ಸ್ವಾವಲಂಬಿ ಬದುಕಿಗೆ ಸ್ವಾಭಿಮಾನದ ಉಡುಗೊರೆ ಎಂಬ ಯೋಜನೆ ಅಡಿಯಲ್ಲಿ BSWT ಹೊಲಿಗೆ ತರಬೇತಿ ಕೌಶಲ್ಯ ಮಹಿಳೆಯರ ಸ್ವಾವಲಂಬನೆಯತ್ತ ಹೆಜ್ಜೆ: ಪ್ರಮಾಣ ಪತ್ರ ವಿತರಣೆ ಮತ್ತು ವಸ್ತ್ರ ಕೌಶಲ್ಯ ಪ್ರದರ್ಶನ.

0
153

ಸನ್ಮಾರ್ಗ ವಾರ್ತೆ

ಬಜಾಲ್: ಭಾರತ್ ಸೋಷಿಯಲ್ ಆಂಡ್ ವೆಲ್ಫೇರ್ ಟ್ರಸ್ಟ್ (BSWT), ಮಂಗಳೂರು ಇದರ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕನೇ ಹಂತದ ಹೊಲಿಗೆ ತರಬೇತಿ ಶಿಬಿರದ ಬೀಳ್ಕೊಡುಗೆ ಮತ್ತು ಪ್ರಮಾಣ ಪತ್ರ ವಿತರಣೆ ಹಾಗೂ ವಸ್ತ್ರ ಕೌಶಲ್ಯ ಪ್ರದರ್ಶನ ಸಮಾರಂಭವು ಪಕ್ಕಲಡ್ಕ ಬಜಾಲ್‌ನ ಹೊಲಿಗೆ ತರಬೇತಿ ಕೇಂದ್ರದಲ್ಲಿ ನಡೆಯಿತು. ಶಿಬಿರಾರ್ಥಿಗಳು ತಯಾರಿಸಿದ ವಿವಿಧ ವಿನ್ಯಾಸದ ಉಡುಪುಗಳು ಹಾಗೂ ವಸ್ತ್ರ ಕೌಶಲ್ಯಗಳನ್ನು ಪ್ರದರ್ಶನವನ್ನು ಅತಿಥಿಗಳು ಉದ್ಘಾಟಿಸಿ ಶಿಬಿರಾರ್ಥಿಗಳ ಕೈಚಳಕ ಮತ್ತು ಸೃಜನಶೀಲತೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವು ನಾಡಗೀತೆಯೊಂದಿಗೆ ಆರಂಭವಾಯಿತು. BSWTಯ ವಿವಿಧ ಸಮಾಜಮುಖಿ ಕಾರ್ಯಗಳ ಸಾಧನೆಗಳನ್ನು ಪರಿಚಯಿಸುವ ‘ಸಾಧನೆಯ ಪಕ್ಷಿ ನೋಟ’ ಡಾಕ್ಯುಮೆಂಟರಿ ಪ್ರದರ್ಶನಕ್ಕೆ ಶ್ರೀ ಪ್ರವೀಣ್ ಚಂದ್ರ ಆಳ್ವ ಅವರು ಚಾಲನೆಯಲ್ಲಿ ನೀಡಿದರು.

ಟ್ರಸ್ಟ್‌ನ ಅಧ್ಯಕ್ಷರಾದ ಎನ್. ಅಮೀನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶದಿಂದ ಇಂತಹ ತರಬೇತಿ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಲಾಗುತ್ತಿದೆ” ಎಂದರು.

ಕಾರ್ಯಕ್ರಮವನ್ನು ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್, ನಾಗೂರಿ, ಕಂಕನಾಡಿ ಇಲ್ಲಿನ ಶ್ರೀಮತಿ. ಜರೀನಾ ತಾಜ್ ಉದ್ಘಾಟಿಸಿ ಮಾತನಾಡಿ, “ಮಹಿಳೆಯರು ತಮ್ಮಲ್ಲಿರುವ ಕೌಶಲ್ಯವನ್ನು ಗುರುತಿಸಿ ಅದನ್ನು ಉದ್ಯೋಗ ಹಾಗೂ ಸ್ವಾವಲಂಬನೆಯಾಗಿ ಪರಿವರ್ತಿಸಿಕೊಳ್ಳಬೇಕು. ಹೊಲಿಗೆ ತರಬೇತಿಯಂತಹ ಕೌಶಲ್ಯಾಧಾರಿತ ಕಾರ್ಯಕ್ರಮಗಳು ಮಹಿಳೆಯರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ ಕುಟುಂಬದ ಆರ್ಥಿಕ ಸ್ಥಿತಿಗೂ ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಬಳಿಕ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಶಿಬಿರಾರ್ಥಿಗಳಿಗೆ ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಶಿಬಿರಾರ್ಥಿಗಳಾದ ಶ್ರೀಮತಿ ಕುಮುದಾ ಹಾಗೂ ಕುಮಾರಿ ರಶ್ಮಿತಾ ಅವರು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡು, ತರಬೇತಿಯ ಮೂಲಕ ತಮ್ಮಲ್ಲಿ ಹೊಸ ಕೌಶಲ್ಯ ಮತ್ತು ಆತ್ಮವಿಶ್ವಾಸ ಮೂಡಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದರು. ನಿಕಟಪೂರ್ವ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ, ಪ್ರವೀಣ್ ಚಂದ್ರ ಆಳ್ವ ಅವರು ಶುಭಹಾರೈಸಿ, “ಸಮಾಜದ ಅಭಿವೃದ್ಧಿಯಲ್ಲಿ ಕೌಶಲ್ಯಾಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ತರಬೇತಿ ಪಡೆದವರು ಕೇವಲ ಪ್ರಮಾಣ ಪತ್ರ ಪಡೆಯುವುದಕ್ಕೆ ಸೀಮಿತವಾಗದೆ, ಕಲಿತ ಕೌಶಲ್ಯವನ್ನು ಜೀವನೋಪಾಯದ ಮಾರ್ಗವನ್ನಾಗಿ ಮಾಡಿಕೊಂಡು ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವಂತಾಗಬೇಕು” ಎಂದು ಹೇಳಿದರು.

ಮಾಜಿ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ, ಭಾಸ್ಕರ ಚಂದ್ರ ಶೆಟ್ಟಿ ಅವರು ಮಾತನಾಡಿ, “ಸಮಾಜದ ವಿವಿಧ ವರ್ಗಗಳ ಜನರಿಗೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವ ಮೂಲಕ BSWT ನಡೆಸುತ್ತಿರುವ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ. ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಇಂತಹ ಕಾರ್ಯಕ್ರಮಗಳು ಇನ್ನಷ್ಟು ವಿಸ್ತರಿಸಲಿ” ಎಂದು ಶುಭ ಹಾರೈಸಿದರು. ಮಾಜಿ ಸದಸ್ಯರು, ಮಂಗಳೂರು ಮಹಾನಗರ ಪಾಲಿಕೆ, ಬಿ. ವಿಶ್ವನಾಥ್ ಅವರು ಶುಭಹಾರೈಸಿ, “ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಕೌಶಲ್ಯವನ್ನು ಸದುಪಯೋಗಪಡಿಸಿಕೊಂಡು ಸ್ವಂತ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಇಂತಹ ತರಬೇತಿಗಳಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ” ಎಂದರು.

ಪೊಲೀಸ್ ಸಹಾಯಕ ಸಬ್ ಇನ್ಸ್ಪೆಕ್ಟರ್ ಜಗದೀಶ್, ನಾಗೂರಿ, ಕಂಕನಾಡಿ ಅವರು ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಬೆಳೆಸಲು ಅವಕಾಶ ನೀಡುವುದು ಅತ್ಯಂತ ಅಗತ್ಯ. ಹೊಲಿಗೆ ತರಬೇತಿಯಂತಹ ಕಾರ್ಯಕ್ರಮಗಳು ಮಹಿಳೆಯರಿಗೆ ತಮ್ಮ ಪ್ರತಿಭೆಯನ್ನು ಆರ್ಥಿಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಉತ್ತಮ ವೇದಿಕೆಯಾಗಿವೆ. ಹಾಗೆಯೇ ಮಹಿಳೆಯರು ಸಾಮಾಜಿಕ ಘಟನೆಗಳ ನಿರಂತರವಾಗಿ ಜಾಗೃತರಿರಬೇಕು ಇಂದು ಸೈಬರ್ ಅಪರಾಧ ವ್ಯಾಪಕವಾಗಿದೆ ತಾವು ಬಳಸುವ ಮುಬೈಲ್ ನಲ್ಲಿ ಬರುವ ಎಲ್ಲಾ ಮಾಹಿತಿಗಳನ್ನು ಪರಿಶೀಲಿಸಬೇಕು ಎಂದು ಸೈಬರ್ ಕ್ರೈಂ ಮಾಹಿತಿ ನೀಡಿದರು.

ನಂತರ ಶಿಬಿರಾರ್ಥಿಗಳಿಗೆ ಸಾಂಕೇತಿಕವಾಗಿ ಪ್ರಮಾಣ ಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಅಧೀಕ್ಷಕರು, ಮಂಗಳೂರು ವಿಶ್ವವಿದ್ಯಾಲಯ, ಕೊಣಾಜೆ, ಹರೀಶ್ ಕುಮಾರ್ ಕುತ್ತಡ್ಕ ರವರು ಮಾತನಾಡಿ, “ಯಾವುದೇ ತರಬೇತಿಯ ಯಶಸ್ಸು ಅದು ವ್ಯಕ್ತಿಯ ಜೀವನದಲ್ಲಿ ಎಷ್ಟರ ಮಟ್ಟಿಗೆ ಬದಲಾವಣೆ ತರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಶಿಬಿರಾರ್ಥಿಗಳು ಪಡೆದಿರುವ ಹೊಲಿಗೆ ಕೌಶಲ್ಯವನ್ನು ಮುಂದಿನ ದಿನಗಳಲ್ಲಿ ಉದ್ಯೋಗ, ಸ್ವಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಗೆ ಬಳಸಿಕೊಳ್ಳಬೇಕು. ಸಮಾಜದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಾದಾಗ ಕುಟುಂಬ ಹಾಗೂ ಸಮುದಾಯದ ಅಭಿವೃದ್ಧಿಗೂ ಅದು ನೆರವಾಗುತ್ತದೆ. ನಿಸ್ವಾರ್ಥವಾಗಿ ಕೆಲಸ ಮಾಡುವ ಈ ಸಂಸ್ಥೆ ನಿಜವಾಗಿಯೂ ಎಲ್ಲಾ ರೀತಿಯ ಗೌರವಕ್ಕೂ, ಪ್ರಶಸ್ತಿಗೂ ಅರ್ಹವಾಗಿದೆ” ಎಂದು ಹೇಳಿದರು. ‌

ಸಂಸ್ಥೆಯ ಸದಸ್ಯರು ಅತಿಥಿಗಳನ್ನು ಫಲ ಮತ್ತು ಕಿರು ಕಾಣಿಕೆ ನೀಡಿ ಗೌರವಿಸಿದರು. ಶ್ರೀಮತಿ ಲಾವಣ್ಯ ಸ್ವಾಗತಿಸಿದರು. ಸಂಸ್ಥೆಯ ಪಿಆರ್ ಒ ಆಗಿರುವ ಎಂ.ಎ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಶ್ರೀಮತಿ. ಮಾಲಾಕ್ಷಿ ರಾಜೀವ ರವರು ಧನ್ಯವಾದ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಕಾರ್ಯಕ್ರಮದ ಬಳಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು.