ಸನ್ಮಾರ್ಗ ವಾರ್ತೆ
ರಿಯಾದ್: ಸಯಾಮೀಸ್ ಅವಳಿ ಮಕ್ಕಳಾದ ಸಜಾ ಮತ್ತು ದುಹಾ ಎಂಬ ಮೊರಾಕೊ ಮೂಲದ ಹೆಣ್ಣುಮಕ್ಕಳನ್ನು ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ಬೇರ್ಪಡಿಸಲಾಗಿದೆ. ರಿಯಾದ್ನ ಕಿಂಗ್ ಅಬ್ದುಲ್ಲ ಸ್ಪೇಶಲೈಸ್ಡ್ ಚಿಲ್ಡ್ರನ್ಸ್ ಹಾಸ್ಪಿಟಲ್ನಲ್ಲಿ ಗುರುವಾರ ಬೆಳಗ್ಗೆ ಆರಂಭವಾದ ಶಸ್ತ್ರಕ್ರಿಯೆ ದಾಖಲೆ ವೇಗದಲ್ಲಿ ಪೂರ್ಣಗೊಂಡಿದೆ.
ಸುಮಾರು 35ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯನ್ನೊಳಗೊಂಡ ತಂಡವು ಡಾ. ಅಬ್ದುಲ್ಲಾ ಅಲ್ ರಬೀಹ್ ಅವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ಪೂರ್ಣಗೊಳಿಸಿದೆ. ಸೌದಿ ದೊರೆ ಸಲ್ಮಾನ್ ಮತ್ತು ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ರ ಸೂಚನೆಯಂತೆ ಹದಿಮೂರು ತಿಂಗಳು ಪ್ರಾಯದ ಸಯಾಮಿಸ್ ಅವಳಿಗಳಿಗೆ ಉಚಿತ ಚಿಕಿತ್ಸೆ ಮತ್ತು ಶಸ್ತ್ರಕ್ರಿಯೆ ಲಭ್ಯಗೊಳಿಸಲಾಗಿತ್ತು.
ಎದೆ ಮತ್ತು ಹೊಟ್ಟೆಯ ಭಾಗ ಅಂಟಿಕೊಂಡಿದ್ದ ಅವಳಿಗಳ ಹೃದಯದ ಆವರಣಗಳು, ಕರುಳು, ಯಕೃತ್ ಪರಸ್ಪರ ಜೋಡಿಕೊಂಡಿತ್ತು. ಎಪ್ರಿಲ್ ತಿಂಗಳಲ್ಲಿ ಮಕ್ಳಳ ಹೆಚ್ಚಿನ ತಪಾಸಣೆಗಾಗಿ ಸೌದಿ ಅರೇಬಿಯಕ್ಕೆ ಕರೆತರಲಾಗಿತ್ತು. ತಪಾಸಣೆಯಲ್ಲಿ ಒಂದು ಮಗುವಿಗೆ ಕರುಳಿನಲ್ಲಿ ಜನ್ಮತಃ ತೊಂದರೆ ಇರುವುದು ಗೊತ್ತಾಗಿತ್ತು. ಅದನ್ನು ಎಂಡೊಸ್ಕಾಪಿಯ ಮೂಲಕ ಮೊದಲೇ ಯಶಸ್ವಿಯಾಗಿ ಸರಿಪಡಿಸಲಾಗಿತ್ತು. ಅನಸ್ತೇಶ್ಯ, ಪೀಡಿಯಾಟ್ರಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಸಹಿತ ವಿವಿಧ ವಿಭಾಗಗಳ 23 ಕನ್ಸಲ್ಟ್ಗಳು ನರ್ಸಿಂಗ್ ಸಿಬ್ಬಂದಿಯ ತಂಡ ಯಶಸ್ವಿಯಾಗಿ ಸಯಾಮಿ ಅವಳಿಗಳನ್ನು ಬೇರ್ಪಡಿಸಿದೆ.
ಸೌದಿ ಸಯಾಮೀಸ್ ಅವಳಿ ಬೇರ್ಪಡಿಸುವ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಮೊರೊಕ್ಕದ ನಾಲ್ಕನೆ ಸಯಾಮೀಸ್ ಅವಳಿ ಶಸ್ತ್ರಕ್ರಿಯೆ ಇದಾಗಿದ್ದು ಇದುವರೆಗೆ 28 ದೇಶಗಳಿಂದ 159 ಸಯಾಮೀಸ್ ಅವಳಿಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ ಎಂದು ಡಾ. ಅಲ್ ರಬೀಅ ತಿಳಿಸಿದ್ದಾರೆ.












