ಜಾಗತಿಕ ಪತ್ರಿಕೋದ್ಯಮ ಮತ್ತು ಮಾಧ್ಯಮ ಸ್ವಾತಂತ್ರ್ಯದ ಸ್ಥಾನಮಾನ: ಭಾರತದ ಪ್ರಜಾಪ್ರಭುತ್ವಕ್ಕೆ ಅಪಾಯದ ಮುನ್ಸೂಚನೆ!

0
131

✍️ ಅಬ್ದುಲ್ ಅಝೀಝ್ ಉದ್ಯಾವರ

ಪ್ರಜಾಪ್ರಭುತ್ವದಲ್ಲಿ ಮಾಧ್ಯಮಗಳು ಕೇವಲ ದಿನನಿತ್ಯದ ಸುದ್ದಿಗಳನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ತಾಂತ್ರಿಕ ಸಾಧನಗಳಲ್ಲ. ಅವು ಸಮಾಜದ ಜೀವಂತ ಧ್ವನಿ, ಅಧಿಕಾರದ ದುರುಪಯೋಗವನ್ನು ಪ್ರಶ್ನಿಸುವ ಜಾಗೃತ ನಾಲಗೆ ಮತ್ತು ಆಡಳಿತದ ಲೋಪದೋಷಗಳನ್ನು ನಿರ್ಭೀತಿಯಿಂದ ಅನಾವರಣಗೊಳಿಸುವ ಕನ್ನಡಿ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳಷ್ಟೇ ಸಮಾನವಾಗಿ ಮಾಧ್ಯಮವನ್ನು ಪ್ರಜಾಪ್ರಭುತ್ವದ ‘ನಾಲ್ಕನೇ ಆಧಾರಸ್ತಂಭ’ (Fourth pillar ) ಎಂದು ಕರೆಯಲಾಗುತ್ತದೆ. ಈ ಗೌರವಾನ್ವಿತ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳುವುದು ಪತ್ರಿಕೋದ್ಯಮದ ನೈತಿಕ ಹೊಣೆಗಾರಿಕೆ ಮಾತ್ರವಲ್ಲ, ಒಂದು ಆರೋಗ್ಯಕರ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತವಾಗಿರಲು ಅನಿವಾರ್ಯ ಅಗತ್ಯವೂ ಹೌದು.

ಆದರೆ, ಇಂದು ಜಾಗತಿಕವಾಗಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮ ಸ್ವಾತಂತ್ರ್ಯ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದೆ ಎಂಬುದು ಕಹಿ ಸತ್ಯ ಕುಸಿಯುತ್ತಿರುವ ಮಾಧ್ಯಮ ಸ್ವಾತಂತ್ರ್ಯ: ಆತಂಕಕಾರಿ ಅಂಕಿ-ಅಂಶಗಳು
ಪ್ಯಾರಿಸ್ ಮೂಲದ ‘ರಿಪೋರ್ಟರ್ಸ್ ವಿತೌಟ್ ಬೋರ್ಡರ್ಸ್’ (RSF) ಸಂಸ್ಥೆಯ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ (World Press Freedom Index) ಪ್ರಕಾರ, ವಿಶ್ವದ 180 ದೇಶಗಳ ಪೈಕಿ ಭಾರತವು 157ನೇ ಸ್ಥಾನಕ್ಕೆ ಕುಸಿದಿದೆ. 2025ರಲ್ಲಿ ಭಾರತ 151ನೇ ಸ್ಥಾನದಲ್ಲಿತ್ತು. ವರ್ಷದಿಂದ ವರ್ಷಕ್ಕೆ ಸಂಭವಿಸುತ್ತಿರುವ ಈ ಗಣನೀಯ ಕುಸಿತವು ನಮ್ಮ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ನೈಜ ಪರಿಸ್ಥಿತಿಯ ಕುರಿತು ತೀವ್ರ ಮತ್ತು ಗಂಭೀರ ಚರ್ಚೆಯ ಅಗತ್ಯವನ್ನು ಎತ್ತಿಹಿಡಿಯುತ್ತದೆ.

ಜಾಗತಿಕ ಮಟ್ಟದಲ್ಲೂ ಸಾರ್ವಾಧಿಕಾರಿ ಪ್ರವೃತ್ತಿಗಳು ಹೆಚ್ಚಾಗುತ್ತಿದ್ದು, ಮಾಧ್ಯಮಗಳ ಧ್ವನಿಯನ್ನು ಉಸಿರು ಕಟ್ಟಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಇದು ಕೇವಲ ಪತ್ರಕರ್ತರ ಸಮಸ್ಯೆಯಲ್ಲ; ಬದಲಿಗೆ ಸಮಸ್ತ ಜನತಂತ್ರದ ಅಸ್ತಿತ್ವಕ್ಕೇ ಎದುರಾಗಿರುವ ದೊಡ್ಡ ಅಪಾಯದ ಮುನ್ಸೂಚನೆ.

ವೃತ್ತಿಪರ ಮಾಧ್ಯಮದ ಜವಾಬ್ದಾರಿ ವಸ್ತುನಿಷ್ಠತೆ ಮತ್ತು ನಿಷ್ಪಕ್ಷಪಾತತೆ: ಸರ್ಕಾರ ಅಥವಾ ಅಧಿಕಾರದಲ್ಲಿರುವವರು ಮಾಡುವ ಪ್ರತಿಯೊಂದು ನಿರ್ಧಾರವನ್ನೂ ಕಣ್ಣು ಮುಚ್ಚಿ ಹೊಗಳುವುದಾಗಲಿ ಅಥವಾ ಯಾವುದೇ ಕಾರಣವಿಲ್ಲದೆ ಕುರುಡಾಗಿ ವಿರೋಧಿಸುವುದಾಗಲಿ ಮಾಧ್ಯಮದ ಕೆಲಸವಲ್ಲ.

ಜನಪರ ನಿಲುವು: ಸರ್ಕಾರದ ಯೋಜನೆಗಳು ಮತ್ತು ನಿರ್ಧಾರಗಳು ಜನಪರವಾಗಿದ್ದರೆ ಅವುಗಳನ್ನು ಗುರುತಿಸಿ ಪ್ರಶಂಸಿಸಬೇಕು. ಅದೇ ರೀತಿ, ಆಡಳಿತವು ಜನವಿರೋಧಿಯಾಗಿದ್ದರೆ ಅದರ ದುಷ್ಪರಿಣಾಮಗಳನ್ನು ವಿಶ್ಲೇಷಿಸಿ ಸಾಕ್ಷ್ಯಾಧಾರಗಳೊಂದಿಗೆ ಪ್ರಶ್ನಿಸಬೇಕು. ಸತ್ಯದ ಅನಾವರಣ: ಆಡಳಿತದ ತಪ್ಪುಗಳು, ಭ್ರಷ್ಟಾಚಾರ ಮತ್ತು ಜನರಿಗೆ ತಿಳಿಯದ ಸತ್ಯಗಳನ್ನು ನಿಷ್ಪಕ್ಷಪಾತವಾಗಿ ಬೆಳಕಿಗೆ ತರಬೇಕು.

ಪರ್ಯಾಯ ಚಿಂತನೆಗಳಿಗೆ ಅವಕಾಶ: ವಿವಿಧ ಅಭಿಪ್ರಾಯಗಳು, ಭಿನ್ನ ನಿಲುವುಗಳು ಹಾಗೂ ಪರ್ಯಾಯ ಚಿಂತನೆಗಳಿಗೆ ಸಂವಾದದ ವೇದಿಕೆ ಒದಗಿಸುವುದು ಮಾಧ್ಯಮದ ಬಾಧ್ಯತೆಯಾಗಿದೆ

ಇಂತಹ ವಸ್ತುನಿಷ್ಠ ಪತ್ರಿಕೋದ್ಯಮದಿಂದ ಮಾತ್ರ ಸರ್ಕಾರ ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು, ಜನರ ನೈಜ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಮಗ್ರ ಅಭಿವೃದ್ಧಿಯ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯ. ಅಧಿಕಾರದಲ್ಲಿರುವವರನ್ನು ಜನರಿಗೆ ಉತ್ತರದಾಯಕರನ್ನಾಗಿ (Accountable) ಮಾಡುವುದೇ ಮಾಧ್ಯಮಗಳ ಪ್ರಮುಖ ಧರ್ಮ. ಈ ಕಾರಣಕ್ಕಾಗಿಯೇa ಸ್ವತಂತ್ರ ಪತ್ರಿಕೋದ್ಯಮವನ್ನು ಪ್ರಜಾಪ್ರಭುತ್ವದ ‘ಕಾವಲು ನಾಯಿ’ (Watchdog) ಗೆ ಹೋಲಿಸಲಾಗುತ್ತದೆ.

ಇಂದಿನ ದಿನಗಳಲ್ಲಿ ಕಾರ್ಪೊರೇಟ್ ಹಿತಾಸಕ್ತಿಗಳು, ರಾಜಕೀಯ ಒತ್ತಡಗಳು ಮತ್ತು ಆರ್ಥಿಕ ಪ್ರಲೋಭನೆಗಳಿಂದಾಗಿ ಮಾಧ್ಯಮಗಳು ತಮ್ಮ ಮೂಲ ಉದ್ದೇಶದಿಂದ ವಿಮುಖವಾಗುತ್ತಿರುವ ಲಕ್ಷಣಗಳು ಕಾಣಿಸುತ್ತಿವೆ.
ಮನೆಯನ್ನು ರಕ್ಷಿಸಬೇಕಾದ ಕಾವಲು ನಾಯಿಯೇ ಕಳ್ಳನೊಂದಿಗೆ ಕೈಜೋಡಿಸಿದರೆ, ಆ ಮನೆಯ ಭದ್ರತೆ ಮತ್ತು ರಕ್ಷಣೆ ಹೇಗೆ ಸಾಧ್ಯ?”

ಮಾಧ್ಯಮಗಳು ಪ್ರಭುತ್ವದ ಹೊಗಳುಭಟ್ಟರಾಗಿ (Propaganda tools), ಕೇವಲ ಅಧಿಕಾರಸ್ಥರ ಹಿತಾಸಕ್ತಿಯನ್ನು ಕಾಯಲು ತೊಡಗಿದರೆ, ಸಾರ್ವಜನಿಕaರ ಧ್ವನಿ ಅಡಗಡಗಿ ಹೋಗುತ್ತದೆ. ಸತ್ಯ ಮರೆಮಾಚಲ್ಪಟ್ಟು, ಸುಳ್ಳುಗಳೇ ವಿಜೃಂಭಿಸಿದಾಗ ಪ್ರಜಾಪ್ರಭುತ್ವವು ಕೇವಲ ಹೆಸರಿಗಷ್ಟೇ ಉಳಿದು, ಆಡಳಿತವು ಸರ್ವಾಧಿಕಾರತ್ವದತ್ತ ವಾಲುವುದು ನಿಶ್ಚಿತ