ಪ್ಯಾಲೆಸ್ತೀನ್ ಭೂಮಿಯನ್ನು ಇಸ್ರೇಲ್ ವಶಪಡಿಸಿಕೊಂಡಿದೆ: ಬರಾಕ್‌ ಒಬಾಮಾ

0
237

ಸನ್ಮಾರ್ಗ ವಾರ್ತೆ

ಬೆಲ್‌ಫಾಸ್ಟ್: ಪ್ಯಾಲೆಸ್ತೀನ್ ಜನರ ಭೂಮಿಯನ್ನು ಇಸ್ರೇಲ್ ಆಕ್ರಮಿಸಿಕೊಂಡಿದೆ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ. ಇಸ್ರೇಲ್ ರಚನೆಯ ಇತಿಹಾಸದಿಂದ ಪ್ಯಾಲೆಸ್ತೀನಿಯನ್ನರ ಕಡೆಗೆ ತೋರಿಸಲಾದ ವಿಧಾನಗಳ ಉಲ್ಲೇಖದೊಂದಿಗೆ ಒಬಾಮಾ ಅವರ ಟೀಕೆ ಬಂದಿದೆ. ಪ್ಯಾಲೆಸ್ತೀನಿಯನ್ನರು ತಮ್ಮ ಭೂಮಿಯನ್ನು ಹಿಂತಿರುಗಿಸುವ ಬೇಡಿಕೆಯು ಸ್ವಾಭಾವಿಕ ಪ್ರತಿಕ್ರಿಯೆಯಾಗಿದೆ ಮತ್ತು ಇಸ್ರೇಲ್ ತನ್ನ ಪ್ರಸ್ತುತ ಕ್ರಮಗಳ ಮೂಲಕ ನೈತಿಕತೆಯನ್ನು ಕೈಬಿಟ್ಟಿದೆ ಎಂದು ಅವರು ಹೇಳಿದ್ದಾರೆ.

ಬೆಲ್‌ಫಾಸ್ಟ್‌ನ ಕ್ವೀನ್ಸ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸ್ವೀಕರಿಸಲು ಅವರು ಉತ್ತರ ಐರ್ಲೆಂಡ್‌ಗೆ ಬಂದಿದ್ದರು. ಪತ್ರಕರ್ತೆ ಸುಸಾನ್ ಮ್ಯಾಕೆಯವರೊಂದಿಗಿನ ಸಂಭಾಷಣೆಯಲ್ಲಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ಕುರಿತು ಅಮೆರಿಕದ ಮಾಜಿ ಅಧ್ಯಕ್ಷರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.

ಯಹೂದಿಯರು ತಮ್ಮ ಸಾಂಸ್ಕೃತಿಕ ಮತ್ತು ಮಿಲಿಟರಿ ಪ್ರಾಬಲ್ಯವನ್ನು ಹೇರುವುದು ಅನ್ಯಾಯವಾಗಿದೆ ಮತ್ತು ಪ್ಯಾಲೆಸ್ತೀನಿಯನ್ನರು ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಲು ಬಯಸುತ್ತೇವೆ ಎಂದು ಹೇಳುವುದು ಸ್ವಾಭಾವಿಕ ಮತ್ತು ನ್ಯಾಯಯುತವಾಗಿದೆ ಎಂದು ಒಬಾಮಾ ಬೆಟ್ಟು ಮಾಡಿದರು. ಈ ಪ್ರದೇಶದಲ್ಲಿ ದೀರ್ಘಕಾಲೀನ ಶಾಂತಿ ಪರಿಹಾರಗಳಿಗೆ ಸಂಘರ್ಷಗಳ ನೈಜ ಅಂತ್ಯವು ಅತ್ಯಗತ್ಯ ಎಂಬುದನ್ನು ಅವರು ನೆನಪಿಸಿದರು.

ಯಹೂದಿ ಜನರು ಯುರೋಪ್ ಸೇರಿದಂತೆ ಶತಮಾನಗಳಿಂದ ಕಿರುಕುಳ, ತಾರತಮ್ಯ ಮತ್ತು ನರಮೇಧಕ್ಕೆ ಬಲಿಯಾಗಿದ್ದಾರೆ ಎಂಬುದು ಸತ್ಯ ಮತ್ತು ಅವರು ಆಶ್ರಯ ಕೋರಿದ್ದಾರೆ ಎಂಬುದು ಅರ್ಥವಾಗುವಂತಹದ್ದಾಗಿದೆ ಎಂದು ಅವರು ವಿವರಿಸಿದರು. ಆದಾಗ್ಯೂ, ಶಕ್ತಿ ಮತ್ತು ಶ್ರೇಷ್ಠತೆಯ ಆಧಾರದ ಮೇಲೆ ತೆಗೆದುಕೊಂಡ ಈ ಕ್ರಮಗಳು ಸರಿಯಲ್ಲ ಎಂದು ಅವರು ನೆನಪಿಸಿದರು.

“ನಾವು ಅತ್ಯಂತ ಬಲಶಾಲಿಗಳು, ಅತ್ಯಂತ ತಾಂತ್ರಿಕವಾಗಿ ಮುಂದುವರಿದವರು ಮತ್ತು ಆದ್ದರಿಂದ ನಾವು ಏನು ಬೇಕಾದರೂ ಮಾಡಲು, ನಾವು ಬಯಸುವ ಯಾವುದನ್ನಾದರೂ ವಶಪಡಿಸಿಕೊಳ್ಳಲು ಮತ್ತು ಯಾರೊಂದಿಗೂ ರಾಜಿಯಾಗದಿರಲು ಹಕ್ಕನ್ನು ಹೊಂದಿದ್ದೇವೆ ಎಂಬ ನಿಲುವನ್ನು ಇಸ್ರೇಲ್ ತೆಗೆದುಕೊಂಡರೆ, ಅದು ಆರಂಭದಲ್ಲಿ ಯಶಸ್ವಿಯಾಗಬಹುದು. ಆದರೆ ಆ ವಾದದೊಂದಿಗೆ, ನೀವು ನೈತಿಕ ಅಡಿಪಾಯವನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೀರಿ” ಎಂದು ಒಬಾಮಾ ಹೇಳಿದರು.

ಇಸ್ರೇಲಿ ನಾಗರಿಕರು ತಮ್ಮ ಭವಿಷ್ಯದ ಪೀಳಿಗೆಯ ಬಗ್ಗೆ ಮರುಯೋಚಿಸುವಂತೆ ಒಬಾಮಾ ಕೇಳಿಕೊಂಡರು. “ನಿಮ್ಮ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪ್ರದೇಶದಲ್ಲಿ ಹೇಗೆ ವಾಸಿಸಬೇಕೆಂದು ನೀವು ಬಯಸುತ್ತೀರಿ? ಇದರ ಸುತ್ತಲೂ ಗೋಡೆಯನ್ನು ನಿರ್ಮಿಸಿ ಎಲ್ಲರನ್ನು ನಿರ್ಮೂಲನೆ ಮಾಡಲು ಬಯಸುತ್ತೀರಾ? ಅಥವಾ ನಿಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಯುತ ಮತ್ತು ನೈತಿಕ ಮಾರ್ಗವನ್ನು ಕಂಡುಹಿಡಿಯಲು ಬಯಸುತ್ತೀರಾ?” ಎಂದು ಅವರು ಕೇಳಿದರು.

ಈ ಪ್ರದೇಶದಲ್ಲಿರುವ ಲಕ್ಷಾಂತರ ಯಹೂದಿಗಳು ಮತ್ತು ಪ್ಯಾಲೆಸ್ತೀನಿಯನ್ನರು ಈ ಜಾಗ ಬಿಟ್ಟು ಹೊರಡಲು ಸಾಧ್ಯವಿಲ್ಲ. ಎರಡೂ ಜನಸಮೂಹಗಳು ಅಲ್ಲಿಯೇ ಉಳಿಯುತ್ತವೆ ಎಂದು ಒಬಾಮಾ ಎತ್ತಿ ತೋರಿಸಿದರು. ಅದೇ ಸಮಯದಲ್ಲಿ, ಪ್ಯಾಲೆಸ್ತೀನಿಯನ್ನರು ಶಸ್ತ್ರಾಸ್ತ್ರಗಳ ಬಲದಿಂದ ಅಥವಾ ಹೆಚ್ಚಿನ ಜನರನ್ನು ಕೊಲ್ಲುವ ಮೂಲಕ ಇಸ್ರೇಲ್ ಅನ್ನು ಮೀರಿಸಲು ಸಾಧ್ಯವಿಲ್ಲ ಮತ್ತು ಬದಲಾವಣೆಯನ್ನು ಸಾಧಿಸಲು ಅವರು ಅಹಿಂಸಾತ್ಮಕ ಮಾರ್ಗಗಳನ್ನು ಹುಡುಕಬೇಕು ಎಂದು ಹೇಳಿದರು. ಇದು ಸಾಧ್ಯವಾಗಲು ಸಮಯ ಬೇಕಾಗುತ್ತದೆ ಎಂದೂ ಅವರು ಹೇಳಿದರು.