ಸನ್ಮಾರ್ಗ ವಾರ್ತೆ
ಮಂಗಳೂರು: ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜು ಹಾಗೂ ಶಾಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಸಹಯೋಗದಲ್ಲಿ ಗುರುವಾರ “NEET-2026 ಸಾಧಕರ ಸನ್ಮಾನ ಸಮಾರಂಭ” ನಡೆಯಿತು. ಸಂಸ್ಥೆಯ ಮೊದಲ NEET ರಿಪೀಟರ್ಸ್ ಬ್ಯಾಚ್ನ ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಗೌರವಿಸುವುದರೊಂದಿಗೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗೆ ಪ್ರೇರಣೆ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೆಫರ್ಡ್ಸ್ ಇಂಟರ್ನ್ಯಾಷನಲ್ ಅಕಾಡೆಮಿ ಹಾಗೂ ಶೆಫರ್ಡ್ಸ್ ಶಾಹೀನ್ ಪಿಯು ಕಾಲೇಜಿನ ಅಧ್ಯಕ್ಷ ಆರ್ಕಿಟೆಕ್ಟ್ ಮೊಹಮ್ಮದ್ ನಿಸಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕೆ ಗ್ರೂಪ್ನ ಅಧ್ಯಕ್ಷ ನಿಯಾಝ್ ಎ.ಕೆ., ಡಾ. ಹಸನ್ ಇಮ್ರಾನ್ ಮೊಹ್ತೇಶಮ್ (Ph.D.), ಕನಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ನಿರ್ದೇಶಕ ಅಬ್ದುಲ್ ರೆಹ್ಮಾನ್, ಖಜಾಂಚಿ ಸಾಜಿದ್ ಎ.ಕೆ., ಕಾರ್ಯದರ್ಶಿ ರಿಜ್ವಾನ್ ಪಾಂಡೇಶ್ವರ್, ಟ್ರಸ್ಟಿಗಳಾದ ಎಸ್.ಎಂ. ಫಾರೂಕ್, ನಝೀಮ್ ಎ.ಕೆ. ಹಾಗೂ ನೌಶಾದ್ ಎ.ಕೆ., ನಿರ್ದೇಶಕಿ ಡಾ. ನಫೀಸಾ ಶೆರಿನ್ ಮತ್ತು ಪ್ರಾಂಶುಪಾಲೆ ಲುಬ್ನಾ ಬಾನು ಉಪಸ್ಥಿತರಿದ್ದರು.
ಪವಿತ್ರ ಕುರ್ಆನ್ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬಳಿಕ ಪ್ರಾಂಶುಪಾಲೆ ಲುಬ್ನಾ ಬಾನು ಸ್ವಾಗತಿಸಿ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ವಿದ್ಯಾರ್ಥಿಗಳ ಯಶಸ್ಸಿನ ಹಿಂದೆ ಪೋಷಕರು, ಶಿಕ್ಷಕರು ಹಾಗೂ ಆಡಳಿತ ಮಂಡಳಿಯ ನಿರಂತರ ಸಹಕಾರ ಮತ್ತು ಸಮರ್ಪಣೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಹಸನ್ ಇಮ್ರಾನ್ ಮೊಹ್ತೇಶಮ್, ಜೀವನದಲ್ಲಿ ಎದುರಾಗುವ ಸವಾಲುಗಳು ಯಶಸ್ಸಿನ ಮೆಟ್ಟಿಲಾಗುತ್ತವೆ ಎಂದರು. ಸಂಕಷ್ಟದ ಸಂದರ್ಭದಲ್ಲಿಯೂ ಅಲ್ಲಾಹನ ಯೋಜನೆಯ ಮೇಲೆ ವಿಶ್ವಾಸವಿಟ್ಟು ತಾಳ್ಮೆ ಹಾಗೂ ದೃಢ ಸಂಕಲ್ಪದಿಂದ ಗುರಿಯತ್ತ ಸಾಗುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕನಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ನಿರ್ದೇಶಕ ಅಬ್ದುಲ್ ರೆಹ್ಮಾನ್ ಮಾತನಾಡಿ, ವಿದ್ಯಾರ್ಥಿಗಳು AIIMS ಸೇರಿದಂತೆ ದೇಶದ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳನ್ನು ಗುರಿಯಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ನಿರೀಕ್ಷಿತ ಫಲಿತಾಂಶ ದೊರೆಯದಿದ್ದರೂ ನಿರಾಶರಾಗದೆ ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಬಹುದೆಂದು ಹೇಳಿದರು.
ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಮುಸ್ತಫಾ ರಿಜ್ವಿ ಹಾಗೂ ರಸಾಯನಶಾಸ್ತ್ರ ವಿಭಾಗದ ಉಪನ್ಯಾಸಕ ಶೆಹ್ಜಾದ್ ಕರೀಂ ಮಾತನಾಡಿ, ಜೀವನದ ಸೋಲುಗಳಿಂದ ಹಿಂಜರಿಯದೆ, ಅಲ್ಲಾಹನ ಮೇಲಿನ ವಿಶ್ವಾಸ, ತಾಳ್ಮೆ ಹಾಗೂ ಪರಿಶ್ರಮದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿದರು. ಗುಣಮಟ್ಟದ ಶಿಕ್ಷಣ ಮತ್ತು ವಿಶ್ವಮಟ್ಟದ ತರಬೇತಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.
ಟ್ರಸ್ಟಿ ಎಸ್.ಎಂ. ಫಾರೂಕ್ ಮಾತನಾಡಿ, ವಿದ್ಯಾರ್ಥಿಗಳ ಪರಿಶ್ರಮ, ತ್ಯಾಗ ಹಾಗೂ ತಾಳ್ಮೆಯನ್ನು ಶ್ಲಾಘಿಸಿದರು. ಇದೇ ಸಮರ್ಪಣೆಯೊಂದಿಗೆ ಭವಿಷ್ಯದಲ್ಲಿಯೂ ಉನ್ನತ ಸಾಧನೆ ಮುಂದುವರಿಸಬೇಕೆಂದು ಹಾರೈಸಿದರು.
NEET ಸಾಧಕರ ಪೋಷಕರು ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣರಾದ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷ ಆರ್ಕಿಟೆಕ್ಟ್ ಮೊಹಮ್ಮದ್ ನಿಸಾರ್ ಮಾತನಾಡಿ, ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಅಭಿನಂದಿಸಿದರು. ಶಿಕ್ಷಕರ ಸೇವೆಯನ್ನು ಶ್ಲಾಘಿಸಿದ ಅವರು, ಗುಣಮಟ್ಟದ ಶಿಕ್ಷಣ, ಶಿಸ್ತುಬದ್ಧ ಕಲಿಕೆ ಹಾಗೂ ಮೌಲ್ಯಾಧಾರಿತ ಮಾರ್ಗದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಉನ್ನತ ಸಾಧನೆಯತ್ತ ಕೊಂಡೊಯ್ಯುವ ಬದ್ಧತೆಯನ್ನು ಸಂಸ್ಥೆ ಹೊಂದಿದೆ ಎಂದರು.
ಸಂಸ್ಥೆಯ ಮೊದಲ NEET ರಿಪೀಟರ್ಸ್ ಬ್ಯಾಚ್ನ 15 ವಿದ್ಯಾರ್ಥಿಗಳು NEET-2026ರಲ್ಲಿ ಅರ್ಹತೆ ಪಡೆದಿದ್ದಾರೆ. ಅವರಲ್ಲಿ ಐವರು ಉಚಿತ ವೈದ್ಯಕೀಯ ಸೀಟು ಪಡೆದಿದ್ದು, 46 ಶೇಕಡಾ ಅಂಕಗಳೊಂದಿಗೆ ಓರ್ವ ವಿದ್ಯಾರ್ಥಿ ಅಲ್ಪಸಂಖ್ಯಾತರ ಕೋಟಾದಡಿ ವೈದ್ಯಕೀಯ ಪ್ರವೇಶ ಪಡೆದಿರುವುದು ಸಂಸ್ಥೆಯ ಮತ್ತೊಂದು ಹೆಮ್ಮೆಯ ಸಾಧನೆಯಾಗಿದೆ.



ಸಾಧಕರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕೃತಜ್ಞತಾ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ದೀಕ್ಷಾ ನಿರೂಪಿಸಿದರು.












