ಸನ್ಮಾರ್ಗ ವಾರ್ತೆ
ಹೊಸ ದೆಹಲಿ: ದೆಹಲಿಯ ಹಲವಾರು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ದಿ ಬ್ರಿಟಿಷ್ ಸ್ಕೂಲ್, ಸರ್ದಾರ್ ಪಟೇಲ್ ಸ್ಕೂಲ್, ಸ್ಪ್ರಿಂಗ್ಡೇಲ್ಸ್ ಸ್ಕೂಲ್ ಮತ್ತು ಏರ್ ಫೋರ್ಸ್ ಬಾಲ ಭಾರತಿ ಸ್ಕೂಲ್ ಮುಂತಾದ ಶಾಲೆಗಳಿಗೆ ಇಮೇಲ್ ಮೂಲಕ ಬೆದರಿಕೆಗಳು ಬಂದಿವೆ. ಈ ಶಾಲೆಗಳಲ್ಲಿ ಭದ್ರತಾ ತಪಾಸಣೆಗಳು ಮುಂದುವರೆದಿವೆ.
ಬಾಂಬ್ ಬೆದರಿಕೆಯ ಕುರಿತು ಮೊದಲು ಆರ್ಮಿ ಪಬ್ಲಿಕ್ ಸ್ಕೂಲ್ನಿಂದ ಮಾಹಿತಿ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ದಳ ತಿಳಿಸಿದೆ. ಇದು ಬೆಳಿಗ್ಗೆ 11.29ಕ್ಕೆ ಸಂಭವಿಸಿತ್ತು. ಬಳಿಕ ಶಾಲೆಯಲ್ಲಿದ್ದ ಎಲ್ಲ ವಿದ್ಯಾರ್ಥಿಗಳನ್ನು ಹೊರಗೆ ಕರೆತರಲಾಯಿತು. ಶಾಲೆಗಳಲ್ಲಿ ಪರೀಕ್ಷೆಗಳು ನಡೆಯುತ್ತಿದ್ದ ಸಮಯದಲ್ಲಿ ಈ ಬೆದರಿಕೆ ಸಂದೇಶ ಬಂದಿತ್ತು.
ಬೆಳಿಗ್ಗೆ 10.30 ಮತ್ತು 10.40ರ ನಡುವೆ ವಿವಿಧ ಶಾಲೆಗಳಿಗೆ ಬೆದರಿಕೆ ಇಮೇಲ್ಗಳು ಬಂದಿದ್ದವು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಅಗ್ನಿಶಾಮಕ ದಳ ಇತ್ಯಾದಿಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಇಲ್ಲಿಯವರೆಗೆ ನಡೆಸಿದ ತಪಾಸಣೆಯಲ್ಲಿ ಯಾವುದೇ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಇಮೇಲ್ನ ಮೂಲದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.












