ಬ್ರಿಟಿಷ್ ನಾಮಫಲಕ ತೆಗೆದು ಹಾಕಿ ಕೇವಲ ಧ್ವಜ ಮಾತ್ರ ಉಳಿಸಿದ ಇಸ್ರೇಲ್

0
172

ಸನ್ಮಾರ್ಗ ವಾರ್ತೆ

ಜೆರುಸಲೇಂ: ಇಸ್ರೇಲ್ ನೀಡಿದ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ, ಪೂರ್ವ ಜೆರುಸಲೇಮ್‌ನಲ್ಲಿರುವ ಬ್ರಿಟಿಷ್ ಕಾನ್ಸುಲೇಟ್‌ನಲ್ಲಿದ್ದ ನಾಮಫಲಕಗಳು ಹಾಗೂ ಸೂಚನಾ ಫಲಕಗಳನ್ನು ತೆರವುಗೊಳಿಸಲಾಗಿದೆ. ಪ್ರಸ್ತುತ ಕಟ್ಟಡದ ಮೇಲೆ ಬ್ರಿಟಿಷ್ ಧ್ವಜ ಮಾತ್ರ ಉಳಿದಿದೆ.

ಇಸ್ರೇಲ್ ಮತ್ತು ಬ್ರಿಟನ್ ನಡುವಿನ ರಾಜತಾಂತ್ರಿಕ ಸಂಘರ್ಷದ ಪರಿಣಾಮವಾಗಿ ಈ ಬೆಳವಣಿಗೆ ನಡೆದಿದೆ. ಪೂರ್ವ ಜೆರುಸಲೇಮ್‌ನಲ್ಲಿರುವ ರಾಜತಾಂತ್ರಿಕ ಕಚೇರಿಗಳ ಮೇಲೆ ಇಸ್ರೇಲ್ ತನ್ನ ನಿಯಂತ್ರಣವನ್ನು ಬಿಗಿಗೊಳಿಸುತ್ತಿರುವುದರ ಸೂಚನೆಯಾಗಿ ಇದನ್ನು ಪರಿಗಣಿಸಲಾಗಿದ್ದು ಮಂಗಳವಾರಕ್ಕೆ ಜೆರುಸಲೇಂನ ಬ್ರಿಟಿಷ್ ಕಾನ್ಸುಲೇಟ್ ಮುಚ್ಚಲು ಇಸ್ರೇಲ್ ವಿಧಿಸಿದ ಸಮಯದ ಗಡು ಮುಕ್ತಾಯ ಗೊಂಡಿತ್ತು.

ಕಾನ್ಸುಲೇಟ್ ಜನರಲ್ ಎಂದು ಬರೆದಿದ್ದ ನೇಮ್‌ಪ್ಲೇಟ್, ಕಾನ್ಸುಲ್ ಸೆಕ್ಷನ್‌ನ ಚಿಹ್ನೆಗಳನ್ನು ಮಾಧ್ಯಮದವರ ಮುಂದೆಯೇ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ಆದರೆ, ಕಟ್ಟಡದ ಮೇಲ್ಭಾಗದಲ್ಲಿರುವ ಬ್ರಿಟಿಷ್ ಧ್ವಜ ಈಗಲೂ ಇದೆ. ಕಾನ್ಸುಲೇಟ್ ಮುಚುವಂತೆ ಇಸ್ರೇಲಿನ ವಿದೇಶ ಸಚಿವ ಗಿಡಿಯೋನ್ ಝಾರ್ ಆದೇಶಿಸಿದ್ದರು. ಅವರು ವಿಧಿಸಿದ್ದ ಮೂವತ್ತು ದಿನಗಳ ಅವಧಿ ಪೂರ್ಣಗೊಂಡಿದೆ.ಈ ಹಿನ್ನೆಲೆಯಲ್ಲಿ ತೆರವು ಪ್ರಕ್ರಿಯೆ ನಡೆದಿದೆ. ವಲಸೆ ಮತ್ತು ಅಲ್ಲಿನ ಉತ್ಪನ್ನಗಳ ಆಮದಿಗೆ ಬ್ರಿಟನ್ ನಿರ್ಬಂಧ ಹೇರಿತ್ತು. ಈ ಕಾರಣದಿಂದ ಉಭಯ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಹಳಸಿದೆ.

ಬ್ರಿಟನ್‌ನ ಕಾನ್ಸುಲೇಟ್ ಮುಚ್ಚುವ ಕ್ರಮಗಳನ್ನು ಇಸ್ರೇಲ್ ಮುಂದುವರಿಸಿದರೆ 17 ಮಂದಿ ಇಸ್ರೇಲಿನ ರಾಜತಾಂತ್ರಿಕ ಅಧಿಕಾರಿಗಳನ್ನು ಗಡಿಪಾರುಮಾಡುವುದಾಗಿ ಬ್ರಿಟನ್ ಎಚ್ಚರಿಕೆ ನೀಡಿದೆ. ಇದೇ ವೇಳೆ ಹೊಸ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾನ್ಸುಲೇಟ್ ಈಗಲೂ ಕಾರ್ಯನಿರ್ವಹಿಸುತ್ತಿದೆಯೇ ಅಥವಾ ಅಲ್ಲಿದ್ದ ರಾಜತಾಂತ್ರಿಕ ಅಧಿಕಾರಿಗಳು ಬ್ರಿಟನ್‌ಗೆ ಮರಳಿದ್ದಾರೆಯೇ ಎಂಬ ಬಗ್ಗೆ ಬ್ರಿಟಿಷ್ ವಿದೇಶ ಸಚಿವಾಲಯ ಪ್ರತಿಕ್ರಿಯೆ ನೀಡಿಲ್ಲ.