✍️ ಬಿ.ಎಂ. ಹನೀಫ್
ಕಾಕ್ರೋಚ್ ಜನತಾ ಪಾರ್ಟಿ ಜುಲೈ ತಿಂಗಳಲ್ಲಿ ದೆಹಲಿಯಲ್ಲಿ ನಡೆಸಿದ ವಿದ್ಯಾರ್ಥಿ ಆಂದೋಲನ ದೇಶದ ರಾಜಕೀಯ ಕ್ಷಿತಿಜದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ; ಹಾಗೆಯೇ ಹಲವು ಉತ್ತರಗಳ ಭರವಸೆಯನ್ನೂ ಮೂಡಿಸಿದೆ. 21 ಲಕ್ಷ ವಿದ್ಯಾರ್ಥಿಗಳು ಭವಿಷ್ಯದ ಕನಸು ಕಂಗಳೊಂದಿಗೆ ಕಾಯುತ್ತಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆದದ್ದು, ಸಿಡಿಮದ್ದುಗಳ ರಾಶಿಗೆ ಬೆಂಕಿ ಹಚ್ಚಿದಂತಾಯಿತು. ಪರೀಕ್ಷೆಯ ಸಿದ್ಧತೆಗಾಗಿ ರಾತ್ರಿ ಹಗಲು ನಿದ್ದೆ ಬಿಟ್ಟುಕೊಂಡು, ಬಕಧ್ಯಾನದಲ್ಲಿ ಓದಿ ಸಿದ್ಧರಾಗಿದ್ದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿದ್ದರಿಂದ ತೀವ್ರ ಹತಾಶೆಗೆ ಒಳಗಾದರು. 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡರು. ದೇಶದಾದ್ಯಂತ ಯುವಜನರ ಆಕ್ರೋಶ ಭುಗಿಲೆದ್ದಿತು. ಕೋಟ್ಯಂತರ ವಿದ್ಯಾರ್ಥಿಗಳಿಗೆ ಹೆಸರೇ ಗೊತ್ತಿಲ್ಲದಿದ್ದ, ಅಮೆರಿಕದಲ್ಲಿ ಕಲಿಯುತ್ತಿದ್ದ, ಅಭಿಜಿತ್ ದಿಪ್ಕೆ ಹಠಾತ್ತಾಗಿ ಭಾರತಕ್ಕೆ ಬಂದು ಜನಾಂದೋಲನದ ನೇತೃತ್ವ ವಹಿಸಿಕೊಂಡರು. ಶಾಂತಿಯುತ ಧರಣಿ, ಲಾಠಿ ಚಾರ್ಜ್, ಅಶ್ರುವಾಯು, ಜಲಫಿರಂಗಿ, ಬೀದಿಯಲ್ಲಿ ಕಾದಾಟ, ಪೆಲೆಟ್ ಗುಂಡುಗಳ ಹಾರಾಟ, ಬಂಧನ ಎಲ್ಲವೂ ನಡೆಯಿತು. ವಿದ್ಯಾರ್ಥಿಗಳು ಸಂಸತ್ತಿಗೇ ನುಗ್ಗಲು ಹೊರಟರು. ಸರ್ಕಾರ ಅಮಾನವೀಯವಾಗಿ ವರ್ತಿಸಿತು. ಆದರೆ ದೆಹಲಿಯ ಹೋರಾಟ ದೇಶದ ಎಲ್ಲ ರಾಜ್ಯಗಳಲ್ಲೂ ಪ್ರತಿಧ್ವನಿಸ ತೊಡಗಿದಾಗ, ಮೋದಿ ಸರಕಾರಕ್ಕೆ ಗೋಡೆಯ ಮೇಲಿನ ಬರಹ ಕಾಣಿಸತೊಡಗಿತು. ದೇಶಾದ್ಯಂತ ವಿದ್ಯಾರ್ಥಿ – ಯುವಜನರು ಬೀದಿಗೆ ಇಳಿದರು. ಕೊನೆಗೂ ನೀಟ್ ಪೇಪರ್ ಲೀಕ್‌ಗೆ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಲೆದಂಡ ಆಯಿತು. ಎಂದೂ ಯಾವುದಕ್ಕೂ ತಲ್ಲಣಗೊಳ್ಳದೆ ಕೇವಲ ‘ಮನ್ ಕಿ ಬಾತ್’ ಮೇಲೆ ಅಗಾಧ ವಿಶ್ವಾಸ ಇಟ್ಟುಕೊಂಡು, ಒನ್‌ವೇ ಟ್ರಾಫಿಕ್ ಮಾಡಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಎಷ್ಟು ಆಧೀರರಾದರೆಂದರೆ, ಮಧ್ಯರಾತ್ರಿ ಎದ್ದು ಕುಳಿತು ರೀಲ್ಸ್ ಮಾಡತೊಡಗಿದರು! ದೇಶದ ಯುವಜನರನ್ನು ‘ಫ್ರಾಂಡ್ಸ್’ ಎಂದು ಕರೆಯ ತೊಡಗಿದರು.
ಇಂದಿನ ವರ್ತಮಾನವೇ ನಾಳೆಯ ಇತಿಹಾಸ. ಕೇವಲ 20 ದಿನಗಳಲ್ಲಿ ಏನೆಲ್ಲ ಆಗಿ ಹೋಯಿತು! ಮೋದಿ ನೇತೃತ್ವದ ಸರ್ಕಾರ ಸದೃಢವಾಗಿತ್ತು. ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಯಾವ ಪ್ರತಿಭಟನೆಗೂ ಸರ್ಕಾರ ಜಗ್ಗುತ್ತಿರಲಿಲ್ಲ. ತನಗೆ ಬೇಕಾದ ಕಾಯ್ದೆಗಳನ್ನು ಬಹುಮತದಿಂದ ಪಾಸು ಮಾಡಿಕೊಳ್ಳುತ್ತಿತ್ತು. ಹೆಚ್ಚುತ್ತಿರುವ ನಿರುದ್ಯೋಗ, ನಿಯಂತ್ರಣವಿಲ್ಲದ ಬೆಲೆ ಏರಿಕೆ, ಅದಕ್ಷ ಆಡಳಿತ, ಅದಾನಿ – ಅಂಬಾನಿ ಪಾರುಪತ್ಯ ಎಲ್ಲವೂ ಜನರ ಅತೃಪ್ತಿಯನ್ನು ಹೆಚ್ಚಿಸುತ್ತಿತ್ತು. ಇನ್ನೊಂದೆಡೆ ದಿಕ್ಕು ದೆಸೆಯಿಲ್ಲದ ವಿದೇಶಾಂಗ ನೀತಿಯಿಂದಾಗಿ ಯುದ್ಧದ ದುಷ್ಪರಿಣಾಮ ದೇಶದ ಆರ್ಥಿಕತೆಯನ್ನು ದುಸ್ಥಿತಿಗೆ ದೂಡತೊಡಗಿತ್ತು. ಆದರೆ ವಿರೋಧಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಾಧ್ಯವಾಗಿರಲಿಲ್ಲ. ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಸಮರ್ಪಕ ಉತ್ತರವೂ ಸರ್ಕಾರದಿಂದ ಸಿಗುತ್ತಿರಲಿಲ್ಲ. ಈ ಮಧ್ಯೆ ಎಸ್‌ಐಆರ್ (ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ) ನಲ್ಲಿ ಲಕ್ಷಾಂತರ ಜನರ ಹೆಸರು ಕಣ್ಮರೆಯಾಯಿತು. ಬಿಹಾರ ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಜಯಭೇರಿ ಬಾರಿಸಿತು. ಚುನಾವಣಾ ಆಯೋಗ ಮತದಾರರ ದೂರುಗಳ ಬಗ್ಗೆ ಕ್ಯಾರೇ ಅನ್ನಲಿಲ್ಲ. ಪ್ರಾದೇಶಿಕ ಪಕ್ಷಗಳ ಶಾಸಕರನ್ನು ಒಡೆದು ಖರೀದಿಸುವ ‘ಆಪರೇಷನ್ ಕಮಲ’ ಎಗ್ಗಿಲ್ಲದೆ ನಡೆಯಿತು. ಒಟ್ಟಾರೆ ಆನೆ ನಡೆದದ್ದೇ ದಾರಿ ಎಂಬಂತೆ ಎನ್‌ಡಿಎ ಸರ್ಕಾರ ವರ್ತಿಸುತ್ತಿತ್ತು.
ಆದರೆ ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಾರ್ಟಿಯ ವಿದ್ಯಾರ್ಥಿ ಆಂದೋಲನ ದೇಶದ ರಾಜಕೀಯದ ಚೆಸ್ ಬೋರ್ಡನ್ನು ಧಡಕ್ಕನೆ ಅಲ್ಲಾಡಿಸಿದೆ. ಚೆಸ್ ಕಾಯಿಗಳು ಚೆಲ್ಲಾಪಿಲ್ಲಿಯಾಗಿವೆ. ದೇಶದ ಯಾವುದೇ ನಗರದಲ್ಲಿ ಯುವಜನರು ಬೀದಿಗಿಳಿದ ಒಂದು ಸಣ್ಣ ಸುದ್ದಿ ಬಂದರೂ ಮೋದಿ ಸರಕಾರ ತಲ್ಲಣಿಸುವಂತಾಗಿದೆ. ಸಂಸತ್ತಿನ ಅಧಿವೇಶನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿ ಮತ್ತು ಪ್ರಶ್ನೆಗಳ ಚಾಟಿಯೇಟನ್ನು ಎದುರಿಸಲಾಗದೆ, ಪ್ರಧಾನಿ ಮತ್ತು ಗೃಹ ಸಚಿವರು ಗೈರುಹಾಜರಾಗುವ ಹೊಸ ಕೆಟ್ಟ ಸಂಪ್ರದಾಯ ಆರಂಭವಾಗಿದೆ.
ಇದೆಲ್ಲದರ ಮಧ್ಯೆ ಯುವಜನರ ‘ಸ್ವಾತಂತ್ರ್ಯ’ ಮತ್ತು ‘ಸ್ವೇಚ್ಛಾಚಾರ’ದ ಬಗ್ಗೆ ಚರ್ಚೆ ಶುರುವಾಗಿದೆ. ಆಂದೋಲನದ ಭಾಗವಾಗಿದ್ದ ವಿದ್ಯಾರ್ಥಿಗಳು ತಮ್ಮೆಲ್ಲ ತುಂಟತನ, ಕುಚೋದ್ಯ, ವಿಡಂಬನೆ, ಉದ್ಧಟತನ ಮತ್ತು ಆಕ್ರೋಶದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ವಿರುದ್ಧ ಹೇಗೆ ಮುಗಿಬಿದ್ದರೆಂದರೆ, ದೇಶವಾಸಿಗಳಿಗೆ ಬಿಜೆಪಿಯ ಸೋಶಿಯಲ್ ಮೀಡಿಯಾದ ಸುಳ್ಳು ನೆರೇಶನ್‌ಗಳೆಲ್ಲವೂ ಹಾಸ್ಯಾಸ್ಪದ ಅನ್ನಿಸತೊಡಗಿವೆ. ಅದಾನಿ – ಅಂಬಾನಿ ಹಿಡಿತದಲ್ಲಿರುವ ರಾಷ್ಟ್ರೀಯ ಮಾಧ್ಯಮಗಳ ಬಡಪಾಯಿ ವರದಿಗಾರರು ‘ಗೋದಿ ಮೀಡಿಯಾ’ ಎಂಬ ಹಣೆಪಟ್ಟಿಯೊಂದಿಗೆ ವಿದ್ಯಾರ್ಥಿಗಳ ಆಕ್ರೋಶ ಎದುರಿಸಬೇಕಾಗಿದೆ. ‘ವಿದ್ಯಾರ್ಥಿ – ಯುವಜನರ ಟೀಕೆ ಮತ್ತು ವ್ಯಂಗ್ಯಗಳು ಔಚಿತ್ಯದ ಎಲ್ಲೆ ಮೀರಿದೆ. ದೇಶದ ಪ್ರಧಾನಿಯನ್ನೇ ಅವಹೇಳನ ಮಾಡುತ್ತಿದ್ದಾರೆ. ಇದು ಸ್ವಾತಂತ್ರ್ಯವಲ್ಲ, ಸ್ವೇಚ್ಛಾಚಾರ. ದೇಶವಿರೋಧಿ ಕೃತ್ಯ’ ಎಂದು ಆಳುವ ಪಕ್ಷದವರು ಸಿಟ್ಟಿಗೆದ್ದಿದ್ದಾರೆ. ‘ನಾವು ಇರುವುದೇ ಹೀಗೆ. ಆಳುವವರು ಸರಿ ಇಲ್ಲದಿದ್ದರೆ ನಾವು ಹೀಗೆಯೇ ಆಡುವುದು’ ಎಂದು ಆಂದೋಲನದ ಪರ ಯುವಜನರು ಗಟ್ಟಿ ಧ್ವನಿಯಲ್ಲಿ ಹೇಳುತ್ತಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಪರಿಭಾಷೆಯ ಬಗ್ಗೆ ಚರ್ಚೆ, ವಾಗ್ವಾದಗಳು ನಡೆಯುತ್ತಿವೆ.
ಬಾಬಾಸಾಹೇಬ ಅಂಬೇಡ್ಕರ್ ನೇತೃತ್ವದ ಹಿರಿಯರ ತಂಡ ರೂಪಿಸಿದ ಸಂವಿಧಾನ ನಮಗೆ ವಾಕ್‌ಸ್ವಾತಂತ್ರ್ಯವನ್ನು ನೀಡಿದೆ. ಬದುಕುವ ಹಕ್ಕು ನೀಡಿದೆ. ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ನೀಡಿದೆ. ಪ್ರತಿಭಟಿಸುವ ಹಕ್ಕನ್ನೂ ನೀಡಿದೆ. ಹೌದು, ಯಾವ ಸ್ವಾತಂತ್ರ್ಯಗಳೂ ಪರಿಪೂರ್ಣವಲ್ಲ; ಎಲ್ಲವೂ ನಿರ್ಬಂಧಿತ. ಅಂದರೆ ಕೆಲವು ಷರತ್ತುಗಳೊಂದಿಗೆ ನೀಡಿದ ಸ್ವಾತಂತ್ರ್ಯ! ನಮ್ಮ ವಾಕ್ ಸ್ವಾತಂತ್ರ್ಯದಿಂದ ಇನ್ನೊಬ್ಬರ ಹಕ್ಕನ್ನು ಕಸಿದುಕೊಳ್ಳಬಾರದು; ನಮ್ಮ ಧಾರ್ಮಿಕ ಆಚರಣೆ ಇನ್ನೊಬ್ಬರ ಭಾವನೆಗೆ ನೋವುಂಟು ಮಾಡಬಾರದು. ನಮ್ಮ ಪ್ರತಿಭಟನೆಯಿಂದ ಸಮಾಜದಲ್ಲಿ ಶಾಂತಿಭಂಗವಾಗಬಾರದು.
ಎಲ್ಲವೂ ಸರಿ. ಆದರೆ ಆಳುವವರ ಭ್ರಷ್ಟಾಚಾರ ಮತ್ತು ಸ್ವೇಚ್ಛಾಚಾರ ಮಿತಿಮೀರಿದಾಗ ಅದರ ವಿರುದ್ಧ ಹುಟ್ಟಿಕೊಳ್ಳುವ ಪ್ರತಿಭಟನೆಯೂ ಸ್ವೇಚ್ಛಾಚಾರದ ಎಲ್ಲೆ ಮೀರುತ್ತದೆ. ಇದು ಕ್ರಿಯೆಗೆ ತಕ್ಕ ಪ್ರತಿಕ್ರಿಯೆ. ಇದರ ಉದಾಹರಣೆಯನ್ನು ನಾವು ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾ ದೇಶದಲ್ಲಿ ಪ್ರತ್ಯಕ್ಷವಾಗಿ ನೋಡಿದ್ದೇವೆ. ಆದರೆ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಯುವಜನ ಆಂದೋಲನ ಖಂಡಿತವಾಗಿಯೂ ನೆರೆಯ ದೇಶಗಳ ಹಾದಿ ಹಿಡಿಯಲಿಲ್ಲ. ಪೊಲೀಸರು ನಿಷ್ಕರುಣೆಯಿಂದ ಥಳಿಸುತ್ತಿದ್ದರೂ ಹಲವು ವಿದ್ಯಾರ್ಥಿಗಳು ‘ಮಾರೊ.. ಮಾರೊ’ ಎಂದು ದೇಹವನ್ನೊಡ್ಡಿ ಸಾತ್ವಿಕ ಸಿಟ್ಟನ್ನು ಪ್ರದರ್ಶಿಸುತ್ತಿದ್ದ ವೀಡಿಯೊಗಳನ್ನು ನಾವೆಲ್ಲರೂ ನೋಡಿದ್ದೇವೆ. ಪೊಲೀಸರ ಜಲಫಿರಂಗಿಯನ್ನು ಎದುರಿಸಿ ಡ್ಯಾನ್ಸ್ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ನಾವು ನೋಡಿದ್ದೇವೆ. ತಮ್ಮನ್ನು ದೇಶದ್ರೋಹಿಗಳೆಂದು ಬ್ರ್ಯಾಂಡ್ ಮಾಡಲು ಯತ್ನಿಸಿದ ಆಳುವವರ ಪೊಲೀಸ್ ಪಡೆಯ ಮುಂದೆ ನಿಂತು ಸಾಮೂಹಿಕವಾಗಿ ರಾಷ್ಟ್ರಗೀತೆ ಹಾಡುತ್ತಿದ್ದ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಪೊಲೀಸರ ಪ್ರಚೋದನೆಯ ಹೊರತಾಗಿಯೂ ಅತ್ಯಂತ ಶಾಂತಿಯಿಂದ ವರ್ತಿಸಿ, ಲಾಠಿಯೇಟು ಮತ್ತು ಬೂಟಿನೇಟುಗಳನ್ನು ತಿಂದು ರಕ್ತ ಹರಿದರೂ ಜಗ್ಗದ ಹೊಸ ಪೀಳಿಗೆಯನ್ನು ನಾವು ನೋಡಿದ್ದೇವೆ. ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಹೋರಾಟವನ್ನು ಗಟ್ಟಿ ಗುಂಡಿಗೆಯೊಂದಿಗೆ ಅಹಿಂಸಾತ್ಮಕವಾಗಿ ಮುನ್ನಡೆಸಿದ ಮಹಾತ್ಮಾ ಗಾಂಧಿಯ ಸತ್ಯಾಗ್ರಹದ ಅಂತಃಸ್ಸತ್ವ ಹಲವು ಪೀಳಿಗೆಗಳು ಸರಿದರೂ, ಸದ್ದಿಲ್ಲದೆ ಈ ಯುವಜನರ ರಕ್ತದಲ್ಲಿ ಹರಿಯುತ್ತಿದೆ ಎನ್ನುವುದನ್ನು ಇಡೀ ಭಾರತ ಬೆಕ್ಕಸ ಬೆರಗಾಗಿ ನೋಡಿದೆ!
ಈ ಯುವಜನರ ಘೋಷಣೆಗಳು ಕೂಡಾ ಹೇಗಿವೆ ನೋಡಿ– ‘ಜಾತಿವಾದ್ ಸೆ ಆಜಾದಿ; ಭ್ರಷ್ಟಾಚಾರ್ ಸೆ ಆಜಾದಿ; ಭೂಕ್‌ಮಾರಿ ಸೆ ಆಜಾದಿ; ಪೂಂಜಿವಾದ್ ಸೆ ಆಜಾದಿ; ಮನುವಾದ್ ಸೆ ಆಜಾದಿ; ಸಂಘವಾದ್ ಸೆ ಆಜಾದಿ; ಕೋಮುವಾದ್ ಸೆ ಆಜಾದಿ..! ಜಾತಿವಾದದಿಂದ, ಹಸಿವೆಯಿಂದ, ಭ್ರಷ್ಟಾಚಾರದಿಂದ, ಬಂಡವಾಳಶಾಹಿಯಿಂದ, ಮನುವಾದದಿಂದ, ಸಂಘಪರಿವಾರದ ವಾದದಿಂದ, ಕೋಮುವಾದದಿಂದ ಈ ಯುವಜನರು ಸ್ವಾತಂತ್ರ್ಯ (ಆಜಾದಿ) ಕೇಳುತ್ತಿದ್ದಾರೆ. ‘ಹಮ್ ಲೇಕೆ ರಹೇಂಗೇ ಆಜಾದಿ’ ಎಂದು ದೃಢಮನಸ್ಸಿನಿಂದ ಕೂಗುತ್ತಿದ್ದಾರೆ.
ನಮ್ಮನ್ನು ಆಳುವವರಲ್ಲಿ ತೀರಾ ವಯಸ್ಸಾದವರೇ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಇದು ಕೇಂದ್ರ ಮತ್ತು ಎಲ್ಲ ರಾಜ್ಯ ಸರ್ಕಾರಗಳಲ್ಲೂ ಎದ್ದು ಕಾಣಿಸುತ್ತಿದೆ. ಹೊಸ ಪೀಳಿಗೆಯ ಭಾಷೆ ನಮ್ಮನ್ನು ಆಳುವ ಈ ಜನರಿಗೆ ಅರ್ಥವಾಗುತ್ತಿಲ್ಲ. ಮೋದಿ ಸಚಿವ ಸಂಪುಟವನ್ನೇ ಗಮನಿಸಿ: 25 ಮಂದಿ ಸಚಿವರು 61–70 ವರ್ಷ ವಯಸ್ಸಿನವರು. 7 ಮಂದಿ ಸಚಿವರು 71– 80 ವರ್ಷ ವಯಸ್ಸಿನವರು. 40 ವರ್ಷಕ್ಕಿಂತ ಕೆಳಗಿನ ವಯಸ್ಸಿನ ಸಚಿವರ ಸಂಖ್ಯೆ ಕೇವಲ ಎರಡು!
ಈಗ ಇರುವುದು ಗ್ಲೋಬಲ್ ಜನರೇಷನ್. ಜಗತ್ತಿನ ಯಾವ ಮೂಲೆಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಅಂಗೈಯ ಜಂಗಮವಾಣಿಯ ಮೂಲಕ ಕ್ಷಣಮಾತ್ರದಲ್ಲಿ ಈ ಪೀಳಿಗೆಗೆ ತಿಳಿಯುತ್ತದೆ. ಜಗತ್ತಿನಾದ್ಯಂತ ಎಳೆಯರು ಅಧಿಕಾರದ ಗದ್ದುಗೆ ಏರುವುದನ್ನೂ ಅವರು ಗಮನಿಸುತ್ತಿದ್ದಾರೆ. ಜಗತ್ತಿನಾದ್ಯಂತ ಯುವಜನರು ಅಧಿಕಾರಕ್ಕೆ ಬಂದ ದೇಶಗಳಲ್ಲಿ ಆಡಳಿತಕ್ಕೆ ಹೊಸ ಚೇತೋಹಾರಿ ಸ್ಪರ್ಶ ಸಿಕ್ಕಿರುವುದೂ ಅವರಿಗೆ ಗೊತ್ತಿದೆ. ಭ್ರಷ್ಟಾಚಾರ ಕಡಿಮೆಯಾಗಿ ದಕ್ಷ, ಜನಸ್ನೇಹಿ ಆಡಳಿತ ದೊರಕಿರುವುದೂ ಕಾಣಿಸಿದೆ. 1990ರ ಏಪ್ರಿಲ್‌ನಲ್ಲಿ ಹುಟ್ಟಿದ ಬಾಲೇಂದ್ರ ಶಾಹ ತನ್ನ 36ನೇ ವಯಸ್ಸಿನಲ್ಲಿ ನೇಪಾಳದ ಪ್ರಧಾನಿಯಾಗಿದ್ದಾರೆ. ಕ್ರಿಸ್ಟ್ರನ್ ಫ್ರಾಸ್ಟಡೋಟಿರ್ ಎನ್ನುವ ಇನ್ನೂ 38 ದಾಟದ ಹೆಣ್ಣುಮಗಳು ಐಸ್‌ಲ್ಯಾಂಡ್‌ನ ಪ್ರಧಾನಿ ಆಗಿದ್ದಾರೆ. ಯುವ ಪ್ರಧಾನಿಗಳ ಪಟ್ಟಿ ತೆಗೆದು ನೋಡಿದರೆ ಫಿನ್ಲೆಂಡಿನ ಸನಾ ಮಾರಿನ್ (34 ವರ್ಷ), ಉಕ್ರೇನಿನ ಒಲೆಕ್ಸೀ ಹೊಂಚರುಕ್ (35), ಆಸ್ಟ್ರಿಯಾದ ಸೆಬಾಸ್ಟಿಯನ್ ಕುರ್ಜ್ (31), ಪೋಲೆಂಡಿನ ವಾಲ್ಡೆಮರ್ ಪೌಲಾಕ್ (32) ಹೀಗೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಅರ್ಮೇನಿಯಾ, ಬ್ರೆಝಿಲ್, ಮಾರಿಷಸ್, ಬೊಲಿವಿಯಾ, ಈಕ್ವೆಡಾರ್ ಮುಂತಾದ ದೇಶಗಳಲ್ಲಿ ಸಂಸತ್ತಿನ ಸ್ಪೀಕರ್ ಪಟ್ಟ ಏರಿದವರ ವಯಸ್ಸು 35ರ ಆಸುಪಾಸಿನಲ್ಲಿದೆ. ಫ್ರಾನ್ಸಿನ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರಾನ್, ರಷ್ಯಾದ ದೈತ್ಯ ಮಿಲಿಟರಿ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿರುವ ಉಕ್ರೇನಿನ ಅಧ್ಯಕ್ಷ ಝೆಲೆನ್‌ಸ್ಕಿ, ನಮ್ಮ ಪ್ರಧಾನಿ ಮೋದಿಯವರ ಅಚ್ಚುಮೆಚ್ಚಿನ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೊನಿ, ವಿಶ್ವಕಪ್ ಫುಟ್ಬಾಲ್ ಗೆದ್ದ ಸ್ಪೇನಿನ ಪ್ರಧಾನಿ ಪೆಡ್ರೊ ಸ್ಯಾಂಚೆಜ್, ಅರ್ಜೆಂಟೈನಾದ ಅಧ್ಯಕ್ಷ ಜೇವಿಯರ್ ಮಿಲೀ ಎಲ್ಲರೂ 50–55ರ ಅಂಚಿನಲ್ಲಿ ಅಧಿಕಾರಕ್ಕೆ ಏರಿದವರು. ಅಮೆರಿಕಾದ ಅಬ್ರಹಾಂ ಲಿಂಕನ್ ಅಧ್ಯಕ್ಷರಾದದ್ದು 52ರ ವಯಸ್ಸಿನಲ್ಲಿ. ಯುನೈಟೆಡ್ ಕಿಂಗ್ಡಮ್‌ನಲ್ಲಿ ಮಾರ್ಗರೆಟ್ ಥ್ಯಾಚರ್ ಪ್ರಧಾನಿ ಆದಾಗ 53ರ ವಯಸ್ಸು. ಜಪಾನಿನ ಶಿನೊ ಅಬೆ ಮೊದಲು ಪ್ರಧಾನಿ ಆದದ್ದು 52ರ ವಯಸ್ಸಿನಲ್ಲಿ.
ಯುವಜನರು ಸ್ವಂತಕ್ಕಾಗಿ ಸ್ವಾತಂತ್ರ್ಯ ಕೇಳುತ್ತಿಲ್ಲ. ಹಸಿವೆಯಿಲ್ಲದ, ನಿರುದ್ಯೋಗವಿಲ್ಲದ, ಕೋಮುವಾದವಿಲ್ಲದ, ಪುರೋಹಿತಶಾಹಿ ಮತ್ತು ಬಂಡವಾಳಶಾಹಿಯ ಹಿಡಿತವಿಲ್ಲದ ಸಮಸಮಾಜಕ್ಕಾಗಿ ಸ್ವಾತಂತ್ರ್ಯ ಕೇಳುತ್ತಿದ್ದಾರೆ. ಲಾಠಿಯೇಟು ತಿಂದು ಕೇಸು ಹಾಕಿಸಿಕೊಳ್ಳುತ್ತಿದ್ದಾರೆ. ರಸ್ತೆಯಲ್ಲಿ ನಿಂತು ರಾಷ್ಟ್ರಗೀತೆ ಹಾಡುತ್ತಿದ್ದಾರೆ. ಅವರ ವ್ಯಂಗ್ಯ, ಅವರ ಹತಾಶೆ, ಅವರ ಉಡಾಫೆ, ಅವರ ಹಠಮಾರಿತನ ಎಲ್ಲಕ್ಕೂ ಸಕಾರಣಗಳಿವೆ. ಇದು ಸ್ವಾತಂತ್ರ್ಯವೋ, ಸ್ವೇಚ್ಛಾಚಾರವೋ ನೀವೇ ನಿರ್ಧರಿಸಿ. ಬಿಳಿ ಗೋಡೆಯ ಮೇಲಿನ ಕಪ್ಪು ಬರಹ ಓದಲಾಗದಿದ್ದರೆ ಅದು ಬರೆದವರ ತಪ್ಪಲ್ಲ; ಓದುವವರ ತಪ್ಪು.












