ಮಕ್ಕಾ ಜಂಟಿ ರಕ್ಷಣಾ ಒಪ್ಪಂದ: ಇಂದು ಇಸ್ತಾನ್‌ಬುಲ್‌ನಲ್ಲಿ ಕಾರ್ಯತಂತ್ರ ಸಮಿತಿಯ ಮೊದಲ ಸಭೆ

0
228

ಸನ್ಮಾರ್ಗ ವಾರ್ತೆ

ರಿಯಾದ್/ಇಸ್ತಾನ್‌ಬುಲ್: ಈ ತಿಂಗಳ 7 ರಂದು ಸೌದಿ ಅರೇಬಿಯಾ, ಟರ್ಕಿ ಮತ್ತು ಪಾಕಿಸ್ತಾನದ ನಡುವೆ ಸಹಿ ಮಾಡಲಾದ ಐತಿಹಾಸಿಕ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ದ ಭಾಗವಾಗಿ ರಚಿಸಲಾದ ಕಾರ್ಯತಂತ್ರದ ರಾಜಕೀಯ ಮತ್ತು ರಕ್ಷಣಾ ಸಮಿತಿಯ ಮೊದಲ ಸಭೆಯು ಸೋಮವಾರ ಇಸ್ತಾನ್‌ಬುಲ್‌ನಲ್ಲಿ ಪ್ರಾರಂಭವಾಗಲಿದೆ.

ಇದು ಮೂರು ದೇಶಗಳ ವಿದೇಶಾಂಗ ಸಚಿವರು, ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ಭಾಗವಹಿಸುವ ಉನ್ನತ ಮಟ್ಟದ ಸಭೆಯಾಗಿದೆ. ಸೌದಿ ವಿದೇಶಾಂಗ ಸಚಿವರಾದ ಪ್ರಿನ್ಸ್ ಫೈಸಲ್ ಬಿನ್ ಫರ್ಹಾನ್, ಟರ್ಕಿಶ್ ವಿದೇಶಾಂಗ ಸಚಿವರಾದ ಹಕನ್ ಫಿದಾನ್ ಮತ್ತು ಪಾಕಿಸ್ತಾನದ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವರಾದ ಮುಹಮ್ಮದ್ ಇಶಾಕ್ ದಾರ್ ಅವರು ವಿದೇಶಾಂಗ ವ್ಯವಹಾರಗಳ ಮಟ್ಟದಲ್ಲಿ ಚರ್ಚೆಗಳ ನೇತೃತ್ವ ವಹಿಸಲಿದ್ದಾರೆ.

ಸೌದಿ ರಕ್ಷಣಾ ಸಚಿವ ಪ್ರಿನ್ಸ್ ಖಾಲೀದ್ ಬಿನ್ ಸಲ್ಮಾನ್, ಟರ್ಕಿಶ್ ರಕ್ಷಣಾ ಸಚಿವ ಯಷಾರ್ ಗುಲೆರ್ ಮತ್ತು ಪಾಕಿಸ್ತಾನದ ರಕ್ಷಣಾ ಸಚಿವ ಖಾವಾಜಾ ಮುಹಮ್ಮದ್ ಆಸಿಫ್ ಕೂಡ ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜೊತೆಗೆ, ಸೌದಿ ಜನರಲ್ ಸ್ಟಾಫ್ ಮುಖ್ಯಸ್ಥ ಫಯಾದ್ ಅಲ್ ರುವೈಲಿ, ಟರ್ಕಿಶ್ ಜನರಲ್ ಸ್ಟಾಫ್ ಮುಖ್ಯಸ್ಥ ಸೆಲ್ಚುಕ್ ಬೈರಾಕ್ತಾರೊಗ್ಲು ಮತ್ತು ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಅವರು ಮಿಲಿಟರಿ ಕಡೆಯಿಂದಲೂ ಪ್ರತಿನಿಧಿಸಲಿದ್ದಾರೆ.

ಒಪ್ಪಂದದ ಅಡಿಯಲ್ಲಿ ಜಾರಿಗೆ ತರಬೇಕಾದ ಕಾರ್ಯತಂತ್ರದ ಚಟುವಟಿಕೆಗಳನ್ನು ಅಂತಿಮಗೊಳಿಸುವುದು ಈ ಸಮಿತಿಯ ಮುಖ್ಯ ಕಾರ್ಯವಾಗಿದೆ. ಸಭೆಯು ಮುಖ್ಯವಾಗಿ ಅಂತರರಾಷ್ಟ್ರೀಯ ಭದ್ರತಾ ಪರಿಸ್ಥಿತಿ, ಮೂರು ದೇಶಗಳ ಸಶಸ್ತ್ರ ಪಡೆಗಳ ನಡುವಿನ ಸಹಕಾರವನ್ನು ಹೆಚ್ಚಿಸುವುದು ಮತ್ತು ರಕ್ಷಣಾ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದರ ಕುರಿತು ಚರ್ಚಿಸಲಿದೆ.

ರಕ್ಷಣಾ ನಿರ್ಮಾಣದ ಕ್ಷೇತ್ರಗಳಲ್ಲಿ ಜಂಟಿ ಉತ್ಪಾದನೆ, ಸಂಶೋಧನೆ ಮತ್ತು ತಾಂತ್ರಿಕ ಅಭಿವೃದ್ಧಿಯಲ್ಲಿ ಸಹಕಾರವನ್ನು ವಿಸ್ತರಿಸುವುದು ಹಾಗೂ ಭಯೋತ್ಪಾದನೆಯ ವಿರುದ್ಧದ ಹೋರಾಟವನ್ನು ಸಂಘಟಿಸುವ ಕ್ರಮಗಳು ಸಹ ಚರ್ಚೆಗಳಲ್ಲಿ ಸೇರಿವೆ. ಸಭೆಯು ಒಪ್ಪಂದದ ಸಾಮಾನ್ಯ ಸಚಿವಾಲಯದ ರಚನೆ, ಅದರ ಆಡಳಿತ ಕಾರ್ಯವಿಧಾನಗಳು ಮತ್ತು ಭವಿಷ್ಯದ ಬೆಳವಣಿಗೆಗಳಿಗಾಗಿ ರೋಡ್‌ಮ್ಯಾಪ್ ಅನ್ನು ರೂಪಿಸಲಿದೆ.

ಈ ಒಪ್ಪಂದವು ಸದ್ರಿ ಪ್ರದೇಶದಲ್ಲಿ ಭದ್ರತೆ, ಶಾಂತಿ ಮತ್ತು ಸ್ಥಿರತೆಯನ್ನು ಖಾತ್ರಿಪಡಿಸುವ ಪ್ರಮುಖ ನೀತಿಯನ್ನು ಸಭೆಯು ಮೌಲ್ಯಮಾಪನ ಮಾಡಲಿದೆ. ಸೌದಿ ಯುವರಾಜ ಮತ್ತು ಪ್ರಧಾನಿ ಅಮೀರ್ ಮೊಹಮ್ಮದ್ ಬಿನ್ ಸಲ್ಮಾನ್, ಟರ್ಕಿಶ್ ಅಧ್ಯಕ್ಷ ರೆಜೆಬ್‌ ತಯ್ಯಿಬ್‌ ಉರ್ದುಗಾನ್ ಮತ್ತು ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಅವರು ಆಗಸ್ಟ್ 7 ರಂದು ಮಕ್ಕಾದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದರು.

ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವುದು ಮತ್ತು ಸಾಮೂಹಿಕ ದೃಢತೆಯನ್ನು ಹೆಚ್ಚಿಸುವುದು ಈ ಒಪ್ಪಂದದ ಗುರಿಯಾಗಿದೆ. ಒಪ್ಪಂದದ ನಿಯಮಗಳ ಪ್ರಕಾರ, ಮೂರು ದೇಶಗಳಲ್ಲಿ ಯಾವುದಾದರೂ ಒಂದು ದೇಶದ ಮೇಲೆ ಸಶಸ್ತ್ರ ದಾಳಿ ನಡೆದರೆ ಅದನ್ನು ಇತರ ಎರಡು ದೇಶಗಳ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ.