ಸನ್ಮಾರ್ಗ ವಾರ್ತೆ
ಇಟಾವ: ಉತ್ತರ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ತಲೆಯನ್ನು ತಬಲಾದಂತೆ ಬಾರಿಸಿದ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ. ಸಂಬಂಧ ಪಟ್ಟ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿಕ್ಷಕರೊಬ್ಬರ ನಾಚಿಕೆಗೇಡು ಕೃತ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಶಿಕ್ಷಕರು ವಿದ್ಯಾರ್ಥಿಗೆ ಪಾಠ ಮಾಡುವ ಬದಲು, ಆ ವಿದ್ಯಾರ್ಥಿಯ ತಲೆಯನ್ನು ತಬಲಾದಂತೆ ಬಾರಿಸುತ್ತಿರುವುದು ವೀಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.
ಪಕ್ಕದಲ್ಲಿದ್ದ ಮಕ್ಕಳು ಇದನ್ನು ನೋಡಿ ನಗುತ್ತಿದ್ದರೆ, ಮುಂಭಾಗದಲ್ಲಿ ಕುಳಿತಿದ್ದ ಇತರ ಮಕ್ಕಳು ಇದೆಲ್ಲವನ್ನೂ ನೋಡುತ್ತಿದ್ದರು. ಆರೋಪಿ ಶಿಕ್ಷಕ ದಿನೇಶ್ ಮಾಥುರ್ ಈ ವೀಡಿಯೊವನ್ನು ತಮ್ಮ ಫೇಸ್ಬುಕ್ ಖಾತೆಯಿಂದ ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ.
ಮಕ್ಕಳ ಕಲಿಕಾ ಪರಿಸರಕ್ಕೆ ಕಳಂಕ ತರುವಂತಹ ಇಂತಹ ಅಮಾನವೀಯ ವರ್ತನೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ವೀಡಿಯೊ ವೈರಲ್ ಆಗಿ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರ, ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಂಡಿದ್ದು, ಶಿಕ್ಷಣಾಧಿಕಾರಿಗಳು ಪ್ರಾಂಶುಪಾಲ ಮತ್ತು ಶಿಕ್ಷಕ ದಿನೇಶ್ ಮಾಥುರ್ ಅವರನ್ನು ಅಮಾನತುಗೊಳಿಸಿದ್ದಾರೆ.












