ಸನ್ಮಾರ್ಗ ವಾರ್ತೆ
ಬೆಂಗಳೂರು: 2023ರ ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕ ರಾಜ್ಯ ಯುವ ಆಯೋಗವನ್ನು ತಕ್ಷಣವೇ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಂಡು, ಈ ಕುರಿತು ಮಾನ್ಯ ಮುಖ್ಯಮಂತ್ರಿ ಅವರಿಗೆ ಶಿಫಾರಸು ಮಾಡುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯೆ ಹಾಗೂ ಅರ್ಜಿಗಳ ಸಮಿತಿ ಸದಸ್ಯರಾದ ಬಲ್ಕೀಸ್ ಬಾನು ಅವರಿಗೆ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಕರ್ನಾಟಕದ ವತಿಯಿಂದ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಸಿದ ಸಂದರ್ಭದಲ್ಲಿ, ರಾಜ್ಯದ ಯುವಜನರ ಹಿತಾಸಕ್ತಿಗಳನ್ನು ಪ್ರತಿನಿಧಿಸುವ, ಅವರ ಸಮಸ್ಯೆಗಳಿಗೆ ನೀತಿ ಮಟ್ಟದಲ್ಲಿ ಸ್ಪಂದಿಸುವ ಹಾಗೂ ಯುವಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಯುವ ಆಯೋಗದ ಸ್ಥಾಪನೆ ಅತ್ಯಂತ ಅಗತ್ಯವಾಗಿದೆ ಎಂದು ವಿವರಿಸಲಾಯಿತು.
ಅದೇ ವೇಳೆ, ರಾಜ್ಯದ ಯುವಜನರನ್ನು ಸಾಮಾಜಿಕ, ಪ್ರಜಾಸತ್ತಾತ್ಮಕ ಮತ್ತು ಅಭಿವೃದ್ಧಿಯ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಘೋಷಿಸಿರುವ ಭಾರತ್ ಜೋಡೋ ಯುವ ಸಂಘಟನೆ ರಚನೆಯ ನಿರ್ಧಾರವನ್ನು ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಸ್ವಾಗತಿಸಿತು. ಇದರ ಜೊತೆಗೆ, ರಾಜ್ಯ ಯುವ ಆಯೋಗವನ್ನು ಸ್ಥಾಪಿಸಿದಲ್ಲಿ ಯುವಪರ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಹಾಗೂ ಯುವಜನರ ಪಾಲ್ಗೊಳ್ಳುವಿಕೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದು ತಿಳಿಸಲಾಯಿತು.
ಇದಕ್ಕೆ ಸ್ಪಂದಿಸಿದ ಬಲ್ಕೀಸ್ ಬಾನು ಅವರು, ಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ಅವರು ಯುವಜನತೆಯ ಪರವಾಗಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ. ಯುವ ಆಯೋಗ ಸ್ಥಾಪಿಸುವ ಸಂಬಂಧ ಪತ್ರ ಬರೆದು, ಅವರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ತೀರ್ಥಹಳ್ಳಿ, ಸುಹೈಲ್ ಮಸುಲ್ದಾರ್ ಹಾಗೂ ರಾಜ್ಯ ಮಾಧ್ಯಮ ಸಂಯೋಜಕರಾದ ಇರ್ಷಾದ್ ವೇಣೂರು ಉಪಸ್ಥಿತರಿದ್ದರು.












