✍️ ಅಪೂರ್ವಾನಂದ್
ಹಿಂದಿ ಉಪನ್ಯಾಸಕರು ದೆಹಲಿ ವಿಶ್ವವಿದ್ಯಾಲಯ ಹಾಗೂ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಮರ್ಶೆ ಬರಹಗಾರರು
‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಕಾರ್ಯಕರ್ತರ ಮೇಲೆ ರಾಜಸ್ಥಾನದ ರಾಂಪುರ-ಕನ್ವರ್ಪುರ ಗ್ರಾಮದಲ್ಲಿ ಗೂಂಡಾಗಳು ದಾಳಿ ನಡೆಸಿದರು. ಅವರ ಮೇಲೆ ಕಲ್ಲು ತೂರಾಟ ನಡೆಸಿ, ಹಲ್ಲೆ ಮಾಡಿ, ವಾಹನಗಳ ಕಿಟಕಿಗಳನ್ನು ಒಡೆದು ಹಾಕಿದರು.
ರಾಜಸ್ಥಾನದ ಶಿಕ್ಷಣ ಸಚಿವರು ಈ ಹಿಂಸಾಚಾರವನ್ನು ಸಮರ್ಥಿಸುತ್ತಾ, ಶಾಲೆಯನ್ನು ತಪಾಸಣೆ ಮಾಡುವ ನೆಪದಲ್ಲಿ ಸಿಜೆಪಿ ಕಾರ್ಯಕರ್ತರು ಮಕ್ಕಳ ಶಿಕ್ಷಣಕ್ಕೆ ಅಡ್ಡಿಪಡಿಸುತ್ತಿದ್ದ ಕಾರಣದಿಂದ ಗೂಂಡಾಗಳಿಗೆ ಕೋಪ ಬಂದಿತ್ತು ಎಂದು ಹೇಳಿದರು. ಅಲ್ಲಿಗೆ ನಿಲ್ಲದೇ; ಗೂಂಡಾಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ಸ್ಥಳೀಯ ಶಾಸಕರು ಗೂಂಡಾಗಳಿಗೆ ಬಿಜೆಪಿಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಿರಾಕರಿಸಿದರು. ಆದರೆ ಅವರು ಇದನ್ನು ಹೇಳುತ್ತಿರುವಾಗ, ಗೂಂಡಾಗಳಲ್ಲಿ ಒಬ್ಬನು ಅವರ ಹಿಂದೆಯೇ ನಿಂತಿದ್ದನು.
ಪಶ್ಚಿಮ ಬಂಗಾಳದಲ್ಲಿ ಕಳೆದ ವಾರ ಸತತ ಮೂರು ದಿನಗಳ ಕಾಲ ಗೂಂಡಾಗಳು ಜಾದವ್ಪುರ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದರು. ಈ ಗೂಂಡಾಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ಗೆ (ABVP) ಸೇರಿದವರು ಎಂಬ ಆರೋಪ ಕೇಳಿಬಂದಿದೆ. ಬಿಜೆಪಿ ನಾಯಕ ಮತ್ತು ಸಚಿವ ದಿಲೀಪ್ ಘೋಷ್ ವಿಶ್ವವಿದ್ಯಾಲಯದ ಮೇಲೆ “ಸರ್ಜಿಕಲ್ ಸ್ಟ್ರೈಕ್” ನಡೆಸುವುದಾಗಿ ಬೆದರಿಕೆ ಹಾಕಿದರು. ಬಿಜೆಪಿ ನಾಯಕ ಮತ್ತು ಶಾಸಕಿ ಸರ್ಬರಿ ಮುಖರ್ಜಿ ಕ್ಯಾಂಪಸ್ನಲ್ಲಿ ರಾತ್ರಿಯಿಡೀ ಹಿಂಸಾಚಾರದ ಅಲೆ ಎಬ್ಬಿಸುವುದಾಗಿ ಬೆದರಿಕೆ ಹಾಕಿದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಈ ಹಿಂಸಾಚಾರವನ್ನು ಖಂಡಿಸಬೇಕು ಎಂದು ಯಾರಾದರೂ ನಿರೀಕ್ಷಿಸುತ್ತಾರೆ. ಆದರೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಜಾದವ್ಪುರ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯತೆಯನ್ನು ಸ್ಥಾಪಿಸುವುದಾಗಿ ಮತ್ತು “ತುಕ್ಡೆ-ತುಕ್ಡೆ ಗ್ಯಾಂಗ್” ಅನ್ನು ಮಟ್ಟಹಾಕುವುದಾಗಿ ಅವರು ಬೆದರಿಕೆ ಹಾಕಿದರು. ನೀವು ಬಂಗಾಳದಲ್ಲಿ ಬದುಕಬೇಕಾದರೆ ವಂದೇ ಮಾತರಂ ಹಾಡಲೇಬೇಕಾಗುತ್ತದೆ – ಇವು ಸುವೇಂದು ಅಧಿಕಾರಿಯವರ ಬೆದರಿಕೆಗಳಾಗಿದ್ದವು. ಮಹಿಳೆಯರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಅವರು ಈ ಮಾತುಗಳನ್ನು ಆಡಿದರು. ಮೇದಿನೀಪುರದ ಕಾಲೇಜೊಂದರ ವಿದ್ಯಾರ್ಥಿಗಳು ಈ ಹಿಂಸಾಚಾರದ ವಿರುದ್ಧ ಪ್ರತಿಭಟನೆ ನಡೆಸಿದಾಗ, ಗೂಂಡಾಗಳು ಅವರ ಮೇಲೆ ದಾಳಿ ಮಾಡಿದರು. ಈ ದಾಳಿಕೋರರಿಗೆ ಎಬಿವಿಪಿ ಜೊತೆ ನಂಟಿದೆ ಎಂದು ಆರೋಪಿಸಲಾಗಿದೆ.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಬಂಕುರಾದಲ್ಲಿ, ಗೂಂಡಾಗಳು ಸಿಜೆಪಿ ಕಾರ್ಯಕರ್ತ ಶೇಖ್ ಅಬ್ದುಲ್ ಹಫೀಜ್ ಮತ್ತು ಅವರ ತಂದೆ ಶೇಖ್ ಮುಹಮ್ಮದ್ ಮಾಫಿಕ್ ಮೇಲೆ ದಾಳಿ ನಡೆಸಿ, ಮುಹಮ್ಮದ್ ಮಾಫಿಕ್ ಅವರನ್ನು ಹತ್ಯೆ ಮಾಡಿದರು. ದಾಳಿಕೋರರಿಗೆ ಬಿಜೆಪಿಯೊಂದಿಗೆ ನಂಟಿದೆ ಎಂದು ಆರೋಪಿಸಲಾಗಿದೆ. ಮುಖ್ಯಮಂತ್ರಿಯವರು ಈ ಸಂಬಂಧದ ಆರೋಪವನ್ನು ತಳ್ಳಿಹಾಕಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯ ಸಾಧಿಸಿದ ನಂತರ, ತೃಣಮೂಲ ಕಾಂಗ್ರೆಸ್ ನಾಯಕರ ಮೇಲೆ ಒಂದರ ನಂತರ ಮತ್ತೊಂದರಂತೆ ದಾಳಿಗಳು ನಡೆದಿವೆ. ಇತ್ತೀಚೆಗೆ ಸಂಸದೆ ಮಹುವಾ ಮೊಯಿತ್ರಾ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಅವರ ಮೇಲೆ ದಾಳಿ ನಡೆಯಿತು. ಆದಾಗ್ಯೂ, ಸುಪ್ರೀಂ ಕೋರ್ಟ್ ಈ ಘಟನೆಯನ್ನು ಭದ್ರತಾ ಬೆದರಿಕೆಯೆಂದು ಪರಿಗಣಿಸಲು ನಿರಾಕರಿಸಿತು. ಬದಲಿಗೆ, ಜನಪ್ರತಿನಿಧಿಯಾಗಿರುವ ಅವರು ಇಂತಹ ಹಿಂಸಾಚಾರವನ್ನು ಏಕೆ ಎದುರಿಸಲಾರರು ಎಂದು ಅವರನ್ನು ಪ್ರಶ್ನಿಸಿತು.
ಖುದ್ದು ನ್ಯಾಯಾಲಯವೇ ಈ ಭಾಷೆಯಲ್ಲಿ ಮಾತನಾಡಿದರೆ ಏನಾಗಬಹುದು? ಆಗಸ್ಟ್ 15 ರ ರಾತ್ರಿ ಗೂಂಡಾಗಳ ಗುಂಪೊಂದು ಸರ್ಕ್ಯೂಟ್ ಹೌಸ್ನ ಗೇಟ್ ಬಳಿ ಸೇರಿ ಅವರಿಗೆ ಬೆದರಿಕೆ ಹಾಕಿತು. ಅಧಿಕಾರಿಗಳು ಅವರನ್ನು ರಕ್ಷಿಸುವ ಬದಲು, ರಾತ್ರೋರಾತ್ರಿ ನೋಟಿಸ್ ಜಾರಿ ಮಾಡಿ ತಮ್ಮ ಕೊಠಡಿಯನ್ನು ಖಾಲಿ ಮಾಡುವಂತೆ ಸೂಚಿಸಿದರು. ಈ ದಾಳಿಗಳನ್ನು ನಡೆಸುತ್ತಿರುವವರನ್ನು ಗೂಂಡಾಗಳು ಎಂದು ವರ್ಣಿಸುತ್ತಿಲ್ಲ. ಬದಲಿಗೆ ಅವರನ್ನು “ಜನರು” ಎಂದು ಕರೆಯಲಾಗುತ್ತಿದೆ.
ಸಿಜೆಪಿ ಕಾರ್ಯಕರ್ತರು ಎಲ್ಲಿಗೆ ಹೋದರೂ ಅದೇ ರೀತಿಯಲ್ಲಿ ನಡೆಸಿಕೊಳ್ಳುವುದಾಗಿ ಬಿಜೆಪಿ ಯವರ ಪ್ರತಿನಿಧಿಗಳು ಬೆದರಿಕೆ ಹಾಕುತ್ತಿದ್ದಾರೆ. ಕಾರ್ಪೊರೇಟ್ ಜಗತ್ತಿನ ಕೆಲವರು ಹಾಗೂ ಹಲವು ಪತ್ರಕರ್ತರು “ಜನರು” ಸಿಜೆಪಿ ಮೇಲೆ ದಾಳಿ ಮಾಡುತ್ತಿರುವುದನ್ನು ಕಂಡು ಆನಂದಿಸುತ್ತಿರುವಂತೆ ತೋರುತ್ತಿದೆ.
ಪುಣೆಯಲ್ಲಿ ರಾಹುಲ್ ಗಾಂಧಿಯವರ ಕಾರ್ಯಕ್ರಮಕ್ಕೂ ಮುನ್ನ ಗೂಂಡಾಗಳು ಮಹಿಳಾ ಹಾಸ್ಟೆಲ್ ಮೇಲೆ ದಾಳಿ ನಡೆಸಿದರು. ವಿದ್ಯಾರ್ಥಿನಿಯರಿಗೆ ಹಿಂಸಾಚಾರದ ಬೆದರಿಕೆ ಹಾಕಲಾಯಿತು. ಇವರು ಗೂಂಡಾಗಳಲ್ಲ, ಎಬಿವಿಪಿ ಸದಸ್ಯರು ಎಂದು ಹೇಳಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಕನ್ವರೀಯರು ರಸ್ತೆಗಳಲ್ಲಿ ಜನರನ್ನು, ವಾಹನಗಳನ್ನು ಮತ್ತು ಕೊನೆಗೆ ಪೊಲೀಸರ ಮೇಲೂ ದಾಳಿ ಮಾಡುತ್ತಿದ್ದಾರೆ. ಪೊಲೀಸರೊಬ್ಬರು ತಮ್ಮ ನಿರಪರಾಧಿತ್ವವನ್ನು ಸಾಬೀತುಪಡಿಸಲು ಯತ್ನಿಸುತ್ತಾ ಅಳುತ್ತಿರುವುದು ಕಂಡುಬಂದಿದೆ. ತಾನು ಏನಾದರೂ ತಪ್ಪು ಮಾಡಿದ್ದರೆ ಕನ್ವರೀಯರು ತಮ್ಮ ಬೂಟುಗಳಿಂದ ಒದೆಯಬಹುದು ಎಂದು ಅವರು ಹೇಳುತ್ತಾರೆ. ನಮಾಝ್ ಮಾಡುವ ಮುಸ್ಲಿಮರನ್ನು ತಮ್ಮ ಬೂಟುಗಳಿಂದ ತುಳಿಯುವವರು ಕನ್ವರೀಯರ ಮುಂದೆ ಅಸಹಾಯಕರಾಗಿದ್ದಾರೆ.
ಈ ಕನ್ವರೀಯರನ್ನು ಭಕ್ತರು ಎಂದು ಕರೆಯಬೇಕೇ ಅಥವಾ ಗೂಂಡಾಗಳು ಎಂದು ಕರೆಯಬೇಕೇ?
‘ಗೂಂಡಾ ರಾಜ್’ ಉದಯ
ಖಂಡಿತವಾಗಿಯೂ, ಭಾರತವು ಕಳೆದ ಹದಿಮೂರು ವರ್ಷಗಳಿಂದ ಒಂದಲ್ಲ ಒಂದು ರೂಪದಲ್ಲಿ ಗೂಂಡಾ ರಾಜ್ನ ಆಡಳಿತದಲ್ಲಿದೆ. ಆದರೆ ನರೇಂದ್ರ ಮೋದಿಯವರು ಆಗಸ್ಟ್ 15 ರಂದು “ದಿಮಾಗಿ ನಕ್ಸಲರನ್ನು” (ಬೌದ್ಧಿಕ ನಕ್ಸಲರು) ಗುರುತಿಸಿ ಅವರೊಂದಿಗೆ ವ್ಯವಹರಿಸುವಂತೆ ಕರೆ ನೀಡಿದಂದಿನಿಂದ, ಅವರು ಸೈದ್ಧಾಂತಿಕ ನಕ್ಸಲರು ಎಂದು ಪರಿಗಣಿಸುವವರ ಮೇಲಿನ ದಾಳಿಗಳು ದೇಶಾದ್ಯಂತ ಹೆಚ್ಚಾಗಿವೆ.
ಸಿಜೆಪಿ ಕಾರ್ಯಕರ್ತರು ಯಾವುದೇ ಹಿಂಸಾಚಾರ ನಡೆಸುತ್ತಿರಲಿಲ್ಲ. ಅವರು ಶಾಲೆಗಳ ಸ್ಥಿತಿಗತಿಯನ್ನು ಪರಿಶೀಲಿಸುತ್ತಿದ್ದರು. ಬಂಗಾಳದ ವಿದ್ಯಾರ್ಥಿಗಳೂ ಸಹ ಹಿಂಸಾಚಾರ ನಡೆಸುತ್ತಿರಲಿಲ್ಲ. ಪುಣೆಯ ಯುವತಿಯರು ಬಹುಶಃ ರಾಹುಲ್ ಗಾಂಧಿಯವರ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದರು. ಅವರೆಲ್ಲರಲ್ಲೂ ಅವರದ್ದೇ ಆದ ಬೇಡಿಕೆಗಳಿದ್ದವು. ಗೂಂಡಾಗಳು ಅವರ ಎಲ್ಲರ ಮೇಲೂ ದಾಳಿ ಮಾಡಿದರು.
ಪತ್ರಕರ್ತ ಅಶುತೋಷ್ ಹೀಗೆ ಬರೆದಿದ್ದಾರೆ: “ದೇಶದಲ್ಲಿ ಒಂದು ಅಪಾಯಕಾರಿ ಫ್ಯಾಶಿಸ್ಟ್ ಪ್ರವೃತ್ತಿ ಆರಂಭವಾಗಿದೆ. ಯಾರಾದರೂ ಯಾವುದೇ ರೀತಿಯ ಬೇಡಿಕೆಯನ್ನು ಮುಂದಿಟ್ಟರೆ, ಅವರನ್ನು ಸುತ್ತುವರೆದು ಹೊಡೆಯಿರಿ, ಕೈಕಾಲುಗಳನ್ನು ಮುರಿಯಿರಿ. ನಂತರ ಇದು ಜನರ ಆಕ್ರೋಶ ಎಂದು ಹೇಳಿ.”
ಆದರೆ ಈ ಪ್ರವೃತ್ತಿಯು ಈಗ ತೋರುವಷ್ಟು ಹೊಸದಲ್ಲ.
ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಶಾಹೀನ್ ಬಾಗ್ ಚಳುವಳಿಯ ಮೇಲೂ ಗೂಂಡಾಗಳು ದಾಳಿ ನಡೆಸಿದ್ದರು. ರೈತ ಹೋರಾಟದ ಮೇಲೂ ಹಲವಾರು ಸಂದರ್ಭಗಳಲ್ಲಿ ಗೂಂಡಾಗಳು ದಾಳಿ ಮಾಡಿದ್ದರು. ಆ ದಾಳಿಗಳನ್ನೂ ಸಹ ಜನರ ಆಕ್ರೋಶದ ಅಭಿವ್ಯಕ್ತಿಗಳೆಂದೇ ವರ್ಣಿಸಲಾಗಿತ್ತು.
2020 ರಲ್ಲಿ ಗೂಂಡಾಗಳು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದರು. ಅದಕ್ಕೂ ಮುನ್ನ ದೆಹಲಿ ವಿಶ್ವವಿದ್ಯಾಲಯದ ರಾಮ್ಜಾಸ್ ಕಾಲೇಜಿನ ಮೇಲೂ ದಾಳಿ ನಡೆದಿತ್ತು. ಆ ಹಿಂಸಾಚಾರವನ್ನೂ ಸಹ ರಾಷ್ಟ್ರೀಯವಾದಿ ಆಕ್ರೋಶದ ಅಭಿವ್ಯಕ್ತಿ ಎಂದು ಬಿಂಬಿಸಲಾಯಿತು.
ಕಳೆದ ಹದಿಮೂರು ವರ್ಷಗಳಿಂದ ಭಾರತವು ಗೂಂಡಾ ರಾಜ್ನಲ್ಲಿದೆ ಎಂಬ ಭಾವನೆ ಮೂಡಲಾರಂಭಿಸಿದೆ. ಕೆಲವೊಮ್ಮೆ ಈ ಪುಂಡರನ್ನು ಗೋರಕ್ಷಕರು ಎನ್ನಲಾಗುತ್ತದೆ, ಕೆಲವೊಮ್ಮೆ ಕನ್ವರೀಯರು, ಕೆಲವೊಮ್ಮೆ ರಾಷ್ಟ್ರೀಯವಾದಿಗಳು ಎನ್ನಲಾಗುತ್ತದೆ. ಸಮಾಜದ ವಿವಿಧ ವರ್ಗಗಳನ್ನು ಗೂಂಡಾಗಳನ್ನಾಗಿ ಪರಿವರ್ತಿಸಲು ವ್ಯವಸ್ಥಿತ ಅಭಿಯಾನವೇ ನಡೆಯುತ್ತಿರುವಂತೆ ಕಾಣುತ್ತಿದೆ.
ಮಣಿಪುರದಲ್ಲಿ ಬಿಜೆಪಿ ನಾಯಕರ ಪೋಷಣೆಯಲ್ಲಿ ಅರಾಂಬೈ ತೆಂಗೋಲ್ನಂತಹ ಸಶಸ್ತ್ರ ಗುಂಪುಗಳನ್ನು ಹುಟ್ಟುಹಾಕಲಾಗಿದೆ. ಅವರನ್ನು ಮೈತೇಯಿ ಸಮುದಾಯದ ಪ್ರತಿನಿಧಿಗಳೆಂದು ಬಿಂಬಿಸಲಾಗುತ್ತಿದೆ.
ಜನರು ಮತ್ತು ಗೂಂಡಾಗಳ ನಡುವಿನ ವ್ಯತ್ಯಾಸವನ್ನು ಬಿಜೆಪಿಯು ಅಳಿಸುತ್ತಿದೆ. ಭಾರತದ ಹಿಂದೂ ಜನಸಂಖ್ಯೆಯ ದೊಡ್ಡ ವರ್ಗವನ್ನು ಗೂಂಡಾಗಳನ್ನಾಗಿ ಬದಲಾಯಿಸುವ ಈ ಅಭಿಯಾನವನ್ನು ನಡೆಸುತ್ತಿರುವವರೇ ದೇಶವನ್ನು ಆಳುತ್ತಿರುವವರೂ ಆಗಿದ್ದಾರೆ. ಅವರು ಮಂತ್ರಿಗಳು, ಸಂಸದರು, ಶಾಸಕರು ಮತ್ತು ಆರ್.ಎಸ್.ಎಸ್ ಪದಾಧಿಕಾರಿಗಳು. ಅವರು ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತು ಬಿಜೆಪಿಯ ನಾಯಕರು. ಅವರು ಟೆಲಿವಿಷನ್ ಸ್ಟುಡಿಯೋಗಳಲ್ಲಿ ಕುಳಿತುಕೊಳ್ಳುತ್ತಾರೆ. ಅವರು ಪತ್ರಿಕೆಗಳ ಸಂಪಾದಕರು ಮತ್ತು ಪತ್ರಕರ್ತರು. ಅವರು ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಪ್ರಾಧ್ಯಾಪಕರು. ಅವರು ಚಲನಚಿತ್ರಗಳನ್ನು ನಿರ್ಮಿಸುವ ಸಾಂಸ್ಕೃತಿಕ ವ್ಯಕ್ತಿಗಳೂ ಹೌದು. ಕುಲಪತಿಗಳೇ ಮುಕ್ತವಾಗಿ “ಅರ್ಬನ್ ನಕ್ಸಲ್” ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಮಟ್ಟಹಾಕುವಂತೆ ಕರೆ ನೀಡುತ್ತಾರೆ.
ಆದರೆ ಈ ವ್ಯಕ್ತಿಗಳು ಖುದ್ದು ರಸ್ತೆಗಿಳಿದು ಪುಂಡಾಟಿಕೆ ಮಾಡುವುದಿಲ್ಲ. ಅವರು ಯಾರ ಮೇಲೂ ನೇರವಾಗಿ ದಾಳಿ ಮಾಡುವುದಿಲ್ಲ. ಅವರು ಶಾಖೆಗಳನ್ನು ನಡೆಸುತ್ತಾರೆ. ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಾರೆ. ಲೇಖನಗಳನ್ನು ಬರೆಯುತ್ತಾರೆ, ಭಾಷಣ ಮಾಡುತ್ತಾರೆ ಮತ್ತು ಸಿನಿಮಾಗಳನ್ನು ಮಾಡುತ್ತಾರೆ. ಅವರು ಕಾನೂನುಗಳನ್ನು ರೂಪಿಸುತ್ತಾರೆ. ತದನಂತರ ಆ ಕಾನೂನುಗಳನ್ನು ಜಾರಿಗೊಳಿಸಲು ಗೂಂಡಾಗಳು ರಸ್ತೆಗಿಳಿಯುತ್ತಾರೆ.
ಅವರು ಗೋಹತ್ಯೆ ನಿಷೇಧ ಕಾನೂನುಗಳನ್ನು ಮಾಡುತ್ತಾರೆ, ಮತ್ತು ಅವುಗಳ ನೆರಳಿನಲ್ಲಿ ಗೋರಕ್ಷಕ ಗೂಂಡಾಗಳು ರಸ್ತೆಗಿಳಿಯುತ್ತಾರೆ. ಅವರು “ಲವ್ ಜಿಹಾದ್” ವಿರುದ್ಧ ಕಾನೂನುಗಳನ್ನು ಮಾಡುತ್ತಾರೆ, ನಂತರ ಅಂತರ್ ಧರ್ಮೀಯ ವಿವಾಹಗಳನ್ನು ಮಾಡಿಕೊಳ್ಳುವ ದಂಪತಿಗಳ ಮೇಲೆ ಗೂಂಡಾಗಳು ದಾಳಿ ಮಾಡುತ್ತಾರೆ. ಅವರು ಮತಾಂತರ ನಿಷೇಧ ಕಾನೂನುಗಳನ್ನು ಜಾರಿಗೊಳಿಸುತ್ತಾರೆ, ಮತ್ತು ಕ್ರಿಶ್ಚಿಯನ್ನರ ಮೇಲೆ ದಾಳಿ ಮಾಡಲು ಧರ್ಮರಕ್ಷಕ ಗೂಂಡಾಗಳು ಸಕ್ರಿಯಗೊಳ್ಳುತ್ತಾರೆ.
ಈ ದಿಮಾಗಿ ಗೂಂಡಾಗಿರಿ ಇಲ್ಲದೆ ಬೀದಿ ಗೂಂಡಾಗಿರಿ ಅಸಾಧ್ಯ ಎಂದು ಹೇಳಬಹುದು. ಹಾಗಾದರೆ, ರಸ್ತೆಗಳಲ್ಲಿರುವ ಗೂಂಡಾಗಳನ್ನು ಯಾರು ತಡೆಯುತ್ತಾರೆ ಎಂಬುದು ಮಾತ್ರ ಇಲ್ಲಿನ ಪ್ರಶ್ನೆಯಲ್ಲ. ರಸ್ತೆಗಳಲ್ಲಿ ಗೂಂಡಾಗಳನ್ನು ಸೃಷ್ಟಿಸುವ ಈ ದಿಮಾಗಿ ಗೂಂಡಾಗಿರಿಯನ್ನು ಯಾರು ಎದುರಿಸುತ್ತಾರೆ? ಮತ್ತು ಹೇಗೆ? ಎಂಬುವುದೇ ಹೆಚ್ಚು ಕ್ಲಿಷ್ಟ ಸವಾಲು.
ಕೃಪೆ: frontline












