ಛತ್ತೀಸ್‌ಗಢ | ನಾನು ಭಾರತೀಯನೂ, ನನ್ನ ಸಹೋದರ ಬಾಂಗ್ಲಾದೇಶಿಯೂ ಆಗಲು ಹೇಗೆ ಸಾಧ್ಯ? ಬಂಧನದ ನಂತರ ಬಂಗಾಳಿ ಮುಸ್ಲಿಂ ಕಾರ್ಮಿಕನ ಪ್ರಶ್ನೆ

0
274

ಸನ್ಮಾರ್ಗ ವಾರ್ತೆ

ಬಿಲಾಸ್‌ಪುರ: ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಬಂಧನ ಕೇಂದ್ರದಲ್ಲಿ 14 ದಿನಗಳನ್ನು ಕಳೆದ ನಂತರ ಮುಸ್ತಾಕಿಮ್ ಶೇಕ್ ಮುರ್ಷಿದಾಬಾದ್‌ನಲ್ಲಿರುವ ತಮ್ಮ ಮನೆಗೆ ವಾಪಸಾದರು. ಆದರೆ ಅವರ ಕಿರಿಯ ಸಹೋದರ ಸಾಬಿರ್, ತಾನು ಭಾರತೀಯ ನಾಗರಿಕನೆಂದು ಅಧಿಕಾರಿಗಳು ಪರಿಶೀಲಿಸುವುದನ್ನು ಕಾಯುತ್ತಾ ಸುಮಾರು 1,000 ಕಿ.ಮೀ ದೂರದಲ್ಲಿ ಇನ್ನೂ ಬಂಧನದಲ್ಲಿದ್ದಾರೆ.

ಸೆಪ್ಟೆಂಬರ್ 4 ರ ರಾತ್ರಿ ಬಿಲಾಸ್‌ಪುರದ ಸಿರ್ಗಿತಿ ಪೊಲೀಸ್ ಠಾಣೆಯಿಂದ ಪೊಲೀಸರು ವಶಕ್ಕೆ ತೆಗೆದುಕೊಂಡ 23 ಬಂಗಾಳಿ ಮಾತನಾಡುವ ಮುಸ್ಲಿಂ ಪುರುಷರಲ್ಲಿ ಮುಸ್ತಾಕಿಮ್ ಮತ್ತು ಸಾಬಿರ್ ಕೂಡ ಸೇರಿದ್ದಾರೆ. ಎಲ್ಲಾ 23 ಜನರನ್ನು ರಾಯ್‌ಪುರದಲ್ಲಿರುವ ಬಂಧನ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಸೆಪ್ಟೆಂಬರ್ 18 ರಂದು, ಮುಸ್ತಾಕಿಮ್ ಸೇರಿದಂತೆ ಅವರಲ್ಲಿ 19 ಜನರಿಗೆ ರೈಲು ಹತ್ತಿ ಛತ್ತೀಸ್‌ಗಢ ಬಿಟ್ಟುಹೋಗುವಂತೆ ಹೇಳಲಾಯಿತು. ಸಾಬಿರ್, ಇಬ್ಬರು ಸೋದರಸಂಬಂಧಿಗಳು ಮತ್ತು ಮತ್ತೊಬ್ಬ ವ್ಯಕ್ತಿ ಬಂಧನದಲ್ಲೇ ಉಳಿದಿದ್ದಾರೆ.

ಈ ವಿಭಜನೆಗೆ ಸ್ಪಷ್ಟ ಕಾರಣವಿದೆ. ಮುಸ್ತಾಕಿಮ್ ಹೆಸರು ಮತದಾರರ ಪಟ್ಟಿಯಲ್ಲಿದೆ. ಆದರೆ ಸಾಬಿರ್ ಹೆಸರಿಲ್ಲ. ಈ ವರ್ಷದ ಆರಂಭದಲ್ಲಿ ನಡೆದ ಬಂಗಾಳ ವಿಧಾನಸಭೆ ಚುನಾವಣೆಯ ಮೊದಲು ನಡೆಸಲಾದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಸಮಯದಲ್ಲಿ ಸಾಬಿರ್ ಅವರ ಹೆಸರನ್ನು ತೆಗೆದುಹಾಕಲಾಗಿದೆ.

“ನಾವು ಆರು ಜನ ಸಹೋದರ-ಸಹೋದರಿಯರು. ನಮ್ಮ ಐವರ ಹೆಸರುಗಳು ಮತದಾರರ ಪಟ್ಟಿಯಲ್ಲಿದ್ದವು, ಆದರೆ ಸಾಬಿರ್ ಹೆಸರು ಕಾಣೆಯಾಗಿತ್ತು” ಎಂದು ಮುಸ್ತಾಕಿಮ್ ಪತ್ರಕರ್ತರಿಗೆ ತಿಳಿಸಿದರು. “ನಾನು ಭಾರತೀಯನಾಗಿದ್ದು, ನನ್ನ ಕಿರಿಯ ಸಹೋದರ ಬಾಂಗ್ಲಾದೇಶಿಯಗಲು ಹೇಗೆ ಸಾಧ್ಯ?”

ಮುಸ್ತಾಕಿಮ್ ಛತ್ತೀಸ್‌ಗಢದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ವಾಸಿಸುತ್ತಿದ್ದು, ಮನೆಮನೆಗೆ ತೆರಳಿ ಬಟ್ಟೆ ಮತ್ತು ಅಲ್ಯೂಮಿನಿಯಂ ಪಾತ್ರೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಮುರ್ಷಿದಾಬಾದ್‌ನ ಸಂಸೆರ್‌ಗಂಜ್, ಸುತಿ ಮತ್ತು ರಘುನಾಥ್‌ಗಂಜ್‌ನಿಂದ ಬಂದಿದ್ದ ಅವರ ಸಹೋದರ ಮತ್ತು ಸೋದರಸಂಬಂಧಿಗಳು ಸಹ ಬಿಲಾಸ್‌ಪುರದಲ್ಲಿ ಕೆಲಸ ಮಾಡುತ್ತಿದ್ದರು.

ಬಂಧನಕ್ಕೆ ಎರಡು ತಿಂಗಳ ಮೊದಲು ಪೊಲೀಸರು ಅವರ ಮನೆಗಳಿಗೆ ಬಂದು ದಾಖಲೆಗಳೊಂದಿಗೆ ಠಾಣೆಗೆ ಬರುವಂತೆ ಕೇಳಿಕೊಂಡಿದ್ದರು. ದಾಖಲೆಗಳೊಂದಿಗೆ ಠಾಣೆಯಲ್ಲಿ ಇಡೀ ದಿನ ಕಾದರೂ ಯಾರೂ ಅವರ ವಿಚಾರಣೆ ನಡೆಸದೆ ವಾಪಸ್ ಕಳುಹಿಸಿದರು. ಸೆಪ್ಟೆಂಬರ್ 3 ರಂದು, ಅಧಿಕಾರಿಗಳು ಅವರ ಹೆಸರುಗಳು ಮತ್ತು ಸಂಖ್ಯೆಗಳನ್ನು ದಾಖಲಿಸಲು ಮರಳಿದರು. ಮರುದಿನ ಸಂಜೆ, ಅವರನ್ನು ಕರೆದುಕೊಂಡು ಬಸ್ಸಿನಲ್ಲಿ ರಾಯ್‌ಪುರಕ್ಕೆ ಕರೆದೊಯ್ಯಲಾಯಿತು. ವಿಚಾರಣೆಯ ನಂತರ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಅವರಿಗೆ ಹೇಳಲಾಗಿತ್ತು. ಆದರೆ ಅವರ 14 ದಿನಗಳ ಬಂಧನದ ಅವಧಿಯಲ್ಲಿ ಯಾರೂ ಅವರನ್ನು ವಿಚಾರಣೆ ಮಾಡಿಲ್ಲ.

“ನಮ್ಮನ್ನು ನಿಂದಿಸಲಾಗಲಿಲ್ಲ ಅಥವಾ ದೈಹಿಕವಾಗಿ ಹಿಂಸಿಸಲಾಗಲಿಲ್ಲ ಆದರೆ ದಿನಗಟ್ಟಲೆ ಒಳಗೆ ಲಾಕ್ ಆಗಿರುವುದು ಸ್ವತಃ ಒಂದು ಶಿಕ್ಷೆಯಾಗಿತ್ತು” ಎಂದು ಮುಸ್ತಾಕಿಮ್ ಹೇಳಿದರು.

ಮತ್ತೊಬ್ಬ ಬಂಧಿತರ ಸಂಬಂಧಿ, ರಂಜಾನ್ ಶೇಕ್ ಅವರು ತಮ್ಮ ಸಹೋದರನ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಬಿಲಾಸ್‌ಪುರಕ್ಕೆ ಪ್ರಯಾಣಿಸಿ ವಂಶವೃಕ್ಷವನ್ನು ಒದಗಿಸಬೇಕಾಯಿತು.

ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸಮಿರುಲ್ ಇಸ್ಲಾಂ ಅವರು ಈ ಬಂಧನಗಳು ಕಳವಳಕಾರಿಯಾಗಿದೆ ಎಂದು ಕರೆದಿದ್ದಾರೆ. “ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಂರನ್ನು ಅಧಿಕಾರಿಗಳು ಗುರಿಯಾಗಿಸುತ್ತಿರುವುದು ದುರದೃಷ್ಟಕರ” ಎಂದು ಅವರು ಹೇಳಿದರು. ಉಳಿದ ನಾಲ್ವರನ್ನು ಈ ವಾರದೊಳಗೆ ಬಿಡುಗಡೆ ಮಾಡದಿದ್ದರೆ ತಮ್ಮ ಪಕ್ಷವು ನ್ಯಾಯಾಲಯದ ಮೊರೆ ಹೋಗಲಿದೆ ಎಂದು ಹೇಳಿದರು.

ಸಾಬಿರ್ ಶೇಕ್ ಅವರ ತಕ್ಷಣದ ಬೇಡಿಕೆ ಸರಳವಾಗಿದೆ. ತಾನು ಭಾರತೀಯ ನಾಗರಿಕನ ಕಿರಿಯ ಸಹೋದರ ಎಂದು ಬಿಲಾಸ್‌ಪುರದ ಅಧಿಕಾರಿಗಳು ಒಪ್ಪಿಕೊಳ್ಳಬೇಕಾಗಿದೆ.