ಬಜಾಲ್‌ನಲ್ಲಿ BSWT ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

0
302

ಸನ್ಮಾರ್ಗ ವಾರ್ತೆ

ಮಂಗಳೂರು: ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (ರಿ), ಮಂಗಳೂರು ಇದರ ವತಿಯಿಂದ ಬಜಾಲ್‌ನ BSWT ಹೊಲಿಗೆ ತರಬೇತಿ ಕೇಂದ್ರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವು ವಿದ್ಯಾರ್ಥಿನಿಯರಿಂದ ನಾಡಗೀತೆಯ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಶಿಕ್ಷಕಿ ಮಾಲಾಕ್ಷಿ ರಾಜೀವ್ ಸ್ವಾಗತಿಸಿದರು. ಗಣ್ಯ ಅತಿಥಿಗಳಿಂದ ಧ್ವಜಾರೋಹಣ ನೆರವೇರಿಸಲಾಯಿತು. ಬಳಿಕ ವಿದ್ಯಾರ್ಥಿನಿಯರಿಂದ ರಾಷ್ಟ್ರಗೀತೆ ಹಾಗೂ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆಯ ನಿವೃತ್ತ ಅಧೀಕ್ಷಕರಾದ ಶ್ರೀ ಹರೀಶ್ ಕುಮಾರ್ ಕುತ್ತಡ್ಕ ಹಾಗೂ ಶ್ರೀ ಸ್ವಿಂಗ್ ಸೊಲ್ಯೂಷನ್ಸ್, ಮಂಗಳೂರಿನ ಪ್ರೋಪ್ರೈಟರ್ ಶ್ರೀ ಜಿತೇಂದ್ರ U.J. ಭಾಗವಹಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಹಾಗೂ ಯುವಜನರ ಜವಾಬ್ದಾರಿಗಳ ಕುರಿತು ಮಾತನಾಡಿದರು.

ಹಿರಿಯ ಸಮಾಜ ಸೇವಕ ಶ್ರೀ ಕೆ.ಪಿ. ಕರೀಮ್ ಹಾಗೂ BSWT ಜೊತೆ ಕಾರ್ಯದರ್ಶಿ ಸುಲೈಮಾನ್ ಪಕ್ಕಲಡ್ಕ ಅವರು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಗಣ್ಯ ಅತಿಥಿಗಳಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.

BSWT ಮಂಗಳೂರು ಅಧ್ಯಕ್ಷರಾದ ಶ್ರೀ ಎನ್. ಅಮೀನ್ ಅಧ್ಯಕ್ಷೀಯ ಮಾತುಗಳನ್ನಾಡಿದರು. ಬಿಲಾಲ್ ಕೆ.ಎಂ.ಪಿ. ಅವರು ಧನ್ಯವಾದ ಅರ್ಪಿಸಿದರು. ಎಂ. ಅಶೀರುದ್ದೀನ್ ಮಾಸ್ಟರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಖತೀಜಾ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಶ್ರೀ ಅಶ್ರಫ್ ಎಂ.ಸಿ, ಉಪಾಧ್ಯಕ್ಷ ಅಬ್ದುಲ್ಲಾ, ಉಪಸ್ಥಿತರಿದ್ದರು

ಕಾರ್ಯಕ್ರಮದ ಬಳಿಕ ವಿದ್ಯಾರ್ಥಿನಿಯರು, ಅತಿಥಿಗಳು ಹಾಗೂ ಉಪಸ್ಥಿತರಿದ್ದವರಿಗೆ ಸಿಹಿ ಹಾಗೂ ಉಪಹಾರ ವಿತರಿಸಲಾಯಿತು. ಕಾರ್ಯಕ್ರಮವು ದೇಶಭಕ್ತಿ, ಸಾಮಾಜಿಕ ಬದ್ಧತೆ ಹಾಗೂ ಮಹಿಳಾ ಸಬಲೀಕರಣದ ಸಂದೇಶದೊಂದಿಗೆ ಅರ್ಥಪೂರ್ಣವಾಗಿ ನೆರವೇರಿತು.