ಬೆಂಗಳೂರು: ಪ್ರವಾಹದಿಂದ ತತ್ತರಿಸಿರುವ ಅಸ್ಸಾಮ್ ಮತ್ತು ಬಿಹಾರದಲ್ಲಿ ಪರಿಹಾರ ಕಾಮಗಾರಿಗಳಲ್ಲಿ ತೊಡಗಿಕೊಳ್ಳುವುದಕ್ಕಾಗಿ ರಾಜ್ಯದ ಹುಮಾನಿಟೇರಿಯನ್ ರಿಲೀಫ್ ಸೊಸೈಟಿ (HRS)ಯ ತಂಡವು ಬುಧವಾರ ರಾತ್ರಿ (ಜು. 24) ವಿಮಾನದ ಮೂಲಕ ಅಸ್ಸಾಮಿಗೆ ಪ್ರಯಾಣ ಹೊರಟಿತು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ/ ಸಾದ್ ಬೆಳಗಾಮಿಯವರು ಈ ಹತ್ತು ಮಂದಿಯ ತಂಡಕ್ಕೆ ಶುಭ ಕೋರಿ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಅಖಿಲ ಭಾರತ ಉಪಾಧ್ಯಕ್ಷರಾದ ಅಮೀನುಲ್ ಹಸನ್, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಮೌ/ ವಹೀದುದ್ದೀನ್ ಉಮ್ರಿ, ಅಕ್ಬರಲಿ ಉಡುಪಿ ಮತ್ತು ಯೂಸುಫ್ ಕನ್ನಿ ಉಪಸ್ಥಿತರಿದ್ದರು.
ಪ್ರವಾಹದಿಂದಾಗಿ ಅಸ್ಸಾಮ್ ಮತ್ತು ಬಿಹಾರವು ಅಕ್ಷರಶಃ ನೆರೆಗೆ ತೇಲಿದಂತಾಗಿದ್ದು, 197 ಮಂದಿ ಈಗಾಗಲೇ ಸಾವಿಗೀಡಾಗಿದ್ದಾರೆ. ಅಲ್ಲದೆ, 1.24 ಮಂದಿ ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ.
ಅಸ್ಸಾಮ್ ನ ನಲಬಾರಿ, ಬರ್ ಪೇಟ, ಧೂಬ್ರಿ, ಗೋಲ್ಗಾಟ್ ಮುಂತಾದ ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ. ಬಿಹಾರದಲ್ಲಿ ಈವರೆಗೆ ಪ್ರವಾಹದಿಂದಾಗಿ 123 ಮಂದಿ ಮೃತಪಟ್ಟಿದ್ದಾರೆ, ಅಸ್ಸಾಮ್ ನಲ್ಲಿ 74 ಮಂದಿ ಜೀವ ಕಳಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಜಮಾಅತೆ ಇಸ್ಲಾಮಿ ಹಿಂದ್ ನ ಅಂಗ ಸಂಸ್ಥೆಯಾದ HRS, ತನ್ನ ಸೇವಾ ತಂಡವನ್ನು ಅಸ್ಸಾಮ್ ಗೆ ಕಳುಹಿಸಿಕೊಡಲು ನಿರ್ಧರಿಸಿತು. ಈ ತಂಡದಲ್ಲಿ,
ನಿಸ್ಸಾರ್ ತುಮಕೂರು, ಏಜಾಜ್ ಅಹ್ಮದ್ ಶಿವಮೊಗ್ಗ, ಮುಹಮ್ಮದ್ ಫೈಝಲ್ ಬೀದರ್, ಮುಹಮ್ಮದ್ ಅಬ್ರಾರ್ ಬೀದರ್, ಮುನೀರುಲ್ಲಾ ಹುಣಸೂರು, ಕಲೀಮ್ ಬಗ್ದಲ್ , ಗೌಸ್ ಪಟೇಲ್ ಕೊಪ್ಪಲ್, ಪರ್ವೇಜ್ ಮಕಾಂದಾರ್ ಬೆಳಗಾಮಿ, ಸಮೀರ್ ಅಹ್ಮದ್ ಬೆಳಗಾಮಿ, ಶೈಖ್ ಕರಾರ್ ಅಹ್ಮದ್ ಬಸವಕಲ್ಯಾಣ ಮುಂತಾದವರು ಇದ್ದರು. ತಂಡದ ನೇತೃತ್ವವನ್ನು ಶೈಖ್ ಕರಾರ್ ಅಹ್ಮದ್ ಬಸವಕಲ್ಯಾಣ ಇವರು ವಹಿಸಿಕೊಂಡಿದ್ದಾರೆ. HRS ತಂಡವು ಈ ಹಿಂದೆಯೂ ದೇಶದ ವಿವಿಧೆಡೆಗಳಿಗೆ ಪರಿಹಾರ ಕಾರ್ಯಾಚರಣೆಗಾಗಿ ತೆರಳಿದ್ದು, ಇತ್ತೀಚೆಗೆ ಕೇರಳ ಮತ್ತು ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ಕಾಣಿಸಿಕೊಂಡ ಭೀಕರ ಪ್ರವಾಹದ ಸಮಯದಲ್ಲಿ ಸೇವಾ ಕಾರ್ಯಾಚರಣೆಗಿಳಿದು ವ್ಯಾಪಕ ಪ್ರಶಂಸೆಗೆ ಪಾತ್ರವಾಗಿತ್ತು.












