ಸನ್ಮಾರ್ಗ ವಾರ್ತೆ
ಬಾಗಲಕೋಟೆ: ಬಾಗಲಕೋಟೆಯ ಮುಗಳೊಳ್ಳಿ ಎಲ್.ಟಿ.-1ರಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಛಾವಣಿ ಕುಸಿದು ಎಂಟು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆಗೆ ಸಂಬಂಧಿಸಿದಂತೆ, ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ (ಎಸ್ಐಒ) ಕರ್ನಾಟಕ ರಾಜ್ಯ ಕಾರ್ಯದರ್ಶಿ ಯೂಸುಫ್ ಸಖ್ಲೈನ್ ಅವರ ನೇತೃತ್ವದ ನಿಯೋಗವು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಶಾಲಾ ಆವರಣವನ್ನು ಪರಿಶೀಲಿಸಿದ ಬಳಿಕ ನಿಯೋಗವು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಭೇಟಿಯಾಗಿ, ಅವರ ಆರೋಗ್ಯ ಮತ್ತು ಪರಿಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಯೂಸುಫ್ ಸಖ್ಲೈನ್ ಅವರು, “ಈ ಸಂಕಷ್ಟದ ಸಮಯದಲ್ಲಿ ಸಂತ್ರಸ್ತ ಕುಟುಂಬಗಳ ಪರವಾಗಿ ನಾವು ನಿಲ್ಲುತ್ತೇವೆ. ನ್ಯಾಯ ಸಿಗುವವರೆಗೆ ಮತ್ತು ಸಂಪೂರ್ಣ ಪರಿಹಾರ ದೊರೆಯುವವರೆಗೆ ನಿಮ್ಮೊಂದಿಗಿರುತ್ತೇವೆ” ಎಂದು ಪೋಷಕರಿಗೆ ಧೈರ್ಯ ತುಂಬಿದರು.
ಘಟನೆಗೆ ಸಂಬಂಧಿಸಿದಂತೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ಐಒ ಕರ್ನಾಟಕವು ರಾಜ್ಯದ ಮುಖ್ಯಮಂತ್ರಿಗಳಿಗೆ ಅಧಿಕೃತ ಮನವಿ ಸಲ್ಲಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ಕಂಡುಬರುವ ನಿರ್ಲಕ್ಷ್ಯವನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಶಾಲಾ ಕಟ್ಟಡಗಳ ಸುರಕ್ಷತೆಯ ಬಗ್ಗೆ ಪೋಷಕರು ಹಾಗೂ ಸ್ಥಳೀಯರಲ್ಲಿ ಆತಂಕವೂ ಹೆಚ್ಚಾಗಿದೆ.
ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸುವುದು ಹಾಗೂ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ಜವಾಬ್ದಾರಿಯನ್ನು ನಿಗದಿಪಡಿಸುವ ನಿಟ್ಟಿನಲ್ಲಿ ಎಸ್ಐಒ ಕರ್ನಾಟಕವು ಸರ್ಕಾರದ ಮುಂದೆ ಕೆಳಗಿನ ಐದು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ:
- ಈ ಭಾಗದಲ್ಲಿರುವ ಎಲ್ಲಾ ಸರ್ಕಾರಿ ಶಾಲಾ ಕಟ್ಟಡಗಳ ಎಂಜಿನಿಯರಿಂಗ್ ತಾಂತ್ರಿಕ ಪರಿಶೀಲನೆ ಹಾಗೂ ರಚನಾತ್ಮಕ ಸುರಕ್ಷತಾ ತಪಾಸಣೆ (Structural Audit)ಯನ್ನು ತಕ್ಷಣ ನಡೆಸಬೇಕು.
2. ಶಿಥಿಲಗೊಂಡ ಹಾಗೂ ಅಪಾಯಕಾರಿ ಕೊಠಡಿಗಳಲ್ಲಿ ತರಗತಿಗಳನ್ನು ಕೂಡಲೇ ಸ್ಥಗಿತಗೊಳಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಸುರಕ್ಷಿತ ಪರ್ಯಾಯ ಸ್ಥಳದ ವ್ಯವಸ್ಥೆ ಮಾಡಬೇಕು.
3. ಮುಗಳೊಳ್ಳಿ ಎಲ್.ಟಿ.-1 ಸರ್ಕಾರಿ ಶಾಲೆಯ ಅಪಾಯಕಾರಿ ಕಟ್ಟಡವನ್ನು ತಕ್ಷಣ ತೆರವುಗೊಳಿಸಿ, ನೂತನ ಹಾಗೂ ಸುರಕ್ಷಿತ ತರಗತಿ ಕೊಠಡಿಗಳ ನಿರ್ಮಾಣಕ್ಕೆ ಅಗತ್ಯ ಸರ್ಕಾರಿ ಅನುದಾನ ಬಿಡುಗಡೆ ಮಾಡಬೇಕು.
4. ಗಾಯಗೊಂಡ ವಿದ್ಯಾರ್ಥಿಗಳಿಗೆ ಉಚಿತ ಮತ್ತು ಸಂಪೂರ್ಣ ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಸೂಕ್ತ ಆರ್ಥಿಕ ಪರಿಹಾರ ಹಾಗೂ ಜೀವವಿಮೆ ಸೌಲಭ್ಯವನ್ನು ಒದಗಿಸಬೇಕು.
5. ಶಾಲೆಯ ದುಸ್ಥಿತಿಗೆ ಕಾರಣವಾದ ಆಡಳಿತಾತ್ಮಕ ಮತ್ತು ನಿರ್ವಹಣಾ ನಿರ್ಲಕ್ಷ್ಯದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು.
“ಶಾಲಾ ಆವರಣಗಳು ಮಕ್ಕಳಿಗೆ ಸುರಕ್ಷಿತ ತಾಣಗಳಾಗಿರಬೇಕು. ಶಿಕ್ಷಣ ಪಡೆಯಲು ಶಾಲೆಗೆ ತೆರಳುವ ಮಕ್ಕಳು ಮೂಲಸೌಕರ್ಯಗಳ ನಿರ್ಲಕ್ಷ್ಯದಿಂದ ಅಪಾಯಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಭವಿಷ್ಯದಲ್ಲಿ ಇಂತಹ ಅನಾಹುತಗಳು ಮರುಕಳಿಸದಂತೆ ರಾಜ್ಯ ಸರ್ಕಾರವು ತಕ್ಷಣ ಸ್ಪಂದಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಎಸ್ಐಒ ಕರ್ನಾಟಕ ಆಗ್ರಹಿಸಿದೆ.













