✍️ ಏಜಾಝ್ ಅಶ್ರಫ್ ದೆಹಲಿ,
ಹಿರಿಯ ಪತ್ರಕರ್ತರು ಮತ್ತು ಲೇಖಕರು
ಹೊಸ ಮತ್ತು ಸಮೃದ್ಧ ಭಾರತ ನಿರ್ಮಾಣದ ಭಾಷಣಗಳಿಗೂ ಹಾಗೂ ಭಾರತೀಯರ ಪ್ರಸ್ತುತ ಕಠಿಣ ವಾಸ್ತವ ಬದುಕಿಗೂ ನಡುವಿನ ಕಂದಕ ದಿನೇ ದಿನೇ ಹೆಚ್ಚಾಗುವುದನ್ನು ಕಂಡು ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಜೆನ್ ಝಿ (Gen Z) ಯುವಜನತೆಯ ತಾಳ್ಮೆ ಕರಗಿಹೋಯಿತು. ದಬ್ಬಾಳಿಕೆಗೆ ಹೆದರದೆ ಅವರು ಬೀದಿಗಿಳಿದು ಪ್ರತಿಭಟಿಸಿದರು; ಪರಿಣಾಮವಾಗಿ, ಅಜೇಯರೆನಿಸಿದ್ದ ಮೋದಿಯವರನ್ನು ಬಗ್ಗುವಂತೆ ಮಾಡಿದರು. ಈಗ ಅವರ ರಾಜಕೀಯ ಅಧಿಕಾರವು ಗಣನೀಯವಾಗಿ ಕುಸಿದಿದೆ.
ಸುಪ್ರೀಂ ಕೋರ್ಟ್ಗೂ “ಕಾಕ್ರೋಚ್ಗಳ ಚಳವಳಿ” ನೇರವಾಗಿ ಅನ್ವಯಿಸುತ್ತದೆ. ಏಕೆಂದರೆ ನ್ಯಾಯಾಲಯವು ಸಹ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಜಾಗರೂಕ ಕಾವಲುಗಾರನಾಗಿ ತನ್ನ ಪಾತ್ರವನ್ನು ನಿರ್ವಹಿಸುವಲ್ಲಿ ಅದು ವಿಫಲವಾಗುತ್ತಿದ್ದು, ಸ್ವಾತಂತ್ರ್ಯವನ್ನು ಹತ್ತಿಕ್ಕಲು ರಾಜ್ಯಕ್ಕೆ ಅನುವು ಮಾಡಿಕೊಡುತ್ತಿದೆ. ಅಧಿಕಾರಕ್ಕೆ ರೋಬೋಟ್ ರೀತಿಯಲ್ಲಿ ತಲೆಬಾಗುವಂತೆ ಇನ್ನೂ ಪಳಗಿಸಲ್ಪಡದ ಜೆನ್ ಝಿ ಕಾಕ್ರೋಚ್ಗಳು, ಸುಪ್ರೀಂ ಕೋರ್ಟ್ ಅಗತ್ಯ ತಿದ್ದುಪಡಿ ಕ್ರಮಗಳನ್ನು ಕೈಗೊಳ್ಳದ ಹೊರತು ಅದರ ಉಳಿದ ಪ್ರತಿಷ್ಠೆಯನ್ನು ಆವರಿಸಿಕೊಳ್ಳಬಹುದು.
ಈ ಕ್ರಮಗಳಲ್ಲಿ ಒಂದು ಪ್ರಮುಖ ಹೆಜ್ಜೆಯೆಂದರೆ, ಕಳೆದ ಆರು ವರ್ಷಗಳಿಂದ ಜೈಲಿನಲ್ಲಿ ಕಾಲ ಸವೆಸುತ್ತಿರುವ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರನ್ನು ಬಿಡುಗಡೆ ಮಾಡುವುದು. ಪೌರತ್ವ ತಿದ್ದುಪಡಿ ಕಾಯ್ದೆ (CAA) 2019 ರ ವಿರೋಧಿ ಪ್ರತಿಭಟನೆಗಳನ್ನು 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ರಕ್ತಸಿಕ್ತ ಗಲಭೆಯಾಗಿ ಉದ್ದೇಶಪೂರ್ವಕವಾಗಿ ತಿರುಗಿಸಲಾಯಿತು ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಲು ಕಾನೂನುಬಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಪ್ರಕರಣ ದಾಖಲಿಸಲ್ಪಟ್ಟ 18 ಜನರಲ್ಲಿ ಈ ಇಬ್ಬರೂ ಸೇರಿದ್ದಾರೆ. ಭಾರತದ ಭದ್ರತೆಗೆ ಕುತ್ತು ತರುವುದೇ ಅವರ ಗುರಿಯಾಗಿದೆ ಎಂದು ಸರ್ಕಾರ ಆರೋಪಿಸಿ ಅವರನ್ನು ಭಯೋತ್ಪಾದನೆ ಕಾಯ್ದೆಯಡಿ ಬಂಧಿಸಿತು (ನಂತರ ಆರೋಪಿಗಳ ಪಟ್ಟಿ 21 ಕ್ಕೆ ಏರಿತು).
ಗಲಭೆಗಳ ಕುರಿತು ಸರ್ಕಾರದ ವಾದವು ಜನರು ಅನುಭವಿಸಿದ ವಾಸ್ತವಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಬಿಜೆಪಿಯ ಅನುರಾಗ್ ಠಾಕೂರ್ ಮತ್ತು ಪರ್ವೇಶ್ ವರ್ಮಾ ಸಿಎಎ ವಿರೋಧಿ ಪ್ರತಿಭಟನೆಗಳ ವಿರುದ್ಧ ಉದ್ರೇಕಕಾರಿ ಭಾಷಣಗಳನ್ನು ಮಾಡಿದ್ದರು. 2020 ರ ಫೆಬ್ರವರಿಯಲ್ಲಿ, ಸಿಎಎ ವಿರೋಧಿ ಧರಣಿಯನ್ನು ಬಲವಂತವಾಗಿ ತೆರವುಗೊಳಿಸುವುದಾಗಿ ಮತ್ತೊಬ್ಬ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಬೆದರಿಕೆ ಹಾಕಿದ ನಂತರ ಈಶಾನ್ಯ ದೆಹಲಿಯು ಹೊತ್ತಿಕೊಂಡಿತು.
ಬ್ಯಾಕ್ಪ್ಯಾಕ್ನಲ್ಲಿ ಕಲ್ಲುಗಳನ್ನು ಹೊತ್ತುಕೊಂಡ ಮುಖವಾಡಧಾರಿಗಳು ಆಸುಪಾಸಿನ ಬೀದಿಗಳಲ್ಲಿ ಅಲೆಯುತ್ತಾ, ಮಸೀದಿಗಳನ್ನು ದಹಿಸಿ, ಅಲ್ಪಸಂಖ್ಯಾತರ ಅಂಗಡಿಗಳನ್ನು ದೋಚಿ, ಅಮಾಯಕರ ಜೀವಗಳನ್ನು ಬಲಿ ತೆಗೆದುಕೊಂಡರು. ಪ್ರಭುತ್ವದ ಪಕ್ಷಪಾತದ ಕೃತ್ಯದಿಂದ ಉಂಟಾದ ಆ ರಕ್ತಪಾತದಲ್ಲಿ ಪ್ರಾಣ ಕಳೆದುಕೊಂಡ 54 ಜೀವಗಳಲ್ಲಿ ಮೂರನೇ ಎರಡರಷ್ಟು ಭಾಗ ಮುಸ್ಲಿಮರೇ ಆಗಿದ್ದರು. ಈ ರೀತಿಯ ಘೋರ ಕೃತ್ಯ ಎಸಗಿದವರನ್ನು ವಿಚಾರಣೆಗೆ ಗುರಿಪಡಿಸುವುದು ಹಾಗಿರಲಿ, ಕಪಿಲ್ ಮಿಶ್ರಾ ಹಾಗೂ ಪರ್ವೇಶ್ ವರ್ಮಾ ಇಂದು ದೆಹಲಿ ಸರ್ಕಾರದ ಮಂತ್ರಿಗಳಾಗಿದ್ದಾರೆ ಮತ್ತು ಅನುರಾಗ್ ಠಾಕೂರ್ ಸಂಸತ್ ಸದಸ್ಯರಾಗಿದ್ದಾರೆ.
ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿ 2020ರಲ್ಲಿ ಅರೆಸ್ಟ್ ಮಾಡಿ ಚಾರ್ಜ್ಶೀಟ್ ಹಾಕಿದ ಆ 18 ಜನರ ಪರಿಸ್ಥಿತಿಯೊಂದಿಗೆ ಇವರ ಇವತ್ತಿನ ಸ್ಥಿತಿಯನ್ನು ಹೋಲಿಸಿ ನೋಡಿ. ಯುಎಪಿಎ ಕಾನೂನಿನ ಪ್ರಕಾರ, ಆರೋಪಿಗಳ ಮೇಲಿನ ಆರೋಪಗಳು ಮೇಲ್ನೋಟಕ್ಕೆ(prima facie) ಸತ್ಯವೆಂದು ಕೋರ್ಟಿಗೆ ಅನಿಸಿದರೆ ಅಂಥವರಿಗೆ ಜಾಮೀನು ಕೊಡಲು ನಿರಾಕರಿಸಬಹುದು. ‘ಪ್ರೈಮಾ ಫೇಸಿ'(prima facie) ಎಂದರೆ ಮೇಲ್ನೋಟಕ್ಕೆ ಅಥವಾ ಮೊದಲ ನೋಟಕ್ಕೆ ಎಂದರ್ಥ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ ಈ ವ್ಯಾಖ್ಯಾನದಿಂದಾಗಿ ಜಡ್ಜ್ಗಳು ಆರೋಪಿಗಳ ಮೇಲಿನ ಸಾಕ್ಷ್ಯಗಳನ್ನು ಮೇಲ್ಮೈ ಮಟ್ಟದಲ್ಲೂ ಕೂಡ ಪರಿಶೀಲನೆ ಮಾಡದಂತೆ ನಿರ್ಬಂಧಕ್ಕೆ ಒಳಗಾಗುತ್ತಾರೆ. ಹೀಗಾಗಿ, ಸ್ವಲ್ಪವೂ ನಿಜಾಂಶವಿಲ್ಲದ ಬರೀ ಕಲ್ಪನೆಯ ಕಥೆಯೊಂದು, ಜೈಲಿನಲ್ಲಿರುವವರಿಗೆ ಆರ್ಟಿಕಲ್ 21 ರಡಿ ಸಿಗಬೇಕಾದ ಸ್ವಾತಂತ್ರ್ಯದ ಹಕ್ಕನ್ನು ಕಸಿದುಕೊಳ್ಳಲು ದೊಡ್ಡ ಕಾರಣವಾಗಿಬಿಡುತ್ತದೆ.
ಮೂವರಿಗೆ ಜಾಮೀನು
ಒಂದು ವರ್ಷದ ನಂತರ, ಅಂದರೆ 2021 ರ ಜೂನ್ನಲ್ಲಿ ಇದರ ವಿರುದ್ಧವಾದ ಘಟನೆ ನಡೆಯಿತು. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಅನುಪ್ ಜೆ. ಭಂಬಾನಿ ಅವರು ಇಬ್ಬರು ಸದಸ್ಯರ ಪೀಠದ ಪರವಾಗಿ ಆಸಿಫ್ ಇಕ್ಬಾಲ್ ತನ್ಹಾ, ನತಾಶಾ ನರ್ವಾಲ್ ಮತ್ತು ದೇವಂಗನಾ ಕಲಿತಾ ಎಂಬ ಮೂವರು ಆರೋಪಿಗಳಿಗೆ ಜಾಮೀನು ನೀಡಿ ಮೂರು ಆದೇಶಗಳನ್ನು ಹೊರಡಿಸಿದರು. ಭಯೋತ್ಪಾದನೆಯ ವ್ಯಾಖ್ಯಾನವನ್ನು ವಿಶ್ಲೇಷಿಸುತ್ತಾ, ಈ ಮೂವರ ಕೃತ್ಯಗಳು “ಶಾಂತಿಯುತ ಪ್ರತಿಭಟನೆಯ ಗೆರೆಯನ್ನು” ದಾಟಿರಬಹುದು, ಆದರೆ ಇವು “ಯುಎಪಿಎ ಅಡಿಯಲ್ಲಿ ಗ್ರಹಿಸಲಾದ ಭಯೋತ್ಪಾದಕ ಕೃತ್ಯ” ಆಗುವುದಿಲ್ಲ ಎಂದು ಭಂಬಾನಿ ಬರೆದಿದ್ದಾರೆ.
ಸಂವಿಧಾನಬದ್ಧವಾಗಿ ಖಾತರಿಪಡಿಸಿದ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದಕ ಚಟುವಟಿಕೆಯ ನಡುವಿನ ಗೆರೆಯನ್ನು ಮಸುಕುಗೊಳಿಸುತ್ತಿರುವ ರಾಜ್ಯದ ಧೋರಣೆಯನ್ನು ಭಂಬಾನಿ ತರಾಟೆಗೆ ತೆಗೆದುಕೊಂಡರು. “ಅಂತಹ ಮಸುಕುಗೊಳಿಸುವಿಕೆಯು ಪ್ರಬಲವಾದರೆ, ಪ್ರಜಾಪ್ರಭುತ್ವವು ಅಪಾಯದಲ್ಲಿ ಸಿಲುಕುತ್ತದೆ” ಎಂದು ಅವರು ಹೇಳಿದರು.
ಉಳಿದ 14 ಜನರಿಗೆ (ಒಬ್ಬ ಆರೋಪಿಯನ್ನು 2020 ರಲ್ಲಿ ಮಾನವೀಯತೆಯ ಆಧಾರದ ಮೇಲೆ ಬಿಡುಗಡೆ ಮಾಡಲಾಯಿತು) ಜಾಮೀನು ನೀಡಲು ಭಂಬಾನಿ ಅವರ ಆದೇಶಗಳನ್ನು ಸುಪ್ರೀಂ ಕೋರ್ಟ್ ಒಂದು ಆಧಾರವಾಗಿ ಬಳಸಿಕೊಳ್ಳಬೇಕಿತ್ತು. ಆದರೆ ಜಾಗರೂಕ ಕಾವಲುಗಾರನಾಗಬೇಕಿದ್ದ ನ್ಯಾಯಾಲಯವು ಇದಕ್ಕೆ ವಿರುದ್ಧವಾಗಿ ಮಾಡಿತು: ಇತರರ ಜಾಮೀನು ಅರ್ಜಿಗಳ ವಿಚಾರಣೆಯಲ್ಲಿ ಭಂಬಾನಿ ಅವರ ಆದೇಶಗಳನ್ನು ನಿದರ್ಶನವಾಗಿ (precedent) ಉಲ್ಲೇಖಿಸುವಂತಿಲ್ಲ ಎಂದು ಅದು ಹೇಳಿತು.
ಸುಪ್ರೀಂ ಕೋರ್ಟ್ ಕಾವಲುಗಾರನ ಪಾತ್ರವನ್ನು ನಿರ್ವಹಿಸಲು ನಿರಾಕರಿಸಿದ ಕಾರಣ, ಆ 14 ಜನರ ಸೆರೆವಾಸವು ಅವರಿಗೆ ಅಂತ್ಯವಿಲ್ಲದ ಯಾತನೆಯಾಗಿ ಮಾರ್ಪಟ್ಟಿತು. ಮುಂದಿನ ಐದು ವರ್ಷಗಳಲ್ಲಿ, ಅವರ ಜಾಮೀನು ಅರ್ಜಿಗಳನ್ನು ವಿವಿಧ ನ್ಯಾಯಾಲಯಗಳಲ್ಲಿ ಒಂದು ಪೀಠದಿಂದ ಮತ್ತೊಂದು ಪೀಠಕ್ಕೆ ಎಸೆಯಲಾಯಿತು, ಮತ್ತು ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿದರು (recused). ಅಥವಾ ನ್ಯಾಯಾಧೀಶರು ವಾದಗಳನ್ನು ಪೂರ್ಣಗೊಳಿಸಿದರೂ ತಿಂಗಳಗಟ್ಟಲೆ ಆದೇಶಗಳನ್ನು ಹೊರಡಿಸದೆ, ನಂತರ ಬೇರೆಡೆಗೆ ವರ್ಗಾವಣೆಗೊಂಡರು. ಇದರಿಂದಾಗಿ ಜಾಮೀನು ಪ್ರಕ್ರಿಯೆಯು ಮೊದಲಿನಿಂದ ಆರಂಭಗೊಳ್ಳಬೇಕಾಯಿತು.
ಅಲ್ಲದೆ ಕೆಟ್ಟ ಸಂಗತಿಯೆಂದರೆ, ಸುಪ್ರೀಂ ಕೋರ್ಟ್ನಲ್ಲಿ ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯನ್ನು ಮೋದಿ ಸರ್ಕಾರದ ಇಷ್ಟಕ್ಕೆ ತಕ್ಕಂತೆ ಆದೇಶಗಳನ್ನು ಹೊರಡಿಸುವಲ್ಲಿ ಹೆಸರುವಾಸಿಯಾದ ನ್ಯಾಯಮೂರ್ತಿ ಬೇಲಾ ತ್ರಿವೇದಿ ಅವರಿಗೆ ಪದೇ ಪದೇ ಹಂಚಿಕೆ ಮಾಡಲಾಯಿತು. ಉಮರ್ ಖಾಲಿದ್ ವಿಷಯದಲ್ಲಿ, ಅವರಿಗೆ ಯಾವುದೇ ಪರಿಹಾರ ಸಿಗುವುದನ್ನು ಬಿಜೆಪಿ ಬಯಸುವುದಿಲ್ಲ ಎಂದು ಸಾರ್ವಜನಿಕವಾಗಿ ಗ್ರಹಿಸಲಾಯಿತು. ಉಮರ್ ಖಾಲಿದ್ ಅವರು ಸುಪ್ರೀಂ ಕೋರ್ಟ್ನಿಂದ ತಮ್ಮ ಅರ್ಜಿಯನ್ನು ಹಿಂತೆಗೆದುಕೊಂಡರು. ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ತ್ರಿವೇದಿ ಅವರು ಅಲ್ಲಿ ಕಾನೂನು ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.
2025 ರಲ್ಲಿ, ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ ಏಳು ಆರೋಪಿಗಳ ಜಾಮೀನು ಅರ್ಜಿಗಳನ್ನು ಒಟ್ಟಿಗೆ ಸೇರಿಸಿ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠಕ್ಕೆ ವಹಿಸಲಾಯಿತು. ಈ ಸಂದರ್ಭದಲ್ಲೂ ನ್ಯಾಯ ನಿರಾಕರಿಸಲ್ಪಡುತ್ತದೆ ಎಂಬ ಆತಂಕವಿತ್ತು. ಏಕೆಂದರೆ, ಗುರುವಿಂದರ್ ಸಿಂಗ್ ವರ್ಸಸ್ ಪಂಜಾಬ್ ರಾಜ್ಯ ಪ್ರಕರಣದಲ್ಲಿ “ಜೈಲಿಗಿಂತ ಜಾಮೀನು” ಎಂಬ ತತ್ವವು ಯುಎಪಿಎ ಕೈದಿಗಳಿಗೆ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಅರವಿಂದ್ ಕುಮಾರ್ ಈಗಾಗಲೇ ಅಭಿಪ್ರಾಯಪಟ್ಟಿದ್ದರು; ಮತ್ತು ವಿಚಾರಣೆಯು ಮುಗಿಯುವ ಹಂತದಲ್ಲಿಲ್ಲದಿದ್ದರೂ ಸಹ ದೀರ್ಘಾವಧಿಯ ಸೆರೆವಾಸವು ಅವರನ್ನು ಬಿಡುಗಡೆ ಮಾಡಲು ಕಾರಣವಾಗಲು ಸಾಧ್ಯವಿಲ್ಲ ಎಂದಿದ್ದರು. ಆರೋಪದಲ್ಲಿ ಅವರ ಪಾತ್ರದ ಗಂಭೀರತೆಯನ್ನು ನ್ಯಾಯಾಲಯಗಳು ಪರಿಶೀಲಿಸಬೇಕು ಮತ್ತು ಅದು ಮೇಲ್ನೋಟಕ್ಕೆ(prima facie) ನಿಜವೇ ಎಂದು ನಿರ್ಧರಿಸಬೇಕು ಎಂದು ಅವರು ಹೇಳಿದ್ದರು.
ಯುಎಪಿಎ ಕೈದಿಗಳ ಕುರಿತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರ ನಿಲುವು ಹೀಗಿರುವಾಗ, ಈ ಪ್ರಕರಣವನ್ನು ಅವರಿಗೆ ವಹಿಸಬೇಕಿತ್ತೇ? ಆಶ್ಚರ್ಯವೇನಿಲ್ಲ, ಅನೇಕರು ತಮ್ಮ ಜಾಮೀನು ಅರ್ಜಿಗಳು ತಿರಸ್ಕರಿಸಲ್ಪಡುತ್ತವೆ ಎಂದು ಭಾವಿಸಿದ್ದರು. ಆದಾಗ್ಯೂ, ನ್ಯಾಯಮೂರ್ತಿಗಳಾದ ಅರವಿಂದ್ ಮತ್ತು ಅಂಜಾರಿಯಾ ಅವರು ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದರು. ಆದರೆ ಸಿಎಎ ವಿರೋಧಿ ಪ್ರತಿಭಟನೆಗಳ ಅತ್ಯಂತ ಜನಪ್ರಿಯ ಮುಖಗಳಾದ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರಿಗೆ ನೀಡಲಿಲ್ಲ. 2020 ರ ಗಲಭೆಗಳನ್ನು, ಅಂದರೆ ಭಯೋತ್ಪಾದನೆಯನ್ನು ಪ್ರಚೋದಿಸುವಲ್ಲಿ ಈ ಇಬ್ಬರೂ ನಾಯಕತ್ವದ ಪಾತ್ರವನ್ನು ವಹಿಸಿದ್ದಾರೆ ಮತ್ತು ಆದ್ದರಿಂದ ಅವರನ್ನು ಇತರರಿಗಿಂತ ವಿಭಿನ್ನವಾಗಿ ಪರಿಗಣಿಸಬೇಕು ಎಂದು ನ್ಯಾಯಾಧೀಶರು ಹೇಳಿದರು. ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ(prima facie) ನಿಜವೆಂದು ಅವರು ಕಂಡುಕೊಂಡರು.
ವಿಲಕ್ಷಣವೆಂಬಂತೆ, ವಿಚಾರಣೆಯ ಅಡಿಯಲಿರುವ ಪ್ರತಿಯೊಬ್ಬ ಸಂರಕ್ಷಿತ ಸಾಕ್ಷಿಗಳ ಮರುಪರಿಶೀಲನೆಯ ಬಳಿಕ ಅಥವಾ ಒಂದು ವರ್ಷದ ಅವಧಿ ಮುಗಿದ ನಂತರ, ಯಾವುದು ಮೊದಲು ಬರುತ್ತದೋ ಅದರಂತೆ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಜಾಮೀನಿಗಾಗಿ ಮತ್ತೆ ಅರ್ಜಿ ಸಲ್ಲಿಸಬಹುದು ಎಂದು ಅವರು ಹೇಳಿದರು. ಇದು ವಿಚಿತ್ರವಾಗಿದೆ, ಏಕೆಂದರೆ ದೆಹಲಿ ಗಲಭೆ ಪ್ರಕರಣದಲ್ಲಿ ಇನ್ನೂ ಆರೋಪಗಳನ್ನು ನಿಗದಿಪಡಿಸಲಾಗಿಲ್ಲ. ಹೇಗಿದ್ದರೂ ಕೆಲವೇ ತಿಂಗಳುಗಳಲ್ಲಿ 40 ಕ್ಕೂ ಹೆಚ್ಚು ಸಂರಕ್ಷಿತ ಸಾಕ್ಷಿಗಳನ್ನು ವಿಚಾರಣೆ ಮಾಡುವುದು ಅಸಾಧ್ಯ. ಶರ್ಜಿಲ್ ಇಮಾಮ್ ಮತ್ತು ಉಮರ್ ಖಾಲಿದ್ ಮೇಲೆ ಗರಿಷ್ಠ ಒಂದು ವರ್ಷದ ನಿರ್ಬಂಧವನ್ನು ವಿಧಿಸುವ ಸ್ಪಷ್ಟ ಔದಾರ್ಯದ ಅರ್ಥ ಏನೆಂದರೆ, ಈ ಇಬ್ಬರೂ ಹೆಚ್ಚು ಕಾಲ ಜೈಲಿನಲ್ಲಿ ಕೊಳೆಯಲಿದ್ದಾರೆ ಎಂದೇ ಆಗಿದೆ.
2026 ರ ಮೇ ತಿಂಗಳಲ್ಲಿ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರ ದುರಂತ ಕಥೆಗೆ ಒಂದು ಸ್ವಾಗತಾರ್ಹ ತಿರುವು ಸಿಕ್ಕಿತು. ಸೈಯದ್ ಇಫ್ತಿಕಾರ್ ಅಂದ್ರಬಿ ಪ್ರಕರಣದ ವಿಚಾರಣೆಯ ವೇಳೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರು, ಕೆ.ಎ. ನಜೀಬ್ ಪ್ರಕರಣದಲ್ಲಿ ಮೂವರು ನ್ಯಾಯಾಧೀಶರ ಪೀಠದ ತೀರ್ಪನ್ನು ಪಾಲಿಸದೆ ಉಲ್ಲಂಘಿಸಿದ್ದಕ್ಕಾಗಿ ಅರವಿಂದ್ ಕುಮಾರ್ ಮತ್ತು ಅಂಜಾರಿಯಾ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು. ಯುಎಪಿಎ ಅಡಿಯಲ್ಲಿ ದಾಖಲಾದ ಅಪರಾಧಗಳು ಎಷ್ಟೇ ಗಂಭೀರ ಸ್ವರೂಪದ್ದಾಗಿರಲಿ, ವಿಚಾರಣೆಯಲ್ಲಿ ಉಂಟಾಗುವ ವಿಳಂಬ ಹಾಗೂ ಸುದೀರ್ಘ ವಿಚಾರಣಾಪೂರ್ವ ಸೆರೆವಾಸವೇ ಜಾಮೀನು ಮಂಜೂರು ಮಾಡುವ ಪರವಾಗಿ ತಕ್ಕಡಿ ತೂಗುವಂತೆ ಮಾಡಬೇಕು ಎಂದು ಅಂದ್ರಬಿ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿತ್ತು. ದೊಡ್ಡ ಪೀಠವು ಹಾಕಿಕೊಟ್ಟ ಈ ಕಾನೂನಿನ ಚೌಕಟ್ಟಿಗೆ ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಹಾಗೂ ಅಂಜಾರಿಯಾ ಅವರ ದ್ವಿಸದಸ್ಯ ಪೀಠವು ಸಂಪೂರ್ಣವಾಗಿ ಬದ್ಧವಾಗಿರಬೇಕಿತ್ತು ಎಂದು ನಾಗರತ್ನ ಮತ್ತು ಭುಯಾನ್ ಅವರು ಗಮನಸೆಳೆದರು.
ಅಂದ್ರಬಿ ತೀರ್ಪಿನಿಂದಾಗಿ ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರಿಗೆ ಜಾಮೀನು ಕೋರಲು “ಹೊಸ ಸಂದರ್ಭಗಳು” ಸೃಷ್ಟಿಯಾದವು, ಮತ್ತು ಅವರು ಹಾಗೆಯೇ ಮಾಡಿದರು. ಮೇ ತಿಂಗಳಲ್ಲಿ, ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪಿ.ಬಿ. ವರಾಲೆ ಅವರು ಖಾಲಿದ್ ಸೈಫಿ ಮತ್ತು ತಸ್ಲೀಮ್ ಅಹ್ಮದ್ ಅವರಿಗೆ ಆರು ತಿಂಗಳ ಮಧ್ಯಂತರ ಪರಿಹಾರವನ್ನು ನೀಡಿದರು. ಆದರೆ, ಯುಎಪಿಎ ಪ್ರಕರಣಗಳಲ್ಲಿ ಜಾಮೀನು ಅರ್ಜಿಗಳನ್ನು ನಿರ್ಧರಿಸಲು ನಜೀಬ್ ಪ್ರಕರಣದ ತೀರ್ಪನ್ನು ಹೇಗೆ ಅನ್ವಯಿಸಬೇಕು ಎಂಬುದನ್ನು ನಿರ್ಧರಿಸಲು ದೊಡ್ಡ ಪೀಠಕ್ಕೆ ಉಲ್ಲೇಖಿಸಿದರು. ಈ ನಿರ್ಣಯವನ್ನು ಕೈಗೊಳ್ಳುವವರೆಗೆ, ಈ ಇಬ್ಬರಿಗೂ ಜಾಮೀನು ಸಿಗುವುದು ಅಸಂಭವವಾಗಿದೆ. ದೊಡ್ಡ ಪೀಠವನ್ನು ಸುಪ್ರೀಂ ಕೋರ್ಟ್ ಇನ್ನೂ ರಚಿಸಬೇಕಿದೆ. ಹೀಗೆ ಮಾಡಲು ವಿಳಂಬ ಮಾಡುತ್ತಿರುವುದು ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರ ಸಂಕಟವನ್ನು ದಿನದಿಂದ ದಿನಕ್ಕೆ ಆಳವಾಗಿಸುತ್ತಿದೆ.
ಕಳಂಕ
ಶರ್ಜಿಲ್ ಇಮಾಮ್ ಮತ್ತು ಉಮರ್ ಖಾಲಿದ್ ಅವರ ದೀರ್ಘಕಾಲದ ಸೆರೆವಾಸವು ಅವರನ್ನು ತೀವ್ರವಾಗಿ ಕಳಂಕಿತರನ್ನಾಗಿ ಮಾಡಿದೆ. ಉದಾಹರಣೆಗೆ, ಪ್ರಶ್ನೆಪತ್ರಿಕೆ ಸೋರಿಕೆಯ ವಿರುದ್ಧ ಪ್ರತಿಭಟಿಸಿದವರು ಉಮರ್ ಖಾಲಿದ್ ಬಿಡುಗಡೆಗೆ ಕೋರುವ ಫಲಕಗಳನ್ನು ಹಿಡಿದಿರುವುದೇಕೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಾರ್ವಜನಿಕವಾಗಿ ಪ್ರಶ್ನಿದ್ದಾರೆ. 2001 ರ ಸಂಸತ್ ದಾಳಿಯಲ್ಲಿ ತಮ್ಮ ಪಾತ್ರಕ್ಕಾಗಿ ಗಲ್ಲಿಗೇರಿಸಲ್ಪಟ್ಟ ಅಫ್ಜಲ್ ಗುರುವಿಗೂ ಉಮರ್ ಖಾಲಿದ್ಗೂ ನಂಟಿದ್ದಾರೆ ಎಂದೂ ಸಾವಂತ್ ಆರೋಪಿಸಿದ್ದಾರೆ.
ಉಮರ್ ಖಾಲಿದ್ ವಿರುದ್ಧ ಸಾವಂತ್ ಅವರ ಈ ಆಕ್ರೋಶವು, ಭಾರತದಾದ್ಯಂತ ಇತ್ತೀಚಿನ ಪ್ರತಿಭಟನೆಗಳಲ್ಲಿ ಆತನ ಬಿಡುಗಡೆಗೆ ಒತ್ತಾಯಿಸುತ್ತಿರುವ ಕಾಕ್ರೋಚ್ಗಳ ಬಗ್ಗೆ ಅವರಿಗೂ ಮತ್ತು ಬಿಜೆಪಿಗೂ ಇರುವ ನಡುಕದ ಅಭಿವ್ಯಕ್ತಿಯಾಗಿದೆ. ಜೆನ್ ಝಿ ಪೀಳಿಗೆಯಲ್ಲಿ ಹಿಂದೂತ್ವವು ಅವರ ಪೋಷಕರಷ್ಟು ಆಳವಾಗಿ ಬೇರೂರಿಲ್ಲ. ಜಂತರ್ ಮಂತರ್ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಕಾಕ್ರೋಚ್ ಜನತಾ ಪಾರ್ಟಿಯ ಸಂಸ್ಥಾಪಕ ಅಭಿಜಿತ್ ದೀಪ್ಕೆ, ತನ್ನ ಹೆಸರು ಉಮರ್ ಖಾಲಿದ್ ಆಗಿರುತ್ತಿದ್ದರೆ ತನಗೆ ಆಂದೋಲನ ನಡೆಸಲು ಅವಕಾಶ ನೀಡುತ್ತಿರಲಿಲ್ಲ ಎಂದು ಹೇಳಿದ್ದರು. ಸಿಜೆಪಿ ವಕ್ತಾರ ಸೌರವ್ ದಾಸ್ ಡಿಸೆಂಬರ್ನಲ್ಲಿ ಉಮರ್ ಖಾಲಿದ್ ಕುರಿತು ಟ್ವೀಟ್ ಮಾಡುತ್ತಾ, “ಅವರಿಗೆ ಮತ್ತು ಎಂದಿಗೂ ಮಣ್ಣಾಗದ ಅವರ ಚೈತನ್ಯಕ್ಕೆ ನನ್ನ ಗೌರವಗಳು” ಎಂದಿದ್ದರು.
ನಿಜಕ್ಕೂ, 2026 ರ ಬ್ಯಾಚ್ನ ಪ್ರತಿಭಟನಾಕಾರರು 2019 ರ ಸಿಎಎ ವಿರೋಧಿ ಆಂದೋಲನಕಾರರಿಂದ ಸ್ಪೂರ್ತಿ ಪಡೆದಿದ್ದಾರೆ. ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಬಗ್ಗೆ ಅವರಿಗೆ ಇದ್ದ ಸಹಾನುಭೂತಿಯು ಜಂತರ್ ಮಂತರ್ನಲ್ಲಿ ಸ್ಪಷ್ಟವಾಗಿ ಗೋಚರಿಸಿತು. ಆದ್ದರಿಂದ, ಸ್ವಾತಂತ್ರ್ಯ(Liberty) ವನ್ನು ರಕ್ಷಿಸದ ಸುಪ್ರೀಂ ಕೋರ್ಟ್ ವಿರುದ್ಧ ಕಾಕ್ರೋಚ್ಗಳು ತಮ್ಮ ಆಕ್ರೋಶವನ್ನು ಹೊರಹಾಕುವ ಮುನ್ನ, ಅದು ಉಮರ್ ಖಾಲಿದ್ ಮತ್ತು ಶರ್ಜಿಲ್ ಇಮಾಮ್ ಅವರನ್ನು ಬಿಡುಗಡೆ ಮಾಡಬೇಕು. ಅದು ನ್ಯಾಯಯುತವಾಗಿರುತ್ತದೆ ಮತ್ತು ಸುಪ್ರೀಂ ಕೋರ್ಟ್ನ ಘನತೆಯನ್ನು ಮರುಸ್ಥಾಪಿಸುತ್ತದೆ.
ಕೃಪೆ: frontline












