ಸನ್ಮಾರ್ಗ ವಾರ್ತೆ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸುಧಾರಣೆಗಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಆಗಸ್ಟ್ 15 ರಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಘೋಷಿಸಿದ್ದಾರೆ. ಕಳೆದ 80 ವರ್ಷಗಳಲ್ಲಿ ಗ್ರಾಮೀಣ ಸರ್ಕಾರಿ ಶಾಲೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ವೀಡಿಯೊ ಸಂದೇಶದಲ್ಲಿ ತಿಳಿಸಿರುವ ಅವರು, ಹೊಸ ಸಂಸತ್ ಭವನ ಮತ್ತು ಪ್ರಧಾನಿ ನಿವಾಸ ನಿರ್ಮಿಸಿದಂತೆ ಗ್ರಾಮಗಳಲ್ಲೂ ಹೊಸ ಶಾಲೆಗಳನ್ನು ಯಾಕೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇಂದಿಗೂ ಮಕ್ಕಳು ಶಾಲೆಗೆ ಮೈಲುಗಟ್ಟಲೆ ದೂರ ನಡೆದುಕೊಂಡು ಹೋಗುತ್ತಿದ್ದು, ಕುಡಿಯುವ ನೀರು ಮತ್ತು ಶೌಚಾಲಯಗಳಂತಹ ಮೂಲಭೂತ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ ಎಂದಿದ್ದಾರೆ.
ಅಭಿಯಾನದ ಭಾಗವಾಗಿ, ದೇಶಾದ್ಯಂತ ಇರುವ ಸರ್ಪಂಚರು ತಮ್ಮ ಗ್ರಾಮಗಳ ಸರ್ಕಾರಿ ಶಾಲೆಗಳನ್ನು ಸುಧಾರಿಸುವಂತೆ “ಸರ್ಪಂಚ ಸವಾಲು” ನೀಡಲಾಗಿದ್ದು, ಶಾಲೆಗಳನ್ನು ಸುಧಾರಿಸುವ ಮುಖ್ಯಸ್ಥರ ಮೊದಲು ಮತ್ತು ನಂತರದ (Before and After) ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದರ ಮೂಲಕ ಅವರಿಗೆ ಕ್ರೆಡಿಟ್ ನೀಡಲಾಗುತ್ತದೆ. ಇದರೊಂದಿಗೆ ಸರ್ಕಾರಿ ಶಾಲೆಗಳ ನಾಗರಿಕ ನೇತೃತ್ವದ ಸಾಮಾಜಿಕ ಪರಿಶೋಧನೆಯನ್ನು ಘೋಷಿಸಲಾಗಿದ್ದು, ಪೋಷಕರು ಶಾಲೆಗಳಿಗೆ ಭೇಟಿ ನೀಡಿ ವಿದ್ಯುತ್, ಶುದ್ಧ ಕುಡಿಯುವ ನೀರು, ಶೌಚಾಲಯ ಮತ್ತು ಮಧ್ಯಾಹ್ನದ ಬಿಸಿಯೂಟದ ಲಭ್ಯತೆಯನ್ನು ಪರಿಶೀಲಿಸುವಂತೆ ಹಾಗೂ ಸೌಲಭ್ಯವಿಲ್ಲದಿದ್ದರೆ ವೀಡಿಯೊಗಳನ್ನು ರೆಕಾರ್ಡ್ ಮಾಡುವಂತೆ ಕೋರಲಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ಮುದ್ರಿಸಬಹುದಾದ ಪರಿಶೋಧನಾ ನಮೂನೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಿಜೆಪಿ ತಿಳಿಸಿದ್ದು, ಭರ್ತಿ ಮಾಡಿದ ನಮೂನೆ ಮತ್ತು ವೀಡಿಯೊ ಸಾಕ್ಷ್ಯಗಳನ್ನು [email protected] ವಿಳಾಸಕ್ಕೆ ಕಳುಹಿಸಬಹುದಾಗಿದೆ.
ರೈತರು ಮತ್ತು ದಿನಗೂಲಿ ಕಾರ್ಮಿಕರ ಮಕ್ಕಳು ನಗರದ ಮಕ್ಕಳಂತೆ ಸಮಾನ ಸೌಲಭ್ಯಗಳನ್ನು ಹೊಂದುವುದನ್ನು ಖಚಿತಪಡಿಸಿಕೊಳ್ಳಲು ಈ ಅಭಿಯಾನ ಶ್ರಮಿಸಲಿದೆ. ಪರೀಕ್ಷಾ ಅನಿಯಮಿತತೆಗಳ ವಿರುದ್ಧ ದಿಲ್ಲಿಯ ಜಂತರ್ ಮಂತರ್ನಲ್ಲಿ 36 ದಿನಗಳ ಪ್ರತಿಭಟನೆ ನಡೆಸಿದ್ದ ಸಿಜೆಪಿ, ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಬದಲು ಯುವ ಚಳುವಳಿಯಾಗಿ ಮುಂದುವರಿಯಲು ನಿರ್ಧರಿಸಿದೆ. ಗ್ರಾಮಗಳಲ್ಲಿ ಶಾಲೆಗಳನ್ನು ಸುಧಾರಿಸಲು ಎಲ್ಲರೂ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿರುವ ದೀಪ್ಕೆ, ನಿಜವಾದ ಭಾರತವು ಗ್ರಾಮಗಳಲ್ಲಿ ವಾಸಿಸುತ್ತದೆ ಎಂಬ ಸಂದೇಶದೊಂದಿಗೆ ವೀಡಿಯೊವನ್ನು ಮುಕ್ತಾಯಗೊಳಿಸಿದ್ದಾರೆ.












