ಸನ್ಮಾರ್ಗ ವಾರ್ತೆ
ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಪರ್ಸಾ ಮಧ್ಯಮ ಶಾಲೆಯ 34 ವಿದ್ಯಾರ್ಥಿಗಳು, ಮಧ್ಯಾಹ್ನ ಬಿಸಿಯೂಟದಲ್ಲಿ ಉಪ್ಪಿನ ಬದಲಿಗೆ ಸೋಪ್ ಪೌಡರ್ ಬೆರೆಸಿದ್ದರಿಂದ ಆಹಾರ ವಿಷವಾಗಿ ಅಸ್ವಸ್ಥಗೊಂಡಿದ್ದಾರೆ. ಮಂಗಳವಾರ ಶಾಲೆಯಲ್ಲಿ ಬಡಿಸಿದ ಬಿಸಿಯೂಟವನ್ನು ಸೇವಿಸಿದ ಮಕ್ಕಳು ಗಂಟಲಲ್ಲಿ ಉರಿ ಮತ್ತು ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾರೆ. ಕೂಡಲೇ ಮಕ್ಕಳನ್ನು ಬಿಹಾರ ಷರೀಫ್ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಕ್ಕಳ ಆರೋಗ್ಯ ಸ್ಥಿತಿ ಸದ್ಯಕ್ಕೆ ತೃಪ್ತಿಕರವಾಗಿದೆ ಎಂದು ಬಿಹಾರ ಷರೀಫ್ ಸಾದರ್ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿನಿ ಪ್ರೀತಿ ಕುಮಾರಿ, ತಮಗೆ ಮಧ್ಯಾಹ್ನದ ಊಟಕ್ಕೆ ಅನ್ನ ಹಾಗೂ ಆಲೂಗಡ್ಡೆ-ಸೋಯಾಬೀನ್ ಸಾಗು ನೀಡಲಾಗಿತ್ತು ಎಂದು ತಿಳಿಸಿದ್ದಾರೆ. ಉಪ್ಪಿನ ಬದಲು ಡಿಟರ್ಜೆಂಟ್ ಬಳಸಿ ತಯಾರಿಸಿದ ಆಹಾರವನ್ನು ಸೇವಿಸಿದಾಗ ಸೋಪ್ ಪೌಡರ್ ವಾಸನೆ ಬಂದಿದೆ ಮತ್ತು ಹಲವು ಮಕ್ಕಳು ತಲೆತಿರುಗಿ ಬಿದ್ದು ವಾಂತಿ ಮಾಡಿಕೊಂಡಿದ್ದಾರೆ ಎಂದು ಪೋಷಕರು ಹೇಳಿದ್ದಾರೆ.
ಅಡುಗೆಯವರ ತಪ್ಪಿನಿಂದ ಈ ಘಟನೆ ಸಂಭವಿಸಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆದರೆ, ಆಹಾರದಲ್ಲಿ ಸೋಪ್ ಪೌಡರ್ ಬೆರೆಸಲಾಗಿದೆ ಎಂಬ ವಾದವನ್ನು ನಳಂದ ಜಿಲ್ಲಾ ಶಿಕ್ಷಣಾಧಿಕಾರಿ ಹೇಮಚಂದ್ರ ನಿರಾಕರಿಸಿದ್ದಾರೆ. ಈ ಘಟನೆಯ ಕುರಿತು ಸಮಗ್ರ ತನಿಖೆ ನಡೆಯುತ್ತಿದ್ದು, ವೈದ್ಯಕೀಯ ವರದಿ ಬಂದ ಬಳಿಕಷ್ಟೇ ನಿಜವಾದ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಘಟನೆಯ ಸುದ್ದಿ ತಿಳಿದು ಗ್ರಾಮೀಣಾಭಿವೃದ್ಧಿ ಸಚಿವರು ಹಾಗೂ ಸ್ಥಳೀಯ ಶಾಸಕರಾದ ಶ್ರವಣ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿಯನ್ನು ವಿಚಾರಿಸಿದರು. ಈ ಘಟನೆಯ ಬಗ್ಗೆ ಸರಿಯಾದ ತನಿಖೆ ನಡೆಸಲಾಗುವುದು ಮತ್ತು ಮಕ್ಕಳ ಆರೋಗ್ಯದಲ್ಲಿ ಯಾವುದೇ ನಿರ್ಲಕ್ಷ್ಯ ತೋರಲು ಬಿಡುವುದಿಲ್ಲ ಎಂದು ಸಚಿವರು ತಿಳಿಸಿದರು. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ವಿತರಣೆಯನ್ನು ಪರಿಶೀಲಿಸುವಂತೆ ಮತ್ತು ಅಡುಗೆಯವರಿಗೆ ನೈರ್ಮಲ್ಯದ ಬಗ್ಗೆ ತರಬೇತಿ ನೀಡುವಂತೆ ಸಚಿವರು ನಿರ್ದೇಶನ ನೀಡಿದ್ದಾರೆ.












