ಮಣಿಪುರ | ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕ ಖಂಡಿಸಿ ಪ್ರತಿಭಟನಾ ರ‍್ಯಾಲಿ

0
227

ಸನ್ಮಾರ್ಗ ವಾರ್ತೆ

ಇಂಫಾಲ್: ಹೊಸದಾಗಿ ರಚಿಸಲಾದ 8ನೇ ಮಣಿಪುರ ವಕ್ಫ್ ಮಂಡಳಿ ಸಮಿತಿಯಲ್ಲಿ ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವುದನ್ನು ವಿರೋಧಿಸಿ ಮಣಿಪುರದಾದ್ಯಂತ ಪ್ರತಿಭಟನೆಗಳು ತೀವ್ರಗೊಂಡಿದ್ದು, ಸೋರಾ, ಲಿಲಾಂಗ್ ಮತ್ತು ಕ್ಷೇತ್ರಿಗಾಂವ್‌ನಲ್ಲಿ ಸತತ ಮೂರು ದಿನಗಳಿಂದ ದೊಡ್ಡ ಮಟ್ಟದ ರ‍್ಯಾಲಿಗಳನ್ನು ನಡೆಸಲಾಗಿದೆ.

8ನೇ ಮಣಿಪುರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರ ಸದಸ್ಯರ ಸೇರ್ಪಡೆಯನ್ನು ವಿರೋಧಿಸುವ ಜಂಟಿ ಸಮಿತಿ ಹಾಗೂ ಮುಸ್ಲಿಂ ಸಂಘಟನೆಗಳು, ಸ್ಥಳೀಯ ಕ್ಲಬ್‌ಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಈ ಆಂದೋಲನದ ನೇತೃತ್ವ ವಹಿಸಿವೆ.

ಮೊದಲ ರ‍್ಯಾಲಿಯು ಆಗಸ್ಟ್ 20 ರಂದು ಕಾಕ್ಚಿಂಗ್ ಜಿಲ್ಲೆಯ ಸೋರಾದಲ್ಲಿ ನಡೆಯಿತು. ಇದನ್ನು ಜಂಟಿ ಸಮಿತಿ, ಅಂಜುಮನ್ ನಸ್ರುಲ್ ಇಸ್ಲಾಂ ಸೋರಾ, ಆಲ್ ಸೋರಾ ಕ್ಲಬ್ಸ್ ಕೋಆರ್ಡಿನೇಟಿಂಗ್ ಕಮಿಟಿ, ಸೋರಾ, ಫುಂದ್ರೈ ಮತ್ತು ಕೇರಾಕ್‌ನ ಜಮಿಯತ್-ಉಲ್-ಉಲಮಾ ಶಾಖೆಗಳು ಹಾಗೂ ಕೇರಾಕ್ ಮಖಾ ಸೋಷಿಯಲ್ ವೆಲ್ಫೇರ್ ಕ್ಲಬ್ ಜಂಟಿಯಾಗಿ ಆಯೋಜಿಸಿದ್ದವು. ಪ್ಲೇಕಾರ್ಡ್‌ಗಳನ್ನು ಹಿಡಿದು ನೇಮಕಾತಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದೊಡ್ಡ ಜನಸಮೂಹವು ಇದರಲ್ಲಿ ಭಾಗವಹಿಸಿತ್ತು.

ವಕ್ಫ್ ಮಂಡಳಿಯು ಮುಸ್ಲಿಂ ಸಮುದಾಯದ ಪ್ರಮುಖ ಸಂಸ್ಥೆಯಾಗಿದೆ ಎಂದು ಬಣ್ಣಿಸಿದ ಜಮಿಯತ್-ಉಲ್-ಉಲಮಾ ಸೋರಾ ಶಾಖೆಯ ಅಧ್ಯಕ್ಷ ಎಂ.ಎಲ್. ಝುಲ್ಫಿಕರ್ ಅಲಮ್ ಶೇಖ್, ಇಬ್ಬರು ಮುಸ್ಲಿಮೇತರ ಸದಸ್ಯರನ್ನು ಸೇರಿಸುವ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸರ್ಕಾರವು ಸ್ಪಂದಿಸಲು ವಿಫಲವಾದರೆ ಈ ಆಂದೋಲನವು ರಾಜ್ಯಾದ್ಯಂತ ಹರಡಲಿದೆ ಎಂದು ಅವರು ಎಚ್ಚರಿಸಿದರು.

ಮುಸ್ಲಿಮೇತರ ಸದಸ್ಯರನ್ನು ವಜಾಗೊಳಿಸುವಂತೆ ಜಂಟಿ ಸಮಿತಿಯ ಅಧ್ಯಕ್ಷ ಎಂ.ವಿ. ಅತವುರ್ರ್ ರೆಹಮಾನ್ ಕೂಡ ಒತ್ತಾಯಿಸಿದರು. ಮಸೀದಿಗಳು, ಈದ್ಗಾಗಳು, ಮದರಸಾಗಳು, ದಫನಭೂಮಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಧರ್ಮದಾಯ, ಶೈಕ್ಷಣಿಕ ಮತ್ತು ದತ್ತಿ ಉದ್ದೇಶಗಳಿಗಾಗಿ ಮುಸ್ಲಿಮರಿಂದ ದಾನ ಮಾಡಲಾದ ಆಸ್ತಿಗಳನ್ನು ವಕ್ಫ್ ಮಂಡಳಿಯು ನಿರ್ವಹಿಸುತ್ತದೆ ಮತ್ತು ವಕ್ಫ್ ವ್ಯವಸ್ಥೆಯನ್ನು ಸಾಂಪ್ರದಾಯಿಕವಾಗಿ ಮುಸ್ಲಿಮರೇ ನಿರ್ವಹಿಸಿಕೊಂಡು ಬಂದಿದ್ದಾರೆ ಎಂದು ರೆಹಮಾನ್ ತಿಳಿಸಿದರು.

ಈ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ಆಗಸ್ಟ್ 21 ರಂದು ತಮ್ಮ ಅಧಿಕೃತ ನಿವಾಸದಲ್ಲಿ ಮೈತೇಯಿ ಪಾಂಗಲ್ ಸಮುದಾಯದ ವಿವಿಧ ನಾಗರಿಕ ಸಮಾಜ ಸಂಸ್ಥೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ವಕ್ಫ್ ಮಂಡಳಿಯ ಅಧ್ಯಕ್ಷ ವೈ. ಆಂತಾಜ್ ಖಾನ್ ಕೂಡ ಉಪಸ್ಥಿತರಿದ್ದರು. ಪ್ರತಿನಿಧಿಗಳ ಅಹವಾಲನ್ನು ಆದ್ಯತೆಯ ಮೇರೆಗೆ ಬಗೆಹರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಅದೇ ದಿನ, ಥೌಬಲ್ ಜಿಲ್ಲೆಯ ಲೀಲೋಂಗ್‌ನಲ್ಲಿ ಲೀಲೋಂಗ್ ಯುನೈಟೆಡ್ ಕ್ಲಬ್‌ನಿಂದ ಬೃಹತ್ ಪ್ರತಿಭಟನಾ ರಾಲಿಯನ್ನು ಆಯೋಜಿಸಲಾಯಿತು. ಜಾತ್ಯತೀತತೆ ಮತ್ತು ಧರ್ಮ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ತಾವು ಬಣ್ಣಿಸಿದ ವಕ್ಫ್ ತಿದ್ದುಪಡಿ ಕಾಯ್ದೆ, 2025 ರ ನಿಬಂಧನೆಗಳನ್ನು ತಮ್ಮ ಸಂಸ್ಥೆಯು ವಿರೋಧಿಸುತ್ತದೆ ಎಂದು ಅದರ ಸಂಚಾಲಕ ಸಜಾದ್ ಭುಯಮಾಯುಮ್ ತಿಳಿಸಿದ್ದು, ಈ ವಿಷಯವನ್ನು ಮರುಪರಿಶೀಲಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.

ಶನಿವಾರ ಕ್ಷೇತ್ರಿಗಾಂವ್‌ನಲ್ಲಿ ಜಂಟಿ ಸಮಿತಿಯು ಜಮಿಯತ್-ಇ-ಉಲಮಾ, ಉಲಮಾ-ಇ-ಮುತ್ತಹಿದ್ ಮತ್ತು ಯೂತ್ ಆಫ್ ಪಾಂಗಲ್ ಸಹಯೋಗದೊಂದಿಗೆ ಆಯೋಜಿಸಿದ್ದ ಬೃಹತ್ ರಾಲಿಯಲ್ಲಿ ಸಾವಿರಾರು ಪುರುಷರು, ಮಹಿಳೆಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಕ್ಫ್‌ ಮಂಡಳಿಯ ಸಂಯೋಜನೆಯನ್ನು ಸರ್ಕಾರವು ಮರುಪರಿಶೀಲಿಸದಿದ್ದರೆ ರಾಜ್ಯಾದ್ಯಂತ ಆಂದೋಲನದ ಮುಂದಿನ ಹಂತಗಳನ್ನು ಪ್ರಾರಂಭಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.