✍️ ಫಯಾಝ್, ಮಲ್ಪೆ
ಅಲ್ಲಾಹನ ಸಂದೇಶವನ್ನು ಮಾನವಕುಲಕ್ಕೆ ತಲುಪಿಸುವುದು ಇಸ್ಲಾಮಿನ ಮೂಲಭೂತ ಜವಾಬ್ದಾರಿಕೆಗಳಲ್ಲಿ ಒಂದಾಗಿದೆ. ಈ ಕಾರ್ಯವು ಪ್ರವಾದಿಗಳ ಮೂಲಕ ಆರಂಭವಾಗಿ, ಅವರ ಅನುಯಾಯಿಗಳ ಮೇಲೆಯೂ ಹೊಣೆಗಾರಿಕೆಯಾಗಿ ಮುಂದುವರಿದಿದೆ. ಆದ್ದರಿಂದ ದಾವಾ ಎನ್ನುವುದು ಯಾವುದೋ ಒಂದು ಸಂಘಟನೆ, ಹುದ್ದೆಗೆ ಅಥವಾ ನಿರ್ದಿಷ್ಟ ವೇದಿಕೆಗೆ ಸೀಮಿತವಾದ ಕಾರ್ಯವಲ್ಲ; ಪ್ರತಿಯೊಬ್ಬ ಮುಸ್ಲಿಮನು ತನ್ನ ಸಾಮರ್ಥ್ಯ ಮತ್ತು ಜ್ಞಾನದ ಮಟ್ಟಿಗೆ ನೆರವೇರಿಸಬೇಕಾದ ಹೊಣೆಗಾರಿಕೆಯಾಗಿದೆ.
ಸಂದೇಶ ತಲುಪಿಸುವುದು ಎಂದರೆ ಕೇವಲ ಕೆಲವು ಧಾರ್ಮಿಕ ಮಾಹಿತಿಗಳನ್ನು ಹಂಚಿಕೊಳ್ಳುವುದಲ್ಲ; ಅದು ಮನುಷ್ಯನೊಬ್ಬನಿಗೆ ಅವನ ಸೃಷ್ಟಿಕರ್ತನ ಬಗ್ಗೆ ಸರಿಯಾದ ಅರಿವನ್ನು ಮೂಡಿಸುವ ಕಾರ್ಯವಾಗಿದೆ. ಮನುಷ್ಯನು ಯಾರು? ಈ ಬದುಕಿನ ಉದ್ದೇಶವೇನು? ಅವನ ಅಸ್ತಿತ್ವದ ನಿಜಾರ್ಥವೇನು? ತನ್ನ ಪ್ರಭುವಿನೊಂದಿಗೆ ಅವನ ಸಂಬಂಧವೇನು? ಮತ್ತು ಮರಣದ ನಂತರದ ಜೀವನದ ವಾಸ್ತವಿಕತೆ ಏನು? ಎಂಬಂತಹ ಮೂಲಭೂತ ಪ್ರಶ್ನೆಗಳಿಗೆ ಪರಿಹಾರವನ್ನು ಒದಗಿಸುವ ಪ್ರಯತ್ನವೇ ದಾವಾ ಆಗಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋದರೆ ಸಂದೇಶ ಪ್ರಚಾರದ ಉದ್ದೇಶ ಇನ್ನಷ್ಟು ಸ್ಪಷ್ಟವಾಗುತ್ತದೆ. ಸಂದೇಶ ಪ್ರಚಾರವನ್ನು ಕೇವಲ ಉಪದೇಶ, ಸಮಾಜಸೇವೆ ಮತ್ತು ವೈಯಕ್ತಿಕ ಸುಧಾರಣೆಗೆ ಸೀಮಿತಗೊಳಿಸಿದರೆ, ಅದು ಬೋಧನೆಯ ಮಟ್ಟದಲ್ಲೇ ಉಳಿಯುತ್ತದೆ. “ಇತಿಹಾಸದಲ್ಲಿ ಕೇವಲ ಉಪದೇಶಗಳಿಂದ ಯಾವುದೇ ಮಹತ್ತರ ಸಾಮಾಜಿಕ ಕ್ರಾಂತಿ ಸಂಭವಿಸಿಲ್ಲ. ಸಮಾಜ ಪರಿವರ್ತನೆ ಮತ್ತು ವ್ಯವಸ್ಥಾ ಸುಧಾರಣೆಯ ದೃಷ್ಟಿಯಿಲ್ಲದ ಮತ್ತು ಕ್ರಾಂತಿಯ ಸಂದೇಶವಿಲ್ಲದ ಕರೆ ಕೆಲ ವ್ಯಕ್ತಿಗಳ ಮೇಲೆ ಪ್ರಭಾವ ಬೀರಬಹುದೇ ಹೊರತು, ಇಸ್ಲಾಮ್ ಬಯಸುವ ಅಂತರಂಗ ಮತ್ತು ಬಹಿರಂಗ ಪರಿವರ್ತನೆ ಹಾಗು ಒಂದು ಕ್ರಾಂತಿಕಾರಿ ನಾಗರಿಕ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯವಿಲ್ಲ. ಹೋರಾಟ ರಹಿತ ಸಂದೇಶವು ಅಂತಿಮವಾಗಿ ಸಮಾಜದ ಅಂಚಿನಲ್ಲೇ ಉಳಿಯುತ್ತದೆ; ಅದು ಇತಿಹಾಸದ ದಿಕ್ಕನ್ನು ಬದಲಾಯಿಸುವ ಶಕ್ತಿಯಾಗಿ ರೂಪುಗೊಳ್ಳುವುದಿಲ್ಲ.” (ಗ್ರಂಥ: ಮಾನವಕುಲದ ವಿಮೋಚಕ)
ಇಂದು ಮಾನವ ಸಮಾಜದ ಸಮಸ್ಯೆಗಳ ಮೂಲ ಪರಿಹಾರವು ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸುವುದರಲ್ಲಿಯೇ ಅಡಗಿದೆ. ಅದರ ಮೂಲಕವೇ ಕೆಡುಕನ್ನು ತಡೆದು ನ್ಯಾಯಯುತ ಸಮಾಜವನ್ನು ನಿರ್ಮಿಸಬಹುದು. ಮುಸ್ಲಿಮ್ ಸಮುದಾಯವೂ ಇಂದು ದುರ್ಬಲ ಸ್ಥಿತಿಗೆ ತಲುಪಿ ತನ್ನ ಅಸ್ತಿತ್ವದ ಉಳಿವಿಗಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ಅದರಿಂದ ಹೊರಬರಲು ಯಾವುದೇ ಶಾರ್ಟ್ಕಟ್ ಮಾರ್ಗವಿದೆ ಎಂದು ಭಾವಿಸುವುದು ಆತ್ಮವಂಚನೆಯಾಗಿದೆ. ಈ ಕಠಿಣ ಪರಿಸ್ಥಿತಿಯಿಂದ ಹೊರಬರುವ ಏಕೈಕ ಶಾಶ್ವತ ಮಾರ್ಗವೆಂದರೆ, ಅದು ಅಲ್ಲಾಹನ ಸಂದೇಶವನ್ನು ಮತ್ತೆ ಮಾನವ ಸಮಾಜದ ಮಧ್ಯೆ ಜೀವಂತಗೊಳಿಸುವುದಾಗಿದೆ.
ಈ ಕಾರಣಕ್ಕಾಗಿಯೇ ಸಂದೇಶ ತಲುಪಿಸುವ ಕಾರ್ಯವನ್ನು ಒಂದು ಸೀಮಿತ ಚಟುವಟಿಕೆ ಎಂದು ಭಾವಿಸಲಾಗದು. ಅದು ಬದುಕಿನ ಪ್ರತಿಯೊಂದು ಕ್ಷೇತ್ರಕ್ಕೂ ದಿಕ್ಕು ತೋರಿಸುತ್ತದೆ. ಆದ್ದರಿಂದ ಆ ಹೊಣೆಗಾರಿಕೆಯಿಂದ ಯಾರೂ ಯಾವುದೇ ನೆಪ ಅಥವಾ ಕಾರಣವನ್ನು ಮುಂದಿಟ್ಟು ನುಣುಚಿಕೊಳ್ಳಲು ಸಾಧ್ಯವಿಲ್ಲ.
“ಅಲ್ಲಾಹನ ಕಡೆಗೆ ಆಹ್ವಾನಿಸಿದ, ಸತ್ಕರ್ಮವೆಸಗಿದ ಮತ್ತು ‘ನಾನು ಮುಸ್ಲಿಮ್’ ಎಂದು ಹೇಳಿದ ವ್ಯಕ್ತಿಯ ಮಾತಿಗಿಂತ ಶ್ರೇಷ್ಠವಾದ ಮಾತು ಇನ್ನಾರದ್ದಾಗಿರಲು ಸಾಧ್ಯ?” (ಪವಿತ್ರ ಕುರ್ಆನ್ 41:33)
ದಾವಾ ಒಂದು ಪಾರ್ಟ್ ಟೈಮ್ ಜಾಬ್ ಅಲ್ಲ
ಅಲ್ಲಾಹನ ಸಂದೇಶವನ್ನು ಜನರಿಗೆ ತಲುಪಿಸುವ ಕುರಿತು ನಮ್ಮಲ್ಲಿದ್ದ ಕಾಳಜಿ ಹಿಂದಿಗಿಂತಲೂ ಕ್ಷೀಣಿಸುತ್ತಿರುವಂತೆ ಕಾಣುತ್ತಿದೆ. ಬದಲಾಗುತ್ತಿರುವ ಇಂದಿನ ಸಾಮಾಜಿಕ ಪರಿಸ್ಥಿತಿಗಳು, ವಿಶೇಷವಾಗಿ ಯುವ ಪೀಳಿಗೆಯ ಮೇಲೆ ಹೆಚ್ಚುತ್ತಿರುವ ಒತ್ತಡ, ಅನೇಕ ಮಂದಿಯನ್ನು ರಕ್ಷಣಾತ್ಮಕ ಜೀವನಶೈಲಿಯತ್ತ ತಳ್ಳುತ್ತಿರುವುದು ಕಂಡುಬರುತ್ತಿದೆ.
ಸಮಾಜದಲ್ಲಿ ಇಂದಿಗೂ ಸತ್ಯವನ್ನು ಅಪ್ಪಿಕೊಳ್ಳಲು ಸಿದ್ಧರಿರುವ ಜನರಿದ್ದಾರೆ. ಆದರೆ ಬದಲಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಸಮಕಾಲೀನ ಸಂಕೀರ್ಣ ಸಮಸ್ಯೆಗಳಿಗೆ ಇಸ್ಲಾಮಿನಲ್ಲಿ ಪರಿಹಾರವಿಲ್ಲ ಅಥವಾ ಪ್ರವಾದಿ(ಸ) ಸ್ಥಾಪಿಸಿದ ಮಾದರಿ ಸಮಾಜದ ಕರೆ ಇಂದಿನ ಕಾಲಕ್ಕೆ ಪ್ರಸ್ತುತವಲ್ಲ ಅಥವಾ ಸಕಾಲವಲ್ಲ ಎಂಬ ಧಾರಣೆ ಮುಸ್ಲಿಮ್ ಸಮುದಾಯದ ಒಂದು ವರ್ಗದಲ್ಲಿ ಬೆಳೆಯುತ್ತಿರುವಂತೆ ಕಾಣುತ್ತಿದೆ.
ಜೊತೆಗೆ, ಪುಸ್ತಕಗಳು, ಲೇಖನಗಳು ಮತ್ತು ಧಾರ್ಮಿಕ ಗ್ರಂಥಗಳೊಂದಿಗಿನ ನಮ್ಮ ನಂಟು ಹಿಂದಿಗಿಂತ ತೀರಾ ಕಡಿಮೆಯಾಗಿದೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯೂ ದೈನಂದಿನ ಜೀವನವನ್ನೇ ಆಕ್ರಮಿಸಿಕೊಂಡಿದೆ. ಇವೆಲ್ಲದರ ನಡುವೆ, ನಮ್ಮ ಮಸೀದಿಗಳು ನಿರ್ವಹಿಸಬೇಕಾದ ಪಾತ್ರವೂ ಕುಂಠಿತಗೊಂಡಿರುವಂತೆ ಕಾಣುತ್ತದೆ. ನಮ್ಮ ಖುತ್ಬಾಗಳಲ್ಲಿ ಮೂಲಭೂತ ವಿಚಾರಗಳಿಗಿಂತ ಇತರ ವಿಷಯಗಳಿಗೇ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿರುವುದನ್ನು ಕಾಣಬಹುದು.
ಇದರ ಪರಿಣಾಮವಾಗಿ ಯಾವ ವಿಷಯಕ್ಕೆ ಯಾವ ಆದ್ಯತೆ ನೀಡಬೇಕು ಎಂಬ ಅರಿವೇ ಮಸುಕಾಗುತ್ತಿದೆ. ಮೂಲಭೂತ ವಿಷಯಗಳನ್ನು ಕಡೆಗಣಿಸಿ, ಕ್ಷುಲ್ಲಕ ವಿಚಾರಗಳಿಗೂ ಸಮಯ ವ್ಯಯವಾಗುತ್ತಿದೆ. ಆದರೆ ಸ್ವಂತ ಆದ್ಯತೆಗಳ ವಿಷಯಕ್ಕೆ ಬಂದಾಗ ಯಾವುದೇ ಪರಿಸ್ಥಿತಿಯೂ ತೊಡಕಾಗುವುದಿಲ್ಲ. ಇವೆಲ್ಲವುಗಳಿಂದಾಗಿ ಸಮುದಾಯದ ವೈಚಾರಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆಯಲ್ಲಿ ಹಿನ್ನಡೆಯಾಗುತ್ತಿರುವುದು ಸ್ಪಷ್ಟವಾಗಿದೆ.
ಸಂದೇಶ ಪ್ರಚಾರ ಕಾರ್ಯವು ನಮ್ಮ ದೈನಂದಿನ ಬದುಕಿನಿಂದ ಬಹುಮಟ್ಟಿಗೆ ಕಣ್ಮರೆಯಾಗಿರುವಂತೆ ತೋರುತ್ತಿದೆ. ಕೆಲವರಲ್ಲಿ ಅದರ ಅರಿವು ಇದ್ದರೂ, ಬಿಡುವಿನ ವೇಳೆಯಲ್ಲಿ ಮಾಡುವ ಐಚ್ಛಿಕ ಕಾರ್ಯವೆಂಬ ಧಾರಣೆ ಬೆಳೆಸಿಕೊಂಡಂತೆ ಭಾಸವಾಗುತ್ತಿದೆ.
ಇನ್ನೊಂದು ವಾದ ಏನೆಂದರೆ “ತಾನು ಇನ್ನೂ ಸಂಪೂರ್ಣವಾಗಿ ದೀನ್ನ ಮೇಲೆ ನೆಲೆನಿಂತಿಲ್ಲ” ಎಂಬುದು, ಆದರೆ ಆ ಸಮರ್ಥನೆಯು ದಾವಾದ ಜವಾಬ್ದಾರಿಕೆಯಿಂದ ಹಿಂದೆ ಸರಿಯಲು ಆಧಾರವಾಗಲಾರದು. ಏಕೆಂದರೆ ದೀನ್ನ ಕಲಿಕೆ, ತರಬೇತಿ ಮತ್ತು ಅನುಸರಣೆ ಜೀವನಪರ್ಯಂತ ನಡೆಯುವ ಒಂದು ನಿರಂತರ ಪ್ರಕ್ರಿಯೆಯಾಗಿದೆ.
ದಾಯಿ ತಾನು ಸಾರುವ ಸಂದೇಶ ಮೊದಲು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ನಿಜ, “ದಾಯಿಯ ಪರಲೋಕ ಯಶಸ್ಸು ಕೇವಲ ಅವನು ಸಂದೇಶವನ್ನು ಸಾರಿದ ಪ್ರಮಾಣದ ಮೇಲೆ ನಿರ್ಧಾರವಾಗುವುದಿಲ್ಲ. ಬದಲಾಗಿ, ಅವನು ಆ ಸಂದೇಶವನ್ನು ಪ್ರಾಮಾಣಿಕವಾಗಿ ತನ್ನ ಜೀವನದಲ್ಲಿ ಎಷ್ಟು ಅಳವಡಿಸಿಕೊಂಡಿದ್ದಾನೆ ಎಂಬುದರ ಮೇಲೆಯೂ ಅವಲಂಬಿತವಾಗಿರುತ್ತದೆ.” (ಗ್ರಂಥ: ಸಂದೇಶ ಪ್ರಚಾರ)
ಆದರೆ ಯಾವ ರೀತಿ ಒಬ್ಬ ದಾಯೀ ತಾನು ಸಾರುವ ಸಂದೇಶವನ್ನು ಮೊದಲು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬೇಕೋ, ಅದೇ ರೀತಿ ಒಬ್ಬ ಅನುಸರಣಾ ವಿಶ್ವಾಸಿ ತನ್ನನ್ನು ದಾಯಿ ಜೀವನದ ಜವಾಬ್ದಾರಿಕೆಯಿಂದ ಯಾವುದೇ ಕಾರಣವನ್ನು ನೆಪವಾಗಿಸಿಕೊಂಡು ನುಣುಚಿಕೊಳ್ಳಲು ಸಾಧ್ಯವಿಲ್ಲ.
ಜೀವನದಲ್ಲಿ ಜವಾಬ್ದಾರಿಕೆಯ ಪ್ರಜ್ಞೆ ಕ್ಷೀಣಿಸಿದಾಗ, ಧರ್ಮವು ಕೂಡ ನಿಧಾನವಾಗಿ ವ್ಯಕ್ತಿಯ ಖಾಸಗಿ ಬದುಕಿನ ಮಿತಿಯೊಳಗೆ ಸೀಮಿತಗೊಳ್ಳತೊಡಗುತ್ತದೆ. ಆಗ ಅಲ್ಲಾಹನ ಸಂದೇಶವನ್ನು ಜಗತ್ತಿಗೆ ತಲುಪಿಸುವ ಧ್ಯೇಯವು ಬದುಕಿನ ಕೇಂದ್ರದಿಂದ ಸರಿದು, ಕೆಲವೊಂದು ಕಾರ್ಯಚಟುವಟಿಕೆಯ ಒಂದು ಅಂಶವಾಗಿ ಮಾತ್ರ ಉಳಿದುಬಿಡುತ್ತದೆ.
ಆ ದಿಸೆಯಲ್ಲಿ ಉತ್ತರದಾಯಿತ್ವದ ಪ್ರಜ್ಞೆ ಕಣ್ಮರೆಯಾಗಿ, ಜೊತೆಗೆ ಆತ್ಮಾವಲೋಕನವೂ ನಿಧಾನವಾಗಿ ಮಾಯವಾಗುತ್ತದೆ. ಪರಿಣಾಮವಾಗಿ ಜೀವನವು ಕೆಳಮಟ್ಟಕ್ಕೆ ಸಾಗುತ್ತಿದ್ದರೂ ಅದರ ಬಗ್ಗೆ ಕಳವಳ ಅಥವಾ ಅರಿವು ಉಳಿಯುವುದಿಲ್ಲ.
ಆ ಬಗ್ಗೆ ಪವಿತ್ರ ಕುರ್ಆನ್ ನಮಗೆ ತಾಕೀತು ಮಾಡುತ್ತದೆ: ಅಲ್ಲಾಹನನ್ನು ಮರೆತವರಂತೆ ಆಗಬೇಡಿ. ಆಗ ಅಲ್ಲಾಹನು ಅವರನ್ನೇ ಅವರಿಗೆ ಮರೆಸಿಬಿಟ್ಟನು. ಅವರೇ ಕರ್ಮ ಭ್ರಷ್ಟರು. (ಕುರ್ಆನ್ 59:19)
ಇಸ್ಲಾಮ್ ನಮಗೆ ತಲುಪಿದ್ದು ಯಾರಾದರೂ ಬಿಡುವಿನ ವೇಳೆಯಲ್ಲಿ ಮಾಡಿದ ಪ್ರಯತ್ನದಿಂದಲ್ಲ, ನಮ್ಮ ಪೂರ್ವಜರು ಅದಕ್ಕಾಗಿ ತಮ್ಮ ಜೀವನವನ್ನೇ ಸಮರ್ಪಿಸಿದ್ದ ಕಾರಣದಿಂದ. ಅದನ್ನು ಪವಿತ್ರ ಕುರ್ಆನ್ ಈ ರೀತಿಯಾಗಿ ವರ್ಣಿಸುತ್ತದೆ: “ನೀವು ಅಲ್ಲಾಹನಲ್ಲಿ ಮತ್ತು ಅವನ ರಸೂಲರಲ್ಲಿ ವಿಶ್ವಾಸವಿಟ್ಟು, ನಿಮ್ಮ ಸಂಪತ್ತು ಮತ್ತು ಜೀವಗಳಿಂದ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ.” (ಕುರ್ಆನ್ 61:11)
ಅಲ್ಲಾಹನು ಪ್ರವಾದಿಗಳ(ಸ) ಮೇಲೆ ಮತ್ತು ಅವರ ನಂತರ ಬಂದ ಅನುಯಾಯಿಗಳ ಮೇಲೆ ಹೊರಿಸಿದ ಈ ಮಹತ್ಕಾರ್ಯದ ಬಗ್ಗೆ ನಾವು ತೋರಿಸಿದ ಅಸಡ್ಡೆಯ ಪರಿಣಾಮಗಳನ್ನು ಇಂದು ಅನುಭವಿಸುತ್ತಿದ್ದೇವೆ. ಈ ಪ್ರವೃತ್ತಿ ಮುಂದುವರಿದರೆ, ಮುಂದಿನ ತಲೆಮಾರುಗಳು ಇನ್ನಷ್ಟು ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು.
ಪೂರ್ವಿಕರ ಜವಾಬ್ದಾರಿಕೆಯ ಪ್ರಜ್ಞೆ
ಸಹಾಬಿಗಳಿಂದ ಆರಂಭವಾದ ಈ ಪರಂಪರೆ ನಂತರದ ತಲೆಮಾರುಗಳಲ್ಲಿಯೂ ಮುಂದುವರಿಯಿತು. ಇತಿಹಾಸವನ್ನು ಗಮನಿಸಿದರೆ, ಇಸ್ಲಾಮಿನ ಸಂದೇಶವು ಅನೇಕ ಪ್ರದೇಶಗಳಿಗೆ ವ್ಯಾಪಾರ, ಮಾನವೀಯ ಸಂಪರ್ಕ ಮತ್ತು ಆದರ್ಶಮಯ ಜೀವನದ ಮೂಲಕ ತಲುಪಿರುವುದನ್ನು ಕಾಣಬಹುದು. ಆದರೆ ಅದರ ಹಿಂದೆ ಕೇವಲ ವಾಣಿಜ್ಯ ಉದ್ದೇಶಗಳಿರಲಿಲ್ಲ; ಅಲ್ಲಾಹನ ಮುಂದೆ ಸಾಕ್ಷಿಯಾಗಿ ನಿಲ್ಲುವ ಜವಾಬ್ದಾರಿಯ ಪ್ರಜ್ಞೆಯೂ ಇತ್ತು. ಆ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ನಮ್ಮ ಪೂರ್ವಿಕರು ಅಸಡ್ಡೆ ತೋರಿಸಿದ್ದರೆ, ಇಂದು ನಾವು ಇಸ್ಲಾಮ್ ಎಂಬ ಸನ್ಮಾರ್ಗದಿಂದ ವಂಚಿತರಾಗಿರುತ್ತಿದ್ದೆವು.
ಅಂದು ಇಸ್ಲಾಮ್ ಸ್ವೀಕರಿಸಿ ವಿಶ್ವಾಸವನ್ನು ಉಳಿಸಲು ನಡೆಸಿದ ಹೋರಾಟದ ಬಳಿಕವೂ ಅವರು ಆ ಪ್ರಕಾಶವನ್ನು ಇತರರಿಗೆ ತಲುಪಿಸಲು ಉತ್ತಮ ಪರಿಸ್ಥಿತಿಗಾಗಿ ಕಾಯಲಿಲ್ಲ. ಅವರಿಗೆ ಸಂಘ-ಸಂಸ್ಥೆಗಳು, ತರಬೇತಿಗಳು ಅಥವಾ ಅಧಿಕೃತ ಕಾರ್ಯಾಗಾರಗಳ ಅಗತ್ಯವಿರಲಿಲ್ಲ. ಅವರಲ್ಲಿ ಇದ್ದದ್ದು ಅಲ್ಲಾಹನ ಮುಂದೆ ಉತ್ತರಿಸಬೇಕಾದ ಜವಾಬ್ದಾರಿಕೆಯ ಪ್ರಜ್ಞೆ ಮಾತ್ರ.
ಅದಕ್ಕಾಗಿಯೇ ಅವರು ತಮ್ಮ ಭೂಮಿಯನ್ನು ತೊರೆದು ಲೋಕದ ಮೂಲೆ ಮೂಲೆಗಳಿಗೆ ಪ್ರಯಾಣ ಬೆಳೆಸಿದರು. ತಮ್ಮ ದೈನಂದಿನ ಕಸುಬು ಮತ್ತು ಜೀವನೋಪಾಯದ ಜೊತೆಗೆ, ತಾವು ಏಕದೇವತ್ವದ ಪ್ರತಿಪಾದಕರು ಹಾಗೂ ಅಲ್ಲಾಹನ ಪ್ರತಿನಿಧಿಗಳು ಎಂಬ ಪ್ರಜ್ಞೆಯನ್ನು ಸದಾ ಜೀವಂತವಾಗಿಟ್ಟುಕೊಂಡಿದ್ದರು. ಅಲ್ಲಾಹನ ವರ್ಣ (ಸಿಬ್ಗತುಲ್ಲಾಹ್) ಅವರನ್ನು ಸಂಪೂರ್ಣವಾಗಿ ಆವರಿಸಿತ್ತು.












