ಸನ್ಮಾರ್ಗ ವಾರ್ತೆ
ಪಶ್ಚಿಮ ಬಂಗಾಳದಲ್ಲಿ ಮಸೀದಿಗಳು, ಮದರಸಾಗಳು, ಈದ್ಗಾಗಳು ಮತ್ತು ಮಜಾರ್ಗಳ ಸಮಿತಿಗಳಿಗೆ ಸಮೀಕ್ಷೆ ನಮೂನೆಗಳನ್ನು ಹಂಚಲಾಗಿದೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಮತ್ತು ಪೊಲೀಸರಿಂದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸೋಮವಾರ ಸ್ಪಷ್ಟನೆ ಕೋರಿದೆ.
ಎಪಿಆರ್ಸಿಆರ್ ಪ್ರಕಾರ, ಈ ನಮೂನೆಗಳು ಧಾರ್ಮಿಕ ಪಂಥ, ಭೂಮಿಯ ಮಾಲೀಕತ್ವ, ಧನಸಹಯದ ಮೂಲಗಳು, ವಿದೇಶಿ ಸಂದರ್ಶಕರು ಅಥವಾ ವಿದ್ಯಾರ್ಥಿಗಳು, ಹಿಂದಿನ ಪ್ರಕರಣಗಳು, ಎಫ್ಐಆರ್ಗಳು ಮತ್ತು ಆರೋಪಪಟ್ಟಿಗಳು ಹಾಗೂ ನಿರ್ದಿಷ್ಟ ರಾಜಕೀಯ ಮತ್ತು ಸಾಂಸ್ಥಿಕ ವಿವರಗಳು ಸೇರಿದಂತೆ ಧಾರ್ಮಿಕ ಸಂಸ್ಥೆಗಳ ನಿರ್ವಹಣೆ ಮತ್ತು ಸ್ಥಿತಿಗತಿಗಳ ಕುರಿತು ವಿವರವಾದ ಮಾಹಿತಿಯನ್ನು ಕೇಳುತ್ತಿವೆ.
ಈ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರ ನೀಡುವ ಯಾವುದೇ ಸರ್ಕಾರದ ಅಧಿಸೂಚನೆ, ಜ್ಞಾಪಕ ಸಂಖ್ಯೆ, ದಿನಾಂಕ, ಹೊರಡಿಸಿದ ಪ್ರಾಧಿಕಾರ ಅಥವಾ ನಿರ್ದಿಷ್ಟ ಕಾನೂನುನನ್ನು ತಮ್ಮ ಬಳಿ ಇರುವ ನಮೂನೆಗಳ ಪ್ರತಿಗಳಲ್ಲಿ ಸ್ಪಷ್ಟವಾಗಿ ಗುರುತಿಸಲಾಗಿಲ್ಲ ಎಂದು ಹೇಳಿರುವ ಈ ನಾಗರಿಕ ಹಕ್ಕುಗಳ ಸಂಘಟನೆಯು, ಈ ಪ್ರಕ್ರಿಯೆಯ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದೆ.
“ಈ ನಮೂನೆಗಳನ್ನು ಅಧಿಕೃತ ಸರ್ಕಾರಿ ಅಥವಾ ಪೊಲೀಸ್ ಆದೇಶದ ಮೇರೆಗೆ ಹೊರಡಿಸಲಾಗಿದ್ದರೆ, ಆ ಆದೇಶವನ್ನು ಸಂಬಂಧಿತ ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಯಾಕೆ ಲಭ್ಯವಾಗುವಂತೆ ಮಾಡಿಲ್ಲ?” ಎಂದು ಎಪಿಸಿಆರ್ ಪ್ರಶ್ನಿಸಿದೆ.
ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಸಂವೇದನಾಶೀಲ ಮಾಹಿತಿಯನ್ನು ಒಳಗೊಂಡಿರುವ ಇಂತಹ ಪ್ರಕ್ರಿಯೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾದ ಸರ್ಕಾರಿ ಆದೇಶದ ಮೇರೆಗೆ ಮತ್ತು ನಿರ್ದಿಷ್ಟ ಕಾನೂನು ಚೌಕಟ್ಟಿನೊಳಗೆ ಮಾತ್ರ ಕೈಗೊಳ್ಳಬೇಕು ಎಂದು ಸಂಘಟನೆ ತಿಳಿಸಿದೆ.
ಮಸೀದಿಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳ ಧಾರ್ಮಿಕ ಅಥವಾ ಪಂಥೀಯ ಒಡನಾಟದ ವಿವರಗಳನ್ನು ಕೇಳುವ ಪ್ರಶ್ನೆಗಳ ಬಗ್ಗೆಯೂ ಎಪಿಸಿಆರ್ ವಿಶೇಷ ಕಳವಳ ವ್ಯಕ್ತಪಡಿಸಿದೆ. ಇಂತಹ ಮಾಹಿತಿಯನ್ನು ಯಾಕೆ ಕೇಳಲಾಗುತ್ತಿದೆ ಮತ್ತು ಇದು ಸಮೀಕ್ಷೆಯ ನಿರ್ದಿಷ್ಟ ಉದ್ದೇಶಕ್ಕೆ ಹೇಗೆ ಸಂಬಂಧಿಸಿದೆ ಎಂಬುದನ್ನು ವಿವರಿಸುವಂತೆ ಅಧಿಕಾರಿಗಳನ್ನು ಸಂಘಟನೆ ಒತ್ತಾಯಿಸಿದೆ.
ಪಶ್ಚಿಮ ಬಂಗಾಳದ ಅಲ್ಪಸಂಖ್ಯಾತ ವ್ಯವಹಾರಗಳು ಮತ್ತು ಮದರಸಾ ಶಿಕ್ಷಣ ಇಲಾಖೆಯು ಪ್ರಾರಂಭಿಸಿದ ರಾಜ್ಯವ್ಯಾಪಿ ಮದರಸಾ ಸಮೀಕ್ಷೆಗೂ, ಪೊಲೀಸರು ಹಂಚಿಕೆ ಮಾಡುತ್ತಿರುವ ನಮೂನೆಗಳಿಗೂ ಎಪಿಸಿಆರ್ ವ್ಯತ್ಯಾಸವನ್ನು ಸ್ಪಷ್ಟಪಡಿಸಿದೆ. ಎಪಿಸಿಆರ್ ಪ್ರಕಾರ, ಸರ್ಕಾರದಿಂದ ಅನುಮೋದಿಸಲ್ಪಟ್ಟ ಮದರಸಾ ಸಮೀಕ್ಷೆಯು ಅಸ್ತಿತ್ವದಲ್ಲಿರುವುದು ಮಾತ್ರವೇ ಪ್ರತ್ಯೇಕ ಪೊಲೀಸ್ ಪ್ರಕ್ರಿಯೆಗೆ ಅಥವಾ ಹೆಚ್ಚುವರಿ ಸಂವೇದನಾಶೀಲ ಮಾಹಿತಿಯನ್ನು ಸಂಗ್ರಹಿಸಲು ಅಧಿಕಾರ ನೀಡುವುದಿಲ್ಲ.
ನಮೂನೆಗಳ ಮೂಲ, ಅಧಿಕಾರ, ಉದ್ದೇಶ ಮತ್ತು ಕಾನೂನು ಮಾನ್ಯತೆಯನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವಂತೆ ಎಪಿಸಿಆರ್ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಪೊಲೀಸರನ್ನು ಒತ್ತಾಯಿಸಿದೆ. ಅಲ್ಲದೆ, ಸಂಗ್ರಹಿಸಿದ ಮಾಹಿತಿಯನ್ನು ಯಾರೆಲ್ಲಾ ಪಡೆಯಬಹುದು ಮತ್ತು ದತ್ತಾಂಶವನ್ನು ಹೇಗೆ ಸಂಗ್ರಹಿಸಿ ಬಳಸಲಾಗುತ್ತದೆ ಎಂಬುದರ ಕುರಿತು ಸ್ಪಷ್ಟನೆ ಕೋರಿದೆ.
ಕಾನೂನುಬದ್ಧವಾದ ಆಡಳಿತಾತ್ಮಕ ಪರಿಶೀಲನೆ ಅಥವಾ ಧಾರ್ಮಿಕ ಸಂಸ್ಥೆಗಳ ಸರಿಯಾದ ದಾಖಲೆಗಳನ್ನು ನಿರ್ವಹಿಸುವ ಪ್ರಯತ್ನಗಳನ್ನು ವಿರೋಧಿಸುವುದಿಲ್ಲ ಎಂದು ಎಪಿಸಿಆರ್ ಹೇಳಿದೆ. ಆದಾಗ್ಯೂ, ಅಂತಹ ಪ್ರಕ್ರಿಯೆಗಳು “ಪಾರದರ್ಶಕವಾಗಿ, ಕಾನೂನುಬದ್ಧವಾಗಿ ಮತ್ತು ತಾರತಮ್ಯರಹಿತವಾಗಿ” ಇರಬೇಕೇ ಹೊರತು, ಯಾವುದೇ ನಿರ್ದಿಷ್ಟ ಧಾರ್ಮಿಕ ಸಮುದಾಯದ ಪ್ರೊಫೈಲಿಂಗ್ (ಗುರಿಯಾಗಿಸುವುದು) ಅಥವಾ ಆಯ್ದ ಗುರಿಯಾಗಿಸುವಿಕೆಗೆ ಕಾರಣವಾಗಬಾರದು ಎಂದು ಅದು ಒತ್ತಿಹೇಳಿದೆ.
“ಇದು ಅಧಿಕೃತ ಸರ್ಕಾರಿ ಸಮೀಕ್ಷೆಯಾಗಿದ್ದರೆ, ಸರ್ಕಾರಿ ಆದೇಶವನ್ನು ಸಾರ್ವಜನಿಕಗೊಳಿಸಲಿ. ಇದು ಪೊಲೀಸ್ ಕ್ರಮ ಆಗಿದ್ದರೆ, ಧಾರ್ಮಿಕ ಸಂಸ್ಥೆಗಳಿಂದ ಅಂತಹ ಸಂವೇದನಾಶೀಲ ಮಾಹಿತಿಯನ್ನು ಯಾವ ಕಾನೂನಿನಡಿಯಲ್ಲಿ ಮತ್ತು ಯಾವ ಉದ್ದೇಶಕ್ಕಾಗಿ ಸಂಗ್ರಹಿಸಲಾಗುತ್ತಿದೆ ಎಂಬುದನ್ನು ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಬೇಕು” ಎಂದು ಎಪಿಸಿಆರ್ ಆಗ್ರಹಿಸಿದೆ.












