✍️ ಅರಫಾ ಮಂಚಿ
1947 ಆಗಸ್ಟ್ 15 ಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದು ಜಾತ್ಯತೀತ ಭಾರತದ ಉದಯವಾಯಿತು. ಆದರೆ, ಇದಾಗಿ 67 ವರ್ಷಗಳ ನಂತರ; 2014 ಕ್ಕೆ ಈ ದೇಶ ಇನ್ನೊಂದು ವಿಷಮ ತಿರುವಿಗೆ ಹೊರಳಿಕೊಂಡ ವರ್ಷವಾಗಿ ಗುರುತಿಸಲ್ಪಡುತ್ತದೆ. 2014 ಎಂಬುವುದು ಜಾತ್ಯತೀತ ಧರ್ಮ ನಿರಪೇಕ್ಷ ಸಿದ್ಧಾಂತ ಅಥವಾ ಸಂವಿಧಾನದ ಅಪಮೌಲ್ಯೀಕರಣಕ್ಕೆ ಮುನ್ನುಡಿ ಬರೆದ ವರ್ಷ. ನರೇಂದ್ರ ಮೋದಿ ಬಿಜೆಪಿಯಿಂದ ಪ್ರಧಾನಿಯಾಗಿ ಕೇಂದ್ರದಲ್ಲಿ ಅಧಿಕಾರದಲ್ಲಿ ಕುಳಿತರು. ಬಹುಸಂಖ್ಯಾತ ಪ್ರಭುತ್ವವಾದದ ಮೇರುಗೈಯೊಂದಿಗೆ, 2015ರ ದಾದ್ರಿ ಲಿಂಚಿಂಗ್ನೊಂದಿಗೆ ಚಾಲನೆ ಪಡೆದುಕೊಂಡಿತು ಮತ್ತು ಕೋಮುವಾದ ವೇಗೋತ್ಕರ್ಷಗೊಂಡಿತು. ಪರಾಕಾಷ್ಠೆಗೂ ತಲುಪಿತು. ದೇಶದ ಜಾತ್ಯತೀತೆಯ ಬೇರು ಕೀಳಲ್ಪಟ್ಟ ವರ್ಷ ಇದು.
2014 ರ ಮುಂಚಿನ ಭಾರತ:
1947ರ ನಂತರದ 67 ವರ್ಷಗಳವರೆಗೆ ಭಾರತದಲ್ಲಿ ಜಾತ್ಯತೀತತೆಯ ಪ್ರತಿಪಾದನೆ ಒಂದು ಹಂತದ ವರೆಗೆ ಪ್ರಬಲವಾಗಿತ್ತು. ಸಾಹಿತಿಗಳು ಕೂಡ ಧರ್ಮ ಸಾಮರಸ್ಯದ ಕುರಿತು ಹೆಚ್ಚು ಬರೆಯುತ್ತಿದ್ದರು. ಧರ್ಮನಿರಪೇಕ್ಷ ಸಮಾಜ ಕಟ್ಟುವಲ್ಲಿ ಹೆಚ್ಚು ಸಹಕರಿಸುತ್ತಿತ್ತು. ನಮ್ಮ ಸಂವಿಧಾನ, ಕಾನೂನು, ಕೋರ್ಟುಗಳು ಗೌರವ ಉಳಿಸಿಕೊಂಡಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ 2014 ರಿಂದ ಈಚೆಗೆ ಎಲ್ಲವೂ ತಲೆಕೆಳಗಾಗಿದೆ. ಆರೆಸ್ಸೆಸ್ ಪ್ರೊಪಗೆಂಡ ಮತ್ತು ಬಿಜೆಪಿ ಆಳ್ವಿಕೆ ಈ ದೇಶದ ಜಾತ್ಯತೀತ ತತ್ವದ ಅಂತ್ಯಕ್ಕೆ ಪ್ರಬಲ ವೇದಿಕೆ ಸಿದ್ಧಪಡಿಸಿದ್ದು 2014 ರ ನಂತರ. ಬಿಜೆಪಿ ಆಳ್ವಿಕೆಯು ಸಂಘಿಗಳಿಗೆ ಸಮಾಜವನ್ನು ವಿಭಜಿಸಲು ಬೇಕಾದ ಹುಲುಸಾದ ಮೈದಾನವನ್ನು ಒದಗಿಸಿತು. ಅಪ್ಪಟ ಕೋಮುವಾದ ಬಲವರ್ಧನೆ, ಸಮಾಜದಲ್ಲಿ ಹಿಂದು-ಮುಸ್ಲಿಂ ಒಡಕು, ಹಿಂದುತ್ವವಾದಿಗಳಿಂದ ವ್ಯಾಪಕವಾಗಿ ಮುಸ್ಲಿಮರ ಬಹಿರಂಗ ಟಾರ್ಗೆಟ್, ದೇಶದ ಬಹುದೊಡ್ಡ ಅಲ್ಪಸಂಖ್ಯಾತರಾದ ಮುಸ್ಲಿಮರ ಮೇಲೆ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಬ್ಬಾಳಿಕೆ, ಮುಸ್ಲಿಮರ ಅಸ್ತಿತ್ವ ಮತ್ತು ಆರ್ಥಿಕತೆಯ ವಿರುದ್ಧ ಅಸಹನೆ ಇತ್ಯಾದಿಗಳ ಕಾಲವಾಗಿ 2014ರ ನಂತರದ ಅವಧಿಯನ್ನು ಗುರುತಿಸಲಾಗುತ್ತದೆ. ಮುಸ್ಲಿಮರು, ದಲಿತರು ಮತ್ತು ಕ್ರೈಸ್ತರನ್ನು ಬೇಟೆಯಾಡುವುದು ತೀವ್ರ ಹಿಂದುತ್ವವಾದಿಗಳ ಫ್ಯಾಶನ್ ಎನಿಸಿಕೊಂಡದ್ದು ಮೋದಿ ಕಾಲದ ನಂತರವಾಗಿದೆ.
2014 ನಂತರ ದೇಶದ ಪ್ರಜೆಗಳಲ್ಲಿ ಬಹಳ ಮಂದಿಗೆ ನಾವು ಪರತಂತ್ರರಾದವೆಂದು ಅನಿಸತೊಡಗಿದೆ. ಇವತ್ತು ಜನ ಮುಕ್ತವಾಗಿ ಮಾತಾಡುವಂತಿಲ್ಲ. ಬಹುತೇಕ ಬರಹಗಾರರು, ಬುದ್ಧಿಜೀವಿಗಳು ಸ್ವತಂತ್ರವಾಗಿ ಉಸಿರಾಡುತ್ತಿಲ್ಲ. ದೇಶದ ನಾಲ್ಕನೆ ಸ್ತಂಭವಾದ ಮಾಧ್ಯಮವು ಸರಕಾರದ ಭಟ್ಟಂಗಿಯಲ್ಲಿ ತೊಡಗಿಸಿಕೊಂಡಿದೆ. ಸಂಘಪರಿವಾರವು ಇಂದು ಪ್ರಜೆಗಳ ಉಡುವ, ಉಣ್ಣುವ, ಬದುಕುವ, ಕಲಿಯುವ, ಉದ್ಯೋಗ ಗಳಿಸುವ ಹೀಗೆ ಎಲ್ಲ ಮೂಲಭೂತ ಹಕ್ಕುಗಳನ್ನು ಭಾಗಶಃ ನಿರ್ಬಂಧಿಸುತ್ತಿದೆ. ಶಿಕ್ಷಣ ರಂಗದಲ್ಲಿ ಕೇಸರಿ ದಾಳಿ ಪದೇ ಪದೇ ನಡೆಯುತ್ತಿದೆ. ಕ್ರೈಸ್ತರು ಮತ್ತು ಮುಸ್ಲಿಮರ ಶಿಕ್ಷಣ ಕೇಂದ್ರಗಳ ವಿರುದ್ಧ ಕೆಟ್ಟ ಪ್ರಚಾರವನ್ನು ವ್ಯಾಪಕವಾಗಿ ಮತ್ತು ಯಶಸ್ವಿಯಾಗಿ ಹರಡಲಾಗುತ್ತಿದೆ. ಜೌಹರ್ ಯುನಿವರ್ಸಿಟಿಯ ವಿರುದ್ಧ ಯೋಗಿ ಸರಕಾರದ ದ್ವೇಷ ಸಾಧನೆ ಈ ಮಾತಿಗೆ ಇತ್ತೀಚೆಗಿನ ಉದಾಹರಣೆಯಾಗಿದೆ. ದೇಶದ ನೈಜ ಇತಿಹಾಸವನ್ನು ಮರೆಮಾಚಿ, ಶಿಕ್ಷಣ ನೀತಿಯನ್ನು ಕೇಸರೀಕರಿಸಿ, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಗೆಡವಲಾಗುತ್ತಿದೆ.
1947ರ ಸ್ವತಂತ್ರ ಭಾರತದಲ್ಲಿ ಜಾತ್ಯತೀತ ಯಶಸ್ಸು:
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿರುವುದು ದೇಶದ ಎಲ್ಲ ಪ್ರಜೆಗಳು ಸಾಮರಸ್ಯದಲ್ಲಿ ಒಗ್ಗೂಡಿದ್ದರಿಂದಾಗಿತ್ತು. ಬ್ರಿಟಿಷರನ್ನು ಈ ದೇಶದಿಂದ ಅಟ್ಟಬೇಕೆಂಬುದು ಅಂದು ಅವರೆಲ್ಲರ ಗುರಿಯಾಗಿತ್ತು. ಧರ್ಮ ಅವರ ಗುರಿಗೆ ಅಡ್ಡಿಯಾಗಲಿಲ್ಲ. ಮುಹಮ್ಮದಲಿ ಜೌಹರ್, ಶೌಕತಲಿ ಜೌಹರ್, ಜಮೀಯ್ಯತ್ತುಲ್ ಉಲೇಮಾದ ಮೌಲಾನಗಳು ಹಿಂದೂ ಮುಸ್ಲಿಂ ಧರ್ಮಭೇದ ಸೃಷ್ಟಿಯಾಗದಂತೆ ಮುಸ್ಲಿಮರ ಕಡೆಯಿಂದ ನೋಡಿಕೊಂಡರು. ಈ ಹೋರಾಟದ ಮುಂಚೂಣಿಯಲ್ಲಿ ಸರ್ವ ಅಂಗೀಕೃತ ನಾಯಕರಾಗಿ ಶೋಭಿಸುತ್ತಿದ್ದ ಮಹಾತ್ಮ ಗಾಂಧಿ ಹಿಂದೂಗಳಲ್ಲಿ ಕೂಡ ಹಿಂದೂ ಮುಸ್ಲಿಂ ಎಂಬ ಇಬ್ಭಾಗ ಆಗದಂತೆ ನೋಡಿದರು. ಮೋದಿತ್ವ ಆಧಿಪತ್ಯಕ್ಕೆ ಬರುವವರೆಗೂ ಭಾರತವು ಧರ್ಮ ಸೌಹಾರ್ದ ಮತ್ತು ಬಹುತ್ವದಲ್ಲಿ ಏಕತೆಯ ನೆಲೆವೀಡಾಗಿ ಜಗತ್ತಿಗೆ ಆದರ್ಶ ಪ್ರಜಾಪ್ರಭುತ್ವದ ಮಾದರಿಯಾಗಿತ್ತು. ಮೊಗಲ್ ಅರಸರ ಕಾಲದಲ್ಲಿಯೂ ಧರ್ಮ ರಾಜಕೀಯ ಮುಖ್ಯ ಧಾರೆಯಲ್ಲಿರಲಿಲ್ಲ. ಬ್ರಿಟಿಷರ ವಿರುದ್ಧ ಹಿಂದು ಮುಸ್ಲಿಮರು ಒಗ್ಗಟ್ಟಾಗಿ ನೆರೆದರು. ಮೈಸೂರಿನ ಟೀಪು ಸುಲ್ತಾನ ಕೂಡ ಬ್ರಿಟಿಷರ ವಿರುದ್ಧ ಹೋರಾಡಿದ್ದು ಹಿಂದೂ ಮುಸ್ಲಿಮರನ್ನು ತನ್ನಜೊತೆಗಿಟ್ಟೇ ಆಗಿತ್ತು. ಬಂಗಾಳದ ನವಾಬ ಸಿರಾಜುದ್ದೌಲನ ಸೇನೆಯಲ್ಲಿ ರಜಪೂತರು ಮತ್ತು ಜಾಟ್ರೂ ಇದ್ದರು. ಹಾಗಂತ ದೇಶಕ್ಕೆ ಹಿಂದೂ ಮುಸ್ಲಿಮ್ ಸಂಘರ್ಷದ ಎಂಬ ಇತಿಹಾಸವೇ ಇಲ್ಲ ಎಂದಲ್ಲ. ಸೌಹಾರ್ಧತೆಯು 2014ರವರೆಗೂ ಹೆಚ್ಚು ಕಡಿಮೆ ಅಬಾಧಿತವಾಗಿತ್ತು. 2014ರ ನಂತರದ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳು ಮಣ್ಣುಪಾಲು ಆಗಿರುವುದನ್ನೇ ಕಾಣುತ್ತೇವೆ. ಕಾರಣ ಹಿಂದುತ್ವವಾದಿಗಳು ಮುಸ್ಲಿಂ ಎಂದರೆ ಸಂದೇಹಿಸಬೇಕಾದವರು ಎಂಬ ವಿಷವನ್ನು ಜನಮನದಾಳಕ್ಕೆ ಇಳಿಯುವಂತೆ ಪ್ರಚಾರಕ್ಕೆ ತಂದರು. ಆದ್ದರಿಂದ 2014 ಅನ್ನು ದೇಶ ಕಂಡ ಅತೀ ದೊಡ್ಡ ದುರಂತ ವರ್ಷ ಎಂದು ಪರಿಗಣಿಸಬೇಕಾಗುತ್ತದೆ.
ಮೋದಿ ಮೌನ ಮತ್ತು ಹಿಂದುತ್ವವಾದಿಗಳ ಅರಾಜಕತೆ:
ಸುಮಾರು ಹನ್ನೊಂದು ವರ್ಷಗಳ ಹಿಂದೆ ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋರಕ್ಷಕ ಗೂಂಡಾಗಳು ಮುಹಮ್ಮದ್ ಅಕ್ಲಾಕ್ ಎಂಬ ವಯೋವೃದ್ಧನನ್ನು ಬೀಫ್ನ ಹೆಸರಿನಲ್ಲಿ ಲಿಂಚಿಂಗ್ ಮಾಡಿದರು. ಅದುವೇ ದೇಶದ ಸೌಹಾರ್ದಕ್ಕೆ ಕೊಳ್ಳಿಯಿಟ್ಟ ಅಧಿಕಾರ ಪ್ರಾಯೋಜಿತ ದುರಂತ. ದೇಶದಲ್ಲಿ ಅದಕ್ಕಿಂತ ಮೊದಲು ಹಿಂದೂ ಮುಸ್ಲಿಂ ಗಲಭೆಗಳು ನಡೆದಿಲ್ಲವೆಂದಲ್ಲ. ನಡೆದಿದೆ. ಅದು ಹೆಚ್ಚಾಗಿ ಅಧಿಕಾರದಲ್ಲಿ ಕುಳಿತ ಮೌನಿಗಳ ಬೆಂಬಲದೊಂದಿಗೆ ಆಗಿರಲಿಲ್ಲ.
2015 ಸೆಪ್ಟಂಬರ್ 28 ದಾದ್ರಿಗೆ ಸಮೀಪದ ಬಿಸಾಡ ಗ್ರಾಮದಲ್ಲಿ ಮುಹಮ್ಮದ್ ಅಕ್ಲಾಕ್ ಸೈಫ್ ಮನೆಗೆ ಹಿಂದುತ್ವವಾದಿ ಗೂಂಡಗಳು ನುಗ್ಗಿ ಥಳಿಸುತ್ತಾರೆ. ಬೀಫ್ ಫ್ರಿಡ್ಜ್ನಲ್ಲಿಟ್ಟುಕೊಂಡಿದುದು ಆರೋಪ. ಘಟನೆಯಲ್ಲಿ ಅಖ್ಲಾಕ್ರು ಸತ್ತರೆ ಅವರ ಪುತ್ರ 22 ವರ್ಷದ ದಾನಿಷ್ ಗಂಭೀರವಾಗಿ ಗಾಯಗೊಂಡರು. ಮುಸ್ಲಿಮರು ಅವರ ಮನೆಯ ಒಳಗೂ ಸುರಕ್ಷಿತರಲ್ಲ. ಇಂತಹ ಸ್ಥಿತಿಗೆ ನಾಂದಿಯಾದ ಘಟನೆ ಇದು. ಮೋದಿ ಆಡಳಿತದ ಬಹುರ್ಚಿತ ಮೊಟ್ಟ ಮೊದಲ ಘಟನೆಯೆಂದು ಇದನ್ನು ದಾಖಲಿಸಬಹುದು. ಯಾಕೆಂದರೆ ಅಕ್ಲಾಕ್ರ ಭಯಾನಕ ಹತ್ಯೆ ನಡೆದರೂ ಮೋದಿ ಮಾತಾಡಲಿಲ್ಲ. ಸಂಪೂರ್ಣ ಮೌನವಹಿಸಿದರು. ಮುಸ್ಲಿಮರ ವಿರುದ್ಧ, ಕ್ರೈಸ್ತರ ವಿರುದ್ಧ ತಮ್ಮ ಪರಿವಾರದ ದಾಳಿ ನಡೆದಾಗ ಅವರು ಮೌನವಹಿಸುವುದು ನಂತರ ಮುಂದುವರಿಯಿತು. ಇಲ್ಲಿಂದ ಸಂಘೀ ಗೂಂಡಾಗಳು ಬಹಳ ಹೆಚ್ಚು ರಟ್ಟೆ ಅರಳಿಸಿದರು. ದೇಶದ ಜಾತ್ಯತೀತೆ ಲಿಂಚಿಂಗ್ಗೊಳಗಾಯಿತು. ಇನ್ನೂ ನಿಂತಿಲ್ಲ ಮುಂದುವರಿಯುತ್ತಿದೆ. ಯುಪಿಯಲ್ಲಿ ಜುನೈದ್ ಹತ್ಯೆ ನಡೆಯಿತು. ರಾಜಸ್ತಾನದಲ್ಲಿ ಪೆಹ್ಲೂ ಖಾನ್ ಹತ್ಯೆ ನಡೆಯಿತು. ಬರಬರುತ್ತಾ ಲಿಂಚಿಂಗ್ ಘಟನೆಗಳು ನಮ್ಮ ಕರ್ನಾಟಕದ ಮಂಗಳೂರಿನವರೆಗೂ ತಲುಪಿತು. ಅಶ್ರಫ್ ಎಂಬ ಕೇರಳದ ವ್ಯಕ್ತಿಯನ್ನು ಹತ್ಯೆ ಮಾಡಲಾಯಿತು. ಈ ಎಲ್ಲ ಘಟನೆಗಳು ಸಂಘಿಗಳು ಸಮಾಜವನ್ನು ಹಿಂದೂ ಮುಸ್ಲಿಂ ಆಗಿ ವಿಭಜಿಸಿದ್ದರಿಂದ ಸಂಭವಿಸಿತು.
ಗುಜರಾತ್ನ ಫ್ಯಾಶಿಸ್ಟ್ ಮಾದರಿ:
2002 ಗುಜರಾತಿನಲ್ಲಿ ಕೋಮುವಾದ ರಣೋತ್ಸವವೇ ನಡೆಯಿತು. ಇಂದಿನ ಪ್ರಧಾನಿ ಅಂದು ಅಲ್ಲಿನ ಮುಖ್ಯಮಂತ್ರಿಯಾಗಿದ್ದರು. ಅಧಿಕೃತವಾಗಿ ಸಾವಿರ ಮಂದಿಯ ಹತ್ಯೆ ನಡೆದಿದೆ. ಆದರೆ ಅನಧಿಕೃತ ಲೆಕ್ಕದ ಪ್ರಕಾರ 2000ಕ್ಕೂ ಹೆಚ್ಚು ಜನರ ಹತ್ಯೆ ಆಗಿದೆ.
2002 ಫೆಬ್ರುವರಿ 27ರಂದು ಕರಸೇವಕರು ಬರುತ್ತಿದ್ದ ಸಬರಮತಿ ಎಕ್ಸ್ಪ್ರೆಸ್ ರೈಲಿಗೆ ಗೋದ್ರ ನಿಲ್ದಾಣದ ಹೊರಗೆ ಬೆಂಕಿ ಬಿದ್ದು 59 ಮಂದಿ ಸತ್ತದ್ದು ಈ ಹತ್ಯಾಕಾಂಡಕ್ಕೆ ಹಿಂದುತ್ವವಾದಿಗಳಿಗೆ ಕಾರಣವಾಗಿತ್ತು. ಗುಜರಾತಿನಾದ್ಯಂತ ಮುಸ್ಲಿಂ ಬೇಟೆ ಪ್ರಾರಂಭವಾಯಿತು. ಹಿಂದುತ್ವವಾದಿಗಳು ಉಗ್ರ ತಾಂಡವವನ್ನು ನಿಲ್ಲಿಸಲು ಮುಖ್ಯಮಂತ್ರಿ ಮೋದಿ ಪ್ರಯತ್ನಿಸಲಿಲ್ಲ ಎಂಬ ಬಲವಾದ ಆರೋಪ ಈಗಲೂ ಇದೆ. ಇತ್ತೀಚೆಗಿನ ವರ್ಷಗಳಲ್ಲಿ ಬಿಬಿಸಿ ತಂದ ಡಾಕ್ಯುಮೆಂಟರಿಯೂ ಮೋದಿ ವಿರುದ್ಧ ಪ್ರಬಲ ಆರೋಪ ಎತ್ತಿದೆ. ಆದರೆ ಸುಪ್ರೀಂ ಕೋರ್ಟು ಆರೋಪದಿಂದ ಕ್ಲೀನ್ ಚಿಟ್ ಕೊಟ್ಟಿದೆ. ಗುಜರಾತ್ ಸರಕಾರ ನೇಮಿಸಿದ ನಾನಾವತಿ- ಮೆಹ್ತಾ ಆಯೋಗವು ರೈಲಿಗೆ ಮುಸ್ಲಿಮರೇ ಬೆಂಕಿ ಕೊಟ್ಟದ್ದೆಂದು ವರದಿ ಸಲ್ಲಿಸಿತು. ಗುಜರಾತಿನಲ್ಲಿ ಮುಸ್ಲಿಂ ವಿರೋಧ ಮತ್ತು ಜಾತ್ಯತೀತೆಯ ಮರ್ಮಕ್ಕೆ ಇಕ್ಕಿದ ಹೊಡೆತವಾಗಿ ಪರಿಗಣಿಸಿಬಿಟ್ಟಿತು. ಅಂದಿನಿಂದಲೇ ಮುಸ್ಲಿಮರನ್ನು ಸಂದೇಹಿಸುವ ದೃಷ್ಟಿ ಹೆಚ್ಚು ಪ್ರಾಬಲ್ಯಕ್ಕೆ ಬಂದಿದೆ ಎಂದೂ ಹೇಳಬಹುದು.
ಗುಜರಾತಿನ ದಂಗೆಯಲ್ಲಿ ಹಿಂದುತ್ವವಾದಿ ಅಥವಾ ಬಜರಂಗದಳದಂತಹ ತೀವ್ರಗಾಮಿ ಗುಂಪುಗಳಿಂದ ಮುಸ್ಲಿಮ್ ಮಹಿಳೆಯರ ಅತ್ಯಾಚಾರ, ಮಕ್ಕಳನ್ನು ಗೋಡೆಗೆ ಬಡಿದು ಕೊಲ್ಲುವುದು ಮತ್ತು ಗರ್ಭಿಣಿ ಬಿಲ್ಕಿಸ್ ಬಾನು ಅತ್ಯಾಚಾರದಂತಹ ಕ್ರೂರ ಘಟನೆಗಳು ನಡೆದಿವೆ. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಆರೋಪಿಗಳಾದ 11 ಮಂದಿಯನ್ನು ನಂತರದ ಗುಜರಾತ್ ಬಿಜೆಪಿ ಸರಕಾರ ಒಳ್ಳೆಯ ನಡತೆಯವರು ಎಂದು ಬಿಡುಗಡೆಗೊಳಿಸಿದ್ದೂ ನಡೆಯಿತು. ಸುಪ್ರೀಂ ಕೋರ್ಟು ಮಧ್ಯಪ್ರವೇಶದಿಂದ ಈ ಅಪರಾಧಿಗಳು ಮತ್ತೆ ಜೈಲಿಗೆ ಸೇರಿದರು. ಇಡೀ ಭಾರತದಲ್ಲಿ ಮುಸ್ಲಿಂ ವಿದ್ವೇಷ ಪರಾಕಾಷ್ಠೆಗೆ ಬರತೊಡಗಿದ್ದು ಈ ಹತ್ಯಾ ಕಾಂಡದ ನಂತರ ಎನ್ನಬಹುದು.
ಗೋದ್ರಕಾಂಡದ ಸುಳ್ಳು ಆರೋಪದಲ್ಲಿ ಗೋದ್ರದ ಪ್ರಮುಖ ಉಲೇಮಾಗಳನ್ನು ಕೂಡ ಸಂಚು ಹೆಣೆದವರೆಂದು ಬಂಧಿಸಿ ಜೈಲಿಗೆ ಹಾಕಲಾಯಿತು. ನಂತರ ಕೋರ್ಟಿನಿಂದ ಅವರು ನಿರಪರಾದಿಗಳೆಂದು ಖುಲಾಸೆಗೊಂಡರು. ಏನಿದ್ದರೂ ನಾನಾವತಿ ಮೆಹ್ತಾ ವರದಿ ಮೋದಿ ಮೌನಕ್ಕೆ ಪ್ರೋತ್ಸಾಹದಂತಾಗಿತ್ತು. ಅಂದಿನ ಭಾರತ ಸರಕಾರದ ರೈಲ್ವೇ ಸಚಿವರು, ನ್ಯಾಯಮೂರ್ತಿ ಬ್ಯಾನರ್ಜಿ ಆಯೋಗದ ಮೂಲಕ ನಡೆದ ತನಿಖೆಯಲ್ಲಿ ಬೆಂಕಿ ಆಕಸ್ಮಿಕವಾಗಿತ್ತು ಎಂದು ಕಂಡು ಬಂತು.
2014ರ ನಂತರ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಮೋದಿ ಪ್ರಧಾನಿಯಾದ ನಂತರ ಮುಸ್ಲಿಮರ ವಿರುದ್ಧ ಏನೂ ನಡೆಸಬಹುದೆಂಬ ಲೈಸನ್ಸ್ ಹಿಂದುತ್ವವಾದಿಗಳಿಗೆ ದೊರಕಿತು. ಸ್ವತಃ ಮೋದಿಯೇ ಮುಸ್ಲಿಮರನ್ನು ದಂಗಾಯಿಗಳು, ಭೌನ್ಸ್ ಚೋರ್, ಕರಿಮಣಿ ಕಳ್ಳರೆಂದು ಚುನಾವಣಾ ಭಾಷಣಗಳಲ್ಲಿ ಬಿಂಬಿಸತೊಡಗಿದ್ದು ಇನ್ನಷ್ಟು ಇಂಧನವನ್ನು ಅಕ್ರಮಿಗಳಿಗೆ ಒದಗಿಸಿದೆ. ಹೀಗೆ ಈ ಸಂಘಿಗಳು ಭಾರತದ ಸ್ವಾತಂತ್ರ್ಯ ಕಟ್ಟಿಕೊಟ್ಟ ಸೌಹಾರ್ದ ಭಾರತವನ್ನೇ ಕೋಮು ಕಳಂಕಿತ ಭಾರತವನ್ನಾಗಿ ಪರಿವರ್ತಿಸಲು ಸಂಪೂರ್ಣ ಯಶಸ್ವಿಯಾದರು. ಈ ಕ್ರೌರ್ಯವನ್ನು ಪ್ರಶ್ನಿಸಿದವರೆಲ್ಲ ಜೈಲು ಪಾಲಾದರು. ಗುಜರಾತ್ ಹತ್ಯಾಕಾಂಡದ ವೇಳೆ ಸುಟ್ಟುಕೊಲ್ಲಲಾದ ಸಂಸದ ಇಹ್ಸಾನ್ ಜಾಫ್ರಿಯವರ ಪತ್ನಿ ಝಕಿಯ ಜಾಫ್ರಿಯರ ಪರ ಕಾನೂನು ಹೋರಾಟ ನಡೆಸಿದ ಟೀಸ್ಟಾ ಸೆಟಲ್ವಾಡ್ರನ್ನು ಜೈಲಿಗೆ ಅಟ್ಟಲಾಗಿತ್ತು. ಸೌಹಾರ್ದ ಮತ್ತು ನ್ಯಾಯಕ್ಕೆ ದುಡಿದವರೆಲ್ಲ ಜೈಲಿಗೂ ಕೋಮುವಿಷ ಹಿಂಡಿದವರೆಲ್ಲ ರಾಜರೋಷವಾಗಿ ತಿರುಗಾಡುವುದು ಸಾಮಾನ್ಯವಾಯಿತು. ಹಿಂದುತ್ವವಾದಿಗಳ ಈ ಅಟ್ಟಹಾಸವು ಭಾರತದ ಸರ್ವಜನಾಂಗದ ಶಾಂತಿಯ ತೋಟದ ಫಲವತ್ತತೆಯನ್ನೇ ನಾಶ ಮಾಡಿದೆ. ಜಾತ್ಯತೀತೆಗೆ ಸಾವು ತಂದಿದೆ.
ಸೌಹಾರ್ದದ ಆ ಭಾರತ:
1947 ರಲ್ಲಿ ಧಾರ್ಮಿಕ ಒಗ್ಗಟ್ಟಿನೊಂದಿಗೆ ನಡೆಸಿದ ಹೋರಾಟವೊಂದರ ಯಶಸ್ಸು ಹೊಸ ಸಂಭ್ರಮದೊಂದಿಗೆ ಸೌಹಾರ್ದದ ಬದುಕಿಗೆ ಮುನ್ನುಡಿ ಬರೆಯಿಯಿತು. ಅದು ಸುಮಾರು 90 ವರ್ಷಗಳ ನಿರಂತರ ಸ್ವಾತಂತ್ರ್ಯ ಹೋರಾಟ. ಜಾತಿ, ಮತ, ಪಂಥಗಳ ಭಿನ್ನತೆ ಮರೆತು ಜನ ಸಂಘಟಿತರಾಗಿ ನಡೆಸಿದ ಕ್ರಾಂತಿ. ಈ ಹಾದಿಯಲ್ಲಿ ಹಲವರು ಬ್ರಿಟಿಷರಿಂದ ಹತ್ಯೆಗೊಳಗಾದರು. ಈ ಸಾಲಿನಲ್ಲಿ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಲವರು ಜೈಲು ಪಾಲಾದರು. ಇದೇ ಭಾವದಲ್ಲಿ ದೇಶ ಸ್ವತಂತ್ರಗೊಂಡಾಗ ಭಾರತವನ್ನು ಜಾತ್ಯತೀತ ಧರ್ಮ ನಿರಪೇಕ್ಷ ಎಂದು ಘೋಷಿಸಲಾಯಿತು. ಹಿಂದು, ಮುಸ್ಲಿಂ, ಸಿಖ್, ಇಸಾಯಿ, ಜೈನ, ಪಾರಸಿ ಎಲ್ಲರಿಗೂ ಸ್ವತಂತ್ರವಾಗಿ ಬದುಕುವ ಹಕ್ಕು ನೀಡಲಾಯಿತು. ಇದೇ ಮಾನದಂಡದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನವನ್ನು ರಚಿಸಿ ಕೊಟ್ಟರು. ಆದರೆ ಈಗ ಆರೆಸ್ಸೆಸ್ಸಿನ ಪ್ರಾಬಲ್ಯದಲ್ಲಿ ಇತಿಹಾಸವೇ ಉಲ್ಟಾ ಆಗಿದೆ. ಈ ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದವರ ಪರಸ್ಪರ ಸೌಹಾರ್ದ ಪ್ರೀತಿ ಈಗ ಅಪರಿಚಿತ ಮಾಡಲಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರನ್ನು ಸಂಘಿಗಳು ಅಪಮಾನಿಸುತ್ತಿದ್ದಾರೆ. ಗಾಂಧಿಯನ್ನು ಹಂಗಿಸುವುದರಲ್ಲಿ ಹಿಂದೂ ಮಹಾಸಭಾ ಮುಂದಿದ್ದರೆ, ನೆಹರೂರನ್ನು ಅಪಮಾನಿಸುವುದರಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಈಗ ಎಲ್ಲಿಗೆ ಬಂತು? ಯಾರಿಗೆ ಬಂತು? ಸ್ವಾತಂತ್ರ್ಯ.
ಭರವಸೆ ಉಳಿಸಿದ ಜೆನ್-ಝಿ:
ಇತ್ತೀಚೆಗೆ ಕೋಮುವಾದದ ನೆರಳೂ ನುಸುಳದಂತೆ ಜೆನ್-ಝಿ ವಿದ್ಯಾರ್ಥಿಗಳು ಹೋರಾಟ ಕಟ್ಟಿದರು. ಹೋರಾಡಿ ತಮ್ಮ ಬೇಡಿಕೆ ಈಡೇರಿಸಿಕೊಂಡರು. ಸಂವಿಧಾನ ಮಹತ್ವ, ಪ್ರಜಾಪ್ರಭುತ್ವದ ಆಶಯ, ಜನತಾ ಪ್ರತಿಭಟನೆ ಮತ್ತು ಹಕ್ಕಿನ ರಕ್ಷಣೆಯ ನಿಟ್ಟಿನಲ್ಲಿ ಇತ್ತೀಚೆಗೆ ಯಶಸ್ವಿಯಾದ ಹೋರಾಟವೆಂದೂ ಇದನ್ನು ನಮೂದಿಸಬಹುದು. ಪ್ರಭುತ್ವವು ಎಲ್ಲ ಪ್ರತಿಭಟನೆಗಳನ್ನು ದಮನಿಸುತ್ತಿತ್ತು, ಹೋರಾಟಗಳೊಳಗೆ ನುಗ್ಗಿ ಹಿಂದೂ ಮುಸ್ಲಿಮ್ ಕೋಮುವಾದ ಬಿತ್ತಿ ಪ್ರತಿಭಟನೆಯನ್ನೇ ಹತ್ತಿಕ್ಕುತ್ತಿತ್ತು. ಈ ಸಲ ಇದಾಗಲಿಲ್ಲ. ಹೀಗಾಗಿ ಸಿಜೆಪಿ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ಒಂದು ಮೈಲುಗಲ್ಲಾಗಿ, ಆಶಾವಾದದ ಶಕ್ತಿಯಾಗಿ ಪ್ರಜೆಗಳು ಪರಿಗಣಿಸಿದ್ದಾರೆ.
2014ರಿಂದ ಶುರುವಾದ ಕೋಮು ಕ್ರಮೀಕರಣ ದೇಶದ ಜಾತ್ಯತೀತ ವರ್ಚಸ್ಸಿಗೆ ಘಾಸಿ ಮಾಡಿದೆ. ಮೋದಿಯ ಈ ನಯಾ ಭಾರತ್ನಲ್ಲಿ ವಿಪಕ್ಷಗಳನ್ನು ಕೋಮುವಾದ ಅಥವಾ ಹಿಂದು ಮುಸ್ಲಿಂ ಅಜೆಂಡಗಳನ್ನೆತ್ತಿ ನಿಶಸ್ತ್ರೀಕರಣಗೊಳಿಸಲಾಗಿತ್ತು. ದೇಶದಲ್ಲಿ ಯಾರಾದರೂ ಜಾತ್ಯತೀತತೆ ಪ್ರಸ್ತಾಪಿಸಿದರೆ ಅದೊಂದು ಅಪರಾಧವೆಂಬಂತೆ ಭಾವಿಸುವುದು ಆರಂಭವಾಗಿತ್ತು. ಈ ನಯಾ ಭಾರತ್ನಲ್ಲಿ ಅತಂತ್ರರಾಗಿದ್ದಲ್ಲಿಂದ ನೈತಿಕ ಬಲ ಜೆನ್-ಝಿ ಹೋರಾಟ ತಂದು ಕೊಟ್ಟಿದೆ. ಕೋಮು ವಿಷದಿಂದ ಬಳಲಿದ ಭಾರತಕ್ಕೆ ಸ್ವಾತಂತ್ರ್ಯ ಹೋರಾಟದ ಆಶಯಗಳು ಚೇತರಿಸಲು ಭರವಸೆ ಸಿಕ್ಕಿದೆ. ಗುರಿ ಮುಂದಿದೆ; ಸ್ವಾತಂತ್ರ್ಯ ಹೋರಾಟದ ವೀರರ ಮನಸ್ಸು ಕಂಡ ಆ ಒಳಗೊಳ್ಳುವ ಭಾರತವನ್ನು ಕಟ್ಟಬೇಕಾಗಿದೆ. ಸ್ವತಂತ್ರ, ಧರ್ಮನಿರಪೇಕ್ಷ, ಸಮಾನತೆ, ಸೌಹಾರ್ಧ, ಶಾಂತಿ ಮತ್ತು ಬಹುತ್ವದ ಉದ್ಯಾನವನ್ನು ನಿರ್ಮಿಸಬೇಕಿದೆ.












