ಸೂಫಿಸಂ ಮೊರೆ ಹೋದ ಆರೆಸ್ಸೆಸ್

0
185

ಸನ್ಮಾರ್ಗ ವಾರ್ತೆ

ಲಕ್ನೊ: ಆರ್‌ಎಸ್‌ಎಸ್ (ರಾಷ್ಟ್ರೀಯ ಸ್ವಯಂಸೇವಕ ಸಂಘ) ಬೆಂಬಲಿತ ಸಂಘಟನೆಯಾದ ಮುಸ್ಲಿಂ ರಾಷ್ಟ್ರೀಯ ಮಂಚ್, ದೇಶಾದ್ಯಂತ ಸೂಫಿಸಂ ಅನ್ನು ಜನಪ್ರಿಯಗೊಳಿಸಲು ಮತ್ತು ಪ್ರಚಾರ ಮಾಡಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಮುಸ್ಲಿಂ ಸಮುದಾಯದೊಂದಿಗೆ ತನ್ನ ಸಂಪರ್ಕವನ್ನು ವಿಸ್ತರಿಸಿಕೊಳ್ಳುವ ಮತ್ತು ಸೌಹಾರ್ದ ಮೂಡಿಸುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳುತ್ತಿದೆ ಎನ್ನಲಾಗಿದೆ.

ಆರೆಸ್ಸೆಸ್ ರಾಷ್ಟ್ರೀಯ ಕಾರ್ಯಕಾರಿಣಿಯ ಇಂದ್ರೇಶ್ ಕುಮಾರ್ ಮಾರ್ಗದರ್ಶನದಲ್ಲಿ ಮುಸ್ಲಿಂ ರಾಷ್ಟ್ರೀಯ ಮಂಚ್ ಉತ್ತರಪ್ರದೇಶ ಕೇಂದ್ರೀಕರಿಸಿ ಸೂಫಿಸಂ ಅಭಿಯಾನ ಹಮ್ಮಿಕೊಳ್ಳುತ್ತಿದೆ. ಉತ್ತರ ಪ್ರದೇಶದ ವಿವಿಧ ಕಡೆಗಳಲ್ಲಿ ಹತ್ತು ಜಾಗೃತಿ ಕಾರ್ಯಕ್ರಮಗಳನ್ನು ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸುತ್ತದೆ. ರಾಷ್ಟ್ರೀಯ ಒಗ್ಗಟ್ಟು, ಸಾಮಾಜಿಕ ಸೌಹಾರ್ದ, ಶಿಕ್ಷಣ, ಪರಸ್ಪರ ಸಾಹೋದರ್ಯ, ಸಾಮಾಜಿಕ ಹೊಣೆಗಾರಿಕೆ ಮುಂತಾದ ವಿಚಾರಗಳು ಈ ಕಾರ್ಯಕ್ರಮದ ಚರ್ಚಾ ವಿಷಯಗಳು ಆಗಿವೆ ಎನ್ನಲಾಗಿದೆ. ಸೂಫಿ ಪರಂಪರೆ ಎತ್ತಿ ಹಿಡಿದು ಪ್ರೀತಿ, ಮಾನವೀಯತೆ, ಶಾಂತಿ, ಧಾರ್ಮಿಕ ಸೌಹಾರ್ದದ ಆಶಯಗಳನ್ನು ಸಮಾಜದಲ್ಲಿ ಹರಡುವುದು ಸಂಘಟಕರ ಗುರಿಯಾಗಿದೆ.

ಲಕ್ನೊದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಮುಸ್ಲಿಮ್‌ ರಾಷ್ಟ್ರೀಯ ಮಂಚ್ ಕಾರ್ಯಕರ್ತರಿದ್ದರು. ಈ ಕಾರ್ಯಕ್ರಮದಲ್ಲಿ ಇಂದ್ರೇಶ್ ಕುಮಾರ್‌, ಸಂಯೋಜಕರಾದ ಮುಹಮ್ಮದ್ ಅಫ್ಝಲ್, ಶಾಹಿದ್ ಅಕ್ತರ್, ಸಯ್ಯದ್ ರಝಾ ಹುಸೈನ್ ರಿಝ್ವಿ, ಗಿರೀಶ್ ಜುಯಾಲ್, ಇಸ್ಲಾಮ್‌ ಅಬ್ಬಾಸ್, ರೇಷ್ಮಾ ಹುಸೈನ್ , ಶಾಲಿ ಅಲಿ, ಉತ್ತರ ಪ್ರದೇಶದ ಸಂಯೋಜಕ ಶೌಕತ್ ಅಲಿ ಕೂಡ ಭಾಗವಹಿಸಿದ್ದರು. ದೇಶದ ಒಗ್ಗಟ್ಟು ಮತ್ತು ಸಂವಿಧಾನ ವ್ಯವಸ್ಥೆ ದುರ್ಬಲಗೊಳಿಸುವ ಯಾವ ಕ್ರಮವನ್ನು ಅಂಗೀಕರಿಸಲಾಗದು ಎಂದು ಇಂದ್ರೇಶ್‌ ಕುಮಾರ್ ಹೇಳಿದರು.