✍️ ಅರಫಾ ಮಂಚಿ
‘ಇವರು ಪಾಠ ಕಲಿಯುವುದು ಯಾವಾಗ?’
ಈ ಪ್ರಶ್ನೆ ಕೇಳಿದ್ದು ಸಿಜೆಪಿಯ ವಕ್ತಾರ ಸೌರವ್‌ದಾಸ್. ಸಚಿವ ಕಿರಣ್ ರಿಜಿಜು ಮೇಲೆ ರಾಹುಲ್ ಗಾಂಧಿಯ ಸ್ಮಾಶ್ ದಿ ಪಾಟ್ರಿಯಾರ್ಕಿ ಹೇಳಿಕೆಯನ್ನು ಉಲ್ಲೇಖಿಸಿ ಹಿಂದೂ ಮುಸ್ಲಿಂ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಎಕ್ಸ್‌ನಲ್ಲಿ ಆರೋಪಿಸಿದ್ದಾರೆ. ಪಿತೃ ಪ್ರಭುತ್ವದ ಪರಂಪರೆಯನ್ನು ನುಚ್ಚುನೂರುಗೊಳಿಸಿ ಎಂದು ಪುಣೆ ಕಾಂಕ್ಲೇವ್‌ನಲ್ಲಿ ವಿದ್ಯಾರ್ಥಿ ಯುವಕರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಬಿಜೆಪಿ ರಾಜಕೀಯ ಮೈಲೇಜ್‌ಗೆ ಇದನ್ನು ಹಿಂದೂ ಮುಸ್ಲಿಮ್ ಆಗಿ ಬಳಸಿಕೊಳ್ಳುತ್ತಿದೆ.
ಹಾಗಿದ್ದರೆ ಬಿಜೆಪಿಯ ಮೈಲೇಜು ಕುಸಿಯುತ್ತಿದೆ. ಹಿಂದೂ ಮುಸ್ಲಿಂ ದ್ವೇಷ ಪ್ರಚಾರಕ್ಕೆ ಆಯಸ್ಸಿಲ್ಲದಂತಾಗಿದೆ. ಸೌರವ್‌ರಂತಹ ಯುವಜನತೆಯ ಭಾಷೆಯಲ್ಲಿ ಹೇಳುವುದಾದರೆ ಜೆನ್‌ಝಿ ಗುರುತಿಸುತ್ತಿದೆ. ಕೋಮುವಾದವನ್ನು ಕಿತ್ತೊಗೆಯಿರಿ, ಪಿತೃಪರಮಾಧಿಪತ್ಯ(ಪುರುಷಾಧಿಪತ್ಯ)ವನ್ನು ಕಿತ್ತೆಸೆಯಿರಿ, ಮಹಿಳಾ ಸಮ್ಮಾನ್ ನೀಡಿರಿ. ಬಿಜೆಪಿಯವರು ಇದನ್ನು ಹೇಳಿದರೆ ನಂಬುವವರಿಲ್ಲ. ಸಾಮಾನ್ಯವಾಗಿ ಎಲ್ಲ ರಾಜಕಾರಣಿಗಳು ಮೈಕ್ ಸಿಕ್ಕೊಡನೆ ಹೀಗನ್ನುತ್ತಾರೆ. ಆದರೆ ರಾಹುಲ್ ಗಾಂಧಿ ಹೇಳುವುದು ಹೆಚ್ಚು ಶಕ್ತಿ ಪಡೆದುಕೊಳ್ಳುತ್ತದೆ. ದ್ವೇಷದ ಕತ್ತಲು ಬತ್ತಲಾಗತೊಡಗಿದರೆ ದ್ವೇಷಕ್ಕೆ ಆಯಸ್ಸಿಲ್ಲ. ಅಂದಮೇಲೆ ಸಂಘಪರಿವಾರ ಪ್ರೊಪಾಗಂಡಾ ಹಿಂದೂ ಮುಸ್ಲಿಂ ಇನ್ನು ನಡೆಯುವುದಿಲ್ಲ. ರಾಹುಲ್ ಗಾಂಧಿಯ ಪುಣೆ ಕಾಂಕ್ಲೇವ್ ಮತ್ತು ಕಾಕ್ರೊಚ್ ಜನತಾ ಪಾರ್ಟಿಯ ಜಂತರ್‌ಮಂತರ್ ಅದನ್ನು ವಿಶ್ವಕ್ಕೆ ಸಾರುತ್ತಿದೆ. ರಾಹುಲ್ ಮನುವಾದವನ್ನು ಕಿತ್ತೆಸೆಯಲು ಕರೆ ನೀಡಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಇಂದಿನ ಬಿಜೆಪಿ ವ್ಯವಸ್ಥೆಯಲ್ಲಿ ಮಹಿಳಾ ಅಪಮಾನ ಹೆಚ್ಚಾಗುತ್ತಿದೆ. ಪುಣೆ ಕಾಂಕ್ಲೇವ್‌ನಲ್ಲಿ ವಿದ್ಯಾರ್ಥಿ ಸಾಗರ ನೆರೆದಿತ್ತು. ವಿದ್ಯಾರ್ಥಿನಿಯರು ತಾವು ಅನುಭವಿಸುತ್ತಿರುವ ನಿತ್ಯಗೋಳನ್ನು ರಾಹುಲ್ ಗಾಂಧಿ ಮುಂದೆ ವಿವರಿಸುತ್ತಿದ್ದರು.
ಜೆನ್‌ಝಿಗಳ ನಡುವೆ ರಾಹುಲ್ ಜನಪ್ರಿಯತೆ ಬಿಜೆಪಿಗೆ ತಲೆನೋವು ಸೃಷ್ಟಿಸುವಂತಹದ್ದೇ. ಆದ್ದರಿಂದ ಕಿರಣ್ ರಿಜಿಜುರಂತಹವರು ಹಿಂದೂ ಮುಸ್ಲಿಮ್ ನಡುವೆ ದ್ವೇಷ ಕೂರಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಅದು ಬಿಜೆಪಿಯ ಹಳೆ ಬಾಟ್ಲಿ. ಜೆನ್‌ಝಿ ಜಾಗೃತ ಮತದಾರ ನಡುವೆ ಇದಕ್ಕೆ ಕಿಮ್ಮತ್ತಿಲ್ಲ.
ಬಿಜೆಪಿಯ ದುರದೃಷ್ಟಕ್ಕೆ ಹಿಂದೂ ಮುಸ್ಲಿಂ ಈಗ ಜನತೆಯ ನಡುವೆ ಟ್ರೆಂಡ್ ಅಲ್ಲ. ಇದು ಬಿಜೆಪಿಯ ಗದ್ದುಗೆ ಅಲುಗಾಡುವ ಸೂಚನೆ ಎಂದು ಸ್ವತಃ ಬಿಜೆಪಿ ಅರ್ಥೈಸಿಕೊಂಡಿರಬಹುದು. ಆದ್ದರಿಂದ ಮತ್ತೆ ಹಳೆ ಬಾಟ್ಲಿ ಓಪನ್ ಮಾಡಿದೆ. ಆದರೆ, ಅದಕ್ಕೀಗ ನೆಲೆ-ಬೆಲೆ ಎರಡೂ ಇಲ್ಲ. ಭಾರತವನ್ನು ಜಾಗೃತ ಸಮಾಜವಾಗಿ ರೂಪಿಸಲು ಕಳೆದ ಹತ್ತಾರು ವರ್ಷಗಳಿಂದ ರಾಹುಲ್ ಗಾಂಧಿ ತರಹದವರು ಬೆವರು ಹರಿಸಿದ ಫಲ ಇದು, ಪರಿಣಾಮವೂ ಹೌದು.
ಧಿಮಾಗಿ ನಕ್ಸಲ್ ಈಗ ಅತಂತ್ರ!
ಪ್ರಧಾನಿಯ ಸ್ವಾತಂತ್ರ್ಯ ಉತ್ಸವ ದಿನದ ಭಾಷಣದಲ್ಲಿ ಇದಿತ್ತು. ಈಗಲೂ ಚಾನೆಲ್‌ಗಳಲ್ಲಿ ಇಣುಕಿ ಮಿನುಕುತ್ತಿದೆ. ಪ್ರಧಾನಿ ಧಿಮಾಗಿ ನಕ್ಸಲ್ ಎಂದಿದ್ದು ಯಾರನ್ನು? ಇಂದು ಇಂತಹ ಮಾತುಗಳಿಗೆ ನಾನಾ ಅರ್ಥ ಕಲ್ಪಿಸಲಾಗುತ್ತದೆ. ಒಟ್ಟಿನಲ್ಲಿ ಪ್ರತೀಕಾರ ಭಾವನೆಯ ದ್ವೇಷದಿಂದ ಕೊಂಕು ಪದೋತ್ಪತ್ತಿ ಆಗುತ್ತಿದೆ. ದೇಶದ ಪ್ರಧಾನಿ ಹೀಗೆ ಮಾತಾನಾಡಬಹುದಾ? ಪ್ರತಿಪಕ್ಷಗಳು ಗಲಾಟೆ ಮಾಡಿದಾಗ ಪ್ರತಿಪಕ್ಷಗಳನ್ನು ಉದ್ದೇಶಿಸಿಲ್ಲ ಎಂದು ಅದೇ ಕಿರಣ್ ರಿಜಿಜು ಸಮಜಾಯಿಷಿ ಕೊಟ್ಟರು. ಹೌದು ಮೋದಿ ಓದುತ್ತಾರೆ ಅನ್ನುವುದು ಇಂದು ಗುಟ್ಟಿನ ವಿಷಯ ಅಲ್ಲ. ಟೆಲಿಪ್ರಾಂಪ್ಟರ್‌ನಲ್ಲಿ ಬರೆದವರ ಧಿಮಾಗ್ ಏನಾಗಿತ್ತು? ಪ್ರಧಾನಿಯ ಬಾಯಿಯಿಂದ ಎಂತೆಂತಹ ಮಾತು ಆಡಿಸುವುದು ಇವರು.
ಅ ರಾಮಮಂದಿರ ಚಡಾವ್ ಚೋರಿ ಪ್ರಕರಣದವರೆಗೂ ಮೋದಿ ಕ್ರೇಜ್ ಇತ್ತು. ಸಿಜೆಪಿ ಎದ್ದುನಿಂತ ಮೇಲೆ ಬಿಜೆಪಿಯನ್ನು ಭಕ್ತರ ಹೊರತು ಬಹುತೇಕರು ಅನುಮಾನದಿಂದ ನೋಡುತ್ತಿದ್ದಾರೆ. ಸಿಜೆಪಿಯ ಅಭಿಜಿತ್ ದೀಪ್ಕೆ ನ್ಯೂಸ್ 24ರ ಸಂದರ್ಶನದಲ್ಲಿ ನೀಡಿದ ಹೇಳಿಕೆ ಗಮನಿಸುವಂತಹದ್ದು. ಜೆನ್‌ಝಿಯ ಆಲೋಚನೆಯನ್ನು ಮನುವಾದದಿಂದ, ಹಿಂದೂ ಮುಸ್ಲಿಂನಿಂದ ಸಂವಿಧಾನದತ್ತ ತರುವಲ್ಲಿ ರಾಹುಲ್ ಗಾಂಧಿ ಯಶಸ್ವಿಯಾಗಿದ್ದಾರೆ. ಹೋಗಿ ಬಂದಲ್ಲೆಲ್ಲ ಸಂವಿಧಾನ ಎತ್ತಿ ಹಿಡಿಯುವುದು ಸಾರ್ಥಕಗೊಂಡಿದೆ. ಅದರಲ್ಲೂ ಜಂತರ್‌ಮಂತರ್‌ನಲ್ಲಿ ಸಿಜೆಪಿಯ ವಿದ್ಯಾರ್ಥಿ ಯುವಕರು ಜಾತಿವಾದ್ ಸೇ, ಸಂಘವಾದ್ ಸೇ ಆಝಾದಿ ಎಂದು ಕೂಗುತ್ತಿದ್ದುದು ಗುರುತಿಸಬೇಕಾದ ವಿಷಯ. ಬಿಜೆಪಿ ಸರಕಾರ ಮತ್ತು ಸರಕಾರದ ಆರೆಸ್ಸೆಸ್ ನೀತಿಗಳ ವಿರುದ್ಧ ರಾಹುಲ್ ಹತ್ತಾರು ವರ್ಷಗಳಿಂದ ಹೋರಾಡುತ್ತ ಬಂದದ್ದು ಈಗ ಫಲಕಾಣತೊಡಗಿದೆ. ಈ ನಿಟ್ಟಿನಲ್ಲಿ ಹಲವರ ಹೋರಾಟ ಇದ್ದರೂ ರಾಹುಲ್ ಮುಂಚೂಣಿಯಲ್ಲಿದ್ದಾರೆ, ಸಂದೇಹವಿಲ್ಲ. ಬಿಜೆಪಿಯ ಪಪ್ಪು ಈಗ ಹೀರೋ. ದ್ವೇಷ ಮತ್ತು ದ್ವೇಷದ ವಕ್ತಾರರು ಝೀರೋ ಆಗುವ ಸಾಧ್ಯತೆ ಇದೆ.
ಕೇಸು ಹಾಕಿಸಿದ ರಾಹುಲ್ ಗಾಂಧಿ:
ಜಂತರ್ ಮಂತರ್ ವಿದ್ಯಾರ್ಥಿ ಪ್ರತಿಭಟನೆಗೆ ಪೆಲೆಟ್ ಗನ್ ಯೂಸೇ ಮಾಡಿಲ್ಲ ಎಂದು ದಿಲ್ಲಿ ಪೊಲೀಸರು ಹೇಳಿದ್ದರು. ಈ ಹೇಳಿಕೆ ಕೊಟ್ಟು ಕೈತೊಳೆಯಲು ಪೊಲೀಸರು ಪ್ರಯತ್ನಿಸಿದ್ದರು. ಆದರೆ ರಾಹುಲ್ ಗಾಂಧಿ ಸಂತ್ರಸ್ತ ವಿದ್ಯಾರ್ಥಿ ಪರ ನಿಂತರು. ಮಾಧ್ಯಮದಲ್ಲಿ ಪೊಲೀಸರ ಪೆಲೆಟ್ ಪ್ರಯೋಗದಿಂದ ಒಂದು ಕಣ್ಣು ಕಳೆದುಕೊಂಡ, ಮೈಯಿಡೀ ಪೆಲೆಟ್ ಚುಚ್ಚಿದ ತರಚುಗಾಯಗಳಾದ ವಿದ್ಯಾರ್ಥಿಯನ್ನು ಪ್ರದರ್ಶಿಸಿದರು. ಸುಳ್ಳು ಸುಳ್ಳಾಗಿರುತ್ತದೆ ಎಂಬುದು ಜಗತ್ತಿನ ಮುಂದೆ ಹೀಗೂ ಸಾಕ್ಷಾತ್ಕಾರವಾಯಿತು. ಪೊಲೀಸರು ಪೆಲೆಟ್ ಗನ್ ಯೂಸ್ ಮಾಡ್ಲಿಲ್ಲ ಎಂದಾದರೆ ಮತ್ತೆ ಯಾರು ಯೂಸ್ ಮಾಡಿದ್ದು? ತನಿಖೆಯಾಗಲಿ ಎಂದು ರಾಹುಲ್ ಗಾಂಧಿ ಪಟ್ಟು ಹಿಡಿದು ಧರಣಿ ಕುಳಿತರು. ಕನ್ನಾಟ್ ಪೊಲೀಸರು ಕಂಗಾಲಾದರು. ಮೋದಿಭಾರತದಲ್ಲಿ ಒಂದು ಕೇಸು ದಾಖಲಿಸಲು ಪೊಲೀಸರು ವಿಳಂಬಿಸುತ್ತಿದ್ದಾರೆ, ದೊಣ್ಣೆ ನಾಯಕರ ಅನುಮತಿ ಸಿಕ್ಕಮೇಲೆಯೇ ಅವರು ಸಕ್ರೀಯರಾಗುವುದು ಎಂಬುದು ರಾಹುಲ್‌ರ ಧರಣಿ ದೇಶದ ಮುಂದೆ ಅನಾವರಣಗೊಳಿಸಿತು. ಎಂಟು ಗಂಟೆಗಳ ಧರಣಿಯ ನಂತರ ಅಮಿತ್ ಶಾರ ಪೊಲೀಸರು ಎಫ್‌ಐಆರ್ ದಾಖಲಿಸಬೇಕಾಯಿತು. ಇದು ಒಂದು ಕೇಸಿನ ವಿಚಾರವಲ್ಲ, ಗೃಹಸಚಿವ ಮತ್ತು ವಿಪಕ್ಷ ನಾಯಕರ ನಡುವಿನ ಫೈಟ್. ಕೊನೆಗೂ ರಾಹುಲ್ ಗೆದ್ದರು. ದ್ವೇಷಕ್ಕೆ ಉಳಿಗಾಲವಿಲ್ಲ.
ಪೊಲೀಸರು ಪೆಲೆಟ್ ಹಾರಿಸುವಂತೆ ಮಾಡಿದ್ದು ಮತ್ತು ಕೇಸು ತೆಗೆದುಕೊಳ್ಳದಂತೆ ಮಾಡಿದ್ದು ಆಡಳಿತಗಾರರ ದ್ವೇಷಯುಕ್ತ ಕಾರ್ಯಾಚರಣೆ ಆಗಿದೆ. ಆ ದ್ವೇಷ ಬಾಝಾರ್ ರಾಹುಲ್‌ರ ಸ್ಮಾಶ್‌ಗೆ ತತ್ತರಿಸಿದ್ದೌದು. ಕನ್ನಾಟ್ ಪ್ಲೇಸ್ ಠಾಣೆಯಲ್ಲಿ ನಡೆದ ಚೌಚೌನಿಂದ ನೀವೇ ಕಂಡಿರಿ. ಇವೆಲ್ಲ ತೋರಿಸುವುದು ರಾಹುಲ್ ಗಾಂಧಿ ಮುಂದೆ ಬಿಜೆಪಿ ಖದರು ಕಳೆದುಕೊಳ್ಳುತ್ತಿರುವುದನ್ನಾಗಿದೆ. ಅದಕ್ಕಿಂತಲೂ ಸಂವಿಧಾನ ಮತ್ತು ಸೆಕ್ಯುಲರಿಸಂ ಮತ್ತೆ ಪ್ರಬಲಗೊಳ್ಳುವ ಹೊತ್ತಿಗೆ ಹೀಗೆಲ್ಲ ಆಗುವುದು. ಇದುವೇ ಉತ್ತಮ ಮತ್ತು ಸರಿಯಾದ ವಿಶ್ಲೇಷಣೆಯಾಗುತ್ತದೆ. ಹಾಗಿದ್ದರೆ ಬಿಜೆಪಿಗೆ ಚುನಾವಣೆಯಲ್ಲಿ ಸೋಲುವ ಭೀತಿ ಕಾಡುತ್ತಿದೆ ಅಂತ ಕೇಳಬಹುದು. ಹೌದು, ಇತ್ತೀಚೆಗಷ್ಟೆ ಪ್ರಕಟವಾದ ಸಮೀಕ್ಷೆಯೊಂದು ಹಾಗೆ ಹೇಳಿದೆ. ಅಂದರೆ ಮುಂದೆ ನಡೆಯಲಿರುವ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿ ಸೋಲುತ್ತದೆ. ಬಿಜೆಪಿ ಮತ್ತೆ ದ್ವೇಷ ಪ್ರಚಾರಕ್ಕೆ ಕಿಚ್ಚಿಕ್ಕಲು ಬಂದದ್ದೇ ಹಾಗೆ. ಹೀಗೆ ಹಿಂದು ಮುಸ್ಲಿಂ ಬಳಕೆಗೆ ಪ್ರಯತ್ನಿಸಿದ್ದು. ಟಾನಿಕ್ ಹಳೆಯದ್ದಾದ್ದರಿಂದ ಅದಕ್ಕಂಟಿಸಿದ ಲೇಬಲ್ ಅನ್ನು ಜಾಗೃತ ಮತದಾರ ಜೆನ್‌ಝಿಗಳು ಕೂಡಲೇ ಗುರುತಿಸಿಬಿಡುತ್ತಿದ್ದಾರೆ. ಸೌರವ್ ದಾಸ್ ರಾಹುಲ್‌ರ ಸ್ಮಾಶ್ ಪ್ಯಾಟ್ರಿಯಾರ್ಕಿ ಕರೆಯನ್ನು ಗುರುತಿಸಿದಂತೆ. ಜೆನ್‌ಝಿಗಳು ಬಹಳ ಫಾಸ್ಟ್.
ಕಾಕ್ರೊಚ್‌ಗಳು ಮತ್ತೆ ಸಿದ್ಧ:
ಕಾಕ್ರೋಚ್‌ಗಳು ಹಿಂದಿಗಿಂತಲೂ ವಿಶಾಲವಾದ ಪ್ರತಿಭಟನೆಗೆ ಮುಂದಾಗುತ್ತಿದ್ದಾರೆ. ಸೆಪ್ಟಂಬರ್ ಐದಕ್ಕೆ ಹೋರಾಟ ಘೋಷಣೆಯಾಗಿದೆ. ಯಾಕೆಂದರೆ ಕೇಂದ್ರ ಬಿಜೆಪಿ ಸರಕಾರ ಮಾತು ಉಳಿಸಿಲ್ಲ. ಜೆಪಿ ನಡ್ಡಾ ನೇತೃತ್ವದಲ್ಲಿ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿ ಮುಖಂಡರ ಜೊತೆ ನಡೆದಿದ್ದ ಒಪ್ಪಂದದಂತೆ ಸರಕಾರ ನಡೆದುಕೊಂಡಿಲ್ಲ. ನೀಟ್ ಲೀಕ್‌ನಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ನಷ್ಟಪರಿಹಾರ ಹಾಗೂ ವಿದ್ಯಾರ್ಥಿಗಳ ವಿರುದ್ಧ ಹಾಕಿದ ಕೇಸು ವಾಪಸು ಪಡೆಯುವ ಮಾತು ಈಡೇರಿಸಿಲ್ಲ. ಸಿಜೆಪಿಯ ಅಕ್ಟೋಬರ್ ಐದರ ಪ್ರತಿಭಟನೆಗೆ ಆಲ್ ಇಂಡಿಯ ಸ್ಟೂಡೆಂಟ್ಸ್ ಅಸೋಸಿಯೇಶನ್ (ಐಸಾ) ಕೂಡ ಬೆಂಬಲಿಸಿದೆ. ಪೆಲೆಟ್ ಗನ್ ಬಳಕೆ ತನಿಖೆ ಮತ್ತು ವಿದ್ಯಾರ್ಥಿಗಳ ವಿರುದ್ಧ ದಾಖಲಿಸಿದ ಎಫ್‌ಐಆರ್ ವಾಪಸು ಪಡೆಯುವ ವಿಚಾರಕ್ಕೆ ಐಸಾ ಬೆಂಬಲ ಘೋಷಿಸಿದೆ.
ಮಾತು ತಪ್ಪಿ ಮೋಸ ಮಾಡಿದ ಸರಕಾರದ ವಿರುದ್ಧ ಸಿಜೆಪಿ ದೊಡ್ಡ ಮಟ್ಟದ ಪ್ರತಿಭಟನೆಗೆ ಸಜ್ಜಾಗುತ್ತಿರುವುದು ಬಿಜೆಪಿಗೆ ಇನ್ನೊಂದು ತಲೆನೋವು. ಭಕ್ತರು ಕಡಿಮೆಯಾದಂತೆ ಮಾತು ಕೊಡುವುದು ಮತ್ತು ತಪ್ಪುವುದು ಇನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದನ್ನಿಸುತ್ತಿದೆ. ಅಭ್ಯಾಸವನ್ನು ಸಿಜೆಪಿ ತುಂಬ ದೊಡ್ಡ ಮಟ್ಟದಲ್ಲಿ ಪ್ರಶ್ನಿಸಲು ಮಾಡುತ್ತಿರುವ ತಯಾರಿ ನೋಡಿದರೆ ಬ್ಯಾರಿಕೇಡುಗಳು, ವಾಟರ್ ಕೆನನ್‌ಗಳು ಸಾಲಲ್ಲ ಅನ್ಸುತ್ತೆ. ಭಕ್ತರೇ ಈ ಸರಕಾರಕ್ಕೆ ಬೇಕಿತ್ತಾ ಜೆನ್‌ಝಿಗಳನ್ನು ಕೆಣಕುವುದು ಎಂದು ಕೇಳುವಂತಾಗಿದೆ.
ನೀತಿ ಆಯೋಗದ ಇತ್ತೀಚಿನ ವರದಿ ಪ್ರಕಾರ ಕಳೆದ 40 ವರ್ಷಗಳಲ್ಲೇ ಅತ್ಯಧಿಕ ನಿರುದ್ಯೋಗ ಇದೆ. ಪ್ರಿಯಾಂಕಾ ಗಾಂಧಿ ಅವರು ಕೂಡ ಈ ವರದಿ ಉಲ್ಲೇಖಿಸಿದ್ದಾರೆ. ಈಗ ದೇಶದಲ್ಲಿ 15-29 ವಯಸ್ಸಿನ 8.7 ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಬಿಜೆಪಿ ಸರಕಾರದ ವಿಫಲತೆ ಜನರ ನಿರುದ್ಯೋಗ. ಅದರಿಂದ ತತ್ತರಿಸುವ ಯುವಕರು ದೇಶದಾದ್ಯಂತ ಹೂಂಕರಿಸುತ್ತಿದ್ದಾರೆ.
ಸಿಜೆಪಿ ಮತ್ತು ಸ್ಕೂಲ್:
ಸಿಜೆಪಿ ಕಾರ್ಯಕರ್ತರು ಸ್ಕೂಲ್ ಟೀಕ್ ಕರೋ ಆಂದೋಲನದ ಪ್ರಯುಕ್ತ ಶಾಲೆಗೆ ಭೇಟಿ ನೀಡಿದಾಗ ರಾಜಸ್ಥಾನದಲ್ಲಿ ಬಿಜೆಪಿ ಬೆಂಬಲಿಗರು ಹಲ್ಲೆ ನಡೆಸಿದ ಘಟನೆ ನಂತರ ರಾಜಸ್ಥಾನ ಸರಕಾರ ಮಂಡಿಯೂರಿದ್ದು ಒಂದೆಡೆ ಇದ್ದರೆ, ಜೆನ್ ಅಲ್ಫಾ ಕಮ್ಮಿಯಿಲ್ಲ. ಉತ್ತರಪ್ರದೇಶದ ಉನ್ನಾವದ ಸರಕಾರಿ ರೆಸಿಡೆನ್ಸಿಯಲ್ ಸ್ಕೂಲ್‌ನ ನೂರಾರು ಮಕ್ಕಳು ಮೂಲಭೂತ ಸೌಕರ್ಯಕ್ಕಾಗಿ ಬೀದಿಗಿಳಿದು ಬಂದು ದೊಡ್ಡ ಸುದ್ದಿ ಮಾಡಿದ್ದಾರೆ. ಕಡಿಮೆ ಗುಣಮಟ್ಟದ ಆಹಾರ, ಶುದ್ಧ ನೀರಿನ ಕೊರತೆ, ಅಧ್ಯಾಪಕರಿಲ್ಲದಿರುವುದು, ಪ್ರಿನ್ಸಿಪಾಲ್ ಕೆಟ್ಟದಾಗಿ ವರ್ತಿಸುವುದು ಮುಂತಾದ ವಿಷಯಗಳನ್ನು ಪ್ರತಿಭಟನೆಯ ವೇಳೆ ಬಾಲಕ ವಿದ್ಯಾರ್ಥಿಗಳು ಎತ್ತಿದ್ದಾರೆ. ಮಕ್ಕಳ ಕೈಯಲ್ಲಿ ಪ್ಲೇಕಾರ್ಡ್‌ಗಳಿದ್ದವು. ಉನ್ನಾವದ ಮೋಹನ್ ಕ್ರಾಸಿಂಗ್‌ನಲ್ಲಿ ಮಕ್ಕಳು ರಸ್ತೆ ತಡೆ ಒಡ್ಡಿದ್ದಾರೆ. ಜಂತರ್‌ಮಂತರ್‌ನ ವಿದ್ಯಾರ್ಥಿ-ಸಿಜೆಪಿ ಆಂದೋಲನದ ಪ್ರಭಾವ ಇದು. ಪರಿಣಾಮವೂ ಇದುವೇ. ಹೌದು, ಹಿಂದು ಮುಸ್ಲಿಂ ಇನ್ನು ಹೆಚ್ಚು ಕಾಲ ನಡೆಯಲ್ಲ ಎಂಬುದನ್ನು ಈ ಪುಟ್ಟ ಮಕ್ಕಳ ಬೀದಿಗಿಳಿದ ಹೋರಾಟದಿಂದಲೂ ಸಾಬೀತಾಗುತ್ತಿದೆ.
ಜೈಪುರದ ರಾಮಪುರ ಕನ್ವರ್‌ಪುರದಲ್ಲಿರುವ ಸರಕಾರಿ ಶಾಲೆಗೆ ಹೊಸ ಕಟ್ಟಡ ಕಟ್ಟಿಸಲು ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಇಲ್ಲಿನ ದುರವಸ್ಥೆಯನ್ನು ದೇಶದ ಮುಂದಿಡಲು ಹೊರಟ ಸಿಜೆಪಿ ಹುಡುಗರಿಗೆ ಹೊಡೆದವರು ವಿಫಲರಾದ್ದು ಹೀಗೆ. ಶಾಲೆ ಸುಧಾರಣೆಗೆ ಹೊರಟ ಸಿಜೆಪಿ ಹುಡುಗರು ತಾವೆತ್ತಿದ ಬೇಡಿಕೆಯನ್ನು ಈಡೇರಿಸಿಕೊಂಡಿದ್ದಾರೆ. ಯಶಸ್ಸು ಸಿಕ್ಕಿದೆ. ಶಾಲಾ ಕಟ್ಟಡಕ್ಕೆ ಹದಿನೆಂಟು ಲಕ್ಷ ರೂಪಾಯಿ ಮಂಜೂರಾಗಿದೆ. ಊರಿನವರಿಗೆ ತಮ್ಮೂರಿನ ಸರಕಾರಿ ಶಾಲೆ ಉತ್ತಮಪಡಿಸಲು ಪ್ರಯತ್ನಿಸುವುದು ಊರಿಗೆ ಒಳ್ಳೇದು ಅಂತನ್ನಿಸಬೇಕಾಗಿತ್ತು. ಆದರೆ ಅಂಧಭಕ್ತಿಯಲ್ಲಿ ಸರಿ ತಪ್ಪುಗಳನ್ನು ಗುರುತಿಸುವ ಅಂತರ್‌ದೃಷ್ಟಿ ಸತ್ತಿರುತ್ತದೆ. ದ್ವೇಷ ಹಡೆಯೆತ್ತಿರುತ್ತದೆ. ಆದರೆ ದ್ವೇಷಕ್ಕೆ ಆಯುಸ್ಸಿಲ್ಲ ಎಂಬುದು ಹೀಗೂ ಮುನ್ನೆಲೆಗೆ ಬಂತು. ದ್ವೇಷ ಹಳ್ಳ ಹಿಡಿಯುತ್ತಿದೆ.
ರಾಹುಲ್ ಮಿಂಚಿದ್ದು ಹೀಗೆ:
ರಾಹುಲ್ ಗಾಂಧಿ ಹತ್ತಾರು ವರ್ಷಗಳಿಂದ ಸಂತನಂತೆ ಶ್ರಮಿಸುತ್ತಿದ್ದಾರೆ. ದೇಶ ನೋಡಿದೆ. ದ್ವೇಷವನ್ನು ಜನ ಮನಸ್ಸಿನೊಳಗಿಂದ ಕಿತ್ತು ಹಾಕಿ, ದೇಶವಾಸಿಗಳ ನಡುವೆ ಸದ್ಭಾವ, ಸೌಹಾರ್ದ ಬೆಳೆಸಲು ಹತ್ತಾರು ವರ್ಷಗಳಿಂದ ಅವರು ಸಂತನಂತೆ ಶ್ರಮಿಸಿದ್ದಾರೆ. ಅವರ ಭಾರತ್ ಜೋಡೋ, ಭಾರತ್ ನ್ಯಾಯ ಯಾತ್ರೆ ಈ ಪ್ರಯತ್ನದ ದೊಡ್ಡ ಮಟ್ಟದ ಅಳತೆ. ಅವರು ಆರಂಭದಿಂದಲೂ ಆರೆಸ್ಸೆಸ್ ಆಲೋಚನೆಗೆ ಸವಾಲೆಸೆದರು. ಜಾತ್ಯತೀತ ಮತ್ತು ಧರ್ಮನಿರಪೇಕ್ಷತೆಯ ವಕ್ತಾರಿಕೆ ವಹಿಸಿಕೊಂಡರು. ಸಂಘಪರಿವಾರ ಮತ್ತು ಬಿಜೆಪಿ ಸರಕಾರ ಅವರ ವಿರುದ್ಧ ಕೇಸುಗಳನ್ನು ಹಾಕಿತು. ಕೇಸಿಗೆ ಹೆದರಿ ಅವರು ಆಡಳಿತದಲ್ಲಿರುವ ಶಕ್ತಿಯೊಂದಿಗೆ ರಾಜೀಗೆ ಸಿದ್ಧವಾಗಿಲ್ಲ. ಮೋದಿ ಸರಕಾರದ ಕಳೆದ ಅವಧಿಯಲ್ಲಿ ಬಿಜೆಪಿ ರಾಹುಲ್‌ರನ್ನು ಸಂಸತ್ತಿನಿಂದಲೂ ಹೊರಹಾಕುವ ತಂತ್ರವನ್ನು ಬಿಜೆಪಿ ಹೆಣೆಯಿತು. ರಾಹುಲ್ ಸಂಸತ್ ಸದಸ್ಯತ್ವವನ್ನು ಸುಪ್ರೀಂ ಕೋರ್ಟು ಊರ್ಜಿತಗೊಳಿಸಿತು.
ಇಂದು ಅವರು ಜೆನ್‌ಝಿಗಳ ಹೀರೋ. ಮಹಾರಾಷ್ಟ್ರದ ಪುಣೆಯ ಕಾಂಕ್ಲೇವ್‌ನಲ್ಲಿ ನೆರೆದಿದ್ದ ಯುವಕರು ವಿದ್ಯಾರ್ಥಿಗಳ ಸಂಖ್ಯೆಯು ಸಾಕ್ಷ್ಯ ನೀಡುತ್ತಿದೆ. ಅಲ್ಲಿಂದ ಈಗ ಮನುವಾದಕ್ಕೆ ಸವಾಲು ಎಸೆದಿದ್ದಾರೆ. ಪುರುಷಾಧಿಪತ್ಯ ಕಿತ್ತು ಹಾಕುವ ಕರೆ. ಅಂದರೆ ಬಿಜೆಪಿ ಆರೆಸ್ಸೆಸ್‌ಗಳು ಮಾತ್ರವಲ್ಲ ಮನುವಾದಿಗಳು ಕೂಡ ಮಹಿಳಾ ವಿರೋಧಿಗಳೆಂಬಂತೆ ಅವರು ಅಲ್ಲಿ ಬಿಂಬಿಸಿದ್ದು. ರಾಹುಲ್‌ರ ಹಿಂದೆ ಜನ ನೆರೆಯುತ್ತಿದ್ದಾರೆ ಎಂಬುದು ಬಿಜೆಪಿ ಆರೆಸ್ಸೆಸ್ ಸಂಘಪರಿವಾರದ ಹಿಂದು ಮುಸ್ಲಿಂ ಕೋಮು ಅಜೆಂಡಾದ ನಿಸ್ತೇಜತೆ ಮಾತ್ರ ಅಳಿವಿನ ಸೂಚನೆ ಸೂಚಿಸುತ್ತಿದೆ. ಅಂದರೆ ಜನರಲ್ಲಿ ಮತ್ತೆ ಸಂವಿಧಾನ ಅದರ ಆಶಯ ಜಾತ್ಯತೀತೆ, ಸಮಾನ ನ್ಯಾಯ, ಸಾಮಾಜಿಕ ನ್ಯಾಯಗಳು ಮರಳಿ ಗರಿಗೆದರಿತು. ನಿಜವಾಗುವುದಾದರೆ ಮತ್ತೆ ಭಾವ ಸಂಬಂಧಗಳು ಸೌಹಾರ್ದ ಬಲಗೊಂಡಿತೆಂದರ್ಥ. ಕೋಮುದ್ವೇಷ ಅಂಟಿಸಿಕೊಂಡವರನ್ನು ಅದರಿಂದ ಬಿಡಿಸಲು ಸಮರ್ಥರಾಗುವುದು ರಾಹುಲ್ ಚುನಾವಣೆಗೆದ್ದು ಪ್ರಧಾನಿಯಾಗುವುದಕ್ಕಿಂತ ದೇಶಕ್ಕೆ ಹೆಚ್ಚು ಹಿತದ್ದು.












