ಸನ್ಮಾರ್ಗ ವಾರ್ತೆ
ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಆತ್ಮಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಆರ್ಎಸ್ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಒತ್ತುವರಿಯನ್ನು ನಿರ್ವಹಿಸಿದ ಬಗ್ಗೆ ಇರುವ ಭಾಗಗಳಲ್ಲಿ ಬದಲಾವಣೆಗಳನ್ನು ಕೋರುವ ಮೂಲಕ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿ ತಂದಿದೆ ಎಂದು ಶುಕ್ರವಾರ ಹಲವಾರು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಪುಸ್ತಕದ ಲೇಖಕಿಯು ಸಂಪಾದಕೀಯ ಬದಲಾವಣೆಗಳನ್ನು ತಿರಸ್ಕರಿಸಿದ್ದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾತನ್ನು ನಿರಾಕರಿಸಿರುವ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ಸೋನಿಯಾ ಗಾಂಧಿ ಅವರ “ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಆತ್ಮಕತೆಯನ್ನು ಭಾರತದಲ್ಲಿ ಪ್ರಕಟಿಸುವುದಿಲ್ಲ ಎಂದು ಹೇಳಿದ ನಂತರ ಈ ಬೆಳವಣಿಗೆ ನಡೆದಿದೆ. ಲೇಖಕಿಯು ಸಂಪಾದಕೀಯ ಬದಲಾವಣೆಗಳನ್ನು ತಿರಸ್ಕರಿಸಿದ ಕಾರಣಕ್ಕಾಗಿ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ, ಬಿಲಾಂಗಿಂಗ್ ಕೃತಿಯನ್ನು ಪ್ರಕಟಿಸದಿರಲು ನಿರ್ಧರಿಸಿದೆ ಎಂಬ ಊಹೆಯು ಸರಿಯಲ್ಲ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ಪುಸ್ತಕವನ್ನು ಪ್ರಕಟಿಸಲು ತಾವು ಉತ್ಸುಕರಾಗಿದ್ದೆವು ಎಂದು ಪ್ರಕಾಶಕರು ಒಪ್ಪಿಕೊಂಡಿದ್ದಾರೆ, ಆದರೆ ತಪ್ಪು-ಪರಿಶೀಲನೆ (ಫ್ಯಾಕ್ಟ್-ಚೆಕಿಂಗ್) ಮಾಡುವುದು ಮತ್ತು ಲೇಖಕರಿಗೆ ಶಿಫಾರಸುಗಳನ್ನು ನೀಡುವುದು ತಮ್ಮ ಸಾಮಾನ್ಯ ಪ್ರಕಾಶನ ಪ್ರಕ್ರಿಯೆಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.
ಒಬ್ಬ ಪ್ರಕಾಶಕರಾಗಿ, ತಪ್ಪುಗಳನ್ನು ಪರಿಶೀಲಿಸುವುದು ಮತ್ತು ಲೇಖಕರಿಗೆ ಅವರ ಪುಸ್ತಕಗಳ ಉತ್ತಮ ಹಿತಾಸಕ್ತಿಯಲ್ಲಿರುವ ಶಿಫಾರಸುಗಳನ್ನು ಒದಗಿಸುವುದು ನಮ್ಮ ವಿಶೇಷ ಅಧಿಕಾರ ಮತ್ತು ಜವಾಬ್ದಾರಿಯಾಗಿದೆ. ಇದು ಪ್ರಕಾಶನ ಪ್ರಕ್ರಿಯೆಯ ಸಾಮಾನ್ಯ ಭಾಗವಾಗಿದೆ ಎಂದು ಪಿಆರ್ಎಚ್ಐ ಹೇಳಿದೆ. ನಾವು ಲೇಖಕಿಯೊಂದಿಗಿನ ಗೌಪ್ಯ ಚರ್ಚೆಗಳ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಕಟವಾಗುತ್ತಿರುವ ಪುಸ್ತಕದ ಅದೇ ಆವೃತ್ತಿಯನ್ನು ಪ್ರಕಾಶಕರ ಭಾರತೀಯ ವಿಭಾಗವು ಏಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಪ್ರಶ್ನಿಸಿದ್ದಾರೆ. ವಿಶ್ವದಾದ್ಯಂತ ಮುದ್ರಣಗೊಳ್ಳುತ್ತಿರುವುದನ್ನು ಭಾರತದಲ್ಲಿ ಮುದ್ರಿಸುವುದರಿಂದ ಅವರನ್ನು ತಡೆಯುತ್ತಿರುವ ಆ ಕಾರಣ ಅಥವಾ ಒತ್ತಡ ಯಾವುದು? ಎಂದು ಗೆಹ್ಲೋಟ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದಾರೆ.
ಮೋದಿ, ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಮತ್ತು ಮೋದಿ ಸರ್ಕಾರದ ಅವಧಿಯಲ್ಲಿ ಭಾರತೀಯ ಭೂಪ್ರದೇಶದ ಮೇಲೆ ಚೀನಾದ ಒತ್ತುವಾರಿಗೆ ಸಂಬಂಧಿಸಿದ ವಿಭಾಗಗಳನ್ನು ತೆಗೆದುಹಾಕುವಂತೆ ಪೆಂಗ್ವಿನ್ ಇಂಡಿಯಾ ಮೇಲೆ ಒತ್ತಡ ಹೇರಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ದೇಶದ ಇಂತಹ ಪ್ರಮುಖ ವ್ಯಕ್ತಿತ್ವದ, ಹಿರಿಯ ರಾಜಕಾರಣಿ ಮತ್ತು ವಿರೋಧ ಪಕ್ಷದ ಮಾಜಿ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರ ಪುಸ್ತಕಕ್ಕೆ ಒತ್ತಡ ಹೇರುವುದು ಮತ್ತು ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಗೆ ಸಮಾನವಾಗಿದೆ ಎಂದು ಗೆಹ್ಲೋಟ್ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವದ ಕೊಲೆ. ಈ ಸತ್ಯವನ್ನು ಭಾರತದ ಜನರಿಂದ ಏಕೆ ಮುಚ್ಚಿಡಲಾಗುತ್ತಿದೆ? ಮೋದಿ ಸರ್ಕಾರವು ಒತ್ತಡಕ್ಕೆ ಮಣಿದು ಸಂಗತಿಗಳನ್ನು ಬದಲಾಯಿಸುವಂತೆ ಪ್ರಕಾಶಕರನ್ನು ಒತ್ತಾಯಿಸುತ್ತದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ನಾಥ್ ಕೂಡ ಆತ್ಮಕತೆ ಪ್ರಕಟಿಸಲು ನಿರಾಕರಿಸಲಾಗಿದೆ ಎಂಬ ವರದಿಯನ್ನು “ಗಂಭೀರ ಕಳಳವಳದ” ವಿಷಯ ಎಂದು ಬಣ್ಣಿಸಿದ್ದಾರೆ. ಶ್ರೀಮತಿ ಗಾಂಧಿಯವರಂತಹ ಹಿರಿಯ ನಾಯಕಿ ಏನು ಬರೆಯಬೇಕು ಮತ್ತು ಏನು ಬರೆಯಬಾರದು ಎಂಬುದನ್ನು ಪ್ರಕಾಶಕರು ನಿರ್ಧರಿಸುತ್ತಾರೆಯೇ? ಪ್ರಕಾಶಕರು ಸ್ವಂತವಾಗಿ ಇದನ್ನು ಹೇಳುತ್ತಿದ್ದಾರೋ ಅಥವಾ ಇದರ ಹಿಂದೆ ಯಾರದ್ದಾದರೂ ಒತ್ತಡವಿದೆಯೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ ಎಂದು ಕಮಲ್ನಾಥ್ ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಹೇಳಿದ್ದಾರೆ.
“ಸಂಶಯಾಸ್ಪದ ಸಂದರ್ಭಗಳಲ್ಲಿ” ಪುಸ್ತಕಗಳ ಪ್ರಕಟಣೆಯನ್ನು ತಡೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗಂಭೀರ ಬೆದರಿಕೆಯೊಡ್ಡುತ್ತದೆ ಎಂದು ಅವರು ಹೇಳಿದ್ದಾರೆ ಮತ್ತು ಸೋನಿಯಾ ಗಾಂಧಿಯವರ ಆತ್ಮಕತೆಯನ್ನು ಶೀಘ್ರದಲ್ಲೇ ಪ್ರಕಟಿಸಬೇಕೆಂದು ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್ ಅವರು ಪೆಂಗ್ವಿನ್ ಇಂಡಿಯಾದ ಹೇಳಿಕೆಯನ್ನು “ಬಲಹೀನ” ಎಂದು ಬಣ್ಣಿಸಿದ್ದಾರೆ.
“ಎಕ್ಸಾಮ್ ವಾರಿಯರ್ಸ್” ಮತ್ತು ಆರ್ಎಸ್ಎಸ್ ಕುರಿತ ಹಲವಾರು ಪುಸ್ತಕಗಳನ್ನು ಪ್ರಕಟಿಸಲು ಪೆಂಗ್ವಿನ್ ಇಂಡಿಯಾಗೆ ತುಂಬಾ ಉತ್ಸಾಹವಿದೆ. ಭಾರತದ ಜನರು ಓದುವ ಪುಸ್ತಕಕ್ಕೆ ಬಿಜೆಪಿ ಸರ್ಕಾರದಲ್ಲಿರುವ ಕೆಲವರು ಈಗ ಹೆದರಿದ್ದಾರೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಗೊಗೊಯ್ ಎಕ್ಸ್ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಸೇವಾದಳದ ಮುಖ್ಯಸ್ಥ ಶ್ರೀನಿವಾಸ್ ಬಿವಿ ಕೂಡ ಪ್ರಕಾಶಕರನ್ನು ಟೀಕಿಸಿದ್ದು, “ಸಂಪಾದಕೀಯ ಸ್ವಾತಂತ್ರ್ಯ” ಕುರಿತಾದ ಅವರ ಹೇಳಿಕೆಯು ಮನವರಿಕೆಯಾಗುವಂತಿಲ್ಲ ಎಂದು ಕರೆದಿದ್ದಾರೆ. ಸೇವಾದಳದ ಅಧಿಕೃತ ಎಕ್ಸ್ ಖಾತೆಯು ಪ್ರತ್ಯೇಕವಾಗಿ ಪೆಂಗ್ವಿನ್ ಇಂಡಿಯಾವನ್ನು “ಪಾಲ್ತು ಪೆಂಗ್ವಿನ್” ಅಂದರೆ, ಸಾಕು ಪಂಗ್ವಿನ್ ಎಂದು ವ್ಯಂಗ್ಯವಾಡಿದೆ.
ಇಂಡಿಯನ್ ಯೂಥ್ ಕಾಂಗ್ರೆಸ್ ಪ್ರಕಾಶಕರನ್ನು ಪ್ರಶ್ನಿಸಿ, ನೀವು ‘ಉತ್ಸುಕರಾಗಿದ್ದೀರಾ’ ಎಂದು ಯಾರೂ ಕೇಳಲಿಲ್ಲ. ನಿಮಗೆ ಯಾವ ಬದಲಾವಣೆಗಳು ಬೇಕಾಗಿದ್ದವು ಮತ್ತು ಏಕೆ ಎಂದು ನಮಗೆ ತಿಳಿಸಿ. ಉಳಿದವೆಲ್ಲವೂ ಕಾರ್ಪೊರೇಟ್ ವಾದ ಎಂದು ಪೋಸ್ಟ್ ಮಾಡಿದೆ.
ಇಂಡಿಯನ್ ಯೂಥ್ ಕಾಂಗ್ರೆಸ್ ಮುಂದುವರಿದು, “ಪರಿಚಯಿಸುತ್ತಿದ್ದೇವೆ ಪೆಂಗ್ವಿನ್ ಜನತಾ ಪಕ್ಷ” ಮತ್ತು “ಪೆಂಗ್ವಿನ್ ಹೈ ಯಾ ಪಿಂಜ್ರೆ ಕಾ ಪರಿಂದಾ” ಎಂಬ ನುಡಿಗಟ್ಟುಗಳನ್ನು ಸಹ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಮಹಿಳಾ ಕಾಂಗ್ರೆಸ್ ಮುಖ್ಯಸ್ಥೆ ಅಲ್ಕಾ ಲಾಂಬಾ ಅವರು ಪೆಂಗ್ವಿನ್ ಮತ್ತು ಪಿಆರ್ಎಚ್ಐ “ಬ್ಲಾಕ್ಮೇಲ್ ತಂತ್ರಗಳನ್ನು” ಬಳಸುತ್ತಿವೆ ಎಂದು ಆರೋಪಿಸಿದ್ದು, “ಬೆನ್ನುಬಾಗಲು” ನಿರಾಕರಿಸಿದ್ದಕ್ಕಾಗಿ ಸೋನಿಯಾ ಗಾಂಧಿಯವರನ್ನು ಶ್ಲಾಘಿಸಿದ್ದಾರೆ.
ಕಾಂಗ್ರೆಸ್ನ ಕೇರಳ ಘಟಕವು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪೆಂಗ್ವಿನ್ ಅನ್ನು ತಡೆಯುತ್ತಿರುವ ನವಿಲು ಕೇವಲ ವೃದ್ಧನೊಬ್ಬನ ಕಲ್ಪನೆಯಾಗಿದೆ. ‘ಬಿಲಾಂಗಿಂಗ್’ ನಿಮ್ಮನ್ನು ತಲುಪುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಪೋಸ್ಟ್ ಮಾಡಿದೆ.
ನವೆಂಬರ್ 10 ರಂದು ಪುಸ್ತಕ ಬಿಡುಗಡೆಗೆ ನಿಗದಿಯಾಗಿದೆ ಮತ್ತು ಇದನ್ನು ಯುಎಸ್ ಮೂಲದ ಪ್ರಕಾಶನ ಸಂಸ್ಥೆ ಹಾಗೂ ಪೆಂಗ್ವಿನ್ ರಾಂಡಮ್ ಹೌಸ್ನ ವಿಭಾಗವಾದ ಆಲ್ಫ್ರೆಡ್ ಎ. ನಾಫ್ ಮೊದಲು ಘೋಷಿಸಿತ್ತು. ಪುಸ್ತಕವು ಆರಂಭಿಕವಾಗಿ 100,000 ಪ್ರತಿಗಳ ಮುದ್ರಣವನ್ನು ಹೊಂದಿರುತ್ತದೆ ಎಂದು ನಾಫ್ ಹೇಳಿತ್ತು.
“ಬಿಲಾಂಗಿಂಗ್: ಎ ಜರ್ನಿ ಆಫ್ ಲವ್” ಎಂಬುದು ಸೋನಿಯಾ ಗಾಂಧಿಯವರ ಆತ್ಮಕತೆಯಾಗಿದ್ದು, ಇದು ಅವರ ವೈಯಕ್ತಿಕಯಾತ್ರೆ ಮತ್ತು ಭಾರತದೊಂದಿಗೆ ಅವರ ಸಂಬಂಧವನ್ನು ಒಳಗೊಳ್ಳುವ ನಿರೀಕ್ಷೆಯಿದೆ, ಪುಸ್ತಕದ ಅಂತರರಾಷ್ಟ್ರೀಯ ಪ್ರಕಾಶನವನ್ನು ಆಲ್ಫ್ರೆಡ್ ಎ. ನಾಫ್ ನಿರ್ವಹಿಸುತ್ತಿದೆ.
ಈ ಆತ್ಮಕತೆಯು ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಾವುಗಳು ಸೇರಿದಂತೆ ಸೋನಿಯಾ ಗಾಂಧಿಯವರ ಜೀವನದಲ್ಲಿ ನಡೆದ ಪ್ರಮುಖ ವೈಯಕ್ತಿಕ ದುರಂತಗಳನ್ನು ಹಾಗೂ ಸಾರ್ವಜನಿಕ ಜೀವನಕ್ಕೆ ಅವರ ಪ್ರವೇಶವನ್ನು ತೆರೆದಿಡುವ ನಿರೀಕ್ಷೆಯಿದೆ.
2004 ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲೈಯನ್ಸ್ (ಯುಪಿಎ) ಅಧಿಕಾರಕ್ಕೆ ಬಂದ ನಂತರ ಪ್ರಧಾನಿಯಾಗದಿರಲು ಅವರು ತೆಗೆದುಕೊಂಡ ನಿರ್ಧಾರವನ್ನು ಸಹ ಇದು ತಿಳಿಸುವ ನಿರೀಕ್ಷೆಯಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮುಂಬರುವ ಆತ್ಮಕತೆಗೆ ಪ್ರತಿಕ್ರಿಯಿಸಿದ್ದು, ತಮ್ಮ ತಾಯಿಯನ್ನು “ಮಾಮ” ಎಂದು ಸಂಬೋಧಿಸಿ ಮತ್ತು 1991 ರಲ್ಲಿ ತಮ್ಮ ತಂದೆ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ವರ್ಷಗಳನ್ನು ಸ್ಮರಿಸಿದ್ದಾರೆ.
ಅಪ್ಪ ಬಿಟ್ಟು ಹೋದ ದಿನದಿಂದ, ಜೀವನವು ನಿಮ್ಮ ನೇರಕ್ಕೆ ಬೀಸಿದ ಸವಾಲುಗಳನ್ನು ಅಂತ್ಯವಿಲ್ಲದ ಧೈರ್ಯ ಮತ್ತು ಘನತೆಯಿಂದ ಎದುರಿಸುವುದನ್ನು ನಾನು ನೋಡಿದ್ದೇನೆ ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.
ತಮ್ಮ ತಾಯಿಯನ್ನು ಅನುಸರಿಸಿದ ಮತ್ತು ಬೆಂಬಲಿಸಿದ ಲಕ್ಷಾಂತರ ಜನರಿಗೆ ತಮ್ಮ ಕಥೆಯನ್ನು ಹಂಚಿಕೊಳ್ಳಲು ತಾಯಿ ಆಯ್ಕೆ ಮಾಡಿಕೊಂಡಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ, ಹೆಚ್ಚಾಗಿ ಖಾಸಗಿಯಾಗಿರಿಸಿಕೊಂಡಿದ್ದ ಜೀವನದ ಬಗ್ಗೆ ಸಾರ್ವಜನಿಕವಾಗಿ ಬರೆಯುವುದರ ಕಷ್ಟವನ್ನು ಒಪ್ಪಿಕೊಂಡಿದ್ದಾರೆ.
ಇದು ವಿಶ್ವದ ಅತ್ಯಂತ ಪ್ರಮುಖ ಮಹಿಳಾ ನಾಯಕರಲ್ಲಿ ಒಬ್ಬರಾದವರ “ಆಕರ್ಷಕ ಆತ್ಮಕತೆಯಾಗಿದ್ದು, ಇದು ಪ್ರೀತಿ, ಕುಟುಂಬ ಮತ್ತು ಅಂತ್ಯವಿಲ್ಲದ ಆಕರ್ಷಕ ದೇಶವಾದ ಭಾರತದ ಶ್ರೀಮಂತ ಆಕರ್ಷಕ ಕಥೆಯನ್ನು ಹೇಳುತ್ತದೆ” ಎಂದು ಆಲ್ಫ್ರೆಡ್ ಎ. ನಾಫ್ ಬಣ್ಣಿಸಿದೆ.
ಸರ್ಕಾರವು 2020 ರ ಭಾರತ-ಚೀನಾ ಗಡಿ ಬಿಕ್ಕಟ್ಟು ಮತ್ತು ಅಗ್ನಿಪತ್ ನೇಮಕಾತಿ ಯೋಜನೆಯನ್ನು ನಿರ್ವಹಿಸಿದ ಕುರಿತು ವಿಮರ್ಶಾತ್ಮಕ ಮತ್ತು ಸೂಕ್ಷ್ಮ ವಿಚಾರಗಳನ್ನು ಒಳಗೊಂಡಿದೆ ಎಂದು ವರದಿಯಾಗಿರುವ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾಣೆ ಅವರ “ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ” ಆತ್ಮಕತೆಯನ್ನು ಪ್ರಕಟಿಸದಿರುವ ನಿರ್ಧಾರ ಸೇರಿದಂತೆ ಪಿಆರ್ಎಚ್ಐ ಸುತ್ತಲಿನ ಇತ್ತೀಚಿನ ಇತರ ವಿವಾದಗಳ ನಡುವೆ ಈ ಬೆಳವಣಿಗೆ ಬಂದಿದೆ.
ಜೂನ್ನಲ್ಲಿ, ಮುಝಫರ್ನಗರ ಗಲಭೆಗಳ ಕುರಿತಾದ ಗ್ರಾಫಿಕ್ ಕಾದಂಬರಿಕಾರ ಜೋ ಸ್ಯಾಕೊ ಅವರ “ದಿ ಒನ್ಸ್ ಅಂಡ್ ಫ್ಯೂಚರ್ ರಿಯಾಟ್” ಕೃತಿಯನ್ನು ಕಾನೂನು ಪರಿಶೀಲನೆಯ ಸಮಯದಲ್ಲಿ ಪ್ರಕಾಶಕರು “ವಿಷಯದ ಸಮಸ್ಯೆಗಳನ್ನು” ಎತ್ತಿದ ನಂತರ ಪಿಆರ್ಎಚ್ಐ ಹಿಂತೆಗೆದುಕೊಂಡಿತ್ತು.
https://x.com/PenguinIndia/status/2093249144253190583/photo/1
https://x.com/RahulGandhi/status/2090341208845647960/photo/1












