ಸನ್ಮಾರ್ಗ ವಾರ್ತೆ
ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮತ್ತು ಕಾಕ್ರೋಚ್ ಜನತಾ ಪಾರ್ಟಿ ವಿದೇಶಿ ಶಕ್ತಿಗಳ ನಿರ್ದೇಶನದಂತೆ ದೇಶದಲ್ಲಿ ಅಸ್ಥಿರತೆಯನ್ನು ಸೃಷ್ಟಿಸಲು ಯತ್ನಿಸುತ್ತಿವೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಮತ್ತು ಮುಖ್ಯ ಚುನಾವಣೆ ಆಯುಕ್ತರ ವಿರುದ್ಧ ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳನ್ನು ಉಲ್ಲೇಖಿಸಿ ಬಿಜೆಪಿ ಅಧ್ಯಕ್ಷರು ಈ ವಾಗ್ದಾಳಿ ನಡೆಸಿದ್ದಾರೆ.
ಜನರಿಂದ ತಿರಸ್ಕರಿಸಲ್ಪಟ್ಟ ರಾಜಕೀಯ ಪಕ್ಷಗಳು ತಮ್ಮ ಸೋಲನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದೆ, ದೇಶದ ಪ್ರಗತಿ ಮತ್ತು ಪ್ರಜಾಪ್ರಭುತ್ವದ ಸಂವಿಧಾನಾತ್ಮಕ ಸಂಸ್ಥೆಗಳನ್ನು ಹಾಳುಮಾಡಲು ಯತ್ನಿಸುತ್ತಿವೆ ಎಂದು ಅವರು ಹೇಳಿದರು. ದೇಶದ ಜನತೆ ಇಂತಹ ಯತ್ನಗಳನ್ನು ಮತ್ತು ನೀಚ ತಂತ್ರಗಳನ್ನು ಒಗ್ಗಟ್ಟಿನಿಂದ ವಿಫಲಗೊಳಿಸಲಿದ್ದಾರೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್ನಲ್ಲಿ ಪ್ರತಿಭಟನೆಯ ಮೊದಲು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡಿದರು.
ಎರಡು ಅರಾಜಕವಾದಿ ಸಂಘಟನೆಗಳು ದೇಶದಲ್ಲಿ ಕಾರ್ಯಪ್ರವೃತ್ತವಾಗಿದ್ದು ಒಂದು ರಾಹುಲ್ ಗಾಂಧಿ ನೇತೃತ್ವದ ಇಂಡಿಯ ಕೂಟ ಇನ್ನೊಂದು ಅರವಿಂದ್ ಕೇಜ್ರಿವಾಲ್ರ ಸಿಜೆಪಿ ಆಗಿದೆ. ಈ ಎರಡೂ ಸಂಘಟನೆಗಳನ್ನು ದೇಶದ ಜನರು ತಿರಸ್ಕರಿಸಿದ್ದಾರೆ. ಹೀಗಿದ್ದೂ ಇವರು ದೇಶವನ್ನು ಅರಾಜಕತೆಗೆ ದೂಡಲು ಪ್ರಯತ್ನಿಸಿದ್ದಾರೆ. ಇದರ ಹಿಂದೆ ವಿದೇಶಿ ಶಕ್ತಿಗಳು ಕೆಲಸ ಮಾಡುತ್ತಿವೆ ಎಂದು ನಿತಿನ್ ನಬಿನ್ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಈ ವಿದೇಶಿ ಶಕ್ತಿ ಯಾವುದು ಮತ್ತು ತನ್ನ ಆರೋಪಕ್ಕೆ ಆಧಾರ ಅವರು ನೀಡಿಲ್ಲ. ಸಂಪೂರ್ಣ ಜಗತ್ತು ಆರ್ಥಿಕವಾಗಿ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ. ಆದರೂ ಭಾರತ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದೆ. ಈ ಪ್ರಗತಿಯನ್ನು ತಡೆಯುವುದು ಪ್ರತಿಪಕ್ಷದ ಪ್ರಯತ್ನವಾಗಿದೆ ಎಂದು ಅವರು ದೂರಿದರು.












