ಅಯೋಧ್ಯೆ ನಿಧಿ ಕಳ್ಳತನ ವರದಿ: ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ಬಂಧನ ತಡೆಯನ್ನು ವಿಸ್ತರಿಸಿದ ಸುಪ್ರೀಂ ಕೋರ್ಟ್

0
145

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಅಯೋಧ್ಯೆಯ ರಾಮಮಂದಿರದಲ್ಲಿನ ನಿಧಿ ಲೂಟಿ ಕುರಿತು ವರದಿ ಮಾಡಿದ ಸ್ವತಂತ್ರ ಪತ್ರಕರ್ತ ಅಭಿಷೇಕ್ ಉಪಾಧ್ಯಾಯ ಅವರ ಬಂಧನ ತಡೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿದೆ. ರಸ್ತೆ ವಿವಾದ (ರೋಡ್ ರೇಜ್) ಮತ್ತು ತದನಂತರದ ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣದಲ್ಲಿ ಮುಂದಿನ ಆದೇಶದವರೆಗೆ ಅಭಿಷೇಕ್ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಪತ್ರಕರ್ತನಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಎತ್ತಿಹಿಡಿಯಿತು. ಸುಪ್ರೀಂ ಕೋರ್ಟ್ ಆಗಸ್ಟ್ 25 ಮತ್ತು ಸೆಪ್ಟೆಂಬರ್ 7 ರಂದು ಮಧ್ಯಂತರ ಆದೇಶಗಳನ್ನು ಹೊರಡಿಸಿ, ಅಭಿಷೇಕ್ ಉಪಾಧ್ಯಾಯ ಅವರ ಬಂಧನಕ್ಕೆ ತಡೆ ನೀಡಿತ್ತು ಮತ್ತು ತನಿಖೆಗೆ ಸಹಕರಿಸುವಂತೆ ಅವರಿಗೆ ನಿರ್ದೇಶಿಸಿತ್ತು.

ಡಿಜಿಟಲ್ ಸಾಧನಗಳನ್ನು ಹಸ್ತಾಂತರಿಸುವಂತೆ ಕೋರಿ ಪೊಲೀಸರು ನೀಡಿದ್ದ ನೋಟಿಸ್‌ಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಪ್ರಕರಣದ ಮೆರಿಟ್ಸ್ ಜೋಪಾನಕ್ಕೆ ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯವು, ರಸ್ತೆ ವಿವಾದಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಯಾವುದೇ ಕಾನೂನಾತ್ಮಕ ಆಧಾರದ ಮೇಲೆ ಪ್ರಶ್ನಿಸಲು ಅಭಿಷೇಕ್ ಅವರಿಗೆ ಅನುಮತಿ ನೀಡಿತು. ಪತ್ರಿಕಾ ಸ್ವಾತಂತ್ರ್ಯ ಮತ್ತು ಡಿಜಿಟಲ್ ಗೌಪ್ಯತೆಯನ್ನು ರಕ್ಷಿಸಲು ಮಾರ್ಗಸೂಚಿಗಳನ್ನು ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಲು ನ್ಯಾಯಾಲಯ ಅವರಿಗೆ ಅವಕಾಶ ನೀಡಿತು.

ಅಯೋಧ್ಯೆ ರಾಮಮಂದಿರಕ್ಕೆ ಬಂದ ದೇಣಿಗೆಯಲ್ಲಿ ಭಾರಿ ದುರುಪಯೋಗ ಮತ್ತು ಕಳ್ಳತನ ನಡೆದಿದೆ ಎಂದು ಆರೋಪಿಸಿ ತನಿಖಾತ್ಮಕ ಆನ್‌ಲೈನ್ ವರದಿಗಳನ್ನು ಪ್ರಕಟಿಸಿದ ನಂತರ ತಮ್ಮ ವಿರುದ್ಧ ಸುಳ್ಳು ರಸ್ತೆ ವಿವಾದ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಅಭಿಷೇಕ್ ಉಪಾಧ್ಯಾಯ ಆರೋಪಿಸಿದ್ದರು.

ಪೋಲಿಸ್ ತಂಡವೊಂದು ತಮ್ಮ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದೆ ಎಂದು ಅಭಿಷೇಕ್ ಆಗಸ್ಟ್ 21 ರಂದು ‘ಎಕ್ಸ್’ (X) ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಳಿಸಿದ್ದರು. ಇಂತಹ ಕ್ರಮಗಳು ತಮ್ಮ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಕಿರುಕುಳದ ಭಾಗವಾಗಿದೆ ಎಂದು ಅವರು ಆರೋಪಿಸಿದ್ದರು. ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರತಿಯನ್ನು ನೀಡದಿರುವುದಕ್ಕೆ ಘಾಜಿಯಾಬಾದ್ ಪೊಲೀಸರನ್ನು ಅವರು ಪ್ರಶ್ನಿಸಿದ್ದರು ಮತ್ತು ಮಧ್ಯರಾತ್ರಿಯಲ್ಲಿ ಪೊಲೀಸರು ತಮ್ಮ ಮನೆಯನ್ನು ಶೋಧಿಸಲು ಮತ್ತು ಪ್ರಕರಣ ದಾಖಲಿಸಲು ಇದ್ದ ಕಾರಣಗಳನ್ನು ಮುಚ್ಚಿಡಲು ಹೀಗೆ ಮಾಡಲಾಗುತ್ತಿದೆಯೇ ಎಂದು ಕೇಳಿದ್ದರು.