ಸನ್ಮಾರ್ಗ ವಾರ್ತೆ
ಯುಎಇಯ ಅಬುಧಾಬಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ನಡುವಿನ ಸಭೆಯಲ್ಲಿ ತನ್ನ ಪ್ರತಿನಿಧಿಗಳು ಭಾಗವಹಿಸಿಲ್ಲ ಎಂದು ಸೌದಿ ಅರೇಬಿಯಾ ಹೇಳಿದೆ. ಈ ಸಭೆಯಲ್ಲಿ ಸೌದಿ ಅರೇಬಿಯಾದ ಪ್ರತಿನಿಧಿಗಳು ಭಾಗವಹಿಸಿದ್ದರು ಎಂದು ಇಸ್ರೇಲ್ ಪತ್ರಕರ್ತರೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವುದರ ಬಳಿಕ ಈ ಪ್ರತಿಕ್ರಿಯೆ ಬಂದಿದೆ.
ಈ ಸಭೆಯಲ್ಲಿ ಜೋರ್ಡಾನ್ ಪ್ರತಿನಿಧಿ ಭಾಗವಹಿಸಿದ್ದರು ಎಂಬ ವರದಿಯನ್ನು ಜೋರ್ಡಾನ್ ಅಧಿಕಾರಿಗಳು ನಿರಾಕರಿಸಿದ್ದಾರೆ.
ಇಸ್ರೇಲ್ ಮಾಧ್ಯಮಗಳಲ್ಲಿ ಇಂತಹ ಸುದ್ದಿ ಪ್ರಕಟ ಆಗಿರೋದಕ್ಕೆ ಅಲ್ಲಿ ಚುನಾವಣೆ ಇರುವುದು ಕಾರಣವಾಗಿದೆ. ಚುನಾವಣೆಯ ಸಮಯದಲ್ಲಿ ನೆತನ್ಯಾಹು ಅವರು ತಮ್ಮ ಪ್ರಭಾವವನ್ನು ವೃದ್ಧಿಸುವುದಕ್ಕೆ ಇಂತಹ ಸುದ್ದಿಯನ್ನು ಪ್ರಕಟಿಸಲಾಗುತ್ತಿದೆ ಎಂದು ಜೋರ್ಡಾನ್ ಹೇಳಿದೆ.
ನೆತನ್ಯಾಹು ಅವರು ಕಳೆದ ಆದಿತ್ಯವಾರ ಅಬುದಾಬಿಯಲ್ಲಿ ಅಧ್ಯಕ್ಷರನ್ನು ಭೇಟಿಯಾಗಿ ಎರಡು ದೇಶಗಳ ನಡುವಿನ ಸಂಬಂಧ ಮತ್ತು ಅದನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಚರ್ಚಿಸಿದ್ದಾರೆ ಅಧಿಕಾರಿಗಳನ್ನು ಉಲ್ಲೇಖಿಸಿ ರೈಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸುಮಾರು ಆರು ಗಂಟೆಗಳ ಕಾಲ ಸಭೆ ನಡೆಯಿತು ಮತ್ತು ಇರಾನ್ ಪ್ರಮುಖ ಚರ್ಚೆಯ ವಿಷಯವಾಗಿತ್ತು ಎಂದು ಅದು ಹೇಳಿದೆ.












