ಅಗ್ನಿಶಾಮಕ ದಳದ ವಾಹನದಿಂದ ನೀರನ್ನು ಬಳಸಿ ಕಾರು ತೊಳೆದ ಬಿಜೆಪಿ ಶಾಸಕ

0
354

ಸನ್ಮಾರ್ಗ ವಾರ್ತೆ

ಮಧ್ಯಪ್ರದೇಶದ ಸಿಂಗ್ರೋಲಿಯಲ್ಲಿ ಬಿಜೆಪಿ ಶಾಸಕರ ಖಾಸಗಿ ಕಾರನ್ನು ಅಗ್ನಿಶಾಮಕದಳದ ವಾಹನ ಬಳಸಿ ತೊಳೆಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಅವರ ಅಧಿಕೃತ ನಿವಾಸದ ಮುಂದೆ ನಿಲ್ಲಿಸಿದ್ದ ಕಾರನ್ನು ತೊಳೆಯಲು ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಂಡಿರುವ ವಿಡಿಯೋ ಬಹಿರಂಗಕ್ಕೆ ಬಂದಿದೆ. ಕಾರನ್ನು ತೊಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಾಸಕ ರಾಮ್ ನಿವಾಸ್ ಶಾ ಅವರ ಇನ್ನೊವಾ ಕಾರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ತೊಳೆದಿದ್ದಾರೆ. ಶಾಸಕರ ಅಧಿಕೃತ ನಿವಾಸದ ಹೊರಗಿನ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮೂವರು ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿಶಾಮಕ ವಾಹನದಿಂದ ನೀರನ್ನು ಬಳಸಿರುವುದನ್ನು ವಿಡಿಯೋ ತೋರಿಸಿದೆ.

ಇದೇ ವೇಳೆ ಶಾಸಕರು ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಅಗ್ನಿಶಾಮಕ ದಳದ ವಾಹನವು ಮೇಯರ್ ಅಧ್ಯಕ್ಷರ ಮನೆಗೆ ನೀರು ತುಂಬಿಸಲು ಹೋಗಿತ್ತು ಮತ್ತು ಚಾಲಕ ಆಕಸ್ಮಿಕವಾಗಿ ವಾಹನವನ್ನು ಅಲ್ಲಿ ನಿಲ್ಲಿಸಿದಾಗ ಸ್ವಲ್ಪ ನೀರನ್ನು ಸಿಂಪಡಿಸಿದ್ದಾನೆ ಎಂದು ಶಾಸಕರು ವಿವರಿಸಿದ್ದಾರೆ.

ಆದರೆ ಶಾಸಕರ ಈ ಸ್ಪಷ್ಟೀಕರಣಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಸರ್ಕಾರವು ಸಾರ್ವಜನಿಕ ಆಸ್ತಿಯನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಅನೇಕರು ಆರೋಪಿಸಿದ್ದಾರೆ.