ಸನ್ಮಾರ್ಗ ವಾರ್ತೆ
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಕಾರಣಕ್ಕೆ ಪೂರ್ವ ಸೂಚನೆ ಇಲ್ಲದೆ ದಂಡ ವಿಧಿಸಿದ ಪ್ರಕರಣದಲ್ಲಿ ಗ್ರಾಹಕರ ಪರವಾಗಿ ನಿರ್ಣಾಯಕ ತೀರ್ಪು ಬಂದಿದೆ. ದಂಡದ ಮೊತ್ತವನ್ನು ವಿಧಿಸಲಾದ ಗ್ರಾಹಕರಿಗೆ ಸೌತ್ ಇಂಡಿಯಾ ಬ್ಯಾಂಕ್ ಹದಿನೈದು ಸಾವಿರ ರೂಪಾಯಿ ಪರಿಹಾರವನ್ನು ಪಾವತಿಸುವಂತೆ ದೆಹಲಿಯ ಗ್ರಾಹಕ ವಿವಾದ ಪರಿಹಾರ ಆಯೋಗ ಆದೇಶಿಸಿದೆ.
ಬ್ಯಾಂಕ್ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲದಿದ್ದಕ್ಕಾಗಿ ಬ್ಯಾಂಕ್ ದಂಡ ವಿಧಿಸಿದರೂ ಅದನ್ನು ಗ್ರಾಹಕರಿಗೆ ಮುಂಚಿತವಾಗಿ ತಿಳಿಸಬೇಕು. ಆದರೆ ಇಲ್ಲಿ ಬ್ಯಾಂಕ್ ಗ್ರಾಹಕನಿಗೆ ಅದನ್ನು ತಿಳಿಸಿರಲಿಲ್ಲ ಮಾತ್ರ ಅಲ್ಲ ನಿಗದಿತ ಮೊತ್ತವನ್ನು ಬ್ಯಾಂಕಿನಲ್ಲಿ ಹಾಕುವುದಕ್ಕೆ ಅವಕಾಶವನ್ನು ನೀಡಿರಲಿಲ್ಲ. ಇದು ಪ್ರಕರಣದ ನಿರ್ಣಾಯಕ ತಿರುವಾಗಿ ಪರಿಗಣಿತವಾಯಿತು.
ಗ್ರಾಹಕರಿಗೆ ಪೂರ್ವ ಸೂಚನೆ ನೀಡದೆ ದಂಡ ವಿಧಿಸುವುದು ಸೇವಾ ಉಲ್ಲಂಘನೆಯಾಗಿದೆ. ಬ್ಯಾಂಕುಗಳು ಗ್ರಾಹಕರೊಂದಿಗೆ ಪಾರದರ್ಶಕವಾಗಿರಬೇಕು ಮತ್ತು ಖಾತೆಗೆ ಸಂಬಂಧಿಸಿದ ಶುಲ್ಕಗಳು ಮತ್ತು ದಂಡಗಳ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಒದಗಿಸಬೇಕು ಎಂದು ಗ್ರಾಹಕ ನ್ಯಾಯಾಲಯ ಹೇಳಿದೆ.
ಕನಿಷ್ಠ ಬ್ಯಾಲೆನ್ಸ್ ಸೇವಾ ಶುಲ್ಕಗಳು ಮತ್ತು ಇತರ ಶುಲ್ಕಗಳನ್ನು ವಿಧಿಸುವಾಗ ಬ್ಯಾಂಕುಗಳು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸಬೇಕು. ಪೂರ್ವಸೂಚನೆ ಇಲ್ಲದೆ ದಂಡ ವಿಧಿಸಲಾಗಿದೆ ಎಂದು ನಿಮಗೆ ಅನಿಸಿದರೆ ನೀವು ಬ್ಯಾಂಕ್ ಅಥವಾ ಗ್ರಾಹಕ ವೇದಿಕೆಗೆ ದೂರು ಸಲ್ಲಿಸಬಹುದು ಎಂದು ಈ ಘಟನೆ ಸ್ಪಷ್ಟಪಡಿಸಿದೆ.












