್ಲಿ ಕೇಳಿಸುತ್ತದೆ. ಥಳಿಸುವುದು ಒದೆಯುವುದನ್ನು ಸಹಿಸಲಾರದೆ ಯುವಕರು ಬಿಟ್ಟುಬಿಡಿ ಎಂದು ಬೇಡಿಕೊಳ್ಳುವುದು ವಿಡಿಯೋದಲ್ಲಿದೆ.
ಆದರೆ ದಾಳಿಕೋರರು ಹೊಡೆಯುತ್ತಲೇ ಇದ್ದರು. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾದ ನಂತರ ಪೊಲೀಸರು ಘಟನೆಯ ತನಿಖೆ ಆರಂಭಿಸಿದ್ದಾರೆ. ಯುವಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.












