ಸನ್ಮಾರ್ಗ ವಾರ್ತೆ
ಚಿಕಾಗೋ: ಅಮೆರಿಕದ ಇಲಿನಾಯ್ಸ್ನಲ್ಲಿ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ ಆರೋಪದ ಮೇಲೆ 19 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಪ್ಯಾಲಟೈನ್ ನಿವಾಸಿಯಾದ ಅಲೆಕ್ಸಾಂಡ್ರೋಸ್ ಪಪೊರಾಕಿಸ್ (19) ಬಂಧಿತ ವ್ಯಕ್ತಿಯಾಗಿದ್ದಾರೆ. ಪೊಲೀಸರು ಆತನಿಂದ ದ್ವೇಷಪೂರಿತ ಭಾಷಣ, ಬಂದೂಕುಗಳು ಮತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಅಕ್ಟೋಬರ್ 11 ರ ಸಂಜೆ ಪ್ಯಾಲಟೈನ್ ಮತ್ತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸ್ ಇಲಾಖೆಗಳ ಜಂಟಿ ಕಾರ್ಯಾಚರಣೆಯ ಮೂಲಕ ಶಂಕಿತನನ್ನು ಆತನ ಮನೆಯ ಬಳಿ ಬಂಧಿಸಲಾಗಿದೆ. ಅಕ್ಟೋಬರ್ 14 ರಂದು ರೋಲಿಂಗ್ ಮೆಡೋಸ್ನಲ್ಲಿರುವ ಕುಕ್ ಕೌಂಟಿ ಮೂರನೇ ಮುನ್ಸಿಪಲ್ ಡಿಸ್ಟ್ರಿಕ್ಟ್ ಕೋರ್ಟ್ನಲ್ಲಿ ಶಂಕಿತನನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಕ್ಟೋಬರ್ 30 ರಂದು ಪ್ರಕರಣದ ವಿಚಾರಣೆ ನಡೆಯಲಿದೆ.
ಸಾಮೂಹಿಕ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಅಲೆಕ್ಸಾಂಡ್ರೋಸ್ ಮತ್ತೊಬ್ಬ ವ್ಯಕ್ತಿಗೆ ಕಳುಹಿಸಿದ್ದ ಡಿಜಿಟಲ್ ಸಂದೇಶಗಳ ಕುರಿತು ಮೌಂಟ್ ಪ್ರಾಸ್ಪೆಕ್ಟ್ ಪೊಲೀಸರಿಗೆ ಮಾಹಿತಿ ಲಭ್ಯವಾದ ನಂತರ ಈ ಬಂಧನ ಮಾಡಲಾಗಿದೆ. ಸಂದೇಶಗಳೊಂದಿಗೆ ರೈಫಲ್ಗಳು, ಮ್ಯಾಗಜೀನ್ಗಳು, ಬಾಡಿ ಆರ್ಮರ್ ಮತ್ತು ಇತರ ಮಿಲಿಟರಿ ಉಪಕರಣಗಳ ಚಿತ್ರಗಳನ್ನು ಸಹ ಹಂಚಿಕೊಂಡಿದ್ದರು ಎನ್ನಲಾಗಿದೆ.
ನಂತರ ನಡೆಸಿದ ಶೋಧದ ಸಮಯದಲ್ಲಿ, ಪೊಲೀಸರು ‘ವೈ ಐ ಶಾಟ್: ಎಕೆಎ: (ಅರೋರಾ ಶೂಟರ್ಸ್ ಮ್ಯಾನೆಫೆಸ್ಟೋ)’ ಎಂಬ ಶೀರ್ಷಿಕೆಯ ಮ್ಯಾನಿಫೆಸ್ಟೋವನ್ನು (ಘೋಷಣಾ ಪತ್ರ) ಪತ್ತೆ ಹಚ್ಚಿದ್ದಾರೆ. ಈ ದಾಖಲೆಯು ವರ್ಣಭೇದ ನೀತಿ ಮತ್ತು ಉಗ್ರವಾದಿ ವಿಚಾರಗಳನ್ನು ಹೊಂದಿದ್ದು, ದಕ್ಷಿಣ ಏಷ್ಯ ಮೂಲದ ಜನರ ವಿರುದ್ಧ, ವಿಶೇಷವಾಗಿ ಭಾರತೀಯ ಮೂಲದ ಜನರ ವಿರುದ್ಧ ಹಿಂಸಾಚಾರಕ್ಕೆ ಕರೆ ನೀಡಿದೆ.
ಆರೋಪಿಯು ಅರೋರಾ ಪ್ರದೇಶದಲ್ಲಿನ ಹಿಂದೂ ಪ್ರಾರ್ಥನಾ ಮಂದಿರವನ್ನು ಗುರಿಯಾಗಿಸಿಕೊಂಡಿದ್ದ ಎಂದು ತನಿಖಾ ತಂಡವು ನಿರ್ಧರಿಸಿದೆ. ಆದಾಗ್ಯೂ, ನಿಖರವಾದ ಗುರಿಯ ಬಗ್ಗೆ ತನಿಖೆ ಮುಂದುವರಿದಿದೆ. ಮಾಹಿತಿ ಲಭ್ಯವಾದ ಕೂಡಲೇ, ಅರೋರಾ ಪೊಲೀಸರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ಹಿಂದೂ ಪ್ರಾರ್ಥನಾ ಮಂದಿರಗಳಿಗೆ ಭದ್ರತಾ ಎಚ್ಚರಿಕೆಯನ್ನು ನೀಡಿದ್ದಾರೆ.
ಶಂಕಿತನ ಮನೆಯಲ್ಲಿ ನಡೆಸಿದ ಶೋಧದ ವೇಳೆ, 16 ಇಂಚಿಗಿಂತ ಕಡಿಮೆ ಉದ್ದದ ಬ್ಯಾರೆಲ್ ಹೊಂದಿರುವ ರೈಫಲ್, ಹಲವಾರು ಲೋಡೆಡ್ ಮ್ಯಾಗಜೀನ್ಗಳು, ನೂರಾರು ಸುತ್ತಿನ ಗುಂಡುಗಳು ಮತ್ತು ಬಿಳಿ ಸರ್ವೋಚ್ಚವಾದಿ (ವೈಟ್ ಸುಪ್ರಿಮಸಿಸ್ಟ್) ಚಿಹ್ನೆಯನ್ನು ಹೊಂದಿರುವ ಬಾಡಿ ಆರ್ಮರ್ ವೆಸ್ಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆತನ ಮೇಲೆ ಭಯೋತ್ಪಾದನಾ ಬೆದರಿಕೆ ಒಡ್ಡಿದ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪವನ್ನು ಹೊರಿಸಲಾಗಿದೆ. ಸ್ಥಳೀಯ ಪೊಲೀಸರೊಂದಿಗೆ ಎಫ್ಬಿಐ (FBI) ಕೂಡ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಸಾರ್ವಜನಿಕರಿಗೆ ಪ್ರಸ್ತುತ ಯಾವುದೇ ಇತರ ಬೆದರಿಕೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಎರಡು ವಾರಗಳ ಹಿಂದೆ, ಒಹಾಯೋದ ರಿಚ್ಮಂಡ್ ಹೈಟ್ಸ್ನಲ್ಲಿರುವ ಶ್ರೀ ಸ್ವಾಮಿನಾರಾಯಣ ವಡತಾಲ್ ಧಾಮ್ ದೇವಾಲಯದ ಮೇಲೆಯೂ ದಾಳಿ ನಡೆದಿತ್ತು. ಹಿಂದೂ ಅಮೆರಿಕನ್ ಫೌಂಡೇಷನ್ ಸಕಾಲಿಕವಾಗಿ ಸ್ಪಂದಿಸಿದ್ದಕ್ಕಾಗಿ ಕಾನೂನು ಜಾರಿ ಸಂಸ್ಥೆಗಳನ್ನು ಶ್ಲಾಘಿಸಿದ್ದು, ಭಕ್ತರು ಭಯವಿಲ್ಲದೆ ಪೂಜೆ ಸಲ್ಲಿಸುವುದನ್ನು ಖಚಿತಪಡಿಸುವಂತೆ ಒತ್ತಾಯಿಸಿದೆ.












