ಮಡಚುವ ಚಮಚ!; ಅಮೆರಿಕದ ಟಿವಿ ಶೋನಲ್ಲಿ ಭಾರತೀಯ ಡಿಸೈನರ್‌ಗೆ 3.3 ಕೋಟಿ ರೂ.

0
193

ಸನ್ಮಾರ್ಗ ವಾರ್ತೆ

ಅಮೆರಿಕಾದ ಉದ್ಯಮಶೀಲತೆಯ ರಿಯಾಲಿಟಿ ಶೋ ‘ಶಾರ್ಕ್ ಟ್ಯಾಂಕ್ ಯು.ಎಸ್.ಎ’-ನಲ್ಲಿ ಭಾರತೀಯ ಇಂಡಸ್ಟ್ರಿಯಲ್ ಡಿಸೈನರ್ ಆದ ರಾಹುಲ್ ಅಗರ್ವಾಲ್ ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಅಡುಗೆಮನೆಯ ಒಂದು ಸಣ್ಣ ಸಮಸ್ಯೆಗೆ ಸರಳ ಪರಿಹಾರವಾಗಿ ಅವರು ಕಂಡುಹಿಡಿದಿರುವ ‘ಪಾಲಿಗಾನ್ಸ್’ ಎಂಬ ಮಡಚಬಹುದಾದ ಅಳತೆ ಚಮಚ ಈಗ ವಿಶ್ವದ ಗಮನ ಸೆಳೆದಿದೆ.

ಜಪಾನಿನ ಪೇಪರ್ ಫೋಲ್ಡಿಂಗ್ ಕಲೆಯಾದ ಒರಿಗಾಮಿ(Origami)ಯಿಂದ ಸ್ಫೂರ್ತಿಗೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಬಳಸುವ ವಿವಿಧ ಅಳತೆಗಳ 6 ಅಳತೆ ಚಮಚಗಳಿಗೆ ಬದಲಾಗಿ ಕೇವಲ ಎರಡು ಫ್ಲೆಕ್ಸಿಬಲ್ ಟೂಲ್‌ಗಳು ಇದ್ದರ ಆ ಸ್ಥಾನ ತುಂಬುವುದು ಅಗರ್‌ವಾಲ್ ಸಂಶೋಧನೆಯ ಚಮಚದ ಪ್ರಮುಖ ವಿಶೇಷತೆಯಾಗಿದೆ.
ದೊಡ್ಡ ಚಮಚ ಬಳಸಿ ಅರ್ಧ ಟೇಬಲ್‌ಸ್ಪೂನ್, ಒಂದು ಟೇಬಲ್‌ಸ್ಪೂನ್, ಎರಡು ಟೇಬಲ್‌ಸ್ಪೂನ್ ಹಾಗೂ ಸಣ್ಣ ಚಮಚ ಬಳಸಿ ಕಾಲು ಟೀಸ್ಪೂನ್, ಅರ್ಧ ಟೀಸ್ಪೂನ್, ಒಂದು ಟೀಸ್ಪೂನ್ ವರೆಗೆ ಅಳತೆ ಮಾಡಬಹುದು.

ಚಮಚ ಚಪ್ಪಟೆಯಾಗಿರಿಸಿದರೆ ಇದರ ದಪ್ಪ ಕೇವಲ 2.8 ಮಿಲಿಮೀಟರ್ ಮಾತ್ರ ಇರುತ್ತದೆ ಆದ್ದರಿಂದ ಅಡುಗೆಮನೆಯ ಡ್ರಾಯರ್‌ಗಳಲ್ಲಿ ಅತ್ಯಂತ ಕಡಿಮೆ ಸ್ಥಳದಲ್ಲಿ ಇದನ್ನು ಇಡಬಹುದು. ಫ್ರಿಡ್ಜ್‌ಗೆ ಅಂಟಿಸಿಕೊಳ್ಳಲು ಇದರೊಳಗೆ ಅಯಸ್ಕಾಂತಗಳನ್ನು ಕೂಡ ಜೋಡಿಸಲಾಗಿದೆ.

3,50,000 ಅಮೆರಿಕನ್ ಡಾಲರ್ (ಸುಮಾರು 2.9 ರಿಂದ 3.3 ಕೋಟಿ ರೂಪಾಯಿಗಳವರೆಗೆ) ನೀಡಿ ಪ್ರಸಿದ್ಧ ಹೂಡಿಕೆದಾರರಾದ ಲೋರಿ ಗ್ರೆನರ್ ಮತ್ತು ಅತಿಥಿ ಶಾರ್ಕ್ ಮಿಂಡಿ ಕೆಲಿಂಗ್ ಅಗರ್‌ವಾಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.

ವರ್ಷಗಳ ಪರಿಶ್ರಮದಿಂದ ಅಭಿವೃದ್ಧಿಪಡಿಸಿದ ಈ ಉತ್ಪನ್ನಕ್ಕೆ ಈಗಾಗಲೇ ‘ರೆಡ್ ಡಾಟ್’ಸೇರಿದಂತೆ 20 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿನ್ಯಾಸ ಪ್ರಶಸ್ತಿಗಳು ಲಭಿಸಿವೆ.