‘ಜೆಫ್ರಿ ಎಪ್‌ಸ್ಟೀನ್ ಅವರನ್ನು ಒಂಟಿಯಾಗಿ ಭೇಟಿಯಾಗಿಲ್ಲ ಎಂದಿರಲಿಲ್ಲವೇ?’; ಹರ್ದೀಪ್ ಸಿಂಗ್ ಪುರಿ ಭೇಟಿಯ ಚಿತ್ರ ಬಹಿರಂಗ, ವಿರೋಧ ಪಕ್ಷಗಳಿಂದ ತೀವ್ರ ವಾಗ್ದಾಳಿ

0
219

ಸನ್ಮಾರ್ಗ ವಾರ್ತೆ

ಹೊಸದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ವಿವಾದಾತ್ಮಕ ಅಮೆರಿಕದ ಉದ್ಯಮಿ ಹಾಗೂ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಅವರನ್ನು ಭೇಟಿ ಮಾಡಿರುವ ಚಿತ್ರ ಹೊರಬಂದ ನಂತರ ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿವೆ. ಹರ್ದೀಪ್ ಸಿಂಗ್ ಪುರಿ ಅವರ ಹಿಂದಿನ ಹೇಳಿಕೆಗಳು ಸುಳ್ಳಾಗಿದ್ದವು ಎಂದು ವಿರೋಧ ಪಕ್ಷಗಳ ನಾಯಕರು ಆರೋಪಿಸಿದ್ದು, ಈ ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಂಪುಟವು ಪ್ರತಿಕ್ರಿಯೆ ನೀಡಬೇಕೆಂದು ಒತ್ತಾಯಿಸಿವೆ.

ಯುಎಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಜಸ್ಟೀಸ್‌ (DOJ) ಬಿಡುಗಡೆ ಮಾಡಿರುವ ಚಿತ್ರಗಳಿಂದಾಗಿ ಕೇಂದ್ರ ಸರ್ಕಾರ ಈಗ ರಕ್ಷಣಾತ್ಮಕ ಧೋರಣೆಗೆ ಶರಣಾಗಬೇಕಾಗಿ ಬಂದಿದೆ. ಇಂಟರ್‌ನ್ಯಾಶನಲ್‌ ಪೀಸ್‌ ಇನ್ಸ್ಟಿಟ್ಯೂಟ್‌ (IPI) ಮತ್ತು ಇಂಡಿಪೆಂಡೆಂಟ್‌ ಕಮಿಷನ್‌ ಆನ್‌ ಮಲ್ಟಿಲ್ಯಾಟರಲಿಸಂ (ICM) ನಿಯೋಗದೊಂದಿಗೆ ಮಾಜಿ ವಿದೇಶಿ ಸೇವಾ ಅಧಿಕಾರಿ ಹರ್ದೀಪ್ ಸಿಂಗ್ ಪುರಿ ಅವರು 2014 ಮತ್ತು 2017 ರ ನಡುವೆ ಎಪ್‌ಸ್ಟೀನ್ ಅವರನ್ನು ಕೇವಲ ಮೂರರಿಂದ ನಾಲ್ಕು ಬಾರಿ ಭೇಟಿಯಾಗಿದ್ದೆವು ಎಂದು ಫೆಬ್ರವರಿಯಲ್ಲಿ ವಿವರಿಸಿದ್ದರು. ಆದಾಗ್ಯೂ, ಹೊಸ ಚಿತ್ರಗಳು ಬಿಡುಗಡೆಯಾಗುವುದರೊಂದಿಗೆ, ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಸಚಿವರು ಸುಳ್ಳು ಹೇಳಿದ್ದಾರೆಂದು ಆರೋಪಿಸಿವೆ.

ಮೋದಿ ಅವರ ರಾಯಭಾರಿಯೇ? ಅವರು ಯಾವ ಸಂದೇಶವನ್ನು ರವಾನಿಸಿದರು: ಸಂಜಯ್ ರಾವತ್
ಶಿವಸೇನಾ (ಉದ್ಧವ್ ಬಣ) ನಾಯಕ ಸಂಜಯ್ ರಾವತ್ ಅವರು ಹರ್ದೀಪ್ ಸಿಂಗ್ ಪುರಿ ಅವರು ಎಪ್‌ಸ್ಟೀನ್ ಅವರನ್ನು ಒಂಟಿಯಾಗಿ ಭೇಟಿಯಾಗಿದ್ದಾರೆ ಎಂದು ಆರೋಪಿಸಿದರು. “ಹರ್ದೀಪ್ ಸಿಂಗ್ ಪುರಿ ಅವರು ಎಪ್‌ಸ್ಟೀನ್ ಅವರನ್ನು ಒಂಟಿಯಾಗಿ ಭೇಟಿಯಾದಾಗ ಯಾರ ಸಂದೇಶವನ್ನು ರವಾನಿಸಿದರು? ಇದು ಆರಂಭ ಮಾತ್ರ. ದೇಶದಲ್ಲಿ ಆಡಳಿತ ಬದಲಾವಣೆಯ ಗಾಳಿ ಬೀಸಲು ಪ್ರಾರಂಭಿಸಿದೆ,” ಎಂದು ರಾವತ್ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಬರೆದಿದ್ದಾರೆ.

ಆರ್‌ಎಸ್‌ಎಸ್ ಮತ್ತು ಬಲಪಂಥೀಯ ರಾಜಕಾರಣಕ್ಕೆ ಮಹಿಳೆಯರನ್ನು ಗೌರವಿಸುವುದು ಹೇಗೆ ಎಂದು ತಿಳಿದಿಲ್ಲ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾತೆ ಹೇಳಿದರು. ಎಪ್‌ಸ್ಟೀನ್ ಅವರನ್ನು ಒಂಟಿಯಾಗಿ ಭೇಟಿಯಾಗಿಲ್ಲ ಎಂಬ ಸಚಿವರ ದಾವೆಯನ್ನು ಇದು ಸುಳ್ಳು ಸಾಬೀತು ಮಾಡಿದೆ ಎಂದೂ ಅವರು ಬೆಟ್ಟು ಮಾಡಿದರು.

ಎನ್‌ಸಿಪಿ ಮತ್ತು ಪ್ರಶಾಂತ್ ಭೂಷಣ್ ಅವರಿಂದ ರಾಜೀನಾಮೆ ಮತ್ತು ಸ್ಪಷ್ಟನೆಗೆ ಬೇಡಿಕೆ;

ಎನ್‌ಸಿಪಿ (ಶರದ್ ಪವಾರ್ ಬಣ) ಸಂಸದ ಅನೀಶ್ ಗವಾಂಡೆ ಅವರು ಈ ವಿಷಯದ ಬಗ್ಗೆ ಪೆಟ್ರೋಲಿಯಂ ಸಚಿವರು ತಕ್ಷಣವೇ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು. ಸಭೆಯು ರಾಜತಾಂತ್ರಿಕ ಉದ್ದೇಶಗಳಿಗಾಗಿ ಎಂದು ಕೇಂದ್ರವು ಹೇಳಿ ನುಣುಚಿಕೊಳ್ಳಲು ಪ್ರಯತ್ನಿಸುತ್ತದೆ, ಆದರೆ ಚರ್ಚಿಸಿದ ವಿಷಯವನ್ನು ಸಾರ್ವಜನಿಕಗೊಳಿಸಬೇಕು ಎಂದು ಅವರು ಹೇಳಿದರು. ನಿರಂತರವಾಗಿ ಸುಳ್ಳುಗಳನ್ನು ಹರಡುವ ಸಚಿವರನ್ನು ಕೇಂದ್ರ ಸಂಪುಟದಲ್ಲಿ ಏಕೆ ಮುಂದುವರಿಸಲಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಪ್ರಶ್ನಿಸಿದರು.

ರೇಪ್ ಪ್ರಕರಣದ ಆರೋಪಿಯೊಂದಿಗೆ ಸಚಿವರು ನರೇಂದ್ರ ಮೋದಿಯವರ ರಾಯಭಾರಿಯಾಗಿ ನಡೆಸಿದ ಸಭೆಗಳ ನಿಜವಾದ ಉದ್ದೇಶವನ್ನು ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಾಂಬಾ ಕೂಡ ಒತ್ತಾಯಿಸಿದರು. ಪ್ರತಿಭಟನೆಯ ಭಯದಿಂದಲೇ ಹರ್ದೀಪ್ ಸಿಂಗ್ ಪುರಿ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸದಿರಲು ಮೋದಿ ನಿರ್ಧರಿಸಿದ್ದಾರೆ ಎಂದೂ ಅವರು ಆರೋಪಿಸಿದರು.

ಈ ಮಧ್ಯೆ, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಫೆಬ್ರವರಿಯಲ್ಲಿ ಹರ್ದೀಪ್ ಸಿಂಗ್ ಪುರಿ ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಲಿಂಕ್ಡ್‌ಇನ್ ಸಂಸ್ಥಾಪಕ ರೀಡ್ ಹಾಫ್ಮನ್ ಅವರೊಂದಿಗೆ ಇಮೇಲ್ ಸಂವಹನಗಳು ಭಾರತದಲ್ಲಿ ಇಂಟರ್ನೆಟ್ ಆಧಾರಿತ ವ್ಯಾಪಾರ ಅವಕಾಶಗಳನ್ನು ಅನ್ವೇಷಿಸಲು ಮಾತ್ರ ಆಗಿತ್ತು ಮತ್ತು ಎಪ್‌ಸ್ಟೀನ್ ಜೊತೆ ಕೇವಲ ಒಂದು ಇಮೇಲ್ ಸಂದೇಶವನ್ನು ಕಳುಹಿಸಲಾಗಿದೆ ಎಂಬುದು ಆ ಸಮಯದಲ್ಲಿ ಸಚಿವರ ಸ್ಪಷ್ಟನೆಯಾಗಿತ್ತು. ಆದರೆ ಹೊಸ ಸಾಕ್ಷ್ಯಗಳು ಬೆಳಕಿಗೆ ಬಂದಿರುವುದರಿಂದ ಕೇಂದ್ರ ಸರ್ಕಾರವು ದೊಡ್ಡ ರಾಜತಾಂತ್ರಿಕ ಮತ್ತು ರಾಜಕೀಯ ಬಿಕ್ಕಟ್ಟಿಗೆ ಸಿಲುಕಿದೆ.