ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವುದಿಲ್ಲ; ಸದ್ಯಕ್ಕೆ ನೆಲ ಯುದ್ಧದ ಪ್ರಶ್ನೆಯೇ ಇಲ್ಲ: ಟ್ರಂಪ್

0
282

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್ / ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚುತ್ತಿರುವ ನಡುವೆಯೇ, ಇರಾನ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಅಥವಾ ನೇರ ನೆಲ ಕಾಳಗದಲ್ಲಿ ತೊಡಗಿಸಿಕೊಳ್ಳುವ ಯಾವುದೇ ತಕ್ಷಣದ ಯೋಜನೆಗಳಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮಧ್ಯೆ, ಹಾರ್ಮುಝ್‌ ಜಲಸಂಧಿಯಲ್ಲಿ ನೌಕಾಯಾನದ ಮೇಲೆ ಹೆಚ್ಚುತ್ತಿರುವ ದಾಳಿಗಳು ಮತ್ತು ಇರಾನ್‌ನ ಮೂಲಸೌಕರ್ಯಗಳನ್ನು ಗುರಿಯಾಗಿಸಲು ಹೊಸ ಬಾಂಬ್‌ಗಳನ್ನು ಬಳಸುವ ಅಮೆರಿಕದ ಯೋಜನೆಗಳ ಬಗ್ಗೆ ಈ ಪ್ರದೇಶದಲ್ಲಿ ತೀವ್ರ ಕಳವಳ ವ್ಯಕ್ತವಾಗಿದೆ.

ವಿಶ್ವದ ಅತ್ಯಂತ ಪ್ರಮುಖ ತೈಲ ಸಾಗಣಾ ಮಾರ್ಗವಾದ ಹಾರ್ಮುಝ್‌ ಜಲಸಂಧಿಯಲ್ಲಿ ವಾಣಿಜ್ಯ ನೌಕೆಗಳ ಮೇಲೆ ಆತಂಕಕಾರಿ ರೀತಿಯಲ್ಲಿ ದಾಳಿಗಳು ಮುಂದುವರಿದಿವೆ. ಪರಿಸ್ಥಿತಿಯು ಅತ್ಯಂತ ಗಂಭೀರವಾಗಿದ್ದು, ಪ್ರತಿದಿನ ಒಂದೆರಡು ಸರಕು ಸಾಗಣೆ ನೌಕೆಗಳ ಮೇಲೆ ದಾಳಿ ನಡೆದು, ಬೆಂಕಿ ಹತ್ತಿಕೊಂಡು ಸಮುದ್ರದಲ್ಲಿ ಮುಳುಗುತ್ತಿವೆ. ಕಳೆದ ದಿನ ನಡೆದ ದಾಳಿಯಲ್ಲಿ ಒಂದು ನೌಕೆ ಸಂಪೂರ್ಣವಾಗಿ ಧ್ವಂಸಗೊಂಡಿರುವುದು ದೃಢಪಟ್ಟಿದೆ.

ಹಾರ್ಮುಝ್‌ ಜಲಸಂಧಿಯ ಮೂಲಕ ನೌಕಾಯಾನಕ್ಕೆ ವ್ಯತ್ಯಯ ಉಂಟಾದರೆ ಮತ್ತು ದೀರ್ಘಕಾಲದ ಯುದ್ಧವು ಮುಂದುವರಿದರೆ ಅದು ಮಧ್ಯಪ್ರಾಚ್ಯದ ಆರ್ಥಿಕತೆ ಮತ್ತು ಜಾಗತಿಕ ಮಾರುಕಟ್ಟೆಗಳ ಮೇಲೆ ದೊಡ್ಡ ಪರಿಣಾಮ ಬೀರಿ, ತೈಲ ಬೆಲೆಯಲ್ಲಿ ತೀವ್ರ ಏರಿಕೆ ಹಾಗೂ ಜಾಗತಿಕ ಹಣದುಬ್ಬರದ ಒತ್ತಡಕ್ಕೆ ಕಾರಣವಾಗಬಹುದು ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಎಚ್ಚರಿಸಿದೆ.

ನೆಲ ಯುದ್ಧದ ಸಾಧ್ಯತೆಯನ್ನು ಟ್ರಂಪ್ ತಳ್ಳಿಹಾಕಿದ್ದರೂ, ಅಮೆರಿಕವು ಇರಾನ್ ಮೇಲೆ ತನ್ನ ಮಿಲಿಟರಿ ಮತ್ತು ಆರ್ಥಿಕ ಒತ್ತಡವನ್ನು ತೀವ್ರಗೊಳಿಸಿದೆ. ಇರಾನ್‌ನ ಪರಮಾಣು ಸೌಲಭ್ಯಗಳು ಮತ್ತು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಲು ಅಮೆರಿಕದ ರಕ್ಷಣಾ ಇಲಾಖೆಯು ಬೃಹತ್ ಜಿಬಿಯು-43 (ಮದರ್ ಆಫ್ ಆಲ್ ಬಾಂಬ್ಸ್) ಬಳಕೆಯ ಬಗ್ಗೆ ಪರಿಗಣಿಸುತ್ತಿದೆ ಎಂದು ವರದಿಯಾಗಿದೆ. ಇದರ ಜೊತೆಗೆ, ಇರಾನ್‌ನೊಂದಿಗೆ ವ್ಯಾಪಾರ ನಡೆಸುತ್ತಿರುವ 16 ವ್ಯಕ್ತಿಗಳು ಮತ್ತು 10 ಪ್ರಮುಖ ಸಂಸ್ಥೆಗಳ ಮೇಲೆ ಅಮೆರಿಕ ಹೊಸ ನಿರ್ಬಂಧಗಳನ್ನು ವಿಧಿಸಿದೆ.

ಅಮೆರಿಕದ ಈ ಕ್ರಮಗಳಿಗೆ ಇರಾನ್ ಬಲವಾದ ಪ್ರತಿಕ್ರಿಯೆ ನೀಡಿದೆ. ತನ್ನ ಪ್ರಮುಖ ಕೇಂದ್ರಗಳು ಅಥವಾ ಮೂಲಸೌಕರ್ಯಗಳ ಮೇಲೆ ದಾಳಿ ಮಾಡಿದರೆ ಶತ್ರುಗಳಿಗೆ ದ್ವಿಗುಣ ತಿರುಗೇಟು ನೀಡುವುದಾಗಿ ಮತ್ತು ಯುರೇನಿಯಂ ಪುಷ್ಟೀಕರಣ ಪ್ರಕ್ರಿಯೆಯಿಂದ ಒಂದು ಹೆಜ್ಜೆಯೂ ಹಿಂದೆ ಸರಿಯುವುದಿಲ್ಲ ಎಂದು ಇರಾನ್‌ನ ಮಿಲಿಟರಿ ನಾಯಕತ್ವ ಸ್ಪಷ್ಟಪಡಿಸಿದೆ.

ಪ್ರದೇಶದಲ್ಲಿನ ಸಂಘರ್ಷವು ಸರ್ವನಾಶದ ಯುದ್ಧವಾಗಿ ಉಲ್ಬಣಗೊಳ್ಳುವುದನ್ನು ತಡೆಯಲು ಮಧ್ಯವರ್ತಿ ದೇಶಗಳ ನೇತೃತ್ವದಲ್ಲಿ ತುರ್ತು ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆ. ನವೆಂಬರ್ 3 ರೊಳಗೆ ಉಭಯ ದೇಶಗಳನ್ನು ಮಾತುಕತೆಗೆ ಕರೆತರಲು ಮತ್ತು ಸಂಘರ್ಷವನ್ನು ಶಮನಗೊಳಿಸಲು ಅಂತರರಾಷ್ಟ್ರೀಯ ಮಧ್ಯವರ್ತಿಗಳು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.