ಸನ್ಮಾರ್ಗ ವಾರ್ತೆ
ಕಲಬುರ್ಗಿ: “ಶಿಕ್ಷಕರು ಮಕ್ಕಳಿಗೆ ಕೇವಲ ಮಾಹಿತಿ ನೀಡುವವರಾಗದೆ, ಅವರ ವ್ಯಕ್ತಿತ್ವವನ್ನು ರೂಪಿಸಿ ವಿದ್ಯಾರ್ಥಿಗಳನ್ನು ಅತ್ಯುನ್ನತ ಚಾರಿತ್ರ್ಯವಂತರನ್ನಾಗಿ ಮಾಡಬೇಕು” ಎಂದು ಬಿ.ಐ.ಇ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಹೇಳಿದರು.
ಅವರು ಇತ್ತೀಚೆಗೆ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕಲಬುರ್ಗಿ ವತಿಯಿಂದ ಸ್ಥಳೀಯ ಹಿದಾಯತ್ ಸೆಂಟರ್ನಲ್ಲಿ ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಮಾಅತೆ ಇಸ್ಲಾಮೀ ಹಿಂದ್ ಕಲ್ಬುರ್ಗಿ ನಗರ ಸಂಚಾಲಕ ಝಾಕೀರ್ ಹುಸೇನ್ ಮಾತನಾಡಿ, “ಆಧುನಿಕ ಶಿಕ್ಷಣವು ಯುವಕರಿಗೆ ಕೇವಲ ಉನ್ನತ ಪದವಿಗಳನ್ನು ಮಾತ್ರ ನೀಡಬಲ್ಲದು. ಅದರಾಚೆಗೆ ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ಕಲಿಸುವಲ್ಲಿ ಅದು ವಿಫಲವಾಗಿದೆ” ಎಂದು ವಿಷಾದ ವ್ಯಕ್ತಪಡಿಸಿದರು.

ಅತಿಥಿಯಾಗಿ ಭಾಗವಹಿಸಿದ್ದ ರಾಷ್ಟ್ರಪತಿ ಪ್ರಶಸ್ತಿ ವಿಜೇತ ಖ್ಯಾತ ಚಿತ್ರ ಕಲಾವಿದ ಡಾ. ರಹ್ಮಾನ್ ಪಟೇಲ್ ಅವರು ಸಂದರ್ಭೋಚಿತವಾಗಿ ಮಾತನಾಡಿದರು.
ಮಝ್ಹರುದ್ದೀನ್ ಸ್ಥಾನೀಯ ಅಧ್ಯಕ್ಷರು ಜ.ಇ.ಹಿಂದ್ ಕಲಬುರ್ಗಿ ದಕ್ಷಿಣ, ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಐಇ ವತಿಯಿಂದ ಪ್ರಕಟಗೊಂಡ ‘ದೀನೆ ಇಸ್ಲಾಂ’ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಿಐಇ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕಲೀಮ್ ಆಬಿದ್ ಅವರು ಪುಸ್ತಕದ ಪರಿಚಯ ಮಾಡಿಕೊಟ್ಟರು. ಬಿಐಇ ಸಂಚಾಲಕ ಅಕ್ಬರ್ ಮತೀನ್ ಅವರು ಬಹುಮಾನ ವಿತರಣಾ ಅಧಿವೇಶನವನ್ನು ನಿರ್ವಹಿಸಿದರು. ರಿಯಾಝುದ್ದೀನ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ಧನ್ಯವಾದಗಳನ್ನು ಅರ್ಪಿಸಿದರು.













