“ಬಹುಸಂಖ್ಯಾತರ ಭಾವನೆಗಳು ಸಾವಿಧಾನಿಕ ಹಕ್ಕುಗಳನ್ನು ಮರೆಮಾಚಲು ಸಾಧ್ಯವಿಲ್ಲ”: ಇಸ್ಲಾಮ್‌ ಧರ್ಮ ಸ್ವೀಕರಿಸಿದ ಸಹೋದರಿಯರ ಬಂಧನ ಕುರಿತು ಅಲಹಾಬಾದ್ ಹೈಕೋರ್ಟ್

0
250

ಸನ್ಮಾರ್ಗ ವಾರ್ತೆ

ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಸ್ವಯಂಪ್ರೇರಿತರಾಗಿ ಮತಾಂತರಗೊಂಡ ಇಬ್ಬರು ಪ್ರಾಯಪೂರ್ಣ ಸಹೋದರಿಯರನ್ನು ಅವರ ತಂದೆ ಕಾನೂನುಬಾಹಿರವಾಗಿ ಬಂಧನದಲ್ಲಿರಿಸಿದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಸಂದೀಪ್ ಜೈನ್ ಅವರು ನೀಡಿದ ಈ ತೀರ್ಪಿನಲ್ಲಿ, ಜಾಯಾ ದಿಯಾ ಭಾಟಿಯಾ ಎಂದು ಹೆಸರನ್ನು ಬದಲಾಯಿಸಿಕೊಂಡಿರುವ ದಿಯಾ ಭಾಟಿಯಾ ಮತ್ತು ಅಮಿನಾ ಅನ್ಶು ಭಾಟಿಯಾ ಎಂದು ಹೆಸರನ್ನು ಬದಲಾಯಿಸಿಕೊಂಡಿರುವ ಅನ್ಶು ಭಾಟಿಯಾ ಎಂಬ ಇಬ್ಬರು ಮಹಿಳೆಯರ ಮೂಲಭೂತ ಹಕ್ಕುಗಳ ಉಲ್ಲಂಘನೆಗೆ ಅವರ ತಂದೆ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಜವಾಬ್ದಾರರನ್ನಾಗಿ ಮಾಡಲಾಗಿದ್ದು, ಎಂಟು ವಾರಗಳ ಒಳಗೆ 25 ಲಕ್ಷ ರೂಪಾಯಿ ಪರಿಹಾರವನ್ನು ಇಬ್ಬರು ಮಹಿಳೆಯರಿಗೆ ಸಮಾನವಾಗಿ ಪಾವತಿಸುವಂತೆ ನಿರ್ದೇಶಿಸಲಾಗಿದೆ ಎಂದು ವರದಿಯಾಗಿದೆ.

2021 ರಿಂದ ದೀರ್ಘಕಾಲದವರೆಗೆ ತಮ್ಮ ಸ್ವಾತಂತ್ರ್ಯದಿಂದ ವಂಚಿತರಾಗಿರುವ ಈ ಮಹಿಳೆಯರು, ತಂದೆ ಅಥವಾ ಸರ್ಕಾರದ ಹಸ್ತಕ್ಷೇಪವಿಲ್ಲದೆ ತಾವು ಬಯಸಿದ ಸ್ಥಳದಲ್ಲಿ ಮತ್ತು ಯಾರೊಂದಿಗೆ ಬೇಕಾದರೂ ವಾಸಿಸಲು ಸ್ವತಂತ್ರರು ಎಂದು ನ್ಯಾಯಾಲಯ ಘೋಷಿಸಿದೆ. ಪ್ರಾಯಪೂರ್ಣ ಮಹಿಳೆಯರಾಗಿರುವ ಅವರಿಗೆ ತಮ್ಮ ನಂಬಿಕೆ, ವಾಸಸ್ಥಳ ಮತ್ತು ಸಂಗಾತಿಯನ್ನು ಆಯ್ಕೆ ಮಾಡುವ ಉಲ್ಲಂಘಿಸಲಾಗದ ಸಂವಿಧಾನಾತ್ಮಕ ಹಕ್ಕಿದೆ ಎಂದು ತಿಳಿಸಿರುವ ನ್ಯಾಯಾಲಯ, ಪೋಷಕರ ಅಧಿಕಾರ, ಸಾಮಾಜಿಕ ನೈತಿಕತೆ ಅಥವಾ ಬಹುಸಂಖ್ಯಾತರ ಭಾವನೆಗಳಿಂದ ಸಂವಿಧಾನಾತ್ಮಕ ಹಕ್ಕುಗಳನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಮತಾಂತರ ವಿರೋಧಿ ಕಾನೂನು ಹಾಗೂ ದೇಶದ ಭದ್ರತೆಗೆ ಬೆದರಿಕೆ ಎಂಬ ಸರ್ಕಾರದ ವಾದಗಳನ್ನು ತಳ್ಳಿಹಾಕಿರುವ ನ್ಯಾಯಾಲಯ, ಮಹಿಳೆಯರ ಪಾಸ್‌ಪೋರ್ಟ್, ಶೈಕ್ಷಣಿಕ ಪ್ರಮಾಣಪತ್ರಗಳು, ಮತಾಂತರದ ದಾಖಲೆ ಸೇರಿದಂತೆ ಎಲ್ಲಾ ಮೂಲ ದಾಖಲೆಗಳು ಮತ್ತು ವೈಯಕ್ತಿಕ ಸಾಮಗ್ರಿಗಳನ್ನು ಏಳು ದಿನಗಳೊಳಗೆ ಹಿಂತಿರುಗಿಸುವಂತೆ ತಂದೆಗೆ ಆದೇಶಿಸಿದೆ. ಜತೆಗೆ, ಪಾವತಿಸಿದ ಪರಿಹಾರದ ಮೊತ್ತದ ಅರ್ಧದಷ್ಟನ್ನು ತಂದೆಯಿಂದ ಮತ್ತು ಉಳಿದ ಅರ್ಧವನ್ನು ತಪ್ಪು ಮಾಡಿದ ಸರ್ಕಾರಿ ನೌಕರರಿಂದ ಮರುಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.

https://maktoobmedia.com/post?id=116174&slug=majoritarian-sentiment-cannot-eclipse-constitutional-rights-allahabad-hc-on-confinement-of-sisters-who-embraced-islam