ಐಐಟಿಗಳಲ್ಲಿ ಕಳೆದ 5 ವರ್ಷಗಳಲ್ಲಿ 65 ವಿದ್ಯಾರ್ಥಿಗಳು ಆತ್ಮಹತ್ಯೆ – ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಅಗತ್ಯ: ಅಭಿಜಿತ್ ದೀಪ್ಕೆ

0
242

ಸನ್ಮಾರ್ಗ ವಾರ್ತೆ

ಹೊಸ ದೆಹಲಿ: ಐಐಟಿ ದೆಹಲಿಯಲ್ಲಿ ವಿದ್ಯಾರ್ಥಿಯೊಬ್ಬರ ಆತ್ಮಹತ್ಯೆಗೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಪ್ರತಿಕ್ರಿಯಿಸಿದ್ದು, ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಸಂಪೂರ್ಣ ಸುಧಾರಣೆಯಾಗುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಐಐಟಿಗಳಲ್ಲಿ 65 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದ ಅತ್ಯುತ್ತಮ ಸಂಸ್ಥೆಗಳೇ ಇಂತಹ ಪರಿಸ್ಥಿತಿಯಲ್ಲಿದ್ದರೆ, ಇನ್ನುಳಿದ ಸಂಸ್ಥೆಗಳ ಪರಿಸ್ಥಿತಿ ಹೇಗಿರಬಹುದು ಎಂದು ದೀಪ್ಕೆ ಪ್ರಶ್ನಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಎಲ್ಲ ರೀತಿಯಿಂದಲೂ ಬೆಂಬಲ ನೀಡುವ ಅಗತ್ಯವಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿಗಳ ಮಾತಿಗೆ ಸ್ಪಂದಿಸುವ ಶಿಕ್ಷಣ ವ್ಯವಸ್ಥೆ ನಮಗೆ ಬೇಕಾಗಿದೆ ಎಂದು ಅಭಿಜಿತ್ ತಿಳಿಸಿದ್ದಾರೆ.

ಐಐಟಿ ದೆಹಲಿಯ ಎಂ.ಎಸ್‌ಸಿ ಭೌತಶಾಸ್ತ್ರ ವಿದ್ಯಾರ್ಥಿಯಾದ 31 ವರ್ಷದ ಹೃಷಿಕೇಶ್ ಕುಮಾರ್ ಆಗಸ್ಟ್ 22 ರಂದು ನಿಧನರಾಗಿದ್ದಾರೆ. ಉಪನ್ಯಾಸ ಭವನ ಸಂಕೀರ್ಣದ ಆರನೇ ಮಹಡಿಯಿಂದ ಕೆಳಗೆ ಬಿದ್ದು ಹೃಷಿಕೇಶ್ ಸಾವನ್ನಪ್ಪಿದ್ದಾರೆ.

ಈ ಘಟನೆಯ ತನಿಖೆಗಾಗಿ ದೆಹಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮುಕ್ತಾ ಗುಪ್ತಾ ಅವರ ನೇತೃತ್ವದಲ್ಲಿ, ನಾಲ್ವರು ವಿದ್ಯಾರ್ಥಿ ಪ್ರತಿನಿಧಿಗಳನ್ನು ಸಹ ಒಳಗೊಂಡ ಬಾಹ್ಯ ತನಿಖಾ ಸಮಿತಿಯನ್ನು ಐಐಟಿ ಆಡಳಿತ ಮಂಡಳಿಯು ರಚಿಸಿದೆ. ಈ ಸಮಿತಿಯು ಎರಡು ವಾರಗಳ ಒಳಗೆ ಈ ವಿಷಯದ ಕುರಿತು ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.

ಮತ್ತೊಂದೆಡೆ, ವಿದ್ಯಾರ್ಥಿಯ ಬಳಿಯಿಂದ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ ಮತ್ತು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.