ಉತ್ತರ ಪ್ರದೇಶ: ಗೋಹತ್ಯೆ ಆರೋಪಿಸಿ ಜನರ ಗುಂಪಿನಿಂದ ಮದ್ರಸಾ ಧ್ವಂಸ

0
908

ಲಕ್ನೊ, ಜು. 18: ಗೋಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಬೆಹಂತ ಗ್ರಾಮದಲ್ಲಿ ಜನರಗುಂಪು ಮದ್ರಸಾವನ್ನು ಧ್ವಂಸ ಮಾಡಿದೆ. ಎಪ್ಪತ್ತಕ್ಕೂ ಹೆಚ್ಚು ಮಂದಿ ಮದ್ರಸಾಕ್ಕೆ ಕಲ್ಲೆಸೆದರು. ಕಟ್ಟಡದ ಆವರಣಗೋಡೆ ಕೆಡವಿದರು. ಗ್ರಾಮದ ಮುಶ್ತಾಕ್ ಎಂಬವರ ಮನೆ, ಗ್ರಾಮದ ಶಾಲೆಯ ಮುಂದೆ, ಮದ್ರಸಾದ ಸಮೀಪ ಗೋಹತ್ಯೆಯ ಮಾಲಿನ್ಯ ಕಂಡು ರೋಷತಪ್ತರಾದ ಜನರು ಮದ್ರಸಾದ ಮೇಲೆ ದಾಳಿ ನಡೆಸಿ ದಾಂಧಲೆ ಮಾಡಿದರು ಮತ್ತು ಪೀಠೋಪಕರಣ, ಗೇಟುಗಳನ್ನು ಕೆಡವಿ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಕಾರಣ ಸೋಮವಾರ ಮದ್ರಸಾದ ಸಮೀಪವಿದ್ದ ಗುಂಡಿಯಲ್ಲಿ ಗೋಹತ್ಯೆಯ ಮಾಲಿನ್ಯ ಕಂಡು ಬಂದಿತ್ತು. ಮಂಗಳವಾರ ಬೆಳಗ್ಗೆ ಜನರು ಗುಂಪುಗೂಡಿ ಮದ್ರಸಾಕ್ಕೆ ದಾಳಿ ಮಾಡಿದ್ದಾರೆ. ಮದ್ರಸಾದ ಗೋಡೆ, ಛಾವಣಿಗೆ ಹಾನಿ ಮಾಡಿದರು. ಘಟನೆ ನಡೆದಾಗ ಮದ್ರಸಾದಲ್ಲಿ ಯಾರೂ ಇರಲಿಲ್ಲ. ಮದ್ರಸಾದ ವಸ್ತುಗಳನ್ನು ಒಂದೆಡೆ ಪೇರಿಸಿ ಬೆಂಕಿ ಹಚ್ಚಿದ್ದಾರೆ. ಗ್ರಾಮದಲ್ಲಿ ದನಹತ್ಯೆಯಾಗಿದೆ ಎಂಬ ಸುದ್ದಿ ಜನರ ನಡುವೆ ಪ್ರಚಾರ ಮಾಡಲಾಗಿತ್ತು. ಘಟನೆ ನಡೆಯುವಾಗ ಪೊಲಿಸರು ತಡೆದಿಲ್ಲ ಎಂದು ಆರೋಪಿಸಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಗೋಹತ್ಯೆ ಮಾಡಿದ ಪ್ರಕರಣದಲ್ಲಿ ಮುಶ್ತಾಕ್, ಮುನ್ನು ಶಾರ ವಿರುದ್ಧ ಉತ್ತರಪ್ರದೇಶ ಪೊಲೀಸರು ಕೇಸು ದಾಖಲಿಸಿದ್ದಾರೆ. ಜನರ ಗುಂಪಿನ ವಿರುದ್ಧ ಕೇಸು ದಾಖಲಿಸಿದರೂ ಒಬ್ಬನನ್ನು ಮಾತ್ರ ಈವರೆಗೆ ಪೊಲೀಸರು ಬಂಧಿಸಿದ್ದಾರೆ.