ಸನ್ಮಾರ್ಗ ವಾರ್ತೆ
ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ದಿನಾಂಕ 26-08-2026 ರಿಂದ ಪ್ರವಾದಿ ಮುಹಮ್ಮದ್(ಸ)ರವರ ಜನ್ಮ ದಿನದ ಪ್ರಯುಕ್ತ ರಾಜ್ಯಾದ್ಯಂತ ಸೀರತ್ ಅಭಿಯಾನ ನಡೆಯುತ್ತಿದೆ. ಅಭಿಯಾನದ ಶೀರ್ಷಿಕೆ ಕ್ರಾಂತಿಯ ಜ್ಯೋತಿ: ಪ್ರವಾದಿ ಮುಹಮ್ಮದ್(ಸ)' ಎಂಬುದಾಗಿದೆ.
ಪ್ರವಾದಿ ಮುಹಮ್ಮದ್(ಸ)ರವರು ಜಗತ್ತಿನಲ್ಲಿ ತಂದ ಸಮಗ್ರ ಕ್ರಾಂತಿಯು ಸತ್ಯ, ನ್ಯಾಯ, ಕರುಣೆ, ಮಾನವ ಸಮಾನತೆ, ಮಾನವ ಘನತೆ ಹಾಗೂ ಮಾನವ ಕುಲದ ಏಕತೆಯ ಮೇಲೆ ಸ್ಥಾಪಿತವಾಗಿದೆ. ಅವರು ಜನರ ಮನಸ್ಸನ್ನು ಸಂಸ್ಕರಿಸಿ, ಅವರ ನೈತಿಕತೆ ಮತ್ತು ಚಾರಿತ್ರ್ಯವನ್ನು ಶುದ್ದೀಕರಿಸುವ ಮೂಲಕ ವ್ಯಕ್ತಿಗಳನ್ನು, ಸಮಾಜವನ್ನು ಪರಿವರ್ತಿಸಿದರು. ಅವರ ಕ್ರಾಂತಿಯು ಅಪ್ಪಟ ಮಾನವೀಯ ಕ್ರಾಂತಿಯಾಗಿತ್ತು ಹಾಗೂ ಮಾನವ ಜೀವನದ ಆಧ್ಯಾತ್ಮಿಕ, ಸಾಮಾಜಿಕ, ಕೌಟುಂಬಿಕ, ಆರ್ಥಿಕ, ಶೈಕ್ಷಣಿಕ, ಆಡಳಿತ ಹೀಗೆ ಎಲ್ಲ ಕ್ಷೇತ್ರಗಳನ್ನು ಬೆಳಗಿಸಿದ ಕ್ರಾಂತಿಯಾಗಿತ್ತು. ಸುಭಿಕ್ಷೆ ಮತ್ತು ನಿರ್ಭಯತ್ವದ ಸಮಾಜ ನಿರ್ಮಾಣ ಅವರ ಗುರಿಯಾಗಿತ್ತು.
ಪ್ರವಾದಿ ಮುಹಮ್ಮದ್(ಸ)ರವರ ಈ ಸಂದೇಶಗಳನ್ನು ಕನ್ನಡ ಜನತೆಗೆ ಪರಿಚಯಿಸುವುದು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು, ಪರಸ್ಪರ ಬಾಂಧವ್ಯಗಳನ್ನು ಬಲಪಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಅಭಿಯಾನದ ಪ್ರಯುಕ್ತ, ಖ್ಯಾತ ಸಾಹಿತಿ ಹಾಗೂ ಗ್ರಂಥಕರ್ತ ಶ್ರೀ ಯೋಗೇಶ್ ಮಾಸ್ಟರ್ ಅವರು ಬರೆದ ʻಮಾನವ ಮನಸ್ಸಿನ ಕೃಷಿಕ – ಮನದೊಡೆಯ ಪ್ರವಾದಿ ಮುಹಮ್ಮದ್(ಸ)’ ಹಾಗೂ ವಾರ್ತಾಭಾರತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಬರೆದ `ಸಮಗ್ರ ಕ್ರಾಂತಿಯ ಜ್ಯೋತಿ ಬೆಳಗಿದ ಪೈಗಂಬರ್ ಮುಹಮ್ಮದ್(ಸ)’ ಎಂಬ ಎರಡು ಕೃತಿಗಳನ್ನು ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗಿದೆ. ಜತೆಗೆ ರಾಜ್ಯಾದ್ಯಂತ ವೈಯಕ್ತಿಕ ಭೇಟಿ, ವಿಚಾರಗೋಷ್ಠಿ, ಸಾರ್ವಜನಿಕ ಸಮಾವೇಶ, ಸಂವಾದ ಕಾರ್ಯಕ್ರಮ, ಚರ್ಚಾಗೋಷ್ಠಿ, ಸೀರತ್ ಪ್ರವಚನ, ಸೀರತ್ ಎಕ್ಸಿಬಿಶನ್, ಸಮಾಜಸೇವಾ ಚಟುವಟಿಕೆಗಳು, ಸೌಹಾರ್ದ ಸಂದೇಶ ರ್ಯಾಲಿ ಹೀಗೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಿವೆ.
ಸ್ಥಾನೀಯ ಕಾರ್ಯಕ್ರಮಗಳು:
ನಮ್ಮ ನಗರದಲ್ಲಿ ಅಭಿಯಾನದ ಪ್ರಯುಕ್ತ ವಿವಿಧ ಮೊಹಲ್ಲಗಳಲ್ಲಿ ಸೀರತ್ ಸಭೆಗಳನ್ನು ಆಯೋಜಿಸಲಾಗಿದೆ. ಮಹಿಳಾ ವಿಭಾಗವು ಮಹಿಳೆಯರ ಸ್ನೇಹ ಸಮ್ಮಿಲನ ಹಾಗೂ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಸೆಪ್ಟೆಂಬರ್ 15ರಂದು ಉಚಿತ ಯುನಾನಿ ವೈದ್ಯಕೀಯ ಮತ್ತು ಹಿಜಾಮ ಚಿಕಿತ್ಸಾ ಶಿಬಿರವನ್ನು ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್, ಆಯುಶ್ ಇಲಾಖೆ, ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ, ಸಮಾಜ ಸೇವಾ ವಿಭಾಗದ ಸಹಯೋಗದಲ್ಲಿ ನಡೆಯಲಿದೆ. ಸೆಪ್ಟೆಂಬರ್ 20 ರಂದು ಬೆಂಗ್ರೆ ಕಸ್ಬಾದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.
ಸಾರ್ವಜನಿಕ ವಿಚಾರಗೋಷ್ಠಿ
ಈ ಅಭಿಯಾನದ ಪ್ರಯುಕ್ತ ಸೆಪ್ಟೆಂಬರ್ 11 ಶುಕ್ರವಾರ ಸಂಜೆ 7ಕ್ಕೆ ಮಂಗಳೂರು ಪುರಭವನದಲ್ಲಿ `ಪ್ರವಾದಿ ಮುಹಮ್ಮದ್(ಸ) ವರ್ತಮಾನ ಭಾರತದ ಪೂರ್ವಗ್ರಹ ಮತ್ತು ವಾಸ್ತವ’ ಎಂಬ ಕೇಂದ್ರೀಯ ವಿಷಯದಲ್ಲಿ ಸಾರ್ವಜನಿಕ ವಿಚಾರಗೋಷ್ಠಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಈದಿನ.ಕಾಮ್ ಮುಖ್ಯಸ್ಥ ಡಾ| ವಾಸು ಎಚ್.ವಿ. ಬೆಂಗಳೂರು, ರೊಝಾರಿಯೊ ಚರ್ಚ್ ಪ್ರಧಾನ ಗುರುಗಳಾದ ಫಾ. ವಲೇರಿಯನ್ ಡಿಸೋಜ, ಸನ್ಮಾರ್ಗ ಸಮೂಹ ಮಾಧ್ಯಮದ ಸಂಪಾದಕರಾದ ಏ.ಕೆ. ಕುಕ್ಕಿಲ, ಅನುಪಮ ಮಹಿಳಾ ಮಾಸಿಕ ಸಂಪಾದಕಿ ಸಬೀಹ ಫಾತಿಮ ಭಾಗವಹಿಸಲಿರುವರು. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಉತ್ತರ ಅಧ್ಯಕ್ಷರಾದ ಸಿ.ಎ. ಮುಹಮ್ಮದ್ ಇಸ್ಹಾಕ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವವರು:
ಕೆ.ಎಂ. ಅಶ್ರಫ್ ನಗರಾಧ್ಯಕ್ಷರು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು, ಗಫೂರ್ ಕುಳಾÊ ಅಭಿಯಾನ ಸಂಚಾಲಕರು, ಮಕ್ಬೂಲ್ ಕುದ್ರೋಳಿ ಅಭಿಯಾನ ಉಪಸಂಚಾಲಕರು, ಸುಮಯ್ಯ ಹಮೀದುಲ್ಲಾ ಮಹಿಳಾ ಸಂಚಾಲಕಿ ಜ.ಇ. ಹಿಂದ್ ದಕ್ಷಿಣ, ಝೀನತ್ ಇಸ್ಮಾಈಲ್ ಮಹಿಳಾ ಸಂಚಾಲಕಿ ಜ.ಇ. ಹಿಂದ್ ಉತ್ತರ, ಶಹೀದ ಉಮರ್ ಅಭಿಯಾನ ಮಹಿಳಾ ಸಂಚಾಲಕಿ.












