ಸನ್ಮಾರ್ಗ ವಾರ್ತೆ
ಮಣಿಪುರದಲ್ಲಿ ಪರಿಸ್ಥಿತಿಯು ಉದ್ವಿಗ್ನವಾಗಿಯೇ ಮುಂದುವರಿದಿದೆ ಮತ್ತು ರಾಜ್ಯದಾದ್ಯಂತ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ ನಂತರ ಮತ್ತಷ್ಟು ಹದಗೆಟ್ಟಿದೆ. ಈಗಾಗಲೇ ಪ್ರಕ್ಷುಬ್ಧವಾಗಿರುವ ಪರಿಸ್ಥಿತಿಯನ್ನು, ವಿಶೇಷವಾಗಿ ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ.
ಅಕ್ಟೋಬರ್ 9 ಮತ್ತು 10 ರ ಶುಕ್ರವಾರ ಹಾಗೂ ಶನಿವಾರದ ನಡುವಿನ 24 ಗಂಟೆಗಳಲ್ಲಿ ಮಣಿಪುರದ ಕಾಮ್ಜೋಂಗ್, ಕಾಂಗ್ಪೋಕ್ಪಿ ಮತ್ತು ಉಖ್ರುಲ್ ಜಿಲ್ಲೆಗಳಲ್ಲಿ ಹೊಸದಾಗಿ ಭುಗಿಲೆದ್ದ ಹಿಂಸಾಚಾರದಲ್ಲಿ ಈ ಹತ್ಯೆಗಳು ಸಂಭವಿಸಿವೆ. ನಾಗರಿಕರ ಹಾಗೂ ಗ್ರಾಮ ಕಾವಲುಗಾರರ ಮೇಲಿನ ದಾಳಿಗಳು, ಗುಂಡಿನ ಚಕಮಕಿಗಳು ಮತ್ತು ಬೆಂಕಿ ಹಚ್ಚುವ ಕೃತ್ಯಗಳು ಕುಕಿ ಮತ್ತು ನಾಗಾ ಸಮುದಾಯಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿವೆ.
ಕಾಮ್ಜೋಂಗ್ ಮತ್ತು ಕಾಂಗ್ಪೋಕ್ಪಿಯಲ್ಲಿ ತಲಾ ನಾಲ್ಕು ಸಾವುಗಳು ವರದಿಯಾಗಿವೆ ಮತ್ತು ಉಖ್ರುಲ್ನಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಮೃತರಲ್ಲಿ ಆರು ಮಂದಿ ನಾಗಾಗಳು, ಇಬ್ಬರು ಕುಕಿಗಳು ಮತ್ತು ನೇಪಾಳ ಮೂಲದ ಒಬ್ಬ ವ್ಯಕ್ತಿ ಸೇರಿದ್ದಾರೆ.
ಮುಖ್ಯಮಂತ್ರಿ ಯುಮ್ನಮ್ ಖೇಮ್ಚಂದ್ ಸಿಂಗ್ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ರಾಜ್ಯದಲ್ಲಿ “ಶಾಶ್ವತ ಶಾಂತಿ ಮತ್ತು ಸ್ಥಿರತೆಯನ್ನು ಸ್ಥಾಪಿಸುವ ತಮ್ಮ ಸರ್ಕಾರದ ಸಂಕಲ್ಪದಲ್ಲಿ ದೃಢ ವಿಶ್ವಾಸ” ಇರುವುದಾಗಿ ಹೇಳಿಕೆ ನೀಡಿದ ಸಂದರ್ಭದಲ್ಲೇ ಈ ಹತ್ಯೆಗಳು ಸಂಭವಿಸಿವೆ.
ಶುಕ್ರವಾರ ರಾತ್ರಿ ಕಾಮ್ಜೋಂಗ್ ಜಿಲ್ಲೆಯ ಚಸ್ಸಾಡ್ ಪೊಲೀಸ್ ಠಾಣೆಯ ಬಳಿ ಹೊಸ ಹಿಂಸಾಚಾರ ಆರಂಭವಾಯಿತು. ಭದ್ರತಾ ಸಿಬ್ಬಂದಿ ಹಾಗೂ ಸಶಸ್ತ್ರ ಗುಂಪಿನ ನಡುವಿನ ಗುಂಡಿನ ಚಕಮಕಿಯಲ್ಲಿ 42 ವರ್ಷದ ಕುಕಿ ಮಹಿಳೆ ಡೊಮ್ಖೋನೆಯಿ ತೌತಾಂಗ್ ಸಾವನ್ನಪ್ಪಿದರು.
ಮಾಧ್ಯಮ ವರದಿಗಳ ಪ್ರಕಾರ, ಪೊಲೀಸ್ ಠಾಣೆಯ ಬಳಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಬಂಕರ್ಗಳನ್ನು ತೆರವುಗೊಳಿಸಲು ಪೊಲೀಸ್, ಇಂಡಿಯನ್ ರಿಸರ್ವ್ ಬೆಟಾಲಿಯನ್ ಮತ್ತು ಗಡಿ ಭದ್ರತಾ ಪಡೆ ನಡೆಸಿದ ಕಾರ್ಯಾಚರಣೆಯ ಸಂದರ್ಭದಲ್ಲಿ ಐದು ಮಕ್ಕಳ ತಾಯಿಯಾದ ಡೊಮ್ಖೋನೆಯಿ ತೌತಾಂಗ್ ಗುಂಡಿನ ದಾಳಿಗೆ ಸಿಲುಕಿಕೊಂಡರು ಎಂದು ವರದಿಯಾಗಿದೆ.
ನಾಗರಿಕ ಸಮಾಜದ ಸದಸ್ಯರ ಪ್ರಕಾರ, ಐಆರ್ಬಿ ಸಿಬ್ಬಂದಿ ಯುವಕರ ಗುಂಪೊಂದನ್ನು ವಶಕ್ಕೆ ಪಡೆದಿರುವುದನ್ನು ವಿರೋಧಿಸಿ ಚಸ್ಸಾಡ್ನ ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆ ಬಳಿಕ ನಡೆದ ತಳ್ಳಾಟದಲ್ಲಿ ಸಂತ್ರಸ್ತೆಗೆ ಮಾರಣಾಂತಿಕ ಗಾಯಗಳಾಗಿವೆ.
ಈ ಸಾವಿನಿಂದಾಗಿ ಗುಂಡಿನ ದಾಳಿಗಳು ಮತ್ತು ಬೆಂಕಿ ಹಚ್ಚುವ ಕೃತ್ಯಗಳು ಭುಗಿಲೆದ್ದವು. ಎರಡೂ ಸಮುದಾಯಗಳಿಗೆ ಸೇರಿದ ಕನಿಷ್ಠ 14 ಮನೆಗಳು ಬೆಂಕಿಗೆ ಒಳಗಾಗಿವೆ. ಶನಿವಾರ ಚಸ್ಸಾಡ್ನಲ್ಲಿ ನಡೆದ ಘರ್ಷಣೆಯಲ್ಲಿ ಮೈಕೆಲ್ ಗಮ್ಮಿನ್ಲೆನ್ ಹಾವ್ಕಿಪ್ ಎಂದು ಗುರುತಿಸಲಾದ 23 ವರ್ಷದ ಯುವಕನೊಬ್ಬ ಸಾವನ್ನಪ್ಪಿದ್ದಾನೆ.
ಮಾಧ್ಯಮ ಜತೆಗೆ ಮಾತನಾಡಿದ ಕುಕಿ ಹಾಗೂ ನಾಗಾ ಸಮುದಾಯಗಳ ನಾಗರಿಕ ಸಮಾಜದ ಸದಸ್ಯರು ಈ ದಾಳಿಗಳನ್ನು ಖಂಡಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.












