ಸನ್ಮಾರ್ಗ ಸಂಪಾದಕೀಯ
1 ಕೋಟಿ 3 ಲಕ್ಷದಷ್ಟು ಜನಸಂಖ್ಯೆ ಇರುವ ಮತ್ತು ಇವರಲ್ಲಿ 96% ಮುಸ್ಲಿಮರೇ ಇರುವ ಪುಟ್ಟ ದೇಶ ಅಝರ್ಬೈಜಾನ್ ಸುದ್ದಿಯಲ್ಲಿದೆ. ಇಲ್ಲಿನ ಶಾಲೆಗಳಲ್ಲಿ ಹಿಜಾಬ್ಗೆ ಸರಕಾರವೇ ನಿಷೇಧ ಹೇರಿರುವುದು ಭಾರತವೂ ಸೇರಿದಂತೆ ಜಾಗತಿಕ ಸುದ್ದಿ ಮಾಧ್ಯಮಗಳಲ್ಲಿ ಚರ್ಚೆಗೆ ಒಳಗಾಗಿದೆ. ಶಾಲಾ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕಾರಣ, ಹಿಜಾಬ್ಧಾರಿ ವಿದ್ಯಾರ್ಥಿನಿಯರು ಅಳುತ್ತಾ ಮನೆಗೆ ಹೋಗುತ್ತಿರುವ ದೃಶ್ಯವನ್ನು ಅಲ್ ಜಝೀರಾದಂಥ ಮಾಧ್ಯಮಗಳು ಹಂಚಿಕೊಂಡಿವೆ. ಶಿಕ್ಷಕಿಯರನ್ನೂ ಈ ನಿಯಮಕ್ಕೆ ಒಳಪಡಿಸಲಾಗಿದೆ. ಇದರ ವಿರುದ್ಧ ಪ್ರತಿಭಟನೆಗಳೂ ನಡೆಯುತ್ತಿವೆ. 2010ರಲ್ಲಿ ಈ ಹಿಜಾಬ್ ನಿಷೇಧವನ್ನು ಮೊದಲ ಬಾರಿ ಘೋಷಿಸಲಾಗಿತ್ತು ಮತ್ತು ಆಗ ಪ್ರತಿಭಟನೆಗಳೂ ನಡೆದಿದ್ದುವು. ಆದ್ದರಿಂದ ನಿಯಮದಲ್ಲಿ ಸಡಿಲಿಕೆ ಮಾಡಲಾಗಿತ್ತು. ಆದರೆ, ಇದೀಗ ಮತ್ತೆ ಹಿಜಾಬ್ ನಿಷೇಧವನ್ನು ನೇರವಾಗಿ ಅಲ್ಲದಿದ್ದರೂ ಶಾಲೆಗಳಲ್ಲಿ ಏಕರೂಪದ ಸಮವಸ್ತ್ರ ಇರಬೇಕು’ ಎಂಬ ಸಮರ್ಥನೆ ಮತ್ತುದೇಶದ ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧ’ ಎಂಬ ನೆಲೆಯಲ್ಲಿ ಹಿಜಾಬ್ಗೆ ಅನುಮತಿ ನಿರಾಕರಿಸಲಾಗಿದೆ. ಹಿಜಾಬನ್ನು ಸ್ಥಳೀಯವಲ್ಲದ ಮತ್ತು ವಿದೇಶಿ ಪ್ರಭಾವದ ಉಡುಪು ಎಂಬುದು ಅಧ್ಯಕ್ಷ ಇಲ್ಹಾಮ್ ಅಲಿಯೇವ್ ಅವರ ಸರಕಾರದ ನಿಲುವು. ಇವರು 2003ರಿಂದ ಅಂದರೆ ಸತತವಾಗಿ ಕಳೆದ 23 ವರ್ಷಗಳಿಂದ ಅಧ್ಯಕ್ಷರಾಗಿದ್ದಾರೆ. ಇವರಿಗಿಂತ ಮೊದಲು ಇವರ ತಂದೆ ಹೈದರ್ ಅಲಿಯೇವ್ ಅಧ್ಯಕ್ಷರಾಗಿದ್ದರು. ಇಲ್ಹಾಮ್ ಅಲಿಯೇವ್ ಅವರ ಪತ್ನಿ ಮೆಹ್ರಿಬಾನ್ ಅಲಿಯೇವ್ ಮೊದಲ ಉಪಾಧ್ಯಕ್ಷರಾಗಿದ್ದಾರೆ. 2024ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 92% ಮತಗಳ ಭಾರೀ ಬಹುಮತ ದೊಂದಿಗೆ ಇಲ್ಹಾಮ್ ಅಲಿಯೇವ್ ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಹಾಗಂತ, ಈ ಹಿಜಾಬ್ ನಿಷೇಧದ ಹಿಂದಿನ ನಿಜವಾದ ಕಾರಣ ಬೇರೆಯೇ ಇದೆ.
ಸ್ವತಂತ್ರವಾಗಿದ್ದ ಅಝರ್ಬೈಜಾನ್ 1920ರಲ್ಲಿ ಸೋವಿಯತ್ ಯೂನಿಯನ್ನ ಆಳ್ವಿಕೆಗೆ ಒಳಪಟ್ಟಿತು. ಸೋವಿಯತ್ ಯೂನಿಯನ್ ಎಂಬುದು ಅತ್ಯಂತ ವಿಶಾಲವಾಗಿ ಹರಡಿದ್ದ ಮತ್ತು ಕಮ್ಯುನಿಸ್ಟ್ ನಾಸ್ತಿಕತೆಯನ್ನು ಶಾಸನವಾಗಿ ಅಂಗೀಕರಿಸಿದ್ದ ಒಕ್ಕೂಟವಾಗಿತ್ತು. ಸೋವಿಯತ್ ಅಧಿಕಾರಿಗಳು ಅಝರ್ಬೈಜಾನಿನಲ್ಲೂ ನಾಸ್ತಿಕತೆಯನ್ನು ಶಾಸನವಾಗಿ ಜಾರಿಗೊಳಿಸಿದರು. ಸಾವಿರಾರು ಮಸೀದಿಗಳನ್ನು ಮುಚ್ಚಿಸಿದರು. ಇಸ್ಲಾಮೀ ಶಾಲೆಗಳನ್ನು ರದ್ದುಪಡಿಸಿದರು. ವಕ್ಫ್ ಸಹಿತ ಧಾರ್ಮಿಕ ಆಸ್ತಿ-ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡರು. ಉಲೆಮಾಗಳು ಮತ್ತು ಧಾರ್ಮಿಕ ವಿದ್ವಾಂಸರಿಗೆ ಕಿರುಕುಳ ನೀಡಿದರು. ತಮ್ಮ ಅರ್ಜಿಯನ್ನು ಒಪ್ಪದವರ ಹತ್ಯೆಯನ್ನೂ ನಡೆಸಿದರು. ಧಾರ್ಮಿಕ ಶಿಕ್ಷಣವನ್ನು ಸಾರ್ವಜನಿಕ ಸಂಸ್ಥೆಗಳಿಂದ ತೆಗೆದು ಹಾಕಲಾಯಿತು. ಇಸ್ಲಾಮೀ ಆಚಾರ-ವಿಚಾರಗಳು ಮತ್ತು ನಿಯಮಗಳನ್ನು ಅನಾಗರಿಕವೆಂದು ಪ್ರಚಾರ ಮಾಡಲಾಯಿತು. `ಇದು ಸಮಾಜವನ್ನು ಆಧುನಿಕತೆಯಿಂದ ತಡೆಯುವ ಪ್ರಗತಿ ವಿರೋಧಿ ಹಳೆಪದ್ಧತಿ’ ಎಂದು ಸರಕಾರದ ವತಿಯಿಂದಲೇ ಹೇಳಲಾಯಿತು. ಮಹಿಳೆಯರು ತಲೆ ಮುಚ್ಚುವ ಹಿಜಾಬ್ ಮತ್ತು ಮೈಮುಚ್ಚುವ ಬುರ್ಖಾದಿಂದ ಹೊರಬರುವಂತೆ ನಿರಂತರ ಕರೆ ಕೊಡಲಾಯಿತು. ಎಲ್ಲಿಯವರೆಗೆಂದರೆ, ಬುರ್ಖಾವನ್ನು ಕಿತ್ತೆಸೆಯುವ ಭಂಗಿಯ 4 ಮೀಟರ್ ಎತ್ತರದ ಕಂಚಿನ ಪ್ರತಿಮೆಯನ್ನು ರಾಜಧಾನಿ ಬಾಕುವಿನಲ್ಲಿ 1960ರಲ್ಲಿ ಸ್ಥಾಪಿಸಲಾಯಿತು.
ಸೋವಿಯತ್ ಆಳ್ವಿಕೆಯ 40ನೇ ವಾರ್ಷಿಕೋತ್ಸವದ ಸಮಯದಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಇದನ್ನು ಅಝರ್ಬೈಜಾನಿ ಭಾಷೆಯಲ್ಲಿ ವಿಮೋಚಿತ ಮಹಿಳೆಯ ಪ್ರತಿಮೆ ಎಂದು ಕರೆಯಲಾಗುತ್ತದೆ. ಇದರ ಶಿಲ್ಪಿ ಫುಆದ ಅಬ್ದರ್ರಹ್ಮಾನೋವ್. ಇದರ ವಾಸ್ತುಶಿಲ್ಪಿ ಮಿಖಾಯಿಲ್ ಹುಸೇನೋವ್. ಹೀಗೆ ಮುಸ್ಲಿಮರಿಂದಲೇ ಈ ಬೃಹತ್ ಪ್ರತಿಮೆಯನ್ನು ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರದಲ್ಲಿ ಸ್ಥಾಪಿಸಿದ ಸೋವಿಯತ್ ಯೂನಿಯನ್ ಆಡಳಿತವು ಜನರಿಂದ ಇಸ್ಲಾಮೀ ಜೀವನ ಕ್ರಮ ಮತ್ತು ಆಚರಣಾ ಪದ್ಧತಿಯನ್ನು ನಿರ್ಮೂಲನೆ ಮಾಡುವಲ್ಲಿ ಬಹುವಂಶ ಯಶಸ್ವಿಯೂ ಆಯಿತು. ಸುಮಾರು 70 ವರ್ಷಗಳ ಕಮ್ಯುನಿಸ್ಟ್ ಆಡಳಿತದ ಪ್ರಭಾವವು ಹೊಸ ತಲೆಮಾರಿನ ಮೇಲೆ ಸಹಜವಾಗಿಯೇ ಪರಿಣಾಮ ಬೀರಿತು. ಸರಕಾರವೇ ಮುಂದೆ ನಿಂತು ನಾಸ್ತಿಕತೆಯನ್ನು ಪ್ರಚಾರ ಮಾಡುತ್ತಿದ್ದುದರಿಂದ ಮತ್ತು ಮಸೀದಿ-ಮದ್ರಸಗಳ ಮೇಲೆ ಕಾಕದೃಷ್ಟಿ ಬೀರುತ್ತಿದ್ದುದರಿಂದ ಜನರು ಸಹಜವಾಗಿಯೇ ಧಾರ್ಮಿಕ ನಡವಳಿಕೆಯಿಂದ ದೂರವಾಗತೊಡಗಿದರು. ಇದು ಕೇವಲ ಅಝರ್ಬೈಜಾನ್ಗೆ ಸಂಬಂಧಿಸಿ ಮಾತ್ರ ಆಗಿರುವ ಬದಲಾವಣೆಯಲ್ಲ. 1991 ರಲ್ಲಿ ಸೋವಿಯತ್ ಯೂನಿಯನ್ನಿಂದ ಬೇರ್ಪಟ್ಟು ಸ್ವತಂತ್ರವಾದ ಕಝಕಿಸ್ತಾನ್, ಕಿರ್ಗಿಸ್ತಾನ್, ಉಝ್ಬೆಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ತಜಕಿಸ್ತಾನ್ಗಳಲ್ಲೂ ಇವೇ ಬದಲಾವಣೆಗಳಾದುವು. ಇವೆಲ್ಲ ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರಗಳಾಗಿದ್ದರೂ ಧಾರ್ಮಿಕ ಸ್ವಾತಂತ್ರ್ಯ ಈಗಲೂ ಸೀಮಿತವಾಗಿದೆ. ಶಾಲೆಗಳಲ್ಲಿ ಈ ಯಾವ ರಾಷ್ಟ್ರಗಳಲ್ಲಿ ಹಿಜಾಬ್ಗೆ ಅನುಮತಿ ಇಲ್ಲ. ತಜಕಿಸ್ತಾನದಲ್ಲಿ ಗಡ್ಡಕ್ಕೂ ಬಹುತೇಕ ನಿಷೇಧ ಇದೆ. ತುರ್ಕಿಮೆನಿಸ್ತಾನದಲ್ಲೂ ಇಸ್ಲಾಮ್ ಅನುಸರಣೆಗೆ ಕಠಿಣ ನಿಯಂತ್ರಣ ಇದೆ. ಇರುವುದರಲ್ಲಿ ಕಿರ್ಗಿಸ್ತಾನದಲ್ಲಿ ಮಾತ್ರ ಶಾಲೆಗಳಲ್ಲಿ ಹಿಜಾಬ್ಗೆ ಅನಧಿಕೃತವಾಗಿ ಅನುಮತಿ ಇದೆ. ಆದರೆ,
ಸೋವಿಯತ್ ಯೂನಿಯನ್ನಿಂದ ಬಿಡುಗಡೆಗೊಂಡ ಬಳಿಕ ಅಝರ್ಬೈಜಾನ್ ಸೇರಿದಂತೆ ಉಳಿದೆಲ್ಲ ರಾಷ್ಟ್ರಗಳಲ್ಲೂ ಇಸ್ಲಾಮೀ ಪ್ರಜ್ಞೆ ಜಾಗೃತವಾಗುತ್ತಿದೆ. ಆದರೆ, ಸರಕಾರಗಳು ಅಸ್ತಿತ್ವದ ಭಯದಿಂದಾಗಿ ಸೋವಿಯತ್ ಕಾಲದ ದಮನಕಾರಿ ನೀತಿಯನ್ನೇ ಮುಂದುವರಿಸಲು ಯತ್ನಿಸುತ್ತಿವೆ. ತಜಕಿಸ್ತಾನದಲ್ಲಿ ಇಮಾಮಲಿ ರಹ್ಮಾನ್ ಅವರು ಕಳೆದ 34 ವರ್ಷಗಳಿಂದ ನಿರಂತರವಾಗಿ ಅಧ್ಯಕ್ಷರಾಗಿದ್ದಾರೆ. ಕಝಕಿಸ್ತಾನದಲ್ಲಿ ನೂರ್ ಸುಲ್ತಾನ್ ನಝರ್ಲಾಯೇವ್ ಅವರು ಸೋವಿಯತ್ ಯೂನಿಯನ್ನಿಂದ ಬಿಡುಗಡೆಗೊಂಡ ನಂತರದಿಂದ 2019ರ ವರೆಗೆ ನಿರಂತರ 28 ವರ್ಷಗಳ ಕಾಲ ಅಧ್ಯಕ್ಷರಾಗಿ ಆಡಳಿತ ನಡೆಸಿದರು. ಈಗ ಅಧಿಕಾರದಲ್ಲಿ ಇಲ್ಲದಿದ್ದರೂ ರಾಜಕೀಯ ಪ್ರಭಾವ ಮುಂದುವರಿದಿದೆ. ಉಝ್ಬೆಕಿಸ್ತಾನದಲ್ಲಿ ಇಸ್ಲಾಮ್ ಕರಿಮೋವ್ ಅವರು 1989ರಿಂದಲೂ ಅಂದರೆ ಸೋವಿಯತ್ ಕಾಲದಿಂದಲೂ ಅಧ್ಯಕ್ಷರಾಗಿ ಮುಂದುವರಿಯುತ್ತಾ ಬಂದರಲ್ಲದೇ 2016ರಲ್ಲಿ ಮರಣದ ವರೆಗೂ ಅವರೇ ಅಧ್ಯಕ್ಷರಾಗಿದ್ದರು. ನಿರಂತರ 27 ವರ್ಷಗಳ ಕಾಲ ದೇಶ ಇವರ ಕೈಯಲ್ಲಿ ಇತ್ತು. ತುರ್ಕಿಮೆನಿಸ್ತಾನವನ್ನು 1991ರಿಂದ 2006ರಲ್ಲಿ ನಿಧನರಾಗುವವರೆಗೆ ಸಪರ್ಮೂರತ್ ನಿಯಾಝೋವ್ ಅವರು ನಿರಂತರ 15 ವರ್ಷಗಳ ಕಾಲ ಆಳಿದರು. ನಂತರ ಬಂದವರಂತೂ ಇವರ ಕುಟುಂಬದವರೇ ಆಗಿದ್ದು, ನಿರಂತರ 15 ವರ್ಷಗಳ ಕಾಲ ಅಸ್ಗರ್ ಅಕಯೇವ್ ಎಂಬವರು ಅಧ್ಯಕ್ಷರಾಗಿ ಆಡಳಿತ ನಡೆಸಿದರು. ಆದ್ದರಿಂದ,
ಇವೆಲ್ಲ ಮುಸ್ಲಿಮ್ ಬಹುಸಂಖ್ಯಾತ ರಾಷ್ಟ್ರವಾಗಿದ್ದರೂ, ಸೋವಿಯತ್ ಒಕ್ಕೂಟದ ನಾಸ್ತಿಕತೆಯ ಪ್ರಭಾವ ಮತ್ತು ಸ್ವಾತಂತ್ರ್ಯದ ಬಳಿಕ ಅದನ್ನೇ ಮುಂದುವರಿಸಿಕೊಂಡು ಹೋದ ಆಡಳಿತದಿಂದಾಗಿ ಇಸ್ಲಾಮೀ ಚಟುವಟಿಕೆಗೆ ಇರುವ ನಿರ್ಬಂಧ ಮುಂದುವರಿಯುತ್ತಾ ಹೋಯಿತು. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕಾಗಿ ಜನರ ಮೇಲೆ ಪ್ರಭುತ್ವದಿಂದ ದಬ್ಬಾಳಿಕೆ ಮುಂದುವರಿದುವು. ಧರ್ಮವನ್ನು ಅಫೀಮಿನಂತೆ ಕಾಣುವ ಕಮ್ಯುನಿಸ್ಟ್ ಆಡಳಿತದ ನೀತಿಯನ್ನೇ ಮುಂದು ವರಿಸಲಾಯಿತು. ಜನರಿಗೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ಮುಕ್ತವಾಗಿಸಿ ಬಿಟ್ಟರೆ ಎಲ್ಲಿ ಅಧಿಕಾರಕ್ಕೆ ಕುತ್ತು ಬರುತ್ತದೋ ಎಂಬ ಭಯದಿಂದ ಆಡಳಿತಗಾರರು ಧರ್ಮದ ಬಹಿರಂಗ ಆಚರಣೆಗೆ ಅಡ್ಡಗಾಲು ಹಾಕುತ್ತಲೇ ಬಂದರು. ಆದರೂ ಈ ಎಲ್ಲ ರಾಷ್ಟ್ರಗಳಲ್ಲಿ ಇಸ್ಲಾಮ್ ಪರ ಒಲವು ತೀವ್ರಗತಿಯಲ್ಲಿ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ. ಯುವ ತಲೆಮಾರು ತಾವು ಕಳೆದುಕೊಂಡುದುದನ್ನು ಮರಳಿ ಗಳಿಸಿಕೊಳ್ಳುವ ಉಮೇದು ವ್ಯಕ್ತಪಡಿಸುತ್ತಿದ್ದಾರೆ. ಧಾರ್ಮಿಕ ಜಾಗೃತಿ ಹೆಚ್ಚಾಗುತ್ತಿದೆ. ಈ ಕಾರಣದಿಂದಲೇ ಅಝರ್ಬೈಜಾನ್ನಲ್ಲಿ ಹಿಜಾಬ್ ನಿಷೇಧದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿವೆ. ಇರಾನ್ನೊಂದಿಗೆ ಅಝರ್ಬೈಜಾನ್ ಗಡಿಯನ್ನು ಹಂಚಿಕೊಂಡಿದ್ದು, ಎಲ್ಲಿ ಇರಾನಿನ ಧಾರ್ಮಿಕ ಪ್ರಭಾವಕ್ಕೆ ಜನರು ಒಳಗಾಗುತ್ತಾರೋ ಎಂಬ ಭೀತಿಯಿಂದ ಹಿಜಾಬ್ ನಿಷೇಧಕ್ಕೆ ಸರಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರಕಾರದ ನಿರೀಕ್ಷೆಗಿಂತ ಭಿನ್ನವಾಗಿ ವ್ಯಕ್ತವಾದ ನಾಗರಿಕರ ಪ್ರತಿಕ್ರಿಯೆಯು ಬದಲಾಗುತ್ತಿರುವ ಜನರ ಮನೋ ಭಾವವನ್ನು ಸೂಚಿಸುತ್ತದೆ.












