✍️ ಸಿದ್ಧಾರ್ಥ್ ಭಾಟಿಯಾ
ಸ್ಥಾಪಕ ಸಂಪಾದಕರು, ದಿ ವೈರ್
ಮಿತ್ರಪಕ್ಷಗಳ ಗಟ್ಟಿ ಬೆಂಬಲವಿರುವುದರಿಂದ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ; ಅದರಲ್ಲೂ ಪ್ರಾದೇಶಿಕ ಪಕ್ಷಗಳ ಒಳಗೆ ಒಡಕುಂಟಾಗುವಂತೆ ನೋಡಿಕೊಂಡ ಮೇಲೆ ಸರ್ಕಾರ ಇನ್ನೂ ಹೆಚ್ಚು ಭದ್ರವಾಗಿದೆ. ತಮಗೆ ಅತ್ಯಂತ ಇಷ್ಟವಾದ ಕ್ಷೇತ್ರ ಪುನರ್ವಿಂಗಡಣೆಯ ಕಾನೂನನ್ನು ಜಾರಿಗೆ ತರಲು ಅವರು ಈಗ ಸಿದ್ಧತೆ ನಡೆಸುತ್ತಿದ್ದಾರೆ. ವಿಶ್ವಾದ್ಯಂತ ಸುತ್ತಾಡುತ್ತಾ, ಜಾಗತಿಕ ನಾಯಕರೊಂದಿಗೆ ಫೋಟೋಗಳಿಗೆ ಪೋಸ್ ನೀಡಲು ಭೇಟಿಯಾಗುತ್ತಿದ್ದಾರೆ. ಮಾಧ್ಯಮಗಳು (ಹಾಗೂ ಇನ್ನುಳಿದ ಅನೇಕ ಸಂಸ್ಥೆಗಳು) ಸಂಪೂರ್ಣವಾಗಿ ಅವರ ಹಿಡಿತದಲ್ಲಿದ್ದು, ಅವರಾಗಲಿ ಅವರ ಸರ್ಕಾರವಾಗಲಿ ಯಾವುದೇ ತಪ್ಪು ಮಾಡಿದರೂ ಒಂದು ಅಕ್ಷರವೂ ಬರೆಯುತ್ತಿಲ್ಲ. ಇನ್ನು ಅವರ ವಿರೋಧಿಗಳು ವೋಟು ಹಾಕದಂತೆ ನೋಡಿಕೊಳ್ಳಲು ಚುನಾವಣಾ ಆಯೋಗವು ಹಗಲಿರುಳು ಶ್ರಮಿಸುತ್ತಿದೆ.
ಎಲ್ಲಕ್ಕಿಂತ ಹೆಚ್ಚಾಗಿ, ವಿರೋಧ ಪಕ್ಷಗಳೆಲ್ಲ ಒಗ್ಗಟ್ಟಿಲ್ಲದೆ ದಿಕ್ಕುಗೆಟ್ಟು ಹೋಗಿವೆ. ಒಟ್ಟಿನಲ್ಲಿ ಹೇಳುವುದಾದರೆ, ಇದು ರಾಜಕೀಯವಾಗಿ ತುಂಬ ಖುಷಿಯಪಡುವಂಥ ಸ್ಥಿತಿ.
ಹಾಗಿದ್ದರೂ ನರೇಂದ್ರ ಮೋದಿಯವರಿಗೆ ಈಗೇಕೆ ಇಷ್ಟು ಭಯ? ಜಂತರ್ ಮಂತರ್ನಲ್ಲಿ ಒಟ್ಟುಗೂಡಿ ಸಂಸತ್ತಿನತ್ತ ಮಾರ್ಚ್ ಮಾಡುತ್ತೇವೆ ಎಂದ ಹತ್ತಾರು ಸಾವಿರ ಯುವಕರನ್ನು ನೋಡಿ ಸರ್ಕಾರ ಯಾಕಿಷ್ಟು ಉಗ್ರವಾಗಿ ಪ್ರತಿಕ್ರಿಯಿಸಿತು? ಪೊಲೀಸರ ದೊಡ್ಡ ದಂಡನ್ನು ಅವರ ಮೇಲೆ ಬಿಟ್ಟು, ಅವರನ್ನು ಮನಬಂದಂತೆ ಬಡಿಯುವಂತೆ ಏಕೆ ಆದೇಶಿಸಲಾಯಿತು? ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸೋನಮ್ ವಾಂಗ್ಚುಕ್ ಅವರನ್ನು ಪೊಲೀಸರು ಬಲವಂತವಾಗಿ ಎತ್ತಿಕೊಂಡು ಆಸ್ಪತ್ರೆಗೆ ಏಕೆ ಸಾಗಿಸಿದರು? ಆ ಬಳಿಕ, ರಾಹುಲ್ ಗಾಂಧಿ ಅವರು ಪ್ರತಿಭಟನಾಕಾರರ ಜೊತೆ ಸೇರಿದಾಗ, ಅವರ ಮೇಲೂ ಏಕೆ ಹಲ್ಲೆ ಮಾಡಲಾಯಿತು?
ಅವೆಲ್ಲವೂ ಕೇವಲ ಅವರು ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ – ಅಂದರೆ ಹೊಣೆಗಾರಿಕೆಯ ಕುರಿತು ಪ್ರಶ್ನೆಗಳನ್ನು ಕೇಳುತ್ತಿರುವುದರಿಂದ ಸಂಭವಿಸಿದವು.
ಮೋದಿಯವರು ತಮ್ಮ ಅನೇಕ ವಾಹನಗಳ ಬೆಂಗಾವಲುಪಡೆಯಲ್ಲಿ ಸಂಸತ್ತಿನಿಂದ ಹೊರಟುಹೋದರು. ಆದರೆ ಪ್ರಧಾನಮಂತ್ರಿಯಾಗಿ ಅವರು ಯುವಕರನ್ನು ಭೇಟಿಯಾಗಲು ಮತ್ತು ಅವರ ಸಮಸ್ಯೆಗಳ ಬಗ್ಗೆ ವಿಚಾರಿಸಲು ತಮ್ಮ ಹಿರಿಯ ಸಚಿವರೊಬ್ಬರನ್ನು ಸುಲಭವಾಗಿ ಕಳುಹಿಸಿಕೊಡಬಹುದಿತ್ತು.
ಅದರ ಬದಲು, ಸಂಸತ್ತಿನ ಹತ್ತಿರವೇ ಲಕ್ಷಾಂತರ ಯುವಕರು ಬೃಹತ್ ಪ್ರಮಾಣದಲ್ಲಿ ಸೇರಿಕೊಂಡಿದ್ದರೂ ಸಹ, ಮೋದಿ ಅವರು ಕೇವಲ 28 ವರ್ಷ ವಯಸ್ಸಿನ ಇಬ್ಬರು ಯುವಕರ ಕಂಪನಿ ಉಡಾಯಿಸಿದ ರಾಕೆಟ್ ಬಗ್ಗೆ ಮಾತನಾಡುವಾಗ ಮಾತ್ರ ಯುವ ಶಕ್ತಿಯನ್ನು ಕೊಂಡಾಡಿದರು. ಇಲ್ಲಿಯೂ ಕೂಡ ಅವರು ಸುಮ್ಮನಿರದೆ, ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ’56 ವರ್ಷದ ಯುವಕ’ ಎಂದು ಕೀಳು ಮಟ್ಟದ ವ್ಯಂಗ್ಯವಾಡಿದರು. ಆದರೆ ಜನಪ್ರಿಯತೆಯ ವಿಚಾರ ಬಂದಾಗ, ಈಗ ಗಾಳಿ ಸೋತು ಹೋದಂತೆ ಕಾಣುತ್ತಿರುವ ಆ ’56 ಇಂಚಿನ ಎದೆ’ಗಿಂತ ಆ 56 ವರ್ಷದ ವ್ಯಕ್ತಿಯೇ ಮೇಲಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತದೆ.
ವಿದ್ಯಾರ್ಥಿಗಳ ಕಡೆಗೆ ಗುರಿ ಇಟ್ಟಿರುವ ಪೆಲೆಟ್ ಗನ್ಗಳ ಆ ದೃಶ್ಯವಂತೂ ಭಾರತೀಯರ ನೆನಪಿನಲ್ಲಿ ಬಹಳ ಕಾಲ ಹಾಗೆಯೇ ಉಳಿಯುತ್ತದೆ.
ತಮ್ಮ ಹತ್ತಿರದವರು ಮತ್ತು ಮಾಧ್ಯಮಗಳು ಎಷ್ಟೇ ಬಿಂಬವನ್ನು ಕಟ್ಟಿಕೊಡಲು ಪ್ರಯತ್ನಿಸಿದರೂ, ಒತ್ತಡ ಬಂದಾಗ ಮೋದಿ ಕುಸಿದುಹೋಗುತ್ತಾರೆ ಎಂಬುದಕ್ಕೆ ಹಿಂದಿನ ಎರಡು ಉದಾಹರಣೆಗಳೇ ಸಾಕ್ಷಿ. ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿ ನಡೆದ ಹೋರಾಟದಲ್ಲಿ, ಮಹಿಳೆಯರು ಚಳಿಯನ್ನು ಲೆಕ್ಕಿಸದೆ, ಟ್ರೋಲಿಂಗ್ಗಳನ್ನು ಹಾಗೂ ಅನುರಾಗ್ ಠಾಕೂರ್ ಅವರ “ಗೋಲಿ ಮಾರೋ ಗದ್ದಾರೋಂಕೋ” (ದ್ರೋಹಿಗಳ ಮೇಲೆ ಗುಂಡು ಹಾರಿಸಿ) ಎಂಬ ಪ್ರಚೋದನಾಕಾರಿ ಘೋಷಣೆಗಳನ್ನು ಸಹಿಸಿಕೊಂಡು ಎರಡು ತಿಂಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಸಿದ್ದರು. ಕೊನೆಗೆ ಕೋವಿಡ್ ಲಾಕ್ಡೌನ್ನಿಂದಾಗಿ ಮಾತ್ರ ಆ ಪ್ರತಿಭಟನೆ ನಿಂತಿತು. ಆದರೆ ಆ ಕಾಯ್ದೆಯನ್ನು ಜಾರಿಗೆ ತರುವುದನ್ನು ಮಾತ್ರ ವರ್ಷಗಳ ಕಾಲ ಮುಂದೂಡಲಾಗಿಯಿತು.
2020-21ರಲ್ಲಿ ರೈತರು ಕೃಷಿ ಕಾನೂನುಗಳ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಮುಷ್ಕರ ನಡೆಸಿದಾಗ, ಅವರನ್ನು ಖಾಲಿಸ್ತಾನಿಗಳು ಎಂದು ಕರೆಯಲಾಯಿತು, ಪೊಲೀಸರು ಅವರ ಮೇಲೆ ಜಲಫಿರಂಗಿಗಳನ್ನು ಪ್ರಯೋಗಿಸಿದರು ಮತ್ತು ಅವರನ್ನು ದೆಹಲಿ ಪ್ರವೇಶಿಸದಂತೆ ತಡೆಯಲಾಯಿತು. ಆದರೂ, ಅವರು ಅಲ್ಲೇ ಉಳಿದರು. ಅಂತಿಮವಾಗಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಮೋದಿ ಘೋಷಿಸಿದರು.
ಯುವಕರ ಪ್ರತಿಭಟನೆಗಳು ಈಗಷ್ಟೇ ಪ್ರಾರಂಭವಾಗಿವೆ. ಅವು ಎಷ್ಟು ಕಾಲ ಮುಂದುವರಿಯುತ್ತವೆ ಮತ್ತು ಯಾವ ತಿರುವನ್ನು ಪಡೆದುಕೊಳ್ಳುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಯುವಜನರಲ್ಲಿ ನಿಜವಾದ ಆಕ್ರೋಶವಿದೆ ಎಂಬುದು ಸ್ಪಷ್ಟವಾಗಿದೆ. NEET ಪರೀಕ್ಷೆಗಳು ಮತ್ತು ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹವನ್ನು ಇದು ಮೀರಿ ಬೆಳೆದಿದೆ, ಆದರೂ ಈ ಸಮಸ್ಯೆಗಳು ಮುಖ್ಯವಾಗಿವೆ.
ಒಂದು ವೇಳೆ ಮೋದಿ ಅವರು ಮೊದಲೇ ‘ಕಾಕ್ರೋಚ್ ಜನತಾ ಪಕ್ಷ’ದ (CJP) ಪ್ರತಿನಿಧಿಗಳನ್ನು ಭೇಟಿ ಮಾಡಿ, ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವುದಾಗಿ ಹಾಗೂ ತಪ್ಪು ಮಾಡಿದವರಿಗೆ ಶಿಕ್ಷೆ ನೀಡುವುದಾಗಿ ಮಾತು ಕೊಟ್ಟಿದ್ದರೆ, ಜನರ ಕೋಪ ತಣ್ಣಗಾಗುತ್ತಿತ್ತು ಮತ್ತು ಬಹುಶಃ ಅಲ್ಲೇ ಆ ಹೋರಾಟ ನಿಂತಿರುತ್ತಿತ್ತು. ಆದರೆ ವಾಂಗ್ಚುಕ್ ಹಾಗೂ AISA ಸಂಘಟನೆಯ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹಕ್ಕೆ ಕೂತಾಗಲೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿತು, ಆ ಬಳಿಕ ಎಲ್ಲವೂ ಮೀರಿಹೋಗಿತ್ತು.
ದೆಹಲಿಯ ಜಂತರ್ ಮಂತರ್ನಲ್ಲಿ, ಮುಂಬೈನ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಾಧಿಯ ಬಳಿ ಮತ್ತು ಭಾರತದಾದ್ಯಂತ ಇತರ ಸ್ಥಳಗಳಲ್ಲಿ ನೂರಾರು, ನಂತರ ಸಾವಿರಾರು ಮತ್ತು ಹತ್ತಾರು ಸಾವಿರಾರು ಜನರು ಒಟ್ಟುಗೂಡಿದರು. ಪ್ರಶ್ನೆ ಪತ್ರಿಕೆ ಸೋರಿಕೆಗಳು ಮಾತ್ರವಲ್ಲದೆ, ಅಯೋಧ್ಯೆ ಮಂದಿರದಲ್ಲಿ ನಿಧಿ ದುರುಪಯೋಗ, ವಾಹನ ಸವಾರರಿಗೆ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಬಲವಂತವಾಗಿ ಪೂರೈಸುತ್ತಿರುವುದು, ಕಳಪೆ ಸೇತುವೆಗಳು ಮತ್ತು ಒಟ್ಟಾರೆಯಾಗಿ ಕಳಪೆ ಆಡಳಿತದಿಂದ ಬೇಸತ್ತು ಅವರು ಬಂದಿದ್ದರು. ಈ ಎಲ್ಲದರ ನಡುವೆ ಸರ್ಕಾರವು ಯಾವುದೇ ಹೊಣೆಗಾರಿಕೆಯನ್ನು ನಿರ್ಲಕ್ಷಿಸಿತು. ಆದರೆ ಆನ್ಲೈನ್ ಸುದ್ದಿ ಚಾನೆಲ್ಗಳಲ್ಲಿ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಸರ್ಕಾರದ ವಿರುದ್ಧ ಟೀಕೆಗಳು ನಿರಂತರವಾಗಿ ಹೆಚ್ಚಾಗುತ್ತಲೇ ಇದ್ದವು.
ಸರ್ಕಾರವು ಮುನ್ಸೂಚನೆಗಳನ್ನು ಗಮನಿಸಲು ವಿಫಲವಾಯಿತು ಮತ್ತು ಮೋದಿ ಅವರು ತಮ್ಮದೇ ಆದ ಕಲ್ಪನಾ ಲೋಕದಲ್ಲಿ ಮುಳುಗಿದ್ದರು, ಬಹುಶಃ ಮತ್ತೊಂದು ಹೊಸ ಪ್ರವಾಸಕ್ಕೆ ಸಿದ್ಧತೆ ನಡೆಸುತ್ತಿರಬಹುದು. ಸೀಸರ್ಗೆ ತನ್ನ ಆತಂಕಕಾರಿ ಕನಸುಗಳ ಬಗ್ಗೆ ಎಚ್ಚರಿಸಲು ಕ್ಯಾಲ್ಪುರ್ನಿಯಾಳಂತಹ ಹೆಂಡತಿಯೂ ಇರಲಿಲ್ಲ, ಅಥವಾ ಮಾರ್ಚ್ ತಿಂಗಳ ಮಧ್ಯಭಾಗದ (ಐಡ್ಸ್ ಆಫ್ ಮಾರ್ಚ್) ಅಪಾಯದ ಬಗ್ಗೆ ಎಚ್ಚರಿಕೆ ನೀಡಲು ಯಾವುದೇ ಭವಿಷ್ಯಗಾರನೂ ಇರಲಿಲ್ಲ.
ಜನರ ಆಕ್ರೋಶವು ಭುಗಿಲೆದ್ದಾಗ, ಅದಕ್ಕೆ ಪ್ರತಿಕ್ರಿಯಿಸಲು ಅವರ ಹತ್ತಿರ ಯಾವುದೇ ಉತ್ತರವಿರಲಿಲ್ಲ. ಜನರ ಕಷ್ಟ-ನೋವನ್ನು ಅರ್ಥಮಾಡಿಕೊಳ್ಳಲು ಅವರಲ್ಲಿ ಯಾವುದೇ ಸಹಾನುಭೂತಿ ಇರಲಿಲ್ಲ, ಹಾಗೂ ಆ ಕೋಪ ಎಷ್ಟು ಆಳವಾದದ್ದು ಎಂಬುದನ್ನು ಗ್ರಹಿಸುವ ವಿವೇಕವೂ ಅವರಿಗಿರಲಿಲ್ಲ.
ಪ್ರತಿಭಟನಾಕಾರರನ್ನು ಎದುರಿಸಲು ಬಿಜೆಪಿಯ ಸಾಮಾನ್ಯ ಆಯುಧಗಳೆಂದರೆ – ಮುಸ್ಲಿಂ ಆಯಾಮಕ್ಕಾಗಿ ಹುಡುಕುವುದು, ವಿದೇಶಿ ಕೈವಾಡದ ಬಗ್ಗೆ ಮಾತನಾಡುವುದು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮೇಲೆ ದಾಳಿ ಮಾಡುವುದು ಮತ್ತು ಎಲ್ಲವೂ ವಿಫಲವಾದಾಗ ಹಿಂಸೆಯಿಂದ ಪ್ರತಿಕ್ರಿಯಿಸುವುದು. ಮೊದಲನೆಯದು ಅನ್ವಯವಾಗಲಿಲ್ಲ, ಎರಡನೆಯದು ಬಲಹೀನವಾಗಿ ಕೇಳಿಸುತ್ತದೆ ಮತ್ತು ಮೂರನೇ ಹಾಗೂ ನಾಲ್ಕನೇಯದನ್ನು ಕಾರ್ಯರೂಪಕ್ಕೆ ತರಲಾಗಿದೆ. ಆದರೆ ಅದರಿಂದ ಯಾವುದೇ ಪರಿಣಾಮವಾಗಿಲ್ಲ. ಬುಧವಾರ ಹೆಚ್ಚುವರಿ ಅರೆಸೇನಾ ಪಡೆಗಳನ್ನು ಕರೆತರಲಾಗಿದೆ. ಒಮ್ಮೆ ಯೋಚಿಸಿ — ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ತಮ್ಮದೇ ಯುವ ನಾಗರಿಕರನ್ನು ಎದುರಿಸಲು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಇದು ಒಂದು ವಿಪತ್ತಿನ ಎಲ್ಲಾ ಮುನ್ಸೂಚನೆಗಳನ್ನು ಹೊಂದಿದೆ.
ಸ್ವಾಭಾವಿಕವಾಗಿಯೇ ಮೋದಿಜೀ ಕಣ್ಮರೆಯಾಗಿದ್ದಾರೆ. ಅವರಿಂದ ಯಾವುದೇ ಮಾತಿಲ್ಲ. ಅವರು ಈ ಪರಿಸ್ಥಿತಿಯನ್ನು ಮೀರಿ ನಿಲ್ಲಬಹುದು ಎಂದುಕೊಳ್ಳುತ್ತಾರೆ, ಆದರೆ ವಿಷಯಗಳು ಗಂಭೀರ ತಿರುವು ಪಡೆಯಬಹುದು ಎಂಬುದೂ ಅವರಿಗೆ ಗೊತ್ತು. ಏಕೆಂದರೆ ಈಗ ಅವರ ವಿರುದ್ಧ ತಿರುಗಬಹುದಾದವರು ಕೇವಲ ಯುವ ಮತದಾರರಷ್ಟೇ ಅಲ್ಲ, ಅವರ ಪೋಷಕರು ಸಹ ಹೌದು. ಅದರಲ್ಲಿ ಅವರ ಹಿಂದಿನ ಕಾಲದ ಭಕ್ತರೂ ಸೇರಬಹುದು. ಇದು ತಾನಾಗಿಯೇ ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡ ಜನಸಂದಣಿಯಾಗಿದೆ. ಬಿಜೆಪಿ-ಆರ್ಎಸ್ಎಸ್ ಒಕ್ಕೂಟವು ಕಾಂಗ್ರೆಸ್ ವಿರುದ್ಧ ಈ ತಂತ್ರಗಳನ್ನು ಹಲವು ಬಾರಿ ಬಳಸಿದೆ. ಅವರ ಬಳಿ ಕಾರ್ಯಕರ್ತರು ಮತ್ತು ಸಂಘಟನೆ ಎರಡೂ ಇವೆ. ಆದರೆ ಈ ಬಾರಿ ಅವರೇ ಆಕ್ರಮಣಕ್ಕೆ ಒಳಗಾಗಿದ್ದಾರೆ. ಇದನ್ನು ಗ್ರಹಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರ ಬಳಿ ಯೋಚನೆಗಳು ಖಾಲಿಯಾಗಿವೆ ಮತ್ತು ಏನು ಮಾಡಬೇಕೆಂದೇ ಅವರಿಗೆ ತೋಚುತ್ತಿಲ್ಲ.
ಧರ್ಮೇಂದ್ರ ಪ್ರಧಾನ್ ಅವರನ್ನು ರಾಜೀನಾಮೆ ನೀಡುವಂತೆ ಕೇಳಲು ಸಾಧ್ಯವಿಲ್ಲ, ಮತ್ತು ತಪ್ಪುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಏಕೆಂದರೆ ಅದು ಅವರಿಗೆ ಅಪರಿಚಿತವಾಗಿದೆ. ನೇಪಾಳ ಹಾಗೂ ಶ್ರೀಲಂಕಾದಲ್ಲಿ ಸಂಭವಿಸಿದ್ದನ್ನು ತಿಳಿದುಕೊಂಡು, ಅವರು ಅರೆಸೇನಾ ಪಡೆಗಳನ್ನು ಕರೆಸುವಲ್ಲಿ ಎಷ್ಟೇ ಧೈರ್ಯ ತೋರಿದ್ದರೂ ಚಿಂತಿತರಾಗಿದ್ದಾರೆ. ಯುವಕರು ಹಿಂದೆ ಸರಿಯುವ ಮನಸ್ಥಿತಿಯಲ್ಲಿಲ್ಲ. ಮತ್ತು ಮೋದಿ ಅವರು ಭಯಭೀತರಾಗಿದ್ದಾರೆ.
ಕೃಪೆ: thewire.in












